ಬೆಂಗಳೂರು : ಯುಜಿಸಿ ಕರಡು ನಿಯಮಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಬಗ್ಗೆ ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ನಿರ್ಣಯವನ್ನು ಅಂಗೀಕರಿಸಿತು.
ಇಂದು ಗಾಂಧಿ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ನಿರ್ಣಯದ ವಿವರ ಈ ಕೆಳಗಿನಂತಿದೆ.
2020ರಲ್ಲಿ ಅಸಾಂವಿಧಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದಾಗ ,ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿರೋಧ ಹಾಗೂ ಪ್ರತಿಭಟನೆಯ ಮೂಲಕ ಅದನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿತ್ತು.
NEP ತಿರಸ್ಕರಿಸಲು ಇದ್ದ ಬಲವಾದ ಮೂರು ಕಾರಣಗಳೆಂದರೆ, ಅದು
1) ಅಸಾಂವಿಧಾನಿಕ
2) ಅಪ್ರಜಾಸತ್ತಾತ್ಮಕ ಹಾಗೂ,
3) ಶಿಕ್ಷಣದ ಕೇಂದ್ರಿಕರಣ, ಖಾಸಗೀಕರಣ , ಕಾರ್ಪೊರೇಟರೀಕರಣ ಮತ್ತು ಕೋಮುವಾದೀಕರಣವನ್ನು ತನ್ನ ಮಡಿಲಿನಲ್ಲಿಟ್ಟುಕೊಂಡಿತ್ತು.
ಈ ಕಾರಣಗಳಿಂದ ದೇಶದ ಹಲವು ರಾಜ್ಯಗಳು NEPಯನ್ನು ನಮ್ಮ ಸಂವಿಧಾನದ ಮೂಲ ಆಶಯವಾದ ಒಕ್ಕೂಟ ಮತ್ತು ಪ್ರಜಾಸಾತ್ತಾತ್ಮಕ ತತ್ವಕ್ಕೆ ಮಾರಕವಾಗಿದ್ದ ಕಾರಣ ಒಮ್ಮತದಿಂದ ತಿರಸ್ಕರಿಸಿದ್ದವು. ನಮ್ಮ ರಾಜ್ಯವೂ ಸಹ NEP ಯನ್ನು ತಿರಸ್ಕರಿಸಿ, ರಾಜ್ಯದ ಶಿಕ್ಷಣ ನೀತಿ ರೂಪಿಸಲು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿತು.
ದೇಶದ ಬಹುತೇಕ ರಾಜ್ಯಗಳು ತಿರಸ್ಕರಿಸಿದ ಈ ಅಸಾಂವಿಧಾನಿಕ, ಅಪ್ರಜಾಸಾತ್ತಾತ್ಮಕ ಹಾಗೂ ಜನ ವಿರೋಧಿ ನೀತಿಯನ್ನೇ ಆಧರಿಸಿ ಯುಜಿಸಿ ತನ್ನ ಕರಡು ನಿಯಮಗಳು (2025)ನ್ನು ರೂಪಿಸಿ ಚರ್ಚೆಗೆ ಬಿಟ್ಟಿದೆ . ಈಗಾಗಲೇ ದೇಶದ ಜನತೆ ತಿರಸ್ಕರಿಸಿದ ನೀತಿಯನ್ನು ಆಧರಿಸಿ ರೂಪಿಸಲಾಗಿರುವ ಈ ಕರಡು ನಿಯಮಗಳು, ರಾಜ್ಯ ಸರ್ಕಾರಗಳ ಮೇಲೆ ಮತ್ತೊಮ್ಮೆ ತಿರಸ್ಕೃತ ರಾಷ್ಟ್ರೀಯ ನೀತಿಯನ್ನು ಹಿಂಬಾಗಿಲಿನಿಂದ
ಹೇರುವ ದೊಡ್ಡ ರಾಜಕೀಯ ಹುನ್ನಾರವಾಗಿದೆ.
ಈ ನಿಯಮಗಳು ದೇಶದ ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಗುಣಮಟ್ಟ ಸುಧಾರಿಸುವ ಕುಂಟು ನೆಪದಲ್ಲಿ, ರಾಜ್ಯಗಳು ತಮ್ಮ ಸಂಪೂರ್ಣ ಧನ ಸಹಾಯದಿಂದ ನಡೆಸುತ್ತಿರುವ ಎಲ್ಲಾ ವಿಶ್ವ ವಿದ್ಯಾಲಯಗಳನ್ನು ಮತ್ತು ಸಂಯೋಜಿತ ಕಾಲೇಜುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಾಗಿದೆ. ಈ ವಾಮಮಾರ್ಗದ ಮೂಲಕ ಕೇಂದ್ರ ಸರ್ಕಾರ ತನ್ನ ರಾಜಕೀಯ ಅಜೆಂಡಾವಾದ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಬ್ಬ ನಾಯಕ ಮತ್ತು ಒಂದೇ ಚುನಾವಣೆಯ ಮೂಲಕ , ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ಸಂವಿಧಾನದ ರಚನಾ ತಂಡ ರಚಿಸಿದ ಸಂವಿಧಾನ ಕೊಡಮಾಡಿರುವ ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ತತ್ವವನ್ನು ಬುಡ ಮೇಲು ಮಾಡಿ , ಕೇಂದ್ರೀಕೃತ ಸರ್ವಾಧಿಕಾರವನ್ನು ಜಾರಿಗೊಳಿಸಲು ರೂಪಗೊಂಡ ರಾಜಕೀಯ ಯೋಜನೆಯಾಗಿದೆ.
ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದಿದರೂ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುವ, ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಈ ತಿದ್ದುಪಡಿಯನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ.
ಈ ಎಲ್ಲಾ ಕಾರಣಗಳಿಂದ , ಸಂವಿಧಾನ , ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ನಾವು ,
ಯು.ಜಿ.ಸಿ. ಯ ಈ ಸಂವಿಧಾನದ ಬಾಹಿರ ರಾಜಕೀಯ ಪ್ರೇರಿತ ಶಿಕ್ಷಣ ವಿರೋಧಿ ಕರಡು ನಿಯಮಗಳನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುತ್ತೇವೆ.
ಮುಂದುವರಿದು, ದಿನಾಂಕ 5.2.2025 ರಂದು ಬೆಂಗಳೂರಿನಲ್ಲಿ ನಡೆಯುವ ದಕ್ಷಿಣ ಭಾರತದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಈ ಕರಡು ನಿಯಮಗಳನ್ನು ಒಮ್ಮತದಿಂದ ಸಾರಾಸಗಟಾಗಿ ತಿರಸ್ಕರಿಸುವ ಒಂದು ಅಂಶದ ನಿರ್ಣಯ ಅಂಗೀಕರಿಸಬೇಕೆಂದು ಆಗ್ರಹಿಸಲಾಯಿತು.
ಈ ನಿರ್ಣಯಕ್ಕೆ ಹಿರಿಯ ಚಿಂತಕರಾದ
ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ,
ಡಾ.ವಿಜಯಾ, ಪ್ರೊ.ಎಸ್ ಜಿ ಸಿದ್ದರಾಮಯ್ಯ, ಡಾ.ಸಬಿಹಾ ಭೂಮಿಗೌಡ
ವಿಮಲಾ.ಕೆ.ಎಸ್, ಮಾವಳ್ಳಿ ಶಂಕರ್,
ಬಿ. ಶ್ರೀಪಾದ ಭಟ್,ಡಾ.ನಿರಂಜನಾರಾಧ್ಯ. ವಿ. ಪಿ, ಡಾ. ವಸುಂದರಾ ಭೂಪತಿ, ಡಾ. ಮೀನಾಕ್ಷಿ ಬಾಳಿ, ಡಾ. ಎಂ.ಎಸ್.ಆಶಾ ದೇವಿ, ಡಾ.ಆರ್ ಸುನಂದಮ್ಮ ,
ಲೇಖಾ, ಸತ್ಯಂ ಪಾಂಡೆ, ಪ್ರೊ. ಎಂ ನಾರಾಯಣ ಸ್ವಾಮಿ, ಟಿ ಸುರೇಂದ್ರ ರಾವ್, ಪವಿತ್ರ ಎಸ್, ವಿಜಯ್ ಕುಮಾರ್ ಟಿ ಎಸ್, ಡಾ. ಲಿಂಗರಾಜಯ್ಯ, ವಿಕ್ರಂ, ಪ್ರೊ. ರಾಮಲಿಂಗಪ್ಪ ಟಿ ಬೇಗೂರು, ಡಾ. ಉಮಾ ಶಂಕರ್, ವೆಂಕಟೇಶ್, ಗೋಪಾಲ ಕೃಷ್ಣ, ರವಿಕುಮಾರ್ ಬಾಗಿ, ಡಾ. ಎಚ್ ಜಿ ಜಯಲಕ್ಷ್ಮಿ , ಕುಮಾರ್ ಶೃಂಗೇರಿ, ಬಿ ಆರ್ ಗಣೇಶ್, ಎಸ್ ಬಾಲಕೃಷ್ಣ , ಡಾ. ಎಲ್ ಶಿವಣ್ಣ, ಐವಾನ್ ಡಿ’ಸೋಜಾ, ಅಸ್ಮಾ ಎಸ್, ಇ ಪಿ ಮೆನನ್
ವೆಂಕಟಾಚಲಯ್ಯ ಸಹಿ ಹಾಕಿದ್ದಾರೆ.