ಉಳ್ಳವರಿಗೇ ಕೊಡಲಾಗುವುದು !

ಮೀಸಲಾತಿಗಾಗಿ ಸಮರಕ್ಕೆ ಹೊರಟವರಂತೆ ಹೊರಟಿರುವ ಮಠಾಧೀಶರಿಗೂ ಈ ಸಾಮಾಜಿಕ ಪ್ರಶ್ನೆ ಕಾಣುವುದಿಲ್ಲ. ಮೀಸಲಾತಿ ಯಾರಿಗೆ ಕೊಡಬೇಕು? ಅವಕಾಶ ವಂಚಿತರಿಗೆ, ಉಳ್ಳವರಿಗೇ ಕೊಡುವುದಲ್ಲ. ಇಲ್ಲದವರಿಗೆ  ಕೊಡಬೇಕು. ಆದರೆ ಕೆಲವು ಸ್ವಾಮಿಗಳು ಉಳ್ಳವರಿಗೆ ಕೊಡಿಸಲು ಹೊರಟಿದ್ದಾರೆ! ಇದರ ಮರ್ಮವೇನು?

ರಾಜ್ಯದಲ್ಲಿ ಮೀಸಲಾತಿಗಾಗಿ ಬಹುತೇಕವಾಗಿ ಸವರ್ಣೀಯರು ನಡೆಸುತ್ತಿರುವ ಮೇಲಾಟ ಅಪಾಯದ ಹಂತಕ್ಕೆ ಹೊಗುತ್ತಿರುವಂತೆ ಭಾಸವಾಗುತ್ತದೆ. ಜನತೆ ತನ್ನ ಏಕ್ಯತೆಯನ್ನು ಗಟ್ಟಿಗೊಳಿಸಿ ಕೊಳ್ಳಬೇಕಾಗಿದ್ದ ಕಾಲಘಟ್ಟಲ್ಲಿ, ಒಡಕಿನತ್ತ ಸಾಗುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಡಾ| ಬಾಬಾ ಸಾಹೇಬ್ ಒಮ್ಮೆ ಹೇಳಿದ್ದರು: “ಈ ಶ್ರೇಣಿಕೃತ ಜಾತಿ ಪದ್ಧತಿ ಶ್ರಮವನ್ನು ಮಾತ್ರವಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ”. ಬಸವಣ್ಣನ ಕಲ್ಯಾಣವನ್ನು ನಮ್ಮ ಕಣ್ಮುಂದೆ ಇಟ್ಟುಕೊಂಡವರು ನಾವು. ಸಮಾಜದ ಕಟ್ಟಕಡೆಯ ನಮ್ಮ ಬಂಧುಗಳನ್ನು ಮೇಲೆತ್ತಲು ಶ್ರಮಿಸಬೇಕಾದ ನಾವು ನಮ್ಮ ಪಾಲನ್ನು ಪಡೆಯಲು ಅವಕಾಶ ವಂಚಿತರನ್ನು ತುಳಿಯುತ್ತಿದ್ದೇವೆ. ಶತಮಾನಗಳಿಂದ ನಾವು ತುಳಿದ ಜನಗಳು ನಮಗೆ ಕಾಣುವುದೇ ಇಲ್ಲ. ನಾವು ಈಗ ಪಂಚಾಮಸಾಲಿ, ನಾವು ಕುರುಬ, ನಾವು ವಾಲ್ಮೀಕಿ ಆಗಿದ್ದೇವೆ. ಪಾದಯಾತ್ರೆಗಳೆಂಬ ದಂಡಯಾತ್ರೆಗಳಲ್ಲಿ ಮುಳುಗಿದ್ದೇವೆ. ಬಿಜೆಪಿ ಹೈಕಮಾಂಡ್ ಮೇಲೆ ಯಾರು ಹೆಚ್ಚು ಪ್ರಭಾವ ಬೀರುತ್ತಾರೆ, ಆರೆಸ್ಸೆಸ್ ನಾಯಕರನ್ನು ಯಾರು ಹೆಚ್ಚು ಒಲಿಸಿಕೊಳ್ಳುತ್ತಾರೆ ಎಂಬ ಸ್ಪರ್ಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸಂಘದ ನಾಯಕರು ಇದೊಂದು ಒಳ್ಳೆಯ ಅವಕಾಶ ಎಂದು ಅಂದುಕೊಂಡಿರುತ್ತಾರೆ.

ಒಡೆದು ಆಳುವ ನೀತಿಯನ್ನು ಅವರು ಬಿಳಿಯರಿಂದ ಕರಗತ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕಾರ್ಪೊರೇಟೀಕರಣದ ಹಾದಿಯನ್ನು ಅವರು ಕೇಂದ್ರದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಸುಗಮಗೊಳಿಸಲು ಹೆಣಗುತ್ತಿರುವಾಗ, ದೇಶದ ಕಾರ್ಮಿಕರು, ರೈತರು ಎರಡನೇ ಸ್ವಾತಂತ್ರ್ಯ ಸಮರದತ್ತ ಹೆಜ್ಜೆಹಾಕುತ್ತಿರುವಾಗ, ಅವರ ಹಾದಿ ತಪ್ಪಿಸಲು, ಅವರ ಗಮನ ಬೇರೆಕಡೆಗೆ ಸೆಳೆದು ಕಾರ್ಪೊರೇಟ್ ಕಂಪೆನಿಗಳಿಂದ ಪ್ರಾಯೋಜಿತ ಕಾನೂನುಗಳನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಇದೇ ಒಳ್ಳೆಯ ಸಮಯ ಎಂದುಕೊಂಡಿದ್ದಾರೆ. ಮೀಸಲಾತಿಗಾಗಿ ಹೋರಟಿರುವ ಜಾತಿ ನಾಯಕರಿಗೆ ಇದು ಅರ್ಥವಾಗದಿರುವುದು ಖೇಧದ ಸಂಗತಿ.

ನಮ್ಮ ಸಂವಿಧಾನ ಪ್ರತಿಪಾದಿಸುವ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ. ಶತಮಾನಗಳಿಂದ ಅವಕಾಶ ವಂಚಿತರಾಗಿ ಉಳಿದ ನಮ್ಮ ಅವರ್ಣೀಯ ಬಂಧುಗಳು ನಮ್ಮ ಸಂವಿಧಾನ ಘೋಷಸಿರುವ ಸಮಾನತೆಯನ್ನು ಸಾಧಿಸಬೇಕಾದರೆ ಅವರಿಗೆ ಶಿಕ್ಷಣ ರಂಗದಲ್ಲಿ ಮತ್ತು ಉದ್ಯೋಗರಂಗದಲ್ಲಿ ಮೀಸಲಾತಿ ನೀಡಬೇಕಾಗಿದೆ. ಮೀಸಲಾತಿ ಒಂದರಿಂದ ಅವರಿಗೆ ಸಂಪೂರ್ಣ ನ್ಯಾಯ ಸಿಗಲಾರದು. ಮೀಸಲಾತಿ ಒಂದು ತಾತ್ಕಾಲಿಕ ಪರಿಹಾರ ಮಾತ್ರ. ಈ ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ದಲಿತರಿಗೆ, ಅಸ್ಪೃಶ್ಯರೆಂದೆನಿಸಿಕೊಂಡವರಿಗೆ ಮೀಸಲಾತಿ ಒಂದೆ ಪರಿಹಾರವಲ್ಲ. ಅಂತಹ ಸೀಮಿತ ಹಕ್ಕನ್ನು ಅನುಭವಿಸಲು ಸವರ್ಣೀಯರು ಬಿಡಲಾರರು ಎಂಬುದಕ್ಕೆ ಇತಿಹಾಸವೇ ಸಾಕ್ಷಿ ಒದಗಿಸುತ್ತದೆ. ಅಸ್ಪೃಶ್ಯತಾ ಆಚರಣೆಗಳಿಂದ ನಮ್ಮ ದಲಿತ ಬಂಧುಗಳು ನೊಂದಿದ್ದಾರೆ, ಬೆಂದಿದ್ದಾರೆ. ಅವರ ಮೇಲೆ ಸವರ್ಣೀಯರ ದೌರ್ಜನ್ಯ ನಡೆಯುತ್ತಲೇ ಇದೆ. ಅವರ ಮಹಿಳೆಯರಿಗೆ ರಕ್ಷಣೆ ಇಲ್ಲ. ಅವರ ಮಕ್ಕಳಿಗೆ ಶಿಕ್ಷಣ ಇಲ್ಲ. ಅವರಿಗೆ ಗುಣಮಟ್ಟದ ವೈಧ್ಯಕೀಯ ಚಿಕಿತ್ಸೆ ದೊರೆಯುವುದಿಲ್ಲ. ದೆವರಿಗೆ ಪೂಜೆಸಲ್ಲಿಸಲು ಬಯಸುವ ದಲಿತರಿಗೆ ದೇವಸ್ಥಾನದೊಳಕ್ಕೆ ಪ್ರವೇಶವಿಲ್ಲ. ಸಾರ್ವಜನಿಕ ಕೆರೆ, ಭಾವಿಗಳಿಗೆ ಹೋಗಿ ಅವರು ನೀರು ತರುವಂತಿಲ್ಲ. ದಲಿತ ಯುವಕರು ಶುಭ್ರವಾದ ಬಟ್ಟೆ ಧರಿಸುವಂತಿಲ್ಲ. ದ್ವಿಚಕ್ರ ವಾಹನ ಚಲಿಸುವಂತಿಲ್ಲ. ಸವರ್ಣೀಯರ ಮಕ್ಕಳೊಂದಿಗೆ ಅವರು ವಿವಾಹ ಮಾಡಿಕೊಳ್ಳುವಂತಿಲ್ಲ. ಇದು ನ್ಯಾಯವೇ? ಇಂತಹ ಸಮಾಜ ಬದುಕಲು ಯೋಗ್ಯವೆ?

ಮೀಸಲಾತಿಗಾಗಿ ಸಮರಕ್ಕೆ ಹೊರಟವರಂತೆ ಹೊರಟಿರುವ ಮಠಾಧೀಶರಿಗೂ ಈ ಸಾಮಾಜಿಕ ಪ್ರಶ್ನೆ ಕಾಣುವುದಿಲ್ಲ. ಮೀಸಲಾತಿ ಯಾರಿಗೆ ಕೊಡಬೇಕು? ಅವಕಾಶ ವಂಚಿತರಿಗೆ, ಉಳ್ಳವರಿಗೇ ಕೊಡುವುದಲ್ಲ. ಇಲ್ಲದವರಿಗೆ  ಕೊಡಬೇಕು. ಆದರೆ ಕೆಲವು ಸ್ವಾಮಿಗಳು ಉಳ್ಳವರಿಗೆ ಕೊಡಿಸಲು ಹೊರಟಿದ್ದಾರೆ! ಇದರ ಮರ್ಮವೇನು?

ಮೇಲ್ಜಾತಿ, ಮೇಲ್‌ವರ್ಣಗಳಲ್ಲಿಯೂ ಕಡು ಬಡವರಿದ್ದಾರೆ. ಅವರಿಗೂ ನ್ಯಾಯಸಿಗಬೇಲ್ಲವೇ? ಈ ಸಮಸ್ಯೆಗೆ ನಿಜವಾದ ಪರಿಹಾರ ಎಲ್ಲವೂ ಎಲ್ಲರಿಗೆ ಸಿಕ್ಕಾಗ. ಎಲ್ಲರಿಗೂ ಶಿಕ್ಷಣ ಸಿಗಬೇಕು. ಎಲ್ಲರಿಗೂ ಉದ್ಯೋಗ ಸಿಗಬೇಕು. ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕು. ಅಲ್ಲಿಯವರೆಗೆ ಅದು ಅವಕಾಶ ವಂಚಿತರ ಸೊತ್ತಾಗಬೇಕು. ತಮ್ಮದೇನೂ ತಪ್ಪು ಇಲ್ಲದಿದ್ದಾಗ್ಯೂ ಅವರು ಶತಮಾನಗಳಿಂದ ಶಿಕ್ಷೆಯನ್ನು ಅನುಭವಿಸುತ್ತಾ ಬಂದಿದ್ದಾರೆ. ಪಶುಗಳಿಗಿಂತ ಕೀಳಾಗಿ ಕಂಡು ಅವರ ಮನಸ್ಸಿಗೆ ವಾಸಿಯಾಗದ ಗಾಯ ಮಾಡಲಾಗಿದೆ. ನಾವು ಎಂದಾದರೂ ನಮ್ಮ ಸಹೋದರ ಸಹೋದರಿಯರ ನೋವನ್ನು ಅರಿತಿದ್ದೇವಾ? ಆಗ ನಮಗೆ ಯಾವುದು ಮುಖ್ಯವಾಗುತಿತ್ತು? ಪಂಚಮಸಾಲಿ, ಕುರುಬ, ವಾಲ್ಮೀಕಿ ಮೀಸಲಾತಿಗಿಂತ ದಲಿತರಿಗೆ, ಅಸ್ಪೃಶ್ಯರಿಗೆ ನೀಡಲಾದ ಮೀಸಲಾತಿ ಆ ಸಮುದಾಯದ ಕಟ್ಟಕಡೆಯ ಫಲಾನುಭವಿಗೆ ತಲಪಬೇಕು ಎಂಬುವುದಾಗುತಿತ್ತು.

ನಮ್ಮ ಪೂಜ್ಯ ಸ್ವಾಮಿಗಳು ಯಾಕೆ ದಲಿತರಿಗೆ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶ ನೀಡುವ ಆಂದೋಲನ ಮಾಡುವುದಿಲ್ಲ. ಭಕ್ತರೊಂದಿಗೆ, ಅವರ ಜಾತಿಯನ್ನು ಪ್ರಶ್ನಿಸದೆ ಯಾಕೆ ಸಹಬೋಜನ ಮಾಡಿ ಸಮಾಜಕ್ಕೆ ಮಾದರಿ ಆಗುವುದಿಲ್ಲ. ಮಠ, ಪೀಠಕ್ಕಾಗಿ ಕೋರ್ಟಿನ ಬಾಗಿಲು ತಟ್ಟುವ ಮಠಾಧೀಶರಿಂದ ಸಮಾಜಕ್ಕೇನು ಮಾರ್ಗದರ್ಶನ ಸಿಗಬಹುದು. `ಕಲ್ಯಾಣ ಕರ್ನಾಟಕ’ ಎಂದು ಹೆಸರು ಇಟ್ಟುಕೊಂಡರೆ ಸಾಕೆ? ಕಲ್ಯಾಣ ಕರ್ನಾಟಕ ನಿರ್ಮಾಣವಾಗಬೇಕಲ್ಲವೇ? ಅದಕ್ಕೊಂದು ಮಹಾಪಾದಯಾತ್ರೆ ಬಸವಕಲ್ಯಾಣದಿಂದ ಆರಂಭಗೊಂಡು ರಾಜ್ಯಾದ್ಯಂತ ಪಸರಿಸುವಂತೆ ಮಾಡಲು ಎಷ್ಟು ಮಂದಿ ಮಠಾಧೀಶರು ಯೋಚನೆ ಮಾಡಬಲ್ಲರು?

ದೇಶದಲ್ಲಿ ಇಂದು ರೈತರ ಮತ್ತು ದುಡಿಯುವ ಇತರ ಜನ ವಿಭಾಗಗಳ ಚಾರಿತ್ರಿಕ ಆಂದೋಲನವೊಂದು ನಡೆಯುತ್ತಿದೆ. ಅತ್ಯಂತ ಶಾಂತ ರೀತಿಯಿಂದ ನಡೆಯುವ ಈ ಆಂದೋಲನವನ್ನು ತಡೆಯಲು ಯಾರೂ ಪ್ರಯತ್ನ ಪಟ್ಟರೂ ಅವರಿಗೆ ಅದು ಸಾಧ್ಯವಾಗಿಲ್ಲ. ಕಾಯಕ ಜೀವಿಗಳು ತಮ್ಮ ಕೆಲಸಕ್ಕೆ ನ್ಯಾಯ ಸಮ್ಮತ ಪ್ರತಿಫಲ ಕೇಳುತ್ತಾರೆ. ತಮಗಾಗಿ ಮಾತ್ರವಲ್ಲ, ದೇಶಕ್ಕಾಗಿ. ನಮ್ಮ ಹಿರಿಯರು ಕಷ್ಟಪಟ್ಟುಗಳಿಸಿದ ಸ್ವಾತಂತ್ರ್ಯ ಮತ್ತೆ ಕಾರ್ಪೋರೇಟ್ ಕಂಪೆನಿಗಳ ವಶವಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಆತಂಕವನ್ನು ತಡೆಯಲು ಮುಂದಾಗಿರುವ, ಯಾವ ತ್ಯಾಗಕ್ಕೂ ಸಿದ್ಧರಾಗಿರುವ ರೈತರಿಗೆ ಮತ್ತು ಕಾರ್ಮಿಕರಿಗೆ ರಾಜ್ಯದ ಸಜ್ಜನ ಮಠಾಧೀಶರು ಬೆಂಬಲ ನೀಡುವುದಾಗಬೇಕು. ಇಂತಹ ಸಮಯದಲ್ಲಿ ಮೀಸಲಾತಿಗಾಗಿ ಜನರನ್ನು ಎತ್ತಿಕಟ್ಟುವುದು ಸಮಂಜಸವಾಗಲಾರದು. ದಲಿತ ಸಮುದಾಯದ ಹಕ್ಕುಗಳಿಗಾಗಿ ಹೋರಾಡುವುದು ಮತ್ತು ರೈತ-ಕಾರ್ಮಿಕರ ಚಾರಿತ್ರಿಕ ಚಳುವಳಿಯನ್ನು ಬೆಂಬಲಿಸುವುದು ಈಗ ಎಲ್ಲ ದೇಶಪ್ರೇಮಿ ಶಕ್ತಿಗಳಿಗೆ ಮತ್ತು ವ್ಯಕ್ತಿಗಳಿಗೆ ಮುಖ್ಯವಾಗಬೇಕು.

ಮುಖ್ಯಮಂತ್ರಿ ಯಡಿಯೂರಪ್ಪ ಮೀಸಲಾತಿ ಆಂದೋಲನ ಕುರಿತು ಮೌನವಾಗಿಯೇ ಇದ್ದಾರೆ. ಅವರು ತೂಗಿ ನೋಡುತ್ತಿರಬಹುದು. ಕದಡಿದ ನೀರಿನಲ್ಲಿ ಮೀನು ಹಿಡಿಯುವ ಜಾಯಮಾನ!

Donate Janashakthi Media

Leave a Reply

Your email address will not be published. Required fields are marked *