ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಬುಧವಾರ ಅಂಗೀಕರಿಸಿದ್ದು, ಇಂತಹ ಮಸೂದೆ ಅಂಗೀಕರಿಸಿದ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಈ ಮೂಲಕ ಬಿಜೆಪಿ ಅಧಿಕಾರದಲ್ಲಿ ಇರುವ ಇತರ ರಾಜ್ಯಗಳಲ್ಲೂ ಇದೇ ಮಸೂದೆ ತರಲು ಉತ್ತರಾಖಂಡದ ಉದಾಹರಣೆಯಾಗಿ ನಿಲ್ಲಲಿದೆ. ಮಸೂದೆಯನ್ನು ಧ್ವನಿ ಮತದ ಮೂಲಕ ವಿಧಾನಸಭೆ ಅಂಗೀಕಾರ ಮಾಡಿದೆ.
ಉತ್ತರಾಖಂಡದಲ್ಲಿ ಬಿಜೆಪಿ ಬಹುಮತವಿದ್ದು, ಮಸೂದೆಯನ್ನು ಮಂಗಳವಾರ ಮಂಡಿಸಲಾಗಿತ್ತು. ಆದರೆ ಪ್ರತಿಪಕ್ಷಗಳು ಮಸೂದೆಯನ್ನು ಮೊದಲು ಸದನದ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಸೂಚಿಸಿದ್ದವು. ಮಸೂದೆಯು ರಾಜ್ಯಪಾಲರ ಒಪ್ಪಿಗೆಯನ್ನು ಪಡೆದರೆ ಉತ್ತರಾಖಂಡವು ಸ್ವಾತಂತ್ರ್ಯದ ನಂತರ ಎಲ್ಲಾ ನಾಗರಿಕರಿಗೆ ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರದ ಕುರಿತ ಸಾಮಾನ್ಯ ಕಾನೂನನ್ನು ಹೊಂದುವ ಮೊದಲ ರಾಜ್ಯವಾಗಲಿದೆ.
ಇದನ್ನೂ ಓದಿ: ಪ್ರಧಾನಿಯವರೆ ಹಾಲು ಕೊಡುವ ಕೆಚ್ಚಲನ್ನೇ ಕೊಯ್ಯಬೇಡಿ – ತೆರಿಗೆ ಹಂಚಿಕೆ ತಾರತಮ್ಯದ ವಿರುದ್ಧ ಕರ್ನಾಟಕ ಪ್ರತಿಭಟನೆ
ಮಸೂದೆ ಅಂಗೀಕಾರಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಇದು ಸಾಮಾನ್ಯ ಶಾಸನವಲ್ಲ. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಎಲ್ಲಾ ಧರ್ಮಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕಾನೂನುಗಳನ್ನು ರಚಿಸುತ್ತದೆ. ಇದು ಪಕ್ಷಾತೀತ ಮತ್ತು ತಾರತಮ್ಯವಿಲ್ಲದ ಸಮಾಜವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಡೆಹ್ರಾಡೂನ್‌ನಲ್ಲಿ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಯುಸಿಸಿ ಮಸೂದೆಯನ್ನು ಪರಿಚಯಿಸಿದ ನಂತರ ಬಿಜೆಪಿ ಬೆಂಬಲಿಗರು ಸಂಭ್ರಮಿಸಿದ್ದಾರೆ. ಮಸೂದೆಯು ವಿಶೇಷವಾಗಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಅವರ ಶೋಷಣೆಯನ್ನು ಕೊನೆಗೊಳಿಸುತ್ತದೆ ಎಂದು ಸಿಎಂ ಧಾಮಿ ಹೇಳಿದ್ದಾರೆ.
“ಇದು 2022 ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ನಾವು ರಾಜ್ಯದ ಜನರಿಗೆ ನೀಡಿದ ಭರವಸೆಯನ್ನು ಪೂರೈಸುತ್ತದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಇದು ಉತ್ತರಾಖಂಡದ ಸಣ್ಣ ಕೊಡುಗೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿಳ: ದೇಶದ ಮೊದಲ ಏಕರೂಪ ನಾಗರಿಕ ಸಂಹಿತೆ | ಲಿವ್-ಇನ್ ಜೋಡಿಗಳ ನೋಂದಣಿ ಕಡ್ಡಾಯ, ಇಲ್ಲವೆಂದರೆ ಶಿಕ್ಷೆ!
ಏಕರೂಪ ನಾಗರಿಕ ಸಂಹಿತೆಯು ಸಮುದಾಯಗಳಾದ್ಯಂತ ಇರುವ ವ್ಯಕ್ತಿಗಳಿಗೆ ಅವರ ವೈಯಕ್ತಿಕ ವಿಷಯಗಳಾದ ಉತ್ತರಾಧಿಕಾರ ಮತ್ತು ವಿವಾಹದಂತಹ ಹಕ್ಕುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಭಾರತವು ಪ್ರಸ್ತುತ ಈ ವಿಷಯಗಳಲ್ಲಿ ಸಮುದಾಯದ ಒಳಗೆ ನಿರ್ದಿಷ್ಟ ಕಾನೂನುಗಳನ್ನು ಹೊಂದಿದ್ದು, ಅದರ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಅನ್ವಯಿಸುವ ಕಾನೂನುಗಳು ಆ ವ್ಯಕ್ತಿಯು ಜನಿಸಿದ ಸಮುದಾಯವನ್ನು ಅವಲಂಬಿಸಿರುತ್ತದೆ.
ಅದಾಗ್ಯೂ, ಈ ಮಸೂದೆ ಯಾವುದೇ ಪರಿಶಿಷ್ಟ ಪಂಗಡದ (ಎಸ್‌ಟಿ) ಸದಸ್ಯರಿಗೆ ಅನ್ವಯಿಸುವುದಿಲ್ಲ ಎಂದು ಮಸೂದೆ ಹೇಳುತ್ತದೆ. ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಶಾಸಕ ಅಮಿನುಲ್ ಇಸ್ಲಾಂ ಅವರು ಈ ವಿನಾಯಿತಿಯನ್ನು ಉಲ್ಲೇಖಿಸುವ ಮೂಲಕ ಮಸೂದೆಯ ಪ್ರಸ್ತಾವಿತ ಸಾರ್ವತ್ರಿಕತೆಯನ್ನು ಪ್ರಶ್ನಿಸಿದ್ದಾರೆ. ಮಸೂದೆ, ಲಿವ್-ಇನ್ ಸಂಬಂಧಗಳ ನೋಂದಣಿಯನ್ನು ಕಡ್ಡಾಯಗೊಳಿಸಲಿದ್ದು, ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳನ್ನು ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ.
ವಿಡಿಯೊ ನೋಡಿ: ನಮ್ಮ ಜನರ ಬೆವರಿನ ಹಣ ನಮ್ಗೆ ಕೊಡಿ : ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರದ ಪ್ರತಿಭಟನೆ Janashakthi Media