ನವದೆಹಲಿ: 2020ರ ಈಶಾನ್ಯ ದೆಹಲಿಯ ಕೋಮು ಗಲಭೆಗಳಿಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪದಲ್ಲಿ ಬಂಧನದಲ್ಲಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಜಾಮೀನ್ ಅರ್ಜಿಯನ್ನು ವಾಪಾಸು ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರಾಗೆ ಅರ್ಜಿ ವಾಪಾಸ್ ಪಡೆದಿರುವ ಕಾರಣ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ ಎಂದು ಕಾನೂನು ಸುದ್ದಿ ಮಾಧ್ಯಮ ಲೈವ್ ಲಾ ವರದಿ ಮಾಡಿದೆ.
ಸನ್ನಿವೇಶಗಳ ಬದಲಾವಣೆಯಿಂದಾಗಿ ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲಾಗುತ್ತಿದೆ. ಉಮರ್ ಖಾಲಿದ್ ಅವರು ವಿಚಾರಣಾ ನ್ಯಾಯಾಲಯದಿಂದ ಮತ್ತೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರತಿಭಟನೆ ವೇಳೆ ರಸ್ತೆ ತಡೆ | ತನ್ನ ಮೇಲಿನ ಎಫ್‌ಐಆರ್ ರದ್ದು ಕೋರಿ ಸುಪ್ರೀಂ ಕದ ತಟ್ಟಿದ ಸಿದ್ದರಾಮಯ್ಯ
ಅದಾಗ್ಯೂ, ಉಮರ್ ಖಾಲಿದ್ ವಿರುದ್ಧ ದಾಖಲಿಸಲಾದ ಯುಎಪಿಎ ಪ್ರಕರಣದ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಮುಂದುವರಿಸುವುದಾಗಿ ಕಪಿಲ್ ಸಿಬಲ್ ತಿಳಿಸಿದ್ದಾರೆ. ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರ ಪೀಠ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿದೆ.
ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಉಮರ್ ಖಾಲಿದ್ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಅವರು 2020ರ ಸೆಪ್ಟೆಂಬರ್‌ನಿಂದ ಜೈಲಿನಲ್ಲಿದ್ದಾರೆ.
2022 ರ ಅಕ್ಟೋಬರ್‌ನಲ್ಲಿ ಜಾಮೀನು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಖಾಲಿದ್ ಸಲ್ಲಿಸಿದ್ದ ವಿಶೇಷ ರಜಾ ಕಾಲದ ಅರ್ಜಿಯನ್ನು ಸುಪ್ರೀಂ ಪೀಠ ವಿಚಾರಣೆ ನಡೆಸಿತ್ತು. ಖಾಲಿದ್ ಸಂವಿಧಾನದ 32ನೇ ವಿಧಿಯಡಿಯಲ್ಲಿ ಭಯೋತ್ಪಾದನೆ ವಿರೋಧಿ ಕಾನೂನಿನ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ:ರೈತ ಹೋರಾಟ ಬೆಂಬಲಿಸುವ ಪ್ರಮುಖ ‘ಸಾಮಾಜಿಕ ಮಾಧ್ಯಮ ಖಾತೆ’ಗಳಿಗೆ ತಡೆ ಹೇರಿದ ಹೇರಿದ ಬಿಜೆಪಿ ಸರ್ಕಾರ!
ಯುಎಪಿಎ ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಹಿಂದಿನ ಅರ್ಜಿಗಳೊಂದಿಗೆ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ಟ್ಯಾಗ್ ಮಾಡಿತ್ತು. ಜಾಮೀನು ಅರ್ಜಿಯೊಂದಿಗೆ ಯುಎಪಿಎ ನಿಬಂಧನೆಗಳನ್ನು ಪ್ರಶ್ನಿಸಿರುವ ಅರ್ಜಿಗಳನ್ನುಆಲಿಸಲು ಸುಪ್ರೀಂ ನಿರ್ಧರಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಹನ್ನೊಂದಯ ಬಾರಿ ಮುಂದೂಡಿತ್ತು.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಈ ಹಿಂಸಾಚಾರ ಭುಗಿಲೆದ್ದಿತ್ತು. 2020ರ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಉಮರ್ ಖಾಲಿದ್ ಅವರು ಹಿಂಸಾಚಾರದಲ್ಲಿ ಯಾವುದೇ ಕ್ರಿಮಿನಲ್ ಪಾತ್ರವನ್ನು ಹೊಂದಿಲ್ಲ ಅಥವಾ ಪ್ರಕರಣದ ಯಾವುದೇ ಆರೋಪಿಗಳೊಂದಿಗೆ ಯಾವುದೇ “ಪಿತೂರಿಯ ಸಂಪರ್ಕ” ಹೊಂದಿಲ್ಲ ಎಂಬ ಆಧಾರದ ಮೇಲೆ ಜಾಮೀನು ಕೋರಿದ್ದರು.
ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಯನ್ನು ವಿರೋಧಿಸಿ, ಅವರು ಮಾಡಿದ ಭಾಷಣವು “ಬಹಳ ಲೆಕ್ಕಾಚಾರ”ದ್ದಾಗಿದ್ದು, ಅವರು ಬಾಬರಿ ಮಸೀದಿ, ತ್ರಿವಳಿ ತಲಾಖ್, ಕಾಶ್ಮೀರ, ಮುಸ್ಲಿಮರ ನಿಗ್ರಹ ಮತ್ತು ಸಿಎಎ ಮತ್ತು ಎನ್‌ಆರ್‌ಸಿಯಂತಹ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದರು ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media