ಎಸ್.ವೈ. ಗುರುಶಾಂತ್
ಆರ್.ಎಸ್.ಎಸ್.ಮತ್ತು ಅದರ ಪರಿವಾರ, ಬಿಜೆಪಿ ನಾಯಕರ ಮಾತು ಮತ್ತು ವರ್ತನೆಗಳನ್ನು ಗಮನಿಸಿದರೆ ಮನೋರೋಗದ ವಿಕಲ್ಪ ಹಾಗೂ ವಿಕೃತತೆಯ ಉಲ್ಬಣಾವಸ್ಥೆಯಂತೆ ಕಾಣುತ್ತವೆ. ಮೈಸೂರಿನಲ್ಲಿ ಸಿಟಿ ಬಸ್ ನಿಲ್ದಾಣವೊಂದರ ಮೇಲ್ಚಾವಣಿಯ ಮೇಲೆ ಅರಮನೆಯ ಗೋಪುರ ಹೋಲುವ ಗುಂಡಾದ ಕಟ್ಟಡ ವಿನ್ಯಾಸ ಮಸೀದಿಯ ಗುಂಬಜ್ ನಂತೆ ಕಂಡು ಅದನ್ನು ಒಡೆಸಿ ಹಾಕಬೇಕು ಎಂದು ತಮ್ಮ ಪಕ್ಷದ ಶಾಸಕರ ಮೇಲೆಯೇ ಸಂಸದ ಪ್ರತಾಪ ಸಿಂಹ ರಂಪಾಟ ಮಾಡಿದ್ದು ಇನ್ನೂ ನೆನಪಿನಿಂದ ಮಾಸಿಲ್ಲ. ಇದು ಅವರಿಬ್ಬರ ನಡುವಿನ ವೈಯುಕ್ತಿಕ ದ್ವೇಷಕ್ಕೆ ಮಾಡಿದ ಕಿತಾಪತಿ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು. ಆದರೆ ಬೆಂಗಳೂರಿನ ಕೆಪಿಟಿಸಿಎಲ್ ಕಟ್ಟಡ, ಕಲ್ಬುರ್ಗಿ ರೈಲ್ವೇ ನಿಲ್ದಾಣಕ್ಕೆ ಬಳಿದ ಹಸಿರು ಬಣ್ಣ ಮತ್ತು ಕರ್ನಾಟಕ ಸರ್ಕಾರದ ಇತರೆ ಕಟ್ಟಡಗಳ ಮೇಲೆ ಅಂತಹ ‘ಗುಂಬಜ್’ ಗಳು ಇರುವುದು ನಮ್ಮ ಸಂಸ್ಕೃತಿಗೆ ಅಪಮಾನವೆಂದು ಮತ್ತೊಬ್ಬ ನಾಯಕ ಖ್ಯಾತಿಯ ತೆಗೆದಿದ್ದಾನೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮೇಲುಕೋಟೆ ಚೆಲುವರಾಯಣ ಸ್ವಾಮಿ ದೇವಾಲಯ ಮತ್ತು ಇತರ ಕಡೆ ‘ಸಲಾಂ ಆರತಿ’ ಪೂಜೆಯ ಹೆಸರನ್ನು ‘ಆರತಿ ನಮಸ್ಕಾರ’ ಎಂದು ಬದಲಾಯಿಸಲು ಕರ್ನಾಟಕ ಸರ್ಕಾರದ ಧಾರ್ಮಿಕ, ದತ್ತಿ ಇಲಾಖೆಯು ನಿರ್ಧಾರ ಮಾಡಿರುವ ವಿಚಿತ್ರ ಪ್ರಸಂಗವು ನಡೆದಿದೆ. ಅವರ ಖ್ಯಾತೆಗೆ ಇದು ಉರ್ದು ಪದ ಎನ್ಮುವ ನೆಪ! ಟಿಪ್ಪು ಸುಲ್ತಾನ್ ಮಾಡಿಸುತ್ತಿದ್ದ, ಅವರ ಹೆಸರಿನಲ್ಲಿ ನಡೆಯುವ ಪೂಜೆ ದಾಸ್ಯದ ಸಂಕೇತವಾಗಿದ್ದು ಈಗ ಬಿಜೆಪಿ ಅದನ್ನು ಗುಲಾಮತನದಿಂದ ವಿಮೋಚನೆ ಮಾಡುತ್ತಿದೆ ಎಂದು ಹೇಳಿಕೆ ನೀಡಲಾಗುತ್ತಿದೆ. ಈ ಹಿಂದೆ ಮೈಸೂರಿಂದ ಚೆನ್ನೈ ಗೆ ಸಂಚರಿಸುತ್ತಿದ್ದ ಟಿಪ್ಪು ಎಕ್ಸ್ ಪ್ರೆಸ್’ ರೈಲಿನ ಹೆಸರನ್ನು ಬದಲಾಯಿಸಿ ಒಡೆಯರ್ ಎಕ್ಸ್ ಪ್ರೆಸ್’ ಸ್ ಎಂದು ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಬರೆದದ್ದು ಮತ್ತು ಕೇಂದ್ರ ಸರ್ಕಾರ ಅದನ್ನು ಒಪ್ಪಿದ್ದು ʻʻವಿಮೋಚನಾʼʼ ಸರಣಿಯ ಒಂದು ಪೂರಕ ಪ್ರಸಂಗ.
ಇಲ್ಲಿ ಒಂದೆರಡು ಪ್ರಶ್ನೆಗಳು ಉದ್ಭವವಾಗುತ್ತವೆ. ಇನ್ನೂ ದುಂಡಗಿರುವ ಎಲ್ಲವನ್ನೂ ಇಸ್ಲಾಂ ವಾಸ್ತುಶಿಲ್ಪವೆಂದು ಘೋಷಿಸಿ ಅವುಗಳನ್ನು ಒಡೆಯುವ ಕಾಮಗಾರಿ ಕೆಲಸವನ್ನು ಸಂಘ ಪರಿವಾರ ಕೈಗೆತ್ತಿಕೊಳ್ಳುವುದೇ? ಮತ್ತೊಂದು, ಇಸ್ಲಾಂ ಧರ್ಮಕ್ಕೆ ಮತ್ತು ವಿಶೇಷವಾಗಿ ಟಿಪ್ಪು ಸುಲ್ತಾನ್ ರವರಿಗೆ ಯಾಕಿಷ್ಟು ಸಂಘ ಪರಿವಾರ ಭಯಪಡುತ್ತಿದೆ? ಅದು ಹೇಳುವ ಧರ್ಮ ಇನ್ನೊಂದು ಧರ್ಮದ ಎದುರಿನಲ್ಲಿ ದುರ್ಬಲ ಎಂದು ಭಾವಿಸಿದ್ದಾರೆಯೇ?
ಇವೆಲ್ಲವುಗಳನ್ನು ಗಮನಿಸುವಾಗ ಮನೋರೋಗದ ವೈದ್ಯಕೀಯ ವಲಯದಲ್ಲಿ ಫೋಬಿಯ ಎನ್ನುವ ಒಂದು ಕಾಯಿಲೆಯು ಸಂಘ ಪರಿವಾರದ ಕೋಮುವಾದಿ ಫ್ಯಾಸಿಸ್ಟರಿಗೆ ಆಡರಿಕೊಂಡಿದೆಯೇ ಎನ್ನುವ ಅನುಮಾನ ಕಾಡುತ್ತದೆ.
ʻಫೋಬಿಯಾʼ ಎನ್ನುವುದು ಒಂದು ನಿರ್ದಿಷ್ಟ ವಸ್ತು, ಸನ್ನಿವೇಶ ಅಥವಾ ಚಟುವಟಿಕೆಯ ಅನಿಯಂತ್ರಿತ, ತರ್ಕಹೀನ ಮತ್ತು ಶಾಶ್ವತವಾದ ಭಯವಾಗಿದೆ. ಈ ಭಯವು ಎಷ್ಟು ಅಗಾಧವಾಗಿರಬಹುದು ಎಂದರೆ ಒಬ್ಬ ವ್ಯಕ್ತಿಯು ಈ ಭಯದ ಮೂಲವನ್ನು ಮರೆಮಾಚಲು ಬಹು ದೂರ ಸಾಗಬಹುದು. ಒಂದು ಪ್ರತಿಕ್ರಿಯೆಯು ದಿಗಿಲಿನ ಆಕ್ರಮಣವೂ ಆಗಿರಬಹುದು’ ಎನ್ನುತ್ತದೆ ಪಾರಿಭಾಷಿಕ ಪದ ವಿವರಣೆ. ಸಾಮಾಜಿಕ, ಸಾಂಸ್ಕöÈತಿಕ ಸ್ತರಗಳಲ್ಲಿ ಇದು ಹೇಗೆ ಸಂಭವಿಸುತ್ತದೆ?
ವಿವಿಧ ಸಂಸ್ಕೃತಿ, ನಾಗರೀಕತೆ, ತಂತ್ರಜ್ಞಾನ ವಿನ್ಯಾಸಗಳು ಬಹು ಸಂಸ್ಕೃತಿಯ ಸತ್ವವು ಶ್ರೇಷ್ಟತೆಯ ವ್ಯಸನದಲ್ಲಿರುವರಿಗೆ ಕೀಳಿರಿಮೆ, ನಂತರದಲ್ಲಿ ಅಸ್ತಿತ್ವದ ಆತಂಕವಾಗಿ ಕಾಡುತ್ತದೆಯೇ? ಹೊಸದಕ್ಕೆ ಮುಖಾಮುಖಿಯಾಗದ, ತಾನೆಲ್ಲಿ ತಿರಸ್ಕಾರಕ್ಕೆ ಒಳಗಾಗುವೆನೋ ಎನ್ನುವ ಭಯ ನಿರಾಕರಣ ಸ್ವರೂಪಕ್ಕೆ ತಿರುಗಿ, ಮತ್ತೊಂದರ ಅಸ್ತಿತ್ವವನ್ನು ಹೀಗಳೆಯುವ ಭಂಡತನಕ್ಕೆ ಎಳಸುವುದೇ? ಸನಾತನೀಯತೆಯ ಸನ್ನಿಯೊಳಗೆ ಸಂಸ್ಕೃತಿ ಫೋಬಿಯಾ ದ ಬೀಜಗಳಿವೆಯೇ? ಸಾಮಾಜಿಕ ಸ್ತರಗಳ ಸಮುದಾಯ, ಜಾತಿ ಗುಂಪುಗಳ ಮನೋರಂಗದಲ್ಲಿನ ಈ ಒಳಸುಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಿಸಬೇಕಾಗುತ್ತದೆ.
‘ಸಲಾಂ ಆರತಿ’ ಎನ್ನುವುದು ಆರಾಧನೆಯ ಒಂದು ಧಾರ್ಮಿಕ ಕ್ರಿಯೆಯಂತೆ ಕಂಡರೂ ನಮ್ಮ ನಾಡಿನ ಜನ ಪರಂಪರೆಯ ಸೌಹಾರ್ದತೆಯ ಗಟ್ಟಿ ಸಂಕೇತವಾಗಿದೆ. ಸಂಘ ಪರಿವಾರ ಆರೋಪಿಸುವಂತೆ ಟಿಪ್ಪು ಸುಲ್ತಾನ್ ಮತಾಂಧನೇ ಆಗಿದ್ದಲ್ಲಿ ಯಾಕೆ ಸುಪ್ರಸಿದ್ಧ ಹಿಂದೂ ದೇವಾಲಯಗಳ ಸಂರಕ್ಷಣೆಯನ್ನು ಮತ್ತು ಹಿಂದೂ ಪದ್ಧತಿಯಂತೆ ಆರತಿ ಯಂತಹ ಪೂಜಾ ವಿಧಾನಕ್ಕೆ ಪ್ರೋತ್ಸಾಹವನ್ನು ಕೊಡುತ್ತಿದ್ದ. ರಂಗನಾಥನ ದೇವಾಲಯದ ಘಂಟಾನಾದ ಮತ್ತು ಮಸೀದಿಯ ಆಜಾನ್ ಎರಡೂ ತನ್ನ ಕಿವಿಗೆ ಬೀಳ ಬೇಕೆಂದು ಬಯಸುತ್ತಿದ್ದ? ಇಸ್ಲಾಂನ್ನು ಅನುಸರಿಸುವಾಗಲೇ ಸ್ವತಃ ಸೂಫಿ ಪರಂಪರೆಯ ಅನುಯಾಯಿಯಾಗಿದ್ದ ಟಿಪ್ಪು ಹಿಂದೂ ಪೂಜಾ ಪದ್ಧತಿಗೆ ಮಾನ್ಯತೆ ಮತ್ತು ಗೌರವ ಸಲ್ಲಿಸಿರುವುದು ಸಲಾಂ ಆರತಿಯು ಆತನ ಪರ ಧರ್ಮ ಸಹಿಷ್ಣುತೆಯ ಪ್ರತಿಕವಾಗಿದೆ. ಹೀಗಾಗಿ ‘ಸಲಾಂ ಆರತಿ’ ಎನ್ನುವುದು ಕನ್ನಡ ನಾಡಿನ ಸೌಹಾರ್ದ ಪರಂಪರೆಯ ಒಂದು ಪ್ರಮುಖ ಆಚರಣೆ ಮತ್ತು ಸಂಕೇತವಾಗಿಯೇ ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ಉಜ್ವಲ ಉದಾಹರಣೆಗಳು ಸಂಘ ಪರಿವಾರಕ್ಕೆ ಅಪ್ಯಾಯಮಾನವಾಗಿ ಕಾಣುವುದೆಂದರೆ ಅವರು ನಮ್ಮ ಅಪರಂಪರೆಗೆ ಮಸಿ ಬಳಿಯುತ್ತಿದ್ದಾರೆಂದೇ ಅರ್ಥ. ಶೃಂಗೇರಿ ಶಾರದೆಯ ದೇವಸ್ಥಾನವನ್ನು ಮರಾಠಿ ಹಿಂದೂ ಪೇಶ್ವೆಗಳು ಲೂಟಿ ಮಾಡಿದ ನಂತರ ಗುರುಗಳ ಕ್ಷಮೆ ಕೋರುತ್ತಾ ದೇವಸ್ಥಾನದ ಸಂರಕ್ಷಣೆಯ ಜೊತೆಯಲ್ಲಿ ಆಗಿರುವ ಧನ, ಕನಕ ಹಾನಿಯನ್ನು ತುಂಬಿ ಕೊಡುವ ಮುತ್ಸದ್ದಿತನವನ್ನು ಟಿಪ್ಪು ವಹಿಸಿದ್ದು ಲಿಖಿತ ದಾಖಲೆಗಳಲ್ಲಿದೆ. ಸಲಾಂ ಆರತಿ ಎನ್ನುವುದು ಕೂಡ ಪ್ರತಿ ಬಾರಿಯೂ ಟಿಪ್ಪುವಿನ ಧಾರ್ಮಿಕ ಸಹಿಷ್ಣುತೆ, ಸೌಹಾರ್ದತೆಯನ್ನು ನೆನಪಿಸುತ್ತದೆ. ಆದರೆ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ರಾಜಿ ಇಲ್ಲದೆ ಹೋರಾಟ ನಡೆಸಿ ಹುತಾತ್ಮನಾದ ಟಿಪ್ಪುವನ್ನು ಸಂಘಪರಿವಾರ ಹೇಗಾದರೂ ಮಾಡಿ ಜನಮಾನಸದಿಂದ ಅಳಿಸಿಹಾಕಿ, ಇತಿಹಾಸಕ್ಕೆ ಮಸಿ ಬಳಿಯಲು ಸದಾ ಪ್ರಯತ್ನಿಸುತ್ತಿದೆ. ಇಂತಹ ದುರುದ್ದೇಶಪೂರಿತ ರಾಜಕಾರಣಕ್ಕೆ ಟಿಪ್ಪುವಿನ ಇಂತಹ ಕೊಡುಗೆಗಳು ಮತ್ತು ಆಚರಣೆಗಳು ಸವಾಲನ್ನು ಒಡ್ಡಿ ಸಂಘಪರಿವಾರದ ಕುತರ್ಕಗಳನ್ನು ಕುತ್ಸಿತ ಪ್ರಚಾರವನ್ನು ಅಣಕಿಸುತ್ತವೆ. ಹಾಗಾಗಿಯೇ ಶತಶತಮಾನಗಳು ಉರುಳಿದರೂ ಟಿಪ್ಪುವಿನ ಎದುರು ಮೊಂಡು ಗತ್ತಿ ಹಿಡಿದು ವಸಾಹತುಶಾಹಿ ಕುನ್ನಿಗಳು ಯುದ್ಧವನ್ನು ನಡೆಸುತ್ತಲೇ ಇರುತ್ತಾರೆ. ಅವರು ವಾಸ್ತವದಲ್ಲಿ ವಿರೋದಿಸುವುದು ವಸಾಹತುಶಾಹಿ ವಿರೋಧಿ ಸಂಘರ್ಷದ ಪರಂಪರೆಯನ್ನು. `ಟಿಪ್ಪು’ವಿನ ಎದುರು ಸೆಣಸಲಾಗದ ಹೇಡಿಗಳು ವಾಲ್ಮೀಕಿ, ಒಕ್ಕಲಿಗ, ಕೊಡವರು ಮುಂತಾದವರನ್ನು ಹಾದಿ ತಪ್ಪಿಸಿ ಮತ್ತೆ ಅಡ್ಡ ನಿಲ್ಲಿಸಲು ಯತ್ನಿಸುತ್ತಲೇ ಇರುತ್ತಾರೆ.
ನಮ್ಮ ನಾಡಿನ ಸಹಿಷ್ಣುತೆ, ಸೌಹಾರ್ದ ಪರಂಪರೆಗೆ ಮತ್ತೆ ಮತ್ತೆ ಮಸಿ ಬಳಿದು ಅವಮಾನಿಸುವ ಕೃತ್ಯಗಳನ್ನು ಸಂಘ ಪರಿವಾರ ಕೈಬಿಡಬೇಕು. ಸತ್ಯವೆಂಬ ಸೂರ್ಯನ ಮುಖಕ್ಕೆ ಮಣ್ಣು ತೂರಿದವರ ಕಣ್ಣಿಗೆ ಮಣ್ಣು ಬೀಳುತ್ತದೆ ಎನ್ನುವ ಸತ್ಯವನ್ನು ಈ ಪರಿವಾರ ಅರ್ಥ ಮಾಡಿಕೊಂಡರೆ ಉತ್ತಮ. ಆದ್ದರಿಂದ ಇಂತಹ ವಿಚಿತ್ರ ಕೃತ್ಯಗಳನ್ನು ನಿಲ್ಲಿಸಬೇಕು. ಸರ್ಕಾರ, ಆಡಳಿತ ಇರುವುದು ಜನಸಾಮಾನ್ಯರ ಬದುಕಿನ ಪ್ರಶ್ನೆಗಳನ್ನು ನೀಗಿಸಿ ಉತ್ತಮ ಬದುಕನ್ನು ಕಟ್ಟಿಕೊಡಲು ಎನ್ನುವುದು ನೆನಪಿಡಬೇಕು. ಇಂತಹ ಅಧಿಕಾರ ಅವಕಾಶಗಳನ್ನು ದುರ್ಬಳಕೆ ಮಾಡಿ ಜನತೆಯ ಮನಸ್ಸಿಗೆ ವಿಭಜನೆ, ವಿದ್ವೇಷದ ವಿಷಪ್ರಾಶನ ಮಾಡಿಸಲು ಅಲ್ಲ ಎನ್ನುವುದು ನೆನಪಿಡಬೇಕು.