ಅಸಂವಿಧಾನಿಕ: ಮಹಾರಾಷ್ಟ್ರದ 12 ಬಿಜೆಪಿ ಶಾಸಕರ ಅಮಾನತು ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಕಲಾಪದ ಅವಧಿಯಲ್ಲಿ ಸಭಾಧ್ಯಕ್ಷರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಒಂದು ವರ್ಷದವರೆಗೆ ಸದನದಿಂದ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) 12 ಶಾಸಕರ ಅಮಾನತು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಅಸಭ್ಯ ವರ್ತನೆ ತೋರಿದರು ಎಂದು ಆರೋಪಿಸಿ ಬಿಜೆಪಿಯ ಶಾಸಕರನ್ನು ಒಂದು ವರ್ಷದವರೆಗೆ ಅಮಾನತು ಆದೇಶ ರದ್ದಾಗಿದೆ. ಅಧಿವೇಶನದ ನಂತರವೂ ಶಾಸಕರನ್ನು ಅಮಾನತು ಮಾಡುವುದು ಅಸಂವಿಧಾನಿಕ ಮತ್ತು ಅಕ್ರಮ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ. ಅಧಿವೇಶನಕ್ಕೆ ಮಾತ್ರ ಅಮಾನತುಗೊಳಿಸಬಹುದು ಎಂಬ ನಿಯಮವಿದ್ದರೂ 12 ಶಾಸಕರನ್ನು ಮಾತ್ರ ಅಧಿವೇಶನದ ನಂತರವೂ ಒಂದು ವರ್ಷದವರೆಗೆ ಅಮಾನತುಗೊಳಿಸಲಾಗಿತ್ತು.

ಮಹಾರಾಷ್ಟ್ರದ ಸದನದಲ್ಲಿ ಅಂಗೀಕರಿಸಿದ ಅಮಾನತು ನಿರ್ಣಯವನ್ನು ಪ್ರಶ್ನಿಸಿ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಕಳೆದ ಜುಲೈ 5 ರಂದು ವಿಧಾನಸಭೆಯ ಅಧಿವೇಶನದಲ್ಲಿ ನಡೆದ ನಡವಳಿಕೆಗಳಿಂದಾಗಿ 12 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿತ್ತು. ಸಭಾಧ್ಯಕ್ಷರ ಸಭಾಂಗಣದಲ್ಲಿ ಭಾಸ್ಕರ್ ಜಾಧವ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟ ಸರ್ಕಾರ ಆರೋಪ ಮಾಡಿತ್ತು.

ಬಿಜೆಪಿಯ 12 ಶಾಸಕರುಗಳಾದ ಸಂಜಯ್​ ಕುಟೆ, ಆಶೀಶ್​ ಶೆಲಾರ್​, ಅಭಿಮನ್ಯು ಪವಾರ್​, ಗಿರೀಶ್​ ಮಹಾಜನ್​, ಅತುಲ್​ ಭಟ್ಖಳ್ಖರ್​, ಪರಾಗ್​ ಅಲವಾನಿ, ಹರೀಶ್​ ಪಿಂಪಲೆ, ಯೋಗೇಶ್​ ಸಾಗರ್​, ಜಯ್​ ಕುಮಾರ್​ ರಾವತ್​, ನಾರಾಯಣ್​ ಕುಚೆ, ರಾಮ್​ ಸತ್ಪುಟೆ ಮತ್ತು ಬಂಟಿ ಭಂಗ್ಡಿಯಾ ಅವರನ್ನು ಅಮಾನತು ಮಾಡಲಾಗಿತ್ತು. ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮಂಡಿಸಿದರು ಮತ್ತು ಧ್ವನಿ ಮತದಿಂದ ಸಭಾಧ್ಯಕ್ಷರು​ ಅಂಗೀಕರಿಸಿದ್ದರು.

ಶಾಸಕರು ತಮ್ಮ ಮೇಲಿನ ಅಮಾನತನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ತೀರ್ಪು ನೀಡಿರುವ ನ್ಯಾಯಾಲಯ ವಿಧಾನಸಭೆಯಿಂದಾಚೆಗೆ ಶಾಸಕರನ್ನು ಅಮಾನತು ಮಾಡುವುದು ಅಸಂವಿಧಾನಿಕ ಎಂದು ಹೇಳಿ, ಅಮಾನತನ್ನು ರದ್ದು ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *