ಉಕ್ಕಿನ ಮಹಿಳೆ: ಕೆ.ಆರ್.ಗೌರಿ ಅಮ್ಮ

ಡಾ.ಕೆ.ಷರೀಫಾ

ಕೇರಳದ ಹಿರಿಯ ರಾಜಕಾರಣಿ ಕೆ.ಆರ್.ಗೌರಿಯಮ್ಮನವರು ತಮ್ಮ 102ನೇ ವರ್ಷ ವಯಸ್ಸಿನಲ್ಲಿ ದಿನಾಂಕ: 11-05-2021ರಂದು ಸೋಮವಾರ ತಿರುವನಂತಪುರದಲ್ಲಿ ನಿಧನರಾದುದು ಅತ್ಯಂತ ನೋವಿನ ಸಂಗತಿ. ಅವಿಭಜಿತ ಕಮ್ಯೂನಿಸ್ಟ್‌ ಪಕ್ಷದ ನಾಯಕಿಯಾಗಿ ಮತ್ತು ಕೇರಳದ ಚರಿತ್ರೆಯಲ್ಲಿ ಐತಿಹಾಸಿಕ ಹೆಗ್ಗುರುತುಗಳನ್ನು ಉಳಿಸಿ ಹೋದವರು ಅಮ್ಮ. ಅವರು ಆಧುನಿಕ ಕೇರಳದ ರೂವಾರಿಗಳಲ್ಲೊಬ್ಬರು. ಸ್ತ್ರೀವಾದಿ, ಒಬ್ಬ ಅಸಾಧಾರಣ ಮಾನಸಿಕ ಸ್ಥೈರ್ಯವುಳ್ಳ ಮಹಿಳೆಯಾಗಿದ್ದರು. ಅವರು ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಬೇಕಾಯಿತು. ಆ ಸಮಯದಲ್ಲಿ ಪೋಲೀಸರು ಅವರನ್ನು ಅತ್ಯಂತ ಕ್ರೂರವಾಗಿ ಹಿಂಸಿಸುತ್ತಾರೆ. 1978ರಲ್ಲಿ ಆಗಿನ ಮದ್ರಾಸಿನಲ್ಲಿ ನಡೆದ ಅಖಿಲ ಭಾರತ ಪ್ರಜಾಸತ್ತಾತ್ಮಕ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಸಮಾವೇಶದಲ್ಲಿ ನಾನು ಗುಲಬರ್ಗಾದಿಂದ ಭಾಗವಹಿಸಿದ್ದೆ. ಅಂದು ವೇದಿಕೆಯಿಂದ ಮಾತನಾಡಿದ ಗೌರಿಯಮ್ಮ ತಮ್ಮ ಜೈಲುವಾಸ, ಹೋರಾಟಗಳ ಬಗ್ಗೆ ಹೇಳುತ್ತಾ ಪೋಲಿಸ್ ದೌರ್ಜನ್ಯದ ಬಗ್ಗೆ “ಪೋಲೀಸರು ನನ್ನನ್ನು ಬಹಳ ಕ್ರೂರವಾಗಿ ಹಿಂಸಿಸಿದರು ಮತ್ತು ನನ್ನ ಖಾಸಗಿ ಭಾಗಗಳಲ್ಲಿ ಲಾಠಿ ಕೂಡ ಸೇರಿಸುತ್ತಿದ್ದರು. ಆ “ಲಾಠಿ”ಗಳು ವೀರ್ಯವನ್ನು ಹೊಂದಿದ್ದರೆ, ನಾನು ಸಾವಿರ ಲಾಠಿ ಶಿಶುಗಳಿಗೆ ಜನ್ಮ ನೀಡುತ್ತಿದ್ದೆ” ಎಂದು ಅವರು ಹೇಳಿದಾಗ ನನ್ನ ಮೈ ಜುಂ ಎಂದಿತ್ತು. ಆಗಿನ್ನೂ ಕಾಲೇಜು ಓದುತ್ತಿದ್ದ ನಮಗೆ ಗೌರಿಯಮ್ಮನ ಮಾತುಗಳು ಮನಸಿಗೆ ನಾಟಿದವು. ಅದೆಂತಹ ದಿಟ್ಟ ಹೋರಾಟದ ನಿಲುವು ಸಂಗಾತಿಯದು. ಅಂದಿನಿಂದಲೂ ನಾನು ಗೌರಿಯಮ್ಮನ ಆದರ್ಶ, ಗುರಿಗಳನ್ನು, ಹೋರಾಟದ ಕೆಚ್ಚು, ಕಾರ್ಯಗಳನ್ನು ಗಮನಿಸುತ್ತಲೇ ಬೆಳೆದಿರುವೆ.

ಬಾಲ್ಯದಲ್ಲಿ ಗೌರಿಯಮ್ಮ

ಇವರು ಅತ್ಯಂತ ಶ್ರೀಮಂತ ಹಿಂದೂ ಕುಟುಂಬದಲ್ಲಿ ಹುಟ್ಟಿದವರು. ಜುಲೈ 14, 1919ರಲ್ಲಿ ಕೇರಳದ ಆಲಪ್ಪುಳ ಜಿಲ್ಲೆಯ ಪಟ್ಟನಕ್ಕಾಡ್ ಗ್ರಾಮದಲ್ಲಿ ಜನಿಸಿದರು. ಇವರು ಕೆ.ಎ.ರಮಣನ್ ಮತ್ತು ಪಾರ್ವತಿ ಅಮ್ಮಾ ದಂಪತಿಗಳಿಗೆ ಏಳನೆಯ ಮಗಳಾಗಿ ಜನಿಸಿದವರು. ಆ ಸಮಯದಲ್ಲಿ ಇವರ ಕುಟುಂಬಕ್ಕೆ ಸುಮಾರು 132 ಎಕರೆಗೂ ಹೆಚ್ಚು ಜಮೀನುಗಳಿದ್ದವು. ಅವರ ಹಿರಿಯ ಸಹೊದರ ಕೆ.ಆರ್.ಸುಕುಮಾರನ್ ಅವರು ಟ್ರೇಡ್ ಯೂನಿಯನ್ ನಾಯಕರಾಗಿದ್ದರು. ಅವರು ಗೌರಿಯವರ ಸಾರ್ವಜನಿಕ ಜೀವನಕ್ಕೆ ಪ್ರವೇಶ ಪಡೆಯಲು ಕಾರಣರಾದರು. ಅವರು 1946ರಲ್ಲಿ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದಾಗ ಅವರಿಗೆ 27 ವರ್ಷ ವಯಸ್ಸಾಗಿತ್ತು. ಆಗ ಅವರು ಕಮ್ಯೂನಿಸ್ಟ್‌ ಪಕ್ಷಕ್ಕೆ ಸೇರಿದರು.

ಇದನ್ನು ಓದಿ: ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ ನಿಧನ

ಗೌರಿಯಮ್ಮ ತಮ್ಮ ಹೈಯರ್ ಸೆಕೆಂಡರಿ ಶಾಲೆಯನ್ನು ಕಂಡಂಮಂಗಲಂ, ತಿರುಮಲ ದೇವಸ್ವಂ ಹೈಯರ್ ಸೆಕೆಂಡರಿ ಶಾಲೆಯಲ್ಲಿಯೂ ಹಾಗೂ ಎರ್ನಾಕುಲಂನ ಮಹಾರಾಜ ಕಾಲೇಜಿನಿಂದ ಮತ್ತು ಸೇಂಟ್ ತೆರೇಸಾ ಕಾಲೇಜು, ಎರ್ನಾಕುಲಂನಿಂದ ಪದವಿಯನ್ನು ಪಡೆದರು. ಅನಂತರದಲ್ಲಿ ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದ ನಂತರವೇ ಅವರು ರಾಜಕಾರಣಕ್ಕೆ ಧುಮುಕಿದರು. ಆಗಿನ ಕಾಲದಲ್ಲಿ ಗೌರಿಯವರ ಈಳವಾ (ಈಡಿಗ) ಸಮುದಾಯದಲ್ಲಿ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದು ಮತ್ತು ರಾಜಕೀಯವನ್ನು ಪ್ರವೇಶಿಸುವುದು ಆಕ್ಷೇಪಾರ್ಹವಾಗಿತ್ತು. ಕೆಳಜಾತಿಯ ಹುಡುಗಿಯರು ಶಾಲೆಯ ಮುಖವನ್ನೇ ನೋಡುತ್ತಿರಲಿಲ್ಲ. ಗೌರಿಯವರು ಈಳವಾ ಸಮುದಾಯದಿಂದ  ಬಂದು ಕಾನೂನು ಪದವಿ ಪಡೆದ ಮೊಟ್ಟ ಮೊದಲ ಮಹಿಳೆ ಗೌರಿ ಅಮ್ಮ ಆಗಿದ್ದರು.

ಸಂಪ್ರದಾಯವಾದಿ ಸಮಾಜವು ಮಹಿಳೆಯರಿಗೆ ಉನ್ನತ ಶಿಕ್ಷಣ, ರಾಜಕೀಯ ಪ್ರವೇಶವನ್ನು ನಿಷೇಧಿಸಿದ್ದ ಕಾಲ ಅದಾಗಿತ್ತು. ಆದರೂ ಅಮ್ಮನವರ ತಂದೆಯವರು ತಮ್ಮ ಜೀವನದುದ್ದಕ್ಕೂ ಮಗಳಿಗೆ ಪ್ರೇರಣೆಯಾಗಿದ್ದರು. ಮುಂದೆ ಗೌರಿಯವರು ತಮ್ಮ 132 ಎಕರೆ ಜಮೀನನ್ನು ಕೇರಳ ಸರ್ಕಾರಕ್ಕೆ ನೀಡಿದರು. ಅಮ್ಮನವರ ಕಾರಣದಿಂದ ದಕ್ಷಿಣದ ರಾಜ್ಯದಲ್ಲಿ ರಾಜಕೀಯ ಬದಲಾವಣೆಯ ಚಂಡಮಾರುತ ಬೀಸುವುದಕ್ಕೆ ಆರಂಭವಾಯಿತು. ಅವರಿಗೆ ಕೇವಲ 10 ವರ್ಷ ಇದ್ದಾಗ 1929ರಲ್ಲಿ ವಿ.ಟಿ.ಭಟ್ಟತಿರಿಪಾಡ್ ಅವರು ‘ಅಡುಕ್ಕಲೈಲ್ ನಿನ್ನು ಅರಂಗಥೆಕ್ಕು’ ಎಂಬ ನಾಟಕವನ್ನು ಬರೆದರು. ಅಲ್ಲಿ ಬ್ರಾಹ್ಮಣ ಸಮುದಾಯದಲ್ಲಿನ ಮಹಿಳೆಯರ ದುಃಸ್ಥಿತಿಯನ್ನು ಅಮ್ಮ ಬಹಿರಂಗಪಡಿಸಿದರು. ಗೌರಿಯವರ ಬದುಕನ್ನು ಆಧರಿಸಿ 1990ರಲ್ಲಿ ‘ಲಾಲ್ ಸಲಾಮ್’ ಎಂಬ ಚಲನಚಿತ್ರವನ್ನು ನಿರ್ಮಿಸಲಾಯಿತು.

ಇದನ್ನು ಓದಿ: ಗೌರಿ ಅಮ್ಮ ನಿಧನಕ್ಕೆ ವಿಜಯರಾಘವನ್‌ ಸಂದೇಶ

ಕೇರಳದ ಮೊದಲ ಸ್ತ್ರೀವಾದಿ

“ಮಹಿಳೆಯರ ಸಬಲೀಕರಣಕ್ಕಾಗಿ ನನ್ನ ಕೊನೆಯ ಉಸಿರಿನವರೆಗೂ ನಾನು ಧ್ವನಿ ಎತ್ತುತ್ತೇನೆ” ಎಂದು ಕೇರಳದ ಈ ಮಹಾನ್ ಮಹಿಳಾ ನಾಯಕಿ ಕೆ.ಆರ್ ಗೌರಿ ಅಮ್ಮ ಹೇಳುತ್ತಿದ್ದರು. ಎಲ್ಲಾ ವಯಸ್ಸಿನ ಮಹಿಳೆಯರನ್ನು ಶಬರಿಮಲೈಗೆ ಪ್ರವೇಶಿಸಲು ಅನುಮತಿ ನೀಡುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಲಿಂಗ ಸಮಾನತೆಗಾಗಿ “ಮಹಿಳಾ ಗೋಡೆ”ಗೆ ಮತ್ತು 2019ರ ಜನವರಿಯಲ್ಲಿ ನವೋದಯ ಮೌಲ್ಯಗಳನ್ನು ರಕ್ಷಿಸಲು ತಮ್ಮ ಬೆಂಬಲವನ್ನು ಘೋಷಿಸಿದವರಲ್ಲಿ ಅವರು ಮೊಟ್ಟ ಮೊದಲಿಗರು. 2019ರ ಜೂನ್ ತಿಂಗಳಲ್ಲಿ ಆಲಪ್ಪುಳದಲ್ಲಿ ನಡೆದ ಅವರ 100ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಕಥೆಯನ್ನು ಹೇಳುತ್ತ “ನಾನು ಇನ್ನೊಂದು ಜನ್ಮದಿನವನ್ನು ಆಚರಿಸಲು ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಮಹಿಳೆಯರ ಸಬಲೀಕರಣಕ್ಕಾಗಿ ನನ್ನ ಕೊನೆಯ ಉಸಿರಿನವರೆಗೂ ನಾನು ಧ್ವನಿ ಎತ್ತುತ್ತೇನೆ ಮತ್ತು ಅವರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತೇನೆ” ಎಂದ ಈ ಶತಾಯುಷಿಯ ಕೆಚ್ಚನ್ನು ಕಂಡು ನಾನು ಬೆರಗಾಗಿದ್ದೆ.

ಶಿಕ್ಷಣ ಮತ್ತು ರಾಜಕಾರಣದ ಎರಡೂ ಕ್ಷೇತ್ರಗಳಲ್ಲಿ ಮಹಿಳೆಯರನ್ನು ನಿಷೇಧಿಸಿದ್ದ ಕಾಲದಲ್ಲಿಯೂ ಸ್ತ್ರೀಸಮಾನತಾವಾದಿಯಾಗಿದ್ದ ಗೌರಿಯಮ್ಮ ಅಲ್ಲಿನ ಮಲೆಯಾಳಿ ಸಮಾಜದಲ್ಲಿನ ಪಿತೃಪ್ರಾಧಾನ್ಯವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಅವಳು ಮಲಯಾಳಿ ಸಮಾಜದ ಸ್ತ್ರೀವಾದದ ಪೂರ್ವಜರಾಗಿದ್ದಾರೆ. ಕೇರಳದ ವಿಧಾನಸಭೆಯಲ್ಲಿ ಅವರ ಭಾಷಣಗಳು ಬೆರಗುಗೊಳಿಸುವಂತಹ ಸ್ತ್ರೀವಾದಿ ಒಳನೋಟವನ್ನು ಹೊಂದಿರುತ್ತಿದ್ದವು.  ಅವರು 1960ರಲ್ಲಿ ಒಂದು ಬಾರಿ ಸದನದಲ್ಲಿ ಕೇಳುತ್ತಾರೆ. ‘ಮಹಿಳೆಯರಿಗೆ ಚಾಲಕರು ಮತ್ತು ಕಂಡಕ್ಟರ್‌ಗಳಾಗಿ ಏಕೆ ತರಬೇತಿ ನೀಡುತ್ತಿಲ್ಲ?. ……ಸಾಂಪ್ರದಾಯಿಕ ಜನನ ಮಹಿಳೆಯರನ್ನು ಅಪಮೌಲ್ಯಗೊಳಿಸಬಾರದು” ಎಂದು ಹೇಳುವ ಸ್ತ್ರೀವಾದಿ ಸೂಕ್ಷ್ಮತೆ ಅವರಲ್ಲಿತ್ತು.

ರಾಜಕೀಯ ರಂಗ

ಇವರು ತಿರುವಾಂಕೂರು ಕೊಚ್ಚಿನ್ ವಿಧಾನಸಭೆಗೆ 1952ರಲ್ಲಿ ಮೊದಲ ಬಾರಿಗೆ ಮತ್ತು 1954ರಲ್ಲಿ ಆಯ್ಕೆಯಾದರು. ಅನಂತರ ಕೇರಳ ರಾಜ್ಯ ರಚನೆಯಾದ ನಂತರ 1957ರಲ್ಲಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾದರು. ನಂತರ 1960, 67, 70, 82, 87, 91, ಮತ್ತು 2001ರಲ್ಲಿ ನಿರಂತರ 13 ಬಾರಿ ಆಯ್ಕೆಯಾದಂತಹ ಮಹಿಳೆ. ಇವರು ಕೇರಳದಲ್ಲಿ ಹೆಚ್ಚು ರಾಜಕೀಯ ಸೇವೆ ಸಲ್ಲಿಸಿದ ರಾಜಕಾರಣಿಯಾಗಿದ್ದರು. ಟ್ರೇಡ್ ಯೂನಿಯನ್ ಮತ್ತು ರೈತ ಚಳುವಳಿಗಳ ಮೂಲಕ ತನ್ನ ಸಾರ್ವಜನಿಕ ಜೀವನವನ್ನು ಅಮ್ಮ ಆರಂಭಿಸುತ್ತಾರೆ. ಅವರು ರಾಜಕೀಯ ಕಾರಣಗಳಿಗಾಗಿಯೇ ಅನೇಕ ಬಾರಿ ಜೈಲುವಾಸ ಅನುಭವಿಸುತ್ತಾರೆ.

ಇದನ್ನು ಓದಿ: ಗೌರಿ ಅಮ್ಮ-ಕೇರಳದ ಜನತೆಯ ಆಂದೋಲನದ ಅಪ್ರತಿಮ ನೇತಾರರು: ಯೆಚುರಿ ಶ್ರದ್ಧಾಂಜಲಿ

ಇವರು 1957ರಲ್ಲಿ ಇ.ಎಂ.ಎಸ್.ನಂಬೂದರಿಪಾಡ್ ನೇತೃತ್ವದ ಮೊದಲ ಕಮ್ಯೂನಿಸ್ಟ್‌ ಮಂತ್ರಿಮಂಡಲದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದರು. ಭೂಸುಧಾರಣೆ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸುವಲ್ಲಿ ಅವರದ್ದು ಮಹತ್ವದ ಪಾತ್ರವಿದೆ. ಆಗಲೇ ಅವರು ಅದೇ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಟಿ.ವಿ.ಥಾಮಸ್ ಅವರನ್ನು ವಿವಾಹವಾಗುತ್ತಾರೆ. 1964ರಲ್ಲಿ ಕಮ್ಯೂನಿಸ್ಟ್‌ ಪಕ್ಷವು ವಿಭಜನೆಗೊಂಡು ಸಿಪಿಐ ಮತ್ತು ಸಿಪಿಐ(ಎಂ) ಆದಾಗ ಗೌರಿಯವರು ಸಿಪಿಐ(ಎಂ) ಸೇರುತ್ತಾರೆ. ಆದರೆ ಪತಿ ಟಿ.ವಿ.ಥಾಮಸ್ ರವರು ಸಿಪಿಐನಲ್ಲಿ ಉಳಿಯುತ್ತಾರೆ. ಈ ರಾಜಕೀಯ ಬಿರುಕುಗಳು ಅವರ ವೈಯಕ್ತಿಕ ಬದುಕಿನಲ್ಲಿಯೂ ಬಿರುಕು ಬಿಡತೊಡಗಿದವು. ಭಿನ್ನ ರಾಜಕೀಯ ಸಿದ್ಧಾಂತಗಳ ಕಾರಣದಿಂದಾಗಿ  ಮುಂದೆ ಇಬ್ಬರೂ ಬೇರೆಯಾಗುತ್ತಾರೆ. ವಿಶೇಷವೆಂದರೆ 1977ರಲ್ಲಿ ಅವರ ಪತಿ ಥಾಮಸ್ ರವರು ನಿಧನರಾದಾಗ ಅವರ ಪಕ್ಕದಲ್ಲಿಯೇ ಗೌರಿಯಮ್ಮನವರು ಇರುತ್ತಾರೆ.

ಕೆ.ಆರ್.ಗೌರಿಯಮ್ಮನವರು ಒಬ್ಬ ಉತ್ತಮ ಮುತ್ಸದ್ದಿ. ಕೇರಳದ ಮೊದಲ ಕಂದಾಯ ಸಚಿವೆ. ಮಾರ್ಕ್ಸ್‌ವಾದಿ ಕ್ರಾಂತಿಕಾರಿ ಚಿಂತಕಿ, ವಕೀಲೆ, ಲೇಖಕಿ ಮತ್ತು ಕೇರಳದ ಕಮ್ಯೂನಿಸ್ಟ್‌ ಚಳುವಳಿಯ ಬುನಾದಿಯನ್ನು ಕಟ್ಟಿದವರಲ್ಲಿ ಒಬ್ಬರಾಗಿದ್ದರು. ಅವರು ಈಳವಾ ಸಮುದಾಯದಿಂದ ಬಂದ ಮೊದಲ ಕಾನೂನು ವಿಧ್ಯಾರ್ಥಿಯಾಗಿದ್ದರು. ಕೇರಳ ಶಾಸಕಾಂಗದಲ್ಲಿ ಎರಡನೇ ಅತಿ ಹೆಚ್ಚು ಅವಧಿಯ ಶಾಸಕರಾಗಿ ಸೇವೆ ಸಲ್ಲಿಸಿದವರು. ಕೇರಳದಲ್ಲಿ ‘ಐರನ್ ಲೇಡಿ’ ಎಂದು ಮನೆಮಾತಾದವರು. ತಿರುವಾಂಕೂರಿನ ದಿವಾನ್ ಸಿ.ಪಿ.ರಾಮಸ್ವಾಮಿ ಅಯ್ಯರ್ ವಿರುದ್ಧದ ಆಂದೋಲನ ಮತ್ತು ವಿಶೇಷವಾಗಿ ಪುನ್ನಪ್ರವಯಲಾರ್ ಹೋರಾಟಗಳು ಅಮ್ಮನ್ನನ್ನು ಸೆಳೆದುಕೊಂಡವು. ಇವರು ‘ಫೈರ್ ಬ್ರಾಂಡ್’ ನಾಯಕಿ ಎಂದು ಪ್ರಸಿದ್ಧರಾದವರು. ಅಮ್ಮ 13 ವಿಧಾನಸಭಾ ಚುನಾವಣೆಗಳಲ್ಲಿ ಜಯ ಗಳಿಸಿದ್ದರು. ಅವರು ಒಟ್ಟು 17 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು ಮತ್ತು ಆರು ಸರ್ಕಾರಗಳಲ್ಲಿ ಸಚಿವೆಯಾದವರು. ಮುಂದೆ ಪಕ್ಷದ ಶಿಸ್ತಿನ ಉಲ್ಲಂಘನೆಗಾಗಿ ಅವರನ್ನು 1994ರಲ್ಲಿ ಪಕ್ಷದಿಂದ ಉಚ್ಛಾಟಿಸಲಾಯಿತು. ನಂತರ ಅವರು ತಮ್ಮದೇ ಆದ ರಾಜಕೀಯ ಪಕ್ಷವನ್ನು ರಚಿಸಿದರು. ಆದರೂ ಅಮ್ಮನವರಿಗೆ ಸಿಪಿಐ(ಎಂ)ನ ಸೆಳೆತ ಬಿಡಲಿಲ್ಲ. ಕೇರಳದ ಮುಖ್ಯಮಂತ್ರಿ ಕೇಳಿಕೊಂಡಾಗ ಸಿಪಿಐ(ಎಂ) ಗೆ ಹಿಂತಿರುಗುವುದಾಗಿ ಹೇಳಿದ್ದರು. ಅವರು ಕೇರಳದ ರಾಜಕೀಯದಲ್ಲಿ ಹೊಸ ಬದಲಾವಣೆಯ ಗಾಳಿ ತಂದವರು. ಹೆಗ್ಗುರುತುಗಳನ್ನು ಸ್ಥಾಪಿಸಿದವರು.

ಇದನ್ನು ಓದಿ: ಎಡ ಚಿಂತಕಿ ಗೌರಿ ಅಮ್ಮ ಬೀದಿ ಬೀದಿಯಲ್ಲಿ ಇಂಕ್ವಿಲಾಬ್‌ ಜಿಂದಾಬಾದ್‌ ಮೊಳಗಿಸಿದವರು

ಕೇರಳ ಸರಕಾರದ ಕಂದಾಯ ಸಚಿವರಾಗಿ ಕೆ.ಆರ್.ಗೌರಿಯಮ್ಮನವರು ಮಂಡಿಸಿದ ಭೂಸುಧಾರಣೆ ಮತ್ತು ಇತರ ಮಸೂದೆಗಳು ಗೇಣಿದಾರರು ಒಳಗೊಂಡಂತೆ ಭೂಮಿಯಲ್ಲಿ ಮಾಲಿಕತ್ವದ ಹಕ್ಕುಗಳನ್ನು ನೀಡಲು ಮತ್ತು ಭೂಮಾಲೀಕರು ಹೊಂದಬಹುದಾದ ಭೂಮಿಗೆ ಸೀಲಿಂಗ್ ಸರಿಪಡಿಸಲು ಮತ್ತು ಭೂಮಾಲೀಕರ ಹೆಚ್ಚುವರಿ ಜಮೀನನ್ನು ಭೂಹೀನ ಬಡವರಿಗೆ ವಿತರಿಸಲು ಅವಕಾಶ ಮಾಡಿಕೊಡುವ ಉದ್ದೇಶಗಳನ್ನು  ಹೊಂದಿದ್ದವುಗಳು. ಹೀಗೆ ಹಲವಾರು ಕೆಲಸಗಳನ್ನು ಮಾಡಿ ಕೇರಳದ ಪ್ರಗತಿಗೆ ನಾಂದಿಯಾದವರು ಕೆ.ಆರ್.ಗೌರಿಯಮ್ಮ, ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ.

Donate Janashakthi Media

Leave a Reply

Your email address will not be published. Required fields are marked *