ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರು: ಆರ್.ಸಿ.ಹೆಚ್.

ಬೆಂಗಳೂರು: ಆರ್.ಸಿ.ಹೆಚ್. (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್ ಕರ್ನಾಟಕ ರಾಜ್ಯಕ್ಕೆ ಬೆಚ್ಚಿಬೀಳುವ ಮಾಹಿತಿಯನ್ನು ನೀಡಿದ್ದು, ರಾಜ್ಯದಲ್ಲಿ 28,657 ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರಿದ್ದಾರೆ ಎಂದು ವರದಿ ಹೇಳಿದೆ.

ಇತ್ತೀಚೆಗೆ ತುಮಕೂರು ಜಿಲ್ಲೆಯ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಬಾಲ ಗರ್ಭಿಣಿ ಪತ್ತೆಯಾದ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಏಪ್ರಿಲ್ 15, 2024 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಬುಡಕಟ್ಟು ಕಲ್ಯಾಣ ಮತ್ತು ಗೃಹ ಇಲಾಖೆಗಳಿಗೆ ಪತ್ರ ಬರೆದು, ಇದನ್ನು ತಡೆಯಲು ಸೂಚಿಸಿದ್ದಾರೆನ್ನಲಾಗಿದೆ.

ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರು: ಆರ್.ಸಿ.ಹೆಚ್.

ಮೂಲಗಳ ಪ್ರಕಾರ, ರಾಜ್ಯದಲ್ಲಿ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ್ಯವಿವಾಹ, ಬಡತನ, ಸಾಂಸ್ಕೃತಿಕ ಭಿನ್ನತೆ, ವೈಯಕ್ತಿಕ ವರ್ತನೆ, ದುಶ್ಚಟ, ಲೈಂಗಿಕ ದೌರ್ಜನ್ಯವೇ ಬಾಲ ಗರ್ಭಿಣಿಯರು ಹೆಚ್ಚಾಗಲು ಕಾರಣವೆಂದು ಹೇಳಲಾಗುತ್ತಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಸಮರೋಪಾದಿಯಲ್ಲಿ ಪರಿಹಾರ ಕಂಡುಕೊಳ್ಳಲು ಕೇಂದ್ರ ಕಾರ್ಯಪಡೆಯ ಸದಸ್ಯರು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಇದನ್ನು ಓದಿ : ನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಸ್ವಾಮಿ

RCH (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್ ಶಾಕಿಂಗ್ ಮಾಹಿತಿ ನೀಡಿದ್ದು, ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ‘ಕೇಂದ್ರ ಕಾರ್ಯಪಡೆ’ ರಚನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವು, ಹಾಸ್ಟೆಲ್‌ಗಳಲ್ಲಿ ಕಟ್ಟುನಿಟ್ಟಿನ ಸಿಸಿಟಿವಿ ಕಣ್ಗಾವಲು ಇರಬೇಕು.

ಪ್ರತಿ ತಿಂಗಳು ತಪಾಸಣೆ ನಡೆಸುವ ಮೂಲಕ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಬೇಕು. ಟಾಸ್ಕ್ ಫೋರ್ಸ್ ಅಧಿಕಾರಿಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೀರ್ಘಕಾಲ ಗೈರುಹಾಜರಾದ ವಿದ್ಯಾರ್ಥಿಗಳ ಮೇಲೂ ನಿಗಾ ಇಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳನ್ನು ವರದಿ ಮಾಡಲು ಸರಳವಾದ ಕಾರ್ಯವಿಧಾನವನ್ನು ರೂಪಿಸಬೇಕು. ಗರ್ಭಧಾರಣೆಯನ್ನು ತಡೆಗಟ್ಟಲು ಮತ್ತು ಪ್ರಸ್ತುತ ಘಟನೆಗಳ ಬಗ್ಗೆ ಮಾಹಿತಿಯನ್ನು ದಾಖಲಿಸಲು ಹೊಸ ಕೇಂದ್ರೀಕೃತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದಾಗಿದೆ.

ಅಲ್ಲದೇ ಲೈಂಗಿಕ ಶಿಕ್ಷಣವನ್ನು ಮಾಧ್ಯಮದ ಮೂಲಕ ಪೋಷಕರು ಮತ್ತು ಮಕ್ಕಳಿಗೆ ಸರಳ ಪದಗಳಲ್ಲಿ ನೀಡಬೇಕು ಮತ್ತು ಜಾಗೃತ ಸಮಿತಿಗಳಿಂದ ಮೇಲ್ವಿಚಾರಣೆ ಮಾಡಬೇಕು. ಆತ್ಮರಕ್ಷಣಾ ಕ್ರಮಗಳು, ಬಾಲ್ಯ ವಿವಾಹಗಳು ಮತ್ತು ಅನಿಷ್ಟ ಸಾಮಾಜಿಕ ಆಚರಣೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಶಾಲಾ ಹಂತದಲ್ಲಿ ದೈಹಿಕ ಬೆಳವಣಿಗೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯ.

ಗರ್ಭಪಾತಕ್ಕೆ ಅವಶ್ಯವಿರುವ ‘ಶೆಡ್ಯೂಲ್‌–ಎಚ್‌’ (ವರ್ಗದ) ಔಷಧಿಗಳು ಅನಧಿಕೃತವಾಗಿ ಮಾರಾಟವಾಗುತ್ತಿರುವುದು ಕೂಡ ಬಾಲಗರ್ಭಿಣಿ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ವೈದ್ಯರ ಸಲಹಾ ಚೀಟಿ ಇಲ್ಲದೇ ಗರ್ಭಪಾತ ಔಷಧಿ ಮಾರುವ ಔಷಧಿ ಅಂಗಡಿ ಮಾಲೀಕರು ಹಾಗೂ ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು. ಈ ಕುರಿತು ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ಮೂಲಕ ಜಾಗೃತಿ ನೀಡುವುದು ಅತಿಮುಖ್ಯವಾಗಿದೆ.

ಇದನ್ನು ನೋಡಿ : ಸ್ಕಿಂ ನೌಕರರ ಬದಕನ್ನು ಬೀದಿಗೆ ತಂದ ಬಿಜೆಪಿಯನ್ನು ಸೋಲಿಸುತ್ತೇವೆ – ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ನಿರ್ಧಾರ

Donate Janashakthi Media

Leave a Reply

Your email address will not be published. Required fields are marked *