ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಟ್ವಿಟರ್ ಸಮರ ನಡೆಸಿದ್ದು, ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ನೀವು, ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ ಅಂತೆಲ್ಲಾ ಕೆಣಕಿದ್ದಾರೆ.
ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ? ಕಳ್ಳಮಾಲು ಹ್ಯೂಬ್ಲೆಟ್ ವಾಚಿನ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳೇ ಇವೆ. ಇವೆರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ, ಯಾಕಯ್ಯಾ? ಎಂದಿದ್ದಾರೆ.
ಇದನ್ನು ಓದಿ: ಮಠಗಳಿಗೆ ನೀಡುವ ಅನುದಾನದಲ್ಲೂ 30% ಕಮಿಷನ್ ಕೇಳುವ ಸರ್ಕಾರ: ದಿಂಗಾಲೇಶ್ವರ ಸ್ವಾಮೀಜಿ
ಈಶ್ವರಪ್ಪ ಬಗ್ಗೆ ಮಾತನಾಡಿ, ಅಭ್ಯಂತರವಿಲ್ಲ. ಡಿವೈಎಸ್‌ಪಿ ಗಣಪತಿ ಬಗ್ಗೆಯೂ ಹೇಳಿ, ಬೇಜಾರಿಲ್ಲ. ಆದರೆ ಕಲ್ಲಪ್ಪ ಹಂಡೀಭಾಗ್ ಬಗ್ಗೆ ಮಾತನಾಡಿದರೆ ನಿಮ್ಮ ಜಾಣ ಮೌನವೇಕೆ? ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ 5 ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ. ಮರೆತುಬಿಟ್ಟಿರಾ ಸುಳ್ಳುರಾಮಯ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ಆಪರೇಷನ್ ಕಮಲದಿಂದ ನಿಮ್ಮ ಜೇಬು ಸೇರಿದ ಆಕರ್ಷಕ ಅಂಕಿಯ ಹಣದ ಅಸಲೀಯೆತ್ತು ನನಗೂ ಗೊತ್ತು! ನೀವು ರಾಜ್ಯ ಕಂಡ ಗ್ರೇಟ್ ಹಣಕಾಸು ಮಂತ್ರಿ, ಪ್ಲಸ್ಸೂ ಮೈನಸ್ಸಿನ ಪ್ರವೀಣ, ಪರ್ಸಂಟೇಜ್ ಪಿತಾಮಹನಷ್ಟೇ ಅಲ್ಲ… ಅನೈತಿಕ ರಾಜಕಾರಣದ ಅಸಲಿ ಅಪ್ಪ. ಈಗ ಹೇಳಿ? ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ಯಾರು?
ಇದನ್ನು ಓದಿ: ಭ್ರಷ್ಟಾಚಾರ ಮುಚ್ಚಿಹಾಕಲು ಕೋಮುವಾದ ಮುನ್ನಲೆಗೆ: ಸಿದ್ಧರಾಮಯ್ಯ
ನಾವು ಜಲಧಾರೆ ಮಾಡುತ್ತಿದ್ದೇವೆ, ನಿಜ. ನೀರಾವರಿ ಯೋಜನೆಗಳ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಈ ರಾಜ್ಯಕ್ಕೆ ಹೆಚ್.ಡಿ.ದೇವೇಗೌಡರು ಕೊಟ್ಟ ಕೊಡುಗೆ ಕಣ್ಮುಂದೆಯೇ ಇದೆ. 1962ರಿಂದ ಅವರು ನಡೆಸಿದ ಹೊರಾಟದ ಬಗ್ಗೆ ತಿಳಿದು ಮಾತನಾಡಿ. ಅರಿವುಗೆಟ್ಟ ಹೇಳಿಕೆ ಕೊಟ್ಟು ಅಪಹಾಸ್ಯಕ್ಕೆ ಗುರಿಯಾಗಬೇಡಿ ಎಂದಿದ್ದಾರೆ.
ಸ್ವಯಂ ಘೋಷಿತ ಸಂವಿಧಾನ ತಜ್ಞ, ಸ್ವಯಂ ಘೋಷಿತ ಸತ್ಯ ಹರಿಶ್ಚಂದ್ರ, ಈಗ ಹೇಳಿ? ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಸಾಕ್ಷಿಯಾಗಿ “ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯಬೇಕು” ಎಂದು ನೀವು ಮಾಡಿದ ಭೀಷಣ ಭಾಷಣ ಯಾರಿಗಯ್ಯಾ ಭೂಷಣ? ಮಾತೃಪಕ್ಷವನ್ನೇ ಮುಗಿಸಲು ಹೊರಟಿರುವ ನೀವು ಯಾವ ಟೀಮು? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
ಕೊನೆಗೆ ಮತ್ತೆ 4 ಪ್ರಶ್ನೆಗಳನ್ನು ಕೇಳಿರುವ ಹೆಚ್ ಡಿ ಕುಮಾರಸ್ವಾಮಿ, 1.ಆಪರೇಷನ್ ಕಮಲಕ್ಕೆ ಸಹಕರಿಸಿದ್ದಕ್ಕೆ ಸಿಕ್ಕ ಪ್ರತಿಫಲವೆಷ್ಟು? 2.ಆ ಪಾಪದ ಹಣವನ್ನು ಏನು ಮಾಡಿದಿರಿ? 3.ಹ್ಯೂಬ್ಲೆಟ್ ವಾಚಿನ ʼಸಿದ್ದರಹಸ್ಯʼವೇನು? 4.ಅರ್ಕಾವತಿ ರೀಡೂ ಬಗ್ಗೆ ಮೌನವೇಕೆ? ಧೈರ್ಯವಿದ್ದರೆ ಉತ್ತರಿಸಿ, ವಿಷಯಾಂತರ ಬೇಡ ಎಂದಿದ್ದಾರೆ.