ನರೇಂದ್ರ ಮೋದಿ ಸರ್ವಜ್ಞರೇನಲ್ಲ ಎಂದು ತೋರಿಸುತ್ತಿದೆ ರೈತರ ಹೋರಾಟ

ಮೋದಿ ಸರ್ವಜ್ಞರು ಎಂಬ ಮಿಥ್ಯೆಯನ್ನು ಪ್ರಜ್ಞಾಪೂರ್ವಕವಾಗಿ ಪೋಷಿಸಲಾಗುತ್ತಿದೆ, ಏಕೆಂದರೆ, ನವ-ಉದಾರವಾದಿ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲು ಅದೊಂದು ಸಾಧನ.  ಮೋದಿ ಸರ್ವಜ್ಞರು ಎಂಬ ಮಿಥ್ಯೆಯು ಅವರ ಅಹಂಕಾರವನ್ನು ಉಬ್ಬಿಸುವ ಹೊತ್ತಿನಲ್ಲೇ ನವ-ಉದಾರವಾದದ ಕಾರ್ಯಭಾರವನ್ನು ನಿರ್ವಹಿಸುತ್ತಿದೆ. ಆದ್ದರಿಂದ, ಮೋದಿ ಸರ್ವಜ್ಞರು ಎಂಬ ಮಿಥ್ಯೆಯನ್ನು ಉಳಿಸಿ ಬೆಳೆಸುವುದು ನವ-ಉದಾರವಾದದ ಅವಶ್ಯಕತೆ. ಆದರೆ ರೈತರು ತಮ್ಮ ಪ್ರತಿಭಟನೆಯ ಮೂಲಕ ಈ “ಸರ್ವಜ್ಞ” ಮಿಥ್ಯೆಯ ಗಾಳಿ ತೆಗೆಯುತ್ತಿದ್ದಾರೆ. ಈ ಕಾನೂನುಗಳು ರದ್ದಾದಾಗ ಈ ಮಿಥ್ಯೆಯನ್ನು ಹರಿದಿರುವುದು ದಿಟವಾಗುತ್ತದೆ ಮಾತ್ರವಲ್ಲ, ಅದೇ ಸಮಯದಲ್ಲಿ ನವ-ಉದಾರವಾದವನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಿಸಿದಂತಾಗುತ್ತದೆ. ಒಮ್ಮೆ ಹಿಮ್ಮೆಟ್ಟಿದ ನಂತರ, ನವ-ಉದಾರವಾದವನ್ನು ಮತ್ತೊಮ್ಮೆ ಜಾರಿಗೊಳಿಸಲಾಗದು. ಈ ಕಾರಣದಿಂದಾಗಿಯೇ, ಈ ಮೂರೂ ಕಾಯ್ದೆಗಳಿಗೆ ಅವುಗಳ ಚೌಕಟ್ಟಿಗೆ ಹೊಂದಿಕೊಳ್ಳುವ ಕೆಲವು ತಿದ್ದುಪಡಿಗಳನ್ನು ಮಾಡುವುದಾಗಿ ಸರ್ಕಾರವು ಪದೇ ಪದೇ ಹೇಳುತ್ತಿರುವುದು, ಆದರೆ, ಕಾಯ್ದೆಗಳನ್ನು ಅನಾಮತ್ತಾಗಿ ರದ್ದುಪಡಿಸುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತಿರುವುದು.

– ಪ್ರಭಾತ್‌ ಪಟ್ನಾಯಕ್

 

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದಲೂ ಕಾರ್ಪೊರೇಟ್-ಹಿಂದುತ್ವ ಕೂಟವು ಹೊಂದಿದ್ದ ಪ್ರಾಬಲ್ಯವನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ರೈತರ ಹೋರಾಟವು ಒಂದು ದೊಡ್ಡ ಹೆಜ್ಜೆಯಾಗಿದೆ. ರೈತರು, ಕುಶಲಕರ್ಮಿಗಳು, ಮೀನುಗಾರರು ಮುಂತಾದ ಸಣ್ಣ ಸಣ್ಣ ಉತ್ಪಾದಕರನ್ನು ನುಂಗಿ ನೊಣೆಯುವ ಸಹಜ ಪ್ರವೃತ್ತಿಯನ್ನು ಹೊಂದಿರುವ ದೊಡ್ಡ ದೊಡ್ಡ ಬಂಡವಾಳಗಾರರನ್ನು ಹಿಡಿತದಲ್ಲಿಡುವ ಸಲುವಾಗಿ ಅವರ ಮೇಲೆ ಇರಿಸಿದ್ದ ಸಂಕೋಲೆಗಳನ್ನು ನವ-ಉದಾರವಾದದ ಆಳ್ವಿಕೆಯಲ್ಲಿ ಕ್ರಮೇಣ ಕಿತ್ತುಹಾಕಲಾಗಿದೆ. ಹಾಗಾಗಿ, ರೈತರು, ಕುಶಲಕರ್ಮಿಗಳು, ಮೀನುಗಾರರು ಮುಂತಾದ ಸಣ್ಣ ಸಣ್ಣ ಉತ್ಪಾದಕರೆಲ್ಲರೂ ಅದರ ಬಲಿಪಶುಗಳಾದರು. ಅದರ ಆಳ್ವಿಕೆಯಲ್ಲಿ ಕಾರ್ಮಿಕರ ಹಕ್ಕುಗಳ ಮೇಲೆ ನಡೆದ ದಾಳಿಗಳ ಕುರಿತ ಮಾಹಿತಿ ಸಾಕಷ್ಟು ಜನರಿಗೆ ಗೊತ್ತಿದೆಯಾದರೂ, ರೈತರು, ಕುಶಲಕರ್ಮಿಗಳು, ಮೀನುಗಾರರು ಮುಂತಾದವರ ಹಕ್ಕುಗಳ ಮೇಲೆ ಅದು ನಡೆಸಿದ ದಾಳಿಗಳ ಬಗ್ಗೆ ಗೊತ್ತಿರುವ ಮಾಹಿತಿ ಕಡಿಮೆಯೇ.

ರೈತರು, ಕುಶಲಕರ್ಮಿಗಳು, ಮೀನುಗಾರರು ಮುಂತಾದ ಸಣ್ಣ ಸಣ್ಣ ಉತ್ಪಾದಕರ ಕಸುಬುಗಳನ್ನು ದೊಡ್ಡ ದೊಡ್ಡ ಬಂಡವಾಳಗಾರರು ಅತಿಕ್ರಮಿಸದಂತೆ ಈ ಹಿಂದಿನ ‘ಮಧ್ಯಪ್ರವೇಶಕ ಶಾಸನ ವ್ಯವಸ್ಥೆಯು (1991ರ ಹಿಂದಿನ ಆಡಳಿತಗಳು) ಅವರ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು: ಕೆಲವು ವಸ್ತುಗಳ ಉತ್ಪಾದನೆಯನ್ನು ಕರ-ಕುಶಲ ವಲಯಕ್ಕೆ ಕಾಯ್ದಿರಿಸಿ, ಅವರ ಉತ್ಪತ್ತಿಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿ ಅವುಗಳನ್ನು ಸಬ್ಸಿಡಿ ದರದಲ್ಲಿ ಮಾರುವ ಮೂಲಕ ಅಂತಹ ಶಾಸನ ವ್ಯವಸ್ಥೆಯು ರೈತರು ಮತ್ತು “ಹೊರ ಪ್ರಪಂಚ”ದ ನಡುವೆ ಬರುತ್ತಿತ್ತು.

ಖಂಡಿತವಾಗಿಯೂ, ಅದು ಈ ಕಿರು-ಉತ್ಪಾದಕರ ವಲಯದ ಆಂತರಿಕ ತಾರತಮ್ಯಗಳನ್ನೇನೂ ತಡೆಯಲಿಲ್ಲ. ಅಲ್ಲಿ ಬಂಡವಾಳಶಾಹಿ ಪ್ರವೃತ್ತಿಗಳು ಪ್ರಕಟಗೊಳ್ಳುವುದನ್ನೂ ಅದು ತಡೆಯಲಿಲ್ಲ. ಆದರೆ, ಅದು ಹೊರಗಿನ ಬಂಡವಾಳಶಾಹಿಗಳು ಈ ಕಿರು-ಉತ್ಪಾದನಾ ವಲಯವನ್ನು ಪ್ರವೇಶಿಸದಂತೆ ತಡೆಯೊಡ್ಡಿತು. ಈ ವ್ಯವಸ್ಥೆಯಲ್ಲೂ ನವ ಉದಾರವಾದವು ತನ್ನ ಚಾಳಿಯ ಪ್ರಕಾರ ರೈತರನ್ನು ಹಿಂಡುತ್ತಿತ್ತಾದರೂ, ಆಗ, ದೊಡ್ಡ ದೊಡ್ಡ ಬಂಡವಾಳಗಾರರು ತಮಗೆ ಬೇಕಾದಂತೆ ಕೃಷಿ ಮತ್ತು ಇತರ ಸಣ್ಣ ಉತ್ಪಾದಕರ ಕಸುಬನ್ನು ಅತಿಕ್ರಮಿಸಲು ಅನುವಾಗುವಂತೆ ಸರ್ಕಾರವು ಕೃಷಿಯನ್ನು ಮುಕ್ತ ಮಾರುಕಟ್ಟೆಯ ಮರ್ಜಿಗೆ ಬಿಟ್ಟಿರಲಿಲ್ಲ.

ನವ-ಉದಾರವಾದಿ ನೀತಿಗಳನ್ನು ಜಾರಿಗೆ ತಂದ ಕಾಂಗ್ರೆಸ್ ಸರ್ಕಾರವು ಆರಂಭದಲ್ಲಿ ಕಿರು-ಉತ್ಪಾದಕರ ವಲಯಕ್ಕೆ ಅದುವರೆಗೆ ಒದಗಿಸುತ್ತಿದ್ದ ರಕ್ಷಣಾ ಕವಚವನ್ನು ಕಳಚಿಹಾಕಲು ಮುಂದಾಗಲಿಲ್ಲ. ಆದರೆ, ಸಬ್ಸಿಡಿಗಳ ಮೊತ್ತವನ್ನು ಕಡಿಮೆ ಮಾಡಿತು ಮತ್ತು ಈ ವಲಯದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಖರೀದಿಸುವ ಬೆಲೆಗಳನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಬೇಕಿತ್ತೋ ಅಷ್ಟರ ಮಟ್ಟಿಗೆ ಹೆಚ್ಚಿಸಲಿಲ್ಲ. ವಾಣಿಜ್ಯ ಬೆಳೆಗಳ ವಿಚಾರದಲ್ಲಿ ಹೇಳುವುದಾದರೆ, ಮಾರುಕಟ್ಟೆಯಲ್ಲಿ ರೈತರ ಪರವಾಗಿ ನಿರ್ವಹಿಸುತ್ತಿದ್ದ ಕಾರ್ಯವನ್ನು ಸಂಪೂರ್ಣವಾಗಿ ತ್ಯಜಿಸಿತು. ಈ ರೀತಿಯ ಕ್ರಮಗಳು ಕೃಷಿಯ ಲಾಭದಾಯಕತೆಯನ್ನು ಕ್ರಮೇಣ ಅಳಿಸಿ ಹಾಕಿದವು. ಹಾಗಾಗಿ, ರೈತರು ತಪ್ಪಿಸಿಕೊಳ್ಳಲಾರದ ಮತ್ತು ತೀರಿಸಲಸಾಧ್ಯವಾದ ಸಾಲದ ಒಂದು ಬಲೆಯಲ್ಲಿ ಸಿಕ್ಕಿಕೊಂಡರು. ಅವರ ಈ ಪರಿಸ್ಥಿತಿಯು 1930ರ ದಶಕದ ಮಹಾ ಕುಸಿತದ ಕಾಲದಲ್ಲಿ ಎದುರಾಗಿದ್ದ ಇದೇ ರೀತಿಯ ಪರಿಸ್ಥಿತಿಯನ್ನು ಜ್ಞಾಪಿಸುತ್ತದೆ. ನವ-ಉದಾರವಾದಿ ನೀತಿಗಳು ಜಾರಿಗೆ ಬಂದನಂತರದ ಕೆಲವು ವರ್ಷಗಳಲ್ಲಿ ಸಾಲದ ಬಲೆಗೆ ಸಿಲುಕಿದ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವ-ಉದಾರವಾದಕ್ಕೆ ಹಿಂದುತ್ವದ ಊರುಗೋಲು

ಬಂಡವಾಳಶಾಹಿಯ ಬಿಕ್ಕಟ್ಟಿನ ಆರಂಭದೊಂದಿಗೆ “ಅಭಿವೃದ್ಧಿಯಿಂದ-ಅಂತಿಮವಾಗಿ-ಎಲ್ಲರಿಗೂ ಪ್ರಯೋಜನವಾಗುತ್ತದೆ” ಎಂಬ ಹಳೆಯ ಭರವಸೆಯು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತ್ತು. ಈ ಪರಿಸ್ಥಿತಿಯಲ್ಲಿ, ನವ ಉದಾರವಾದವು ತನಗೊಂದು ಊರುಗೋಲನ್ನು ಒದಗಿಸಿಕೊಳ್ಳುವ ಸಲುವಾಗಿ ಹಿಂದುತ್ವದೊಂದಿಗೆ ಮೈತ್ರಿ ಮಾಡಿಕೊಂಡಿತು. ಈ ಮೈತ್ರಿಯ ಆಳ್ವಿಕೆಯಲ್ಲಿ, ರೈತರು, ಕುಶಲಕರ್ಮಿಗಳು, ಮೀನುಗಾರರು ಮುಂತಾದ ಸಣ್ಣ ಸಣ್ಣ ಉತ್ಪಾದಕರ ಕಸುಬುಗಳ ಮೇಲಿನ ದಾಳಿಯು ಒಂದು ಆಕ್ರಮಣಕಾರಿ ಸ್ವರೂಪವನ್ನು ಪಡೆದುಕೊಂಡಿತು. ನರೇಂದ್ರ ಮೋದಿ ಸರ್ಕಾರವು ನೇರ ದಾಳಿಯನ್ನೇ ಆರಂಭಿಸಿತು. ಮೊದಲಿಗೆ ಈ ವಲಯದ ಲಾಭದಾಯಕತೆಯನ್ನು ಹಿಂಡಿ ಹಿಪ್ಪೆ ಮಾಡಿತು. ನಂತರ ನೋಟು ರದ್ದತಿಯ ಮೂಲಕ, ತದನಂತರ ಜಿಎಸ್‌ಟಿಯನ್ನು ಅಳತೆಗೆಟ್ಟ ಪ್ರಮಾಣದಲ್ಲಿ ಹೇರುವ ಮೂಲಕ ಮತ್ತು ಅಂತಿಮವಾಗಿ ಈ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ದಾಳಿಯನ್ನು ಕ್ರಮೇಣ ಎತ್ತರಿಸುತ್ತಾ ಹೋಯಿತು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಈ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ, ಧಾನ್ಯಗಳ ಖರೀದಿ ಮತ್ತು ಸಾರ್ವಜನಿಕ ಪಡಿತರ ಮುಂತಾದ ಹಳೆಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕುತ್ತವೆ ಮತ್ತು ದೇಶಕ್ಕೆ ಬೇಕಾಗುವ ಆಹಾರ ಧಾನ್ಯಗಳ ಉತ್ಪಾದನೆಯನ್ನು ಕುಂಠಿತಗೊಳಿಸಿ ಧಾನ್ಯಗಳ ಕೊರತೆಗೆ ಕಾರಣವಾಗುತ್ತವೆ. ಜನರ ಧಾನ್ಯಗಳ ಬಳಕೆಯ ಪ್ರಮಾಣವು ಕಡಿಮೆಯೇ ಇದ್ದ ಕಾರಣದಿಂದಾಗಿ ಈವರೆಗೆ ದೇಶವು ಸಾಧಿಸಿದ್ದ ಒಂದು ಮಟ್ಟದ ಆಹಾರ ಸ್ವಾವಲಂಬನೆಯನ್ನು ಈ ಕೃಷಿ ಕಾನೂನುಗಳು ನಾಶಪಡಿಸುತ್ತವೆ ಮತ್ತು ದೊಡ್ಡ ದೊಡ್ಡ ಬಂಡವಾಳಗಾರರು ರೈತರ ಕಸುಬುಗಳನ್ನು ಅತಿಕ್ರಮಿಸಲು ಕೃಷಿಯನ್ನು ತೆರದಿಡುತ್ತವೆ. ಈ ಕಾನೂನುಗಳು ನವ-ಉದಾರವಾದದ ಅಜೆಂಡಾವನ್ನು ಅದರ ನಿರೀಕ್ಷೆಗಿಂತಲೂ ಹೆಚ್ಚು ಮುಂದಕ್ಕೆ ಒಯ್ಯುತ್ತವೆ. ಹಾಗಾಗಿ, ಅಮೆರಿಕದ ಆಡಳಿತದಿಂದ ಹಿಡಿದು ಐಎಂಎಫ್‌ವರೆಗೆ ಎಲ್ಲರೂ ಮೋದಿ ಸರ್ಕಾರದ ಈ ಮೂರೂ ಕೃಷಿ ಕಾಯಿದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. (ರೈತರ ಪ್ರತಿಭಟನೆಯನ್ನು ಮೋದಿ ಸರ್ಕಾರ ನಿಭಾಯಿಸುತ್ತಿರುವ ವಿಧಾನದ ಬಗ್ಗೆ ಟೀಕೆ-ಟಿಪ್ಪಣಿಗಳನ್ನು ಅವರು ಮಾಡಿದ್ದಾರೆ, ನಿಜ. ಆ ವಿಷಯವೇ ಬೇರೆ.)

ನವ-ಉದಾರವಾದದ ದಾಳಿಗಳ ಆರಂಭದಿಂದಲೂ ರೈತರು ಮತ್ತು ಇತರ ಕಿರು ಉತ್ಪಾದಕರು ಹೊಡೆತ ತಿನ್ನುವ ಮೊದಲ ಸಾಲಿನಲ್ಲಿದ್ದಾರೆ. ನಗರವಾಸಿ ಕಾರ್ಮಿಕರೂ ಅದೇ ರೀತಿಯ ಹೊಡೆತ ತಿನ್ನುತ್ತಿದ್ದಾರೆ. ವ್ಯತ್ಯಾಸವೆಂದರೆ, ಕಾರ್ಮಿಕರ ಹಕ್ಕುಗಳಿಗೆ ಹೊಡೆತ ಬಿದ್ದಾಗ ಅದರ ವಿರುದ್ಧವಾಗಿ ಅವರು ನಡೆಸುವ ಪ್ರತಿಭಟನೆಯ ವಿಷಯ ಬಹಳ ಜನರನ್ನು ತಲುಪುತ್ತದೆ. ಅದೇನೇ ಇರಲಿ, ತಮ್ಮ ಹಕ್ಕುಗಳ ಮೇಲೆ ನಡೆದ ದಾಳಿಯನ್ನು ರೈತರು ಆರಂಭದಲ್ಲಿ ಇತರ ಶೋಷಿತ ಜನರಂತೆ ತಾಳ್ಮೆ ಮತ್ತು ಸಂಯಮದಿಂದ ಎದುರಿಸಿದರು. ಲಕ್ಷಾಂತರ ಸಂಖ್ಯೆಯ ತಮ್ಮ ರೈತಕುಲ-ಬಾಂಧವರು ಆತ್ಮಹತ್ಯೆ ಮಾಡಿಕೊಂಡರೂ ಸಹ ರೈತರು ನವ-ಉದಾರವಾದದ ವಿರುದ್ಧವಾಗಿ ಬಿರುಸಿನ ಹೋರಾಟ ನಡೆಸಿಲ್ಲ. ಆದರೆ, ತನ್ನ ಬೆನ್ನಿನ ಮೇಲೆ ಅದಾಗಲೇ ಹೇರಿದ್ದ ಭಾರಕ್ಕೆ ಸೇರಿಸಿದ ಒಂದು ಕೊನೆಯ ಹುಲ್ಲು ಕಡ್ಡಿಯು ಒಂಟೆಯ ಬೆನ್ನನ್ನು ಮುರಿಯಿತಂತೆ ಎನ್ನುವ ಗಾದೆ ಮಾತನ್ನು ಈ ಮೂರು ಕೃಷಿ ಕಾನೂನುಗಳು ನಿಜ ಮಾಡಿವೆ.

ಮೋದಿ ಸರ್ವಜ್ಞರು ಎಂಬ ಮಿಥ್ಯೆಯನ್ನು ಪ್ರಜ್ಞಾಪೂರ್ವಕವಾಗಿ ಪೋಷಿಸಲಾಗುತ್ತಿದೆ, ಏಕೆಂದರೆ, ನವ-ಉದಾರವಾದಿ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲು ಅದೊಂದು ಸಾಧನ.  ಮೋದಿ ಸರ್ವಜ್ಞರು ಎಂಬ ಮಿಥ್ಯೆಯು ಅವರ ಅಹಂಕಾರವನ್ನು ಉಬ್ಬಿಸುವ ಹೊತ್ತಿನಲ್ಲೇ ನವ-ಉದಾರವಾದದ ಕಾರ್ಯಭಾರವನ್ನು ನಿರ್ವಹಿಸುತ್ತಿದೆ. ಆದ್ದರಿಂದ, ಮೋದಿ ಸರ್ವಜ್ಞರು ಎಂಬ ಮಿಥ್ಯೆಯನ್ನು ಉಳಿಸಿ ಬೆಳೆಸುವುದು ನವ-ಉದಾರವಾದದ ಅವಶ್ಯಕತೆ. ಆದರೆ ರೈತರು ತಮ್ಮ ಪ್ರತಿಭಟನೆಯ ಮೂಲಕ ಈ “ಸರ್ವಜ್ಞ” ಮಿಥ್ಯೆಯ ಗಾಳಿ ತೆಗೆಯುತ್ತಿದ್ದಾರೆ. ಈ ಕಾನೂನುಗಳು ರದ್ದಾದಾಗ ಈ ಮಿಥ್ಯೆಯನ್ನು ಹರಿದಿರುವುದು ದಿಟವಾಗುತ್ತದೆ ಮಾತ್ರವಲ್ಲ, ಅದೇ ಸಮಯದಲ್ಲಿ ನವ-ಉದಾರವಾದವನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಿಸಿದಂತಾಗುತ್ತದೆ. ಒಮ್ಮೆ ಹಿಮ್ಮೆಟ್ಟಿದ ನಂತರ, ನವ-ಉದಾರವಾದವನ್ನು ಮತ್ತೊಮ್ಮೆ ಜಾರಿಗೊಳಿಸಲಾಗದು. ಈ ಕಾರಣದಿಂದಾಗಿಯೇ, ಈ ಮೂರೂ ಕಾಯ್ದೆಗಳಿಗೆ ಅವುಗಳ ಚೌಕಟ್ಟಿಗೆ ಹೊಂದಿಕೊಳ್ಳುವ ಕೆಲವು ತಿದ್ದುಪಡಿಗಳನ್ನು ಮಾಡುವುದಾಗಿ ಸರ್ಕಾರವು ಪದೇ ಪದೇ ಹೇಳುತ್ತಿರುವುದು, ಆದರೆ, ಕಾಯ್ದೆಗಳನ್ನು ಅನಾಮತ್ತಾಗಿ ರದ್ದುಪಡಿಸುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತಿರುವುದು.

ಇಡೀ ದೇಶವನ್ನು ಆವರಿಸಿರುವ ವೈಶಾಲ್ಯತೆ

ಪ್ರಸಕ್ತ ರೈತ ಹೋರಾಟವು, ಅದರ ಅಗಾಧ ವೈಶಾಲ್ಯತೆ ಮತ್ತು ದೃಢ ಸಂಕಲ್ಪದ ಹೊರತಾಗಿ, ಕನಿಷ್ಠ ಮೂರು ಗಮನಾರ್ಹ ಗುಣ-ಲಕ್ಷಣಗಳನ್ನು ಹೊಂದಿದೆ. ಮೊದಲನೆಯದು, ‘ಇಡೀ ಭಾರತ’ವನ್ನು ಆವರಿಸಿರುವ ಹೋರಾಟದ ವೈಶಾಲ್ಯತೆ. ಈ ಹಿಂದೆ ನಡೆದ ಅನೇಕ ರೈತ ಹೋರಾಟಗಳು ನಿರ್ದಿಷ್ಟ ಪ್ರದೇಶಗಳಿಗೆ ಅಥವಾ ನಿರ್ದಿಷ್ಟ ರಾಜ್ಯಗಳಿಗೆ ಸೀಮಿತವಾಗಿದ್ದವು. ನೀರಿನ ಶುಲ್ಕ ಏರಿಕೆಯ ಅಥವಾ ವಿದ್ಯುತ್ ದರ ಏರಿಕೆಯಂತಹ ಕೆಲವು ಕ್ರಮಗಳಿಗೆ ಸೀಮಿತ ಹೋರಾಟಗಳಾಗಿದ್ದವು.

ಆದರೆ, ಇಂದಿನ ರೈತ ಹೋರಾಟದ ರಣ-ಭೂಮಿ ಭೌಗೊಳಿಕವಾಗಿ ಉತ್ತರ ಭಾರತದಲ್ಲಿದೆ, ನಿಜ. ಆದರೆ, ರೈತ ಚಳುವಳಿಯು ಮುಂದಿಟ್ಟಿರುವ ಬೇಡಿಕೆಗೆ ದೇಶದ ಉದ್ದಗಲಕ್ಕೂ ರೈತರು ಸ್ಪಂದಿಸುತ್ತಿರುವ ರೀತಿ ಅಭೂತಪೂರ್ವವಾಗಿದೆ. ಈ ವಿದ್ಯಮಾನದ ಸಾಕ್ಷಿಯಾಗಿ ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿ, ಏಕ ಕಾಲದಲ್ಲಿ, ಕಿಸಾನ್ ಯಾತ್ರೆಗಳು ನಡೆದಿರುವುದನ್ನು ನೆನಪಿಸಿಕೊಳ್ಳಬಹುದು.

ಈ ಸಂದರ್ಭದಲ್ಲಿ ಒಂದು ಘಟನೆಯನ್ನು ಜ್ಞಾಪಿಸಿಕೊಳ್ಳುವುದು ಉಚಿತವೆನಿಸುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದಿಂದ ಬಿಜೆಪಿಯ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾದುದರಿಂದ ಲೋಕಸಭೆಯಲ್ಲಿ ಬಿಜೆಪಿಗೆ ಗೆಲುವು ಸಾಧ್ಯವಾಯಿತು. ಈ ಗೆಲುವಿನ ಹಿಂದಿದ್ದ ವಿಶೇಷವೆಂದರೆ, ಚುನಾವಣೆಗಿಂತ ತುಸು ಮೊದಲು, ಪಶ್ಚಿಮ ಉತ್ತರ ಪ್ರದೇಶದ ಮುಜಫ್ಫರ್ ನಗರ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯು ಆಗ ತಾನೇ ಕೊನೆಗೊಂಡು ಹಿಂದೂ-ಮುಸ್ಲಿಂ ಧೃವೀಕರಣದಲ್ಲಿ ಪರ್ಯವಸಾನಗೊಂಡಿತ್ತು. ಬಿಜೆಪಿಯು ಧೃವೀಕರಣದ ಲಾಭ ಪಡೆಯಿತು. ಅಂದಿನಿಂದ ಇಂದಿನವರೆಗೆ ಹಿಂದೂ-ಜಾಟರು ಮತ್ತು ಮುಸ್ಲಿಮರ ನಡುವಿನ ವೈರುಧ್ಯವು ಒಂದು ತೀವ್ರ ಸ್ವರೂಪದಲ್ಲಿತ್ತು. ಆದರೆ, ಈ ವೈರುಧ್ಯಗಳು ಈಗ ಹಿಂದಕ್ಕೆ ಸರಿದಿವೆ. ಏಕೆಂದರೆ, ರೈತ ಹೋರಾಟವು ಅವರನ್ನು ಒಂದುಗೂಡಿಸಿತು ಮತ್ತು ಅವರಲ್ಲಿ ಒಂದು ಹೊಸ ಒಗ್ಗಟ್ಟನ್ನು ಬೆಸೆಯಿತು.

ರೈತರ ಧೋರಣೆಗಳಲ್ಲಿ ಬದಲಾವಣೆ

ಎರಡನೆಯದು, ಈ ಹೋರಾಟವು ಸ್ವತಃ ರೈತರ ಧೋರಣೆಗಳಲ್ಲಿ ಒಂದು ಅಗಾಧ ಬದಲಾವಣೆಯನ್ನು ಉಂಟುಮಾಡಿದೆ. ಈ ಬದಲಾವಣೆಯೇ ಒಂದು ಮಹತ್ವಪೂರ್ಣ ಜನಾಂದೋಲನದ ಹೆಗ್ಗುರುತು. ಅಂದರೆ, ಹೋರಾಟವು ಭಾಗವಹಿಸುವವರ ಧೋರಣೆಗಳನ್ನು ಆಮೂಲಾಗ್ರವಾಗಿ ಬದಲಾಯಿಸುತ್ತದೆ. ಕೆಲವೇ ಕೆಲವು ತಿಂಗಳುಗಳ ಹಿಂದೆ ಒಬ್ಬರನ್ನೊಬ್ಬರು ವಿರೋಧಿಸುತ್ತಿದ್ದ, ಬೇರೆ ಬೇರೆ ಧಾರ್ಮಿಕ ವಿಧಿ-ವಿಧಾನಗಳನ್ನು ಅನುಸರಿಸುವ, ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಮತ್ತು ಬೇರೆ ಬೇರೆ ಪ್ರದೇಶಗಳಿಗೆ ಸೇರಿದ ಭೂ-ಹೀನ ಕೃಷಿ ಕೂಲಿಕಾರರು ಹಾಗೂ ಸಣ್ಣ ಅಥವಾ ದೊಡ್ಡ ಹಿಡುವಳಿಗಳ ರೈತರು ಈಗ ಒಟ್ಟಾಗಿ ಹೋರಾಡುತ್ತಿರುವ ವಿದ್ಯಮಾನವು ಭಾರತದ ರಾಜಕೀಯದಲ್ಲಿ ಸಂಭವಿಸಿದ ಒಂದು ಗಮನಾರ್ಹ ಹಾಗೂ ಅನಿರೀಕ್ಷಿತ ಬದಲಾವಣೆ ಎಂಬುದನ್ನು ಸೂಚಿಸುತ್ತದೆ.

ನೊಂದವರಿಗೆ ರೈತರು ಸ್ಪಂದಿಸುವ ರೀತಿ ಮತ್ತು ವ್ಯಕ್ತಪಡಿಸುವ ಸಹಾನುಭೂತಿಯ ಮೂಲಕ ರೈತರ ಧೋರಣೆಯಲ್ಲಿ ಕಂಡುಬರುವ ಬದಲಾವಣೆಯನ್ನು ಗುರುತಿಸಬಹುದು. ಇದಕ್ಕೆ ನಿದರ್ಶನವಾಗಿ, ಬಿಜೆಪಿ ಸರ್ಕಾರವು ಅನೇಕ ಹೋರಾಟಗಾರರನ್ನು ಯುಎಪಿಎಯಂತಹ ಕಠಿಣ ಕಾಯ್ದೆಗಳ ಅಡಿಯಲ್ಲಿ ಬಂಧಿಸಿ, ಅವರನ್ನು ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಹಾಕಿರುವ ಕ್ರಮವನ್ನು ವಿರೋಧಿಸಿ, ಬಂಧನಕ್ಕೊಳಗಾದವರಿಗೆ ತೋರಿದ ಸಹಾನುಭೂತಿಯನ್ನು ಉಲ್ಲೇಖಿಸಬಹುದು. ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಎರಡು ವರ್ಷಗಳ ಹಿಂದೆ ಬಂಧನಕ್ಕೊಳಗಾದವರ ಬಗ್ಗೆ ರೈತ ಪ್ರತಿಭಟನಾಕಾರರು ಈಗ ತೋರುತ್ತಿರುವ ಕಾಳಜಿಯು ಕೆಲವು ವಾರಗಳ ಹಿಂದಿನವರೆಗೂ ವ್ಯಕ್ತಗೊಂಡಿರಲಿಲ್ಲ.

ಹೋರಾಟವು ಜನರನ್ನು ಒಂದುಗೂಡಿಸುತ್ತದೆ ಎಂಬುದು ಐತಿಹಾಸಿಕ ಸತ್ಯ. ದೆಹಲಿಯ ಹೊರ ವಲಯದಲ್ಲಿ ಹೂಡಿರುವ ರೈತ ಬಿಡಾರದ ಅಕ್ಕಪಕ್ಕದ ಹಳ್ಳಿಗಳ ರೈತರಿಂದ ಮತ್ತು ಅಕ್ಕಪಕ್ಕದ ಕೈಗಾರಿಕಾ ಘಟಕಗಳ ಕಾರ್ಮಿಕರಿಂದ ಹೋರಾಟ ನಿರತ ರೈತರಿಗೆ ಹರಿದು ಬರುತ್ತಿರುವ ಬೃಹತ್ ಮತ್ತು ಸ್ವಯಂಪ್ರೇರಿತ ನೆರವು ಈ ಐತಿಹಾಸಿಕ ಸತ್ಯವನ್ನು ಎತ್ತಿಹಿಡಿದಿದೆ.

ನವ-ಉದಾರವಾದಕ್ಕೆ ವಿರುದ್ಧ

ಮೂರನೆಯದು, ಈ ಹೋರಾಟವು ನವ-ಉದಾರವಾದಕ್ಕೆ ಏಕ್‌ದಂ ವಿರೋಧವಾಗಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಈ ಹೋರಾಟದ ಪ್ರಧಾನ ಬೇಡಿಕೆಯಾಗಿರುವುದು ಸಹಜವೇ. ಆದರೆ, ಈಗಾಗಲೇ ಹೇಳಿದಂತೆ, ಈ ಕೃಷಿ ಕಾನೂನುಗಳು ನವ-ಉದಾರವಾದದ ಅಜೆಂಡಾವನ್ನು ಅದರ ನಿರೀಕ್ಷೆಗಿಂತಲೂ ಹೆಚ್ಚು ಮುಂದಕ್ಕೆ ಒಯ್ಯುತ್ತವೆ. ಈ ಕಾನೂನುಗಳು ಸಾಮ್ರಾಜ್ಯಶಾಹಿ ದೇಶಗಳ ಬಯಕೆಗಳಿಗೆ ಅನುಗುಣವಾಗಿವೆ. ಈ ಕಾನೂನುಗಳ ನೇರ ಫಲಾನುಭವಿಗಳೆಂದರೆ, ಅಂತರರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ನಿಕಟ ಬಾಂಧವ್ಯ ಹೊಂದಿರುವ, ದೇಶದ ಕೆಲವೇ ಕೆಲವು ಕಾರ್ಪೊರೇಟ್ ಸಂಸ್ಥೆಗಳು. ಈ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಕಿರು ಉತ್ಪಾದನಾ ವಲಯವನ್ನು ದುರ್ಬಲಗೊಳಿಸುವಲ್ಲಿ ಬಹು ದೊಡ್ಡ ಪಾತ್ರವಹಿಸಿವೆ.

ಇವೆಲ್ಲವೂ ನವ-ಉದಾರವಾದದ ದೃಷ್ಟಿಕೋನಕ್ಕೆ ಅನುಗುಣವಾಗಿರುವ ಅಂಶಗಳೇ. ಹಾಗಾಗಿ, ಈ ಮೂರೂ ಕಾನೂನುಗಳನ್ನು ರದ್ದುಗೊಳಿಸುವುದೆಂದರೆ, ನವ-ಉದಾರವಾದವನ್ನು ಕಡೆಗಣಿಸಿದಂತೆಯೇ. ನವ-ಉದಾರವಾದವನ್ನು ಜಾರಿಗೊಳಿಸುವಲ್ಲಿ ಹಿಂದೇಟು ಹಾಕುವುದೇ ಬೇರೆ; ಒಂದು ನಿರ್ಣಾಯಕ ವಲಯದಲ್ಲಿ ಅದನ್ನು ಕಡೆಗಣಿಸುವುದು ತೀರಾ ಬೇರೇಯೇ.

ಮಿಥ್ಯೆಯ ಪೋಷಣೆ

ರೈತರ ಒಳಿತಿನ ಬಗ್ಗೆ ಮೋದಿ ಚೆನ್ನಾಗಿ ಬಲ್ಲರು ಎಂಬ ಮಿಥ್ಯೆಯನ್ನು ಉಳಿಸಿಕೊಳ್ಳುವ ಅವರ ಅತಿಯಾದ ಅಪೇಕ್ಷೆ ಮತ್ತು ಅವರು ಬೆಳೆಸಿಕೊಂಡಿರುವ ಅಪರಿಮಿತ ಅಹಂಕಾರದ ಸ್ವಭಾವಗಳೇ ಈ ವಿಷಯದ ಬಗ್ಗೆ ಮೋದಿ ಅವರು ತಳೆದಿರುವ ಹಠಮಾರಿ ನಿಲುವಿಗೆ ಕಾರಣವೆಂದು ಹೇಳಲಾಗಿದೆ. ಈ ಆರೋಪವು ನಿಸ್ಸಂದೇಹವಾಗಿ ನಿಜವೇ. ಆದರೆ, ಮೋದಿ ಸರ್ವಜ್ಞರು ಎಂಬ ಮಿಥ್ಯೆಯ ಪೋಷಣೆಯು ಮೋದಿಯವರ ಮನದಾಳದಲ್ಲಿ ಹುದುಗಿರುವ ಅವರ ಯಾವುದೋ ಒಂದು ದಾಹವನ್ನು ತಣಿಸುವ ಸಲುವಾಗಿ ಅಲ್ಲವೇ ಅಲ್ಲ. ಮೋದಿ ಸರ್ವಜ್ಞರು ಎಂಬ ಮಿಥ್ಯೆಯನ್ನು ಪೋಷಣೆ ಮಾಡಲಾಗುತ್ತಿದೆ, ಏಕೆಂದರೆ, ನವ-ಉದಾರವಾದಿ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲು ಅದೊಂದು ಸಾಧನ.  ಎಲ್ಲರ ಒಳಿತನ್ನು ಮೋದಿ ಅವರು ನಿಜಕ್ಕೂ ಚೆನ್ನಾಗಿ ಬಲ್ಲವರಾಗಿದ್ದರೆ, ಮತ್ತು, ನವ-ಉದಾರವಾದಿ ಕಾರ್ಯಸೂಚಿಯೇ ಎಲ್ಲದಕ್ಕೂ ರಾಮ ಬಾಣ ಎಂದು ಮೋದಿ ಅವರು ಭಾವಿಸಿಕೊಂಡಿದ್ದರೆ, ಅದು ಹಾಗೆಯೇ ಇರಲಿ. ಈ ರೀತಿಯಲ್ಲಿ, ಮೋದಿ ಸರ್ವಜ್ಞರು ಎಂಬ ಮಿಥ್ಯೆಯು ಅವರ ಅಹಂಕಾರವನ್ನು ಉಬ್ಬಿಸುವ ಹೊತ್ತಿನಲ್ಲೇ ನವ-ಉದಾರವಾದದ ಕಾರ್ಯಭಾರವನ್ನು ನಿರ್ವಹಿಸುತ್ತಿದೆ. ಆದ್ದರಿಂದ, ಮೋದಿ ಸರ್ವಜ್ಞರು ಎಂಬ ಮಿಥ್ಯೆಯನ್ನು ನಿಜವೆಂದು ಸಾಧಿಸುವುದು ನವ-ಉದಾರವಾದದ ಅವಶ್ಯಕತೆ.

ರೈತರು ತಮ್ಮ ಪ್ರತಿಭಟನೆಯ ಮೂಲಕ ಏನು ಮಾಡಿದ್ದಾರೆಂದರೆ, ಸೂಜಿ ಚುಚ್ಚಿ ಬಲೂನಿನ ಗಾಳಿ ತೆಗೆಯುವ ರೀತಿಯಲ್ಲಿ ಈ “ಸರ್ವಜ್ಞ” ಮಿಥ್ಯೆಯನ್ನು ಚುಚ್ಚಿದ್ದಾರೆ. ಈ ಕಾನೂನುಗಳು ರದ್ದಾದಾಗ ಈ ಮಿಥ್ಯೆಯನ್ನು ಚುಚ್ಚಿರುವುದು ದಿಟವಾಗುತ್ತದೆ ಮಾತ್ರವಲ್ಲ, ಅದೇ ಸಮಯದಲ್ಲಿ ನವ-ಉದಾರವಾದವನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಿಸಿದಂತಾಗುತ್ತದೆ. ಒಮ್ಮೆ ಹಿಮ್ಮೆಟ್ಟಿದ ನಂತರ, ನವ-ಉದಾರವಾದವನ್ನು ಮತ್ತೊಮ್ಮೆ ಜಾರಿಗೊಳಿಸಲಾಗದು. ಈ ಕಾರಣದಿಂದಾಗಿಯೇ, ಈ ಮೂರೂ ಕಾಯ್ದೆಗಳಿಗೆ ಅವುಗಳ ಚೌಕಟ್ಟಿಗೆ ಹೊಂದಿಕೊಳ್ಳುವ ಕೆಲವು ತಿದ್ದುಪಡಿಗಳನ್ನು ಮಾಡುವುದಾಗಿ ಸರ್ಕಾರವು ಪದೇ ಪದೇ ಹೇಳಿದೆ. ಆದರೆ, ಕಾಯ್ದೆಗಳನ್ನು ಅನಾಮತ್ತಾಗಿ ರದ್ದುಪಡಿಸುವುದನ್ನು ಸರ್ಕಾರವು ಸಂಪೂರ್ಣವಾಗಿ ವಿರೋಧಿಸುತ್ತಿದೆ. ಈ ಕಾಯ್ದೆಗಳ ಚೌಕಟ್ಟಿಗೆ ಒಳಪಡುವ ಬದಲಾವಣೆಗಳನ್ನು ಮಾಡಿದಾಗ, ಈ ಕಾಯ್ದೆಗಳು ಸತ್ವಯುತವಾಗಿಯೇ ಉಳಿಯುತ್ತವೆ. ಹಾಗಾಗಿ, ನವ-ಉದಾರವಾದಿ ಕಾರ್ಯಸೂಚಿಗೆ ಕಾನೂನಿನ ಮನ್ನಣೆಯೂ ಉಳಿಯುತ್ತದೆ.

ರೈತರ ಆಗ್ರಹ ಏನೆಂದರೆ, ಏಕಸ್ವಾಮ್ಯ ಬಂಡವಾಳವು ಕಿರು ಉತ್ಪಾದನಾ ವಲಯವನ್ನು ಅತಿಕ್ರಮಿಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂಬುದು. ಆದ್ದರಿಂದಲೇ ನವ-ಉದಾರವಾದದ ಮೇಲೆ ಆಣೆ ಪ್ರಮಾಣ ಮಾಡುವ ಕಾರ್ಪೊರೇಟ್-ಹಿಂದುತ್ವ ಮೈತ್ರಿಯು ರೈತರ ಈ ಬೇಡಿಕೆಯನ್ನು ಅಷ್ಟೊಂದು ತೀವ್ರವಾಗಿ ವಿರೋಧಿಸುತ್ತಿರುವುದು. ತನ್ನ ಕಣ್ಣೆದುರೇ ತನ್ನ ಪ್ರಾಬಲ್ಯವು ಕುಸಿಯುತ್ತಿರುವುದನ್ನು ನೋಡುವಾಗ ತನ್ನ ಕೈ ಕಾಲುಗಳನ್ನು ತಾನೇ ಕಟ್ಟಿಹಾಕಿಕೊಂಡಂತೆ ಭಾಸವಾಗುತ್ತದೆ ಈ ಮೈತ್ರಿ ಕೂಟಕ್ಕೆ.

 

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *