ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 6. ಯುದ್ಧದ ತಕ್ಷಣದ ಪರಿಣಾಮಗಳೇನು ?

ವಸಂತರಾಜ ಎನ್.ಕೆ

ಉಕ್ರೇನಿನಲ್ಲಿ ರಷ್ಯಾದ  ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ ಏನಿದೆ? ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು? ಈ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು? ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ? ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ? ಯುದ್ಧದ ತಕ್ಷಣದ ಪರಿಣಾಮಗಳೇನು ? ಯುದ್ಧಕ್ಕೆ ಎಂತಹ ಅಂತರ್ರಾಷ್ಟ್ರೀಯ  ಪ್ರತಿಕ್ರಿಯೆ ಬಂದಿದೆ?  ಯುದ್ಧ ನಿಲ್ಲಿಸಲು ನಡೆದಿರುವ ಅಂತರ್ರಾಷ್ಟ್ರೀಯ ಪ್ರಯತ್ನಗಳೇನು ?  ಈ ಯುದ್ಧದ ಕುರಿತು ಭಾರತ ಸರಕಾರದ ನಿಲುವು ಸರಿಯೆ? ಯುದ್ಧ ಭಾರತದ ಮತ್ತು ಅಂತರ್ರಾಷ್ಟ್ರೀಯ ಪರಿಸ್ಥಿತಿ ಮೇಲೆ ಯಾವ ದೂರಗಾಮಿ ಪರಿಣಾಮ ಬೀರಬಹುದು ? ಈ  ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಈ ಸರಣಿಯಲ್ಲಿ ಕೊಡಲಾಗುವುದು.

  1. ಯುದ್ಧದ ತಕ್ಷಣದ ಪರಿಣಾಮಗಳೇನು ?

ಯುದ್ಧದ ತಕ್ಷಣದ ಪರಿಣಾಮಗಳೆಂದರೆ – ಉಕ್ರೇನಿನ ಸೈನ್ಯ ಮತ್ತು ನಾಗರಿಕರ ಸಾವು-ನೋವು; ರಶ್ಯಾದ ಸೈನಿಕರ ಸಾವು-ನೋವು; ಉಕ್ರೇನಿನ ಮಿಲಿಟರಿ ಸಾಧನಗಳು ಮತ್ತು ಪ್ರಮುಖ ನಗರಗಳ ಮೂಲಸೌಕರ್ಯದ ನಾಶ; ರಶ್ಯದ ಮಿಲಿಟರಿ ಪಶ್ಚಿಮ ಗಡಿಯ ದೇಶಗಳಿಗೆ ಉಕ್ರೇನಿನ ನಾಗರಿಕರ ಭಾರೀ ಪ್ರಮಾಣದ ನಿರಾಶ್ರಿತರ ವಲಸೆ: ಯುದ್ಧ ಸ್ಥಿತಿಯಿಂದಾಗಿ ರಶ್ಯ ಮತ್ತು ಉಕ್ರೇನಿನ ಪ್ರಮುಖ ರಫ್ತುಗಳಲ್ಲಿ ವ್ಯತ್ಯಯ ಮತ್ತು ಇನ್ನಷ್ಟು ಭಾರಿ ವ್ಯತ್ಯಯದ ಆತಂಕ; ರಶ್ಯಾದ ವಿರುದ್ಧ ಯು.ಎಸ್ ಮತ್ತು ಯುರೋ ಕೂಟದಿಂದ ಭಾರೀ ಅಭೂತಪೂರ್ವ ಆರ್ಥಿಕ ದಿಗ್ಬಂಧನಗಳ ಘೋಷಣೆ; ರಶ್ಯಾದ ಜನತೆಯ ಮೇಲೆ ಅಗತ್ಯ ವಸ್ತುಗಳ ಕೊರತೆ, ಬೆಲೆ ಏರಿಕೆಗಳ ಮತ್ತಿತರ ಸಂಕಷ್ಟಗಳು ಮತ್ತು ಇನ್ನಷ್ಟು ಭೀಕರ ಸಂಕಷ್ಟಗಳ ಆತಂಕ; ತೈಲ, ತೈಲ ಉತ್ಪನ್ನಗಳು, ಪ್ರಾಕೃತಿಕ ಗ್ಯಾಸ್ ಗಳ ವಿಪರೀತ ಬೆಲೆಏರಿಕೆ: ಕೊವಿದೋತ್ತರ ಆರ್ಥಿಕ ಪುನಶ್ಚೇತನ ಹಿಂದೆ ಸರಿದು ಜಾಗತಿಕ ಆರ್ಥಿಕ ಹಣದುಬ್ಬರ ಮತ್ತು ಸ್ಥಗಿತತೆಯ ತೀವ್ರ ಆತಂಕ.

ಇದನ್ನು ಓದಿ: ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 5. ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ?

ರಶ್ಯಾ-ಉಕ್ರೇನ್ ಯುದ್ಧ ಮೂರನೆಯ ವಾರದಲ್ಲಿ ಮುಂದುವರೆದಿದ್ದು, ಈ ಯುದ್ಧದಲ್ಲಿ ವಿಶ್ವಸಂಸ್ಥೆಯ ಪ್ರಕಾರ ಮಾರ್ಚ್ 12ರ ವರೆಗೆ 579 ಉಕ್ರೇನಿನ ನಾಗರಿಕರು ಸತ್ತಿದ್ದಾರೆ. ಉಕ್ರೇನ್ ಸರಕಾರ 2000 ಜನ ಸತ್ತಿದ್ದಾರೆ ಎಂದು ತಿಳಿಸಿದೆ. ಉಕ್ರೇನಿನ 1300 ಸೈನಿಕರು ಮರಣ ಹೊಂದಿದ್ದಾರೆಂದು ಉಕ್ರೇನ್ ಸರಕಾರ ಹೇಳಿದರೆ, ಯು.ಎಸ್ ಅಧಿಕಾರಿಗಳು 4000ದಷ್ಟು ಉಕ್ರೇನಿ ಸೈನಿಕರು ಬಲಿಯಾಗಿದ್ದಾರೆ ಎಂದಿದ್ದಾರೆ. ರಶ್ಯನ್ ಸರಕಾರ 498  ರಶ್ಯನ್ ಸೈನಿಕರು ಮಡಿದಿದ್ದಾರೆ ಎಂದರೆ, ಯು.ಎಸ್ ಅಧಿಕಾರಿಗಳು 4000-6000 ರಶ್ಯನ್ ಸೈನಿಕರು ಬಲಿಯಾಗಿದ್ದಾರೆ ಎಂದಿದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಯಾವುದೇ ಯುದ್ಧದ ಮೊದಲ ಬಲಿಪಶು – ಸತ್ಯ ಮತ್ತು ವಾಸ್ತವ.  ಹಾಗಾಗಿ ಯಾವುದೇ ಹೇಳಿಕೆ, ಸುದ್ದಿ ಯನ್ನು ಪೂರ್ಣವಾಗಿ ನಂಬುವಂತಿಲ್ಲ. ಎರಡೂ ಕಡೆಯ ಒಟ್ಟು ಸಾವು-ನೋವುಗಳು ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆಯಿದೆ. ಉಕ್ರೇನ್ ಮತ್ತು ರಶ್ಯಾ ಎರಡೂ ಕಡೆಯ ನೂರಾರು ಟ್ಯಾಂಕುಗಳು, ಯುದ್ಧ ವಿಮಾನಗಳು ಮತ್ತು ಇತರ ಮಿಲಿಟರಿ ಸಾಧನಗಳು ಉಪಕರಣಗಳನ್ನು ಯುದ್ಧದಲ್ಲಿ ಕಳೆದುಕೊಂಡಿವೆ. ರಶ್ಯಾ ಉಕ್ರೇನಿಗಿಂತಲೂ ಹೆಚ್ಚು ಮಿಲಿಟರಿ ಸಾಧನಗಳು ಉಪಕರಣಗಳನ್ನು ಕಳೆದುಕೊಂಡಿದೆ ಎಂದು ಉಕ್ರೇನಿ ಮತ್ತು ಪಾಶ್ಚಿಮಾತ್ಯ ಮೂಲಗಳು ಹೇಳಿವೆ. ಆದರೆ ರಶ್ಯಾ ಇದನ್ನು ನಿರಾಕರಿಸಿದೆ.

ಉಕ್ರೇನಿನ ಕಾರ್ಖಿವ್, ಕೀವ್ ಇತ್ಯಾದಿ ಇತರ ನಗರಗಳ ಮೇಲೆ ರಶ್ಯಾ ಭಾರಿ ರಾಕೆಟ್, ಶೆಲ್, ಬಾಂಬ್ ದಾಳಿಗಳನ್ನು ನಡೆಸಿದ್ದು ಈ ನಗರಗಳ ಮೂಲಸೌಕರ್ಯಗಳು ವ್ಯಾಪಕ ನಾಶ ಕಂಡಿದ್ದು ತೀವ್ರ ಮಾನವೀಯ ಬಿಕ್ಕಟ್ಟು ಎದುರಾಗಿದೆ. ನಗರದ ಹಲವು ಭಾಗಗಳು ಧ್ವಂಸವಾಗಿವೆ ಎಂದು ವರೆದಿಯಾಗಿವೆ. ಆದರೆ ರಶ್ಯಾ ಮಿಲಿಟರಿ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ ಎಂದು ಹೇಳಿದೆ. ಉಕ್ರೇನ್ 100 ಶತಕೋಟಿ ಡಾಲರುಗಳಷ್ಟು ಬೆಲೆಬಾಳುವ ನಗರ ಮೂಲಸೌಕರ್ಯಗಳು ನಾಶವಾಗಿವೆ ಎಂದು ಹೇಳಿದೆ. ರಶ್ಯಾ ತನ್ನ ವಶಕ್ಕೆ ಬಂದಿರುವ ಪೂರ್ವ ಉಕ್ರೇನ್ ಪ್ರದೇಶಗಳಲ್ಲಿ ಯು.ಎಸ್ ಸಹಕಾರದೊಂದಿಗೆ ಸ್ಥಾಪಿಸಲಾದ 30 ಜೈವಿಕ ಸಂಶೋಧನಾ ಕೇಂದ್ರಗಳು ಸಿಕ್ಕಿವೆ ಎಂದು ಹೇಳಿದೆ. ಜೈವಿಕ ಅಸ್ತ್ರಗಳನ್ನು  ತಯಾರಿಸಲು ಬೇಕಾಗಬಹುದಾದ ಸಾಮಗ್ರಿಗಳನ್ನು ಸಾಗಿಸಲಾಗಿದೆ ಎಂದೂ ಹೇಳಲಾಗಿದೆ. ಯು.ಎಸ್ ಇವು ಸಂಶೋದನಾ ಕೇಂದ್ರಗಳು ಮಾತ್ರ, ಜೈವಿಕ ಅಸ್ತ್ರಗಳಿಗೆ ಸಂಬಂಧಿಸಿಲ್ಲ ಎಂದಿದೆ. ಆದರೆ ಸೆನೆಟ್ ಸಮಿತಿಯ ಸಭೆಯೊಂದರಲ್ಲಿ ಉಕ್ರೇನಿನನಲ್ಲಿರುವ ಜೈವಿಕ ಸಂಶೋಧನಾ ಕೇಂದ್ರಗಳಲ್ಲಿರುವ ಸಾಮಗ್ರಿಗಳು ರಶ್ಯಾ ಕೈಗೆ ಸಿಕ್ಕಿದರೆ ತೀವ್ರ ಅಪಾಯಕಾರಿ ಎಂದೂ ಹೇಳಿದ್ದು ಆಶ್ಚರ್ಯಕಾರಿಯಾಗಿದೆ. ರಶ್ಯಾ ರಾಸಾಯನಿಕ ಅಸ್ತ್ರಗಳನ್ನು ಬಳಸಿದೆ ಎಂದು ಉಕ್ರೇನ್ ಆಪಾದಿಸಿದೆ.

ಯುದ್ಧದ ತಕ್ಷಣದ ಪರಿಣಾಮಗಳಲ್ಲಿ ಭೀಕರವಾದದ್ದು ನಾಗರಿಕರು ದಾಳಿಗೊಳಗಾದ ನಗರಗಳಿಂದ ಓಡಿ ಹೋಗಿ ನಿರಾಶ್ರಿತರಾಗಿ ದೇಶದ ಒಳಗೆ ಮತ್ತು ಹೊರಗೆ ಇತರ ಪ್ರದೇಶಗಳಿಗೆ ವಲಸೆ ಹೋಗಿರುವುದು. ವಿಶ್ವಸಂಸ್ಥೆಯ ಪ್ರಕಾರ ಮಾರ್ಚ್ 11ರ ವರೆಗೆ 26 ಲಕ್ಷ ಉಕ್ರೇನಿ ನಿರಾಶ್ರಿತರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ. ಪೋಲೆಂಡಿಗೆ 15.75 ಲಕ್ಷ, ಹಂಗೇರಿಗೆ 2.35 ಲಕ್ಷ, ಸ್ಲೋವಾಕಿಯಕ್ಕೆ 1.85 ಲಕ್ಷ, ಮೊಲ್ಡೊವಾ ಕ್ಕೆ 1 ಲಕ್ಷ, ರೊಮೇನಿಯಾಕ್ಕೆ 0.85 ಲಕ್ಷ ನಿರಾಶ‍್ರಿತ ಉಕ್ರೇನಿಯನರು ವಲಸೆ ಹೋಗಿದ್ದಾರೆ. ಎರಡನೆಯ ಮಹಾಯುದ್ಧದ ಮತ್ತು 1990ರ ದಶಕದ ಯುಗೋಸ್ಲಾವ್ ಬಿಕ್ಕಟ್ಟಿನ ನಂತರ ಯುರೋಪಿನಲ್ಲಿ ಇದು ಅತಿ ದೊಡ್ಡ ನಿರಾಶ್ರಿತರ ವಲಸೆ ಎನ್ನಲಾಗಿದೆ. ದೇಶದೊಳಗಿನ ಆಂತರಿಕ ನಿರಾಶ್ರಿತರ ಸಂಖ್ಯೆ ಇನ್ನೂ ಅಂದಾಜು ಮಾಡಲಾಗಿಲ್ಲ.

ಇದನ್ನು ಓದಿ: ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 4. ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ?

ತೈಲ ಮತ್ತು ತೈಲ ಉತ್ಪನ್ನಗಳ ಜಾಗತಿಕ ಅಗತ್ಯದ ಶೇ.10 ರಷ್ಟನ್ನು ಮತ್ತು ಯುರೋಪಿನ ಪ್ರಾಕೃತಿಕ ಗ್ಯಾಸ್ ಬೇಡಿಕೆಯ ಶೇ.33ರಷ್ಟನ್ನು ರಶ್ಯ ಪೂರೈಸುತ್ತದೆ. ರಶ್ಯ ಮತ್ತು ಉಕ್ರೇನ್ ಒಟ್ಟಿಗೆ ಧಾನ್ಯದ ಜಾಗತಿಕ ಅಗತ್ಯದ ಶೇ.16ರಷ್ಟನ್ನು, ರಸಗೊಬ್ಬರದ ಶೇ.14.4ರಷ್ಟನ್ನು, ಅಡುಗೆ ತೈಲದ ಶೇ.10ರಷ್ಟನ್ನು, ಕಬ್ಬಿಣ-ಉಕ್ಕಿನ ಶೇ. 7 ರಷ್ಟನ್ನುಪೂರೈಸುತ್ತವೆ.  ಇವೆಲ್ಲದರ ಉತ್ಪಾದನೆ, ರಫ್ತುಗಳಲ್ಲಿ ಕೂಡಲೇ ವ್ಯತ್ಯಯ ಬರದಿದ್ದರೂ ಯುದ್ಧ ಮುಂದುವರೆಯುತ್ತಿದ್ದಂತೆ ಇವುಗಳ ಕೊರತೆ, ಬೆಲೆಏರಿಕೆ ಖಂಡಿತ ಆಗಲಿದೆ.

ಉಕ್ರೇನಿನ ಮೇಲೆ ರಶ್ಯಾ ಆಕ್ರಮಣ ಮಾಡಿ ಯುದ್ಧ ಮಾಡಿದ್ದಕ್ಕೆ ಪ್ರತೀಕಾರವಾಗಿ ಯು.ಎಸ್, ಯುರೋ ಮತ್ತು ನಾಟೋ ಕೂಟದ ಹೆಚ್ಚಿನ ದೇಶಗಳು ಅಭೂತಪೂರ್ವ ಭಾರೀ ಆರ್ಥಿಕ ದಿಗ್ಬಂಧನಗಳ ಘೋಷಣೆಯನ್ನು ಮಾಡಿವೆ. ಈ ಆರ್ಥಿಕ ದಿಗ್ಬಂಧನಗಳನ್ನು ಆರ್ಥಿಕ ಯುದ್ಧದ ಘೊಷಣೆಯೆಂದೇ ಕರೆಯಬಹುದು. ಈ ದಿಗ್ಬಂಧನಗಳು ಸಹ ಭೌತಿಕ ಯುದ್ಧದಂತೆ ಯಾವುದೇ ಅಂತರ್ರಾಷ್ಟ್ರೀಯ ಕಾನೂನು ಮತ್ತು ನಿಯಮಗಳಿಗೆ ಅನುಗುಣವಾಗಿಲ್ಲ. 2014ರಲ್ಲಿ ಕ್ರಿಮಿಯಾ ವನ್ನು ರಶ್ಯಾ ಆಕ್ರಮಿಸಿಕೊಂಡ ನಂತರ ವಿಧಿಸಲಾದ ಆರ್ಥಿಕ ದಿಗ್ಬಂಧನಗಳು ಇನ್ನೂ ಜಾರಿಯಲ್ಲಿವೆ ಎಂದು ಗಮನಿಸಬಹುದು. ಮೊದಲ ಬಾರಿಗೆ ಸ್ವಿಟ್ಜರ್ ಲ್ಯಾಂಡ್, ಸ್ವೀಡನ್ ನಂತಹ ತಟಸ್ಥ ಹಾಗೂ ತೈವಾನ್, ದಕ್ಷಿಣ ಕೊರಿಯಾ, ಸಿಂಗಾಪುರ ನಂತಹ ದೇಶಗಳು ಕೆಲವು ದಿಗ್ಬಂಧನಗಳನ್ನು ಘೋಷಿಸಿವೆ. ಎಲ್ಲ ದೇಶಗಳು ಎಲ್ಲ ದಿಗ್ಬಂಧನಗಳನ್ನು ವಿಧಿಸಿಲ್ಲ. ನಾಟೋ ಮತ್ತು ಯುರೋ ಕೂಟದ ದೇಶಗಳು ತಮ್ಮ ದೇಶದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ದಿಗ್ಬಂಧನಗಳನ್ನು ವಿಧಿಸಿವೆ. ಕೆಲವು ದೇಶಗಳು ರಶ್ಯಾದ ಅಧ್ಯಕ್ಷ ಪುಟಿನ್ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು, ದೈತ್ಯ ಉದ್ಯಮಿಗಳ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿವೆ. ತೈಲ, ಗ್ಯಾಸ್ ರಫ್ತಿನ ವಹಿವಾಟು ಬಿಟ್ಟು ಇತರ ವಹಿವಾಟು ನಡೆಸುತ್ತಿರುವ ನಾಲ್ಕು ಪ್ರಮುಖ ರಶ್ಯನ್ ಬ್ಯಾಂಕುಗಳ ಪಾಶ್ಚಿಮಾತ್ಯ ಬ್ಯಾಂಕುಗಳು, ಆರ್ಥಿಕ ಮಾರುಕಟ್ಟೆಗಳಲ್ಲಿರುವ ಆಸ್ತಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ. ಸ್ವಿಫ್ಟ್ ಎಂಬ ಅಂತರರಾಷ್ಟ್ರೀಯ ವ್ಯವಸ್ಥೆಯ ಮೂಲಕ ಹಣಕಾಸು ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ. ಹಲವು ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ರಶ್ಯಾದ  ವ್ಯವಹಾರಗಳನ್ನು ಸ್ಥಗಿತಗೊಳಿಸಿವೆ. ಇವಲ್ಲದೆ ಯು.ಎಸ್ ರಶ್ಯಾದಿಂದ ತೈಲ, ಗ್ಯಾಸ್ ಆಮದನ್ನೂ ನಿಷೇಧಿಸಿದೆ. ಯುರೋಪಿಗೆ (ಪ್ರಮುಖವಾಗಿ ಜರ್ಮನಿಗೆ) ನೇರವಾಗಿ ಗ್ಯಾಸ್ ಪೂರೈಕೆ ಮಾಡಲಿದ್ದ ನಾರ್ಡ್ ಗ್ಯಾಸ್-2 ನ ಅಂತಿಮ ಪರೀಕ್ಷಣೆ ಮತ್ತು ಪೂರೈಕೆಯ ಆರಂಭವನ್ನು ಸ್ಥಗಿತಗೊಳಿಸಲಾಗಿದೆ. ಮೂಲ ನಾರ್ಡ್ ಗ್ಯಾಸ್ ಪೂರೈಕೆ ಮೇಲೆ ನಿಷೇಧ ವಿಧಿಸಲಾಗಿಲ್ಲ. ಈ ಎಲ್ಲದರ ಫಲವಾಗಿ ರಶ್ಯದ ಶೇರು ಮಾರುಕಟ್ಟೆ ಶೇ.39 ಕುಸಿತ ಕಂಡಿದೆ. ಕಳೆದ ಮೂರು ವಾರಗಳಿಂದ ರಶ್ಯನ್ ಶೇರು ಮಾರುಕಟ್ಟೆ ಮುಚ್ಚಿದೆ. ರೂಬಲ್ ಶೇ.60ರಷ್ಟು ಮೌಲ್ಯ ಕಳೆದುಕೊಂಡಿದೆ. ರಶ್ಯ ತನ್ನ ಮೇಲೆ ದಿಗ್ಬಂಧನ ವಿಧಿಸಿದ ದೇಶಗಳ, ಕಂಪನಿಗಳ ಮೇಲೆ ತನ್ನದೇ ದಿಗ್ಬಂಧನಗಳನ್ನು ವಿಧಿಸಿದೆ.

ಯುದ್ಧ ಮತ್ತು ಆರ್ಥಿಕ ದಿಗ್ಬಂಧನಗಳ ಒಟ್ಟು ಫಲವಾಗಿ ತೈಲ ಬೆಲೆ ವಿಪರೀತವಾಗಿ ಏರಿದೆ. ಕಳೆದ 1 ತಿಂಗಳಲ್ಲಿ ಬ್ಯಾರಲ್ ಗೆ 90ರಿಂದ 120 ಡಾಲರಿಗೆ ಏರಿ 110-120 ಡಾಲರುಗಳ ನಡುವೆ ಹೊಯ್ದಾಡುತ್ತಿದೆ. ಒಂದು ವರ್ಷದ ಹಿಂದೆ ಈ ಬೆಲೆ ಕೇವಲ 65 ಡಾಲರಿದ್ದು ಈಗ ಹೆಚ್ಚು ಕಡಿಮೆ ಇಮ್ಮಡಿಯಾಗಿದೆ. ಈ ವರ್ಷದ ಕೊನೆಯ ಹೊತ್ತಿಗೆ ತೈಲ ಬೆಲೆ 180-200 ಡಾಲರಿಗೆ ಏರಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎನ್ನಲಾಗಿದೆ. ಇದು ಯು.ಎಸ್, ನಾಟೋ ಮತ್ತು ಯುರೋ ಕೂಟ, ರಶ್ಯ ಸೇರಿದಂತೆ ಇಡೀ ಜಗತ್ತಿನ ದೇಶಗಳಲ್ಲಿ ಜೀವನಾಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆ, ಹಣದುಬ್ಬರಕ್ಕೆ ಕಾರಣವಾಗಲಿದೆ. ಕೊವಿದೋತ್ತರ ಆರ್ಥಿಕ ಪುನಶ್ಚೇತನ ಹಿಂದೆ ಸರಿದು ಜಾಗತಿಕ ಆರ್ಥಿಕ ಹಣದುಬ್ಬರ ಮತ್ತು ಸ್ಥಗಿತತೆಗೆ ಕಾರಣವಾಗಲಿದೆ.

ಇವುಗಳನ್ನೂ ಓದಿ:

ಉಕ್ರೇನ್ ಯುದ್ಧದ ಕುರಿತ ಪ್ರಶ್ನೆಗಳು -1 ಉಕ್ರೇನಿನಲ್ಲಿ ರಷ್ಯಾ ಮಿಲಿಟರಿ ದಾಳಿಯ ನಂತರ ಸ್ಥಿತಿ ಏನಿದೆ?

ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 2 : ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು?

ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 3. ಉಕ್ರೇನ್ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು?

Donate Janashakthi Media

Leave a Reply

Your email address will not be published. Required fields are marked *