ಬೆಂಗಳೂರು: ಮರಳಿ ಉದ್ಯೋಗಕ್ಕಾಗಿ ಕಳೆದ 69 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಕಾರ್ಮಿಕರು ಇಂದು ಆಯೋಜಿಸಿದ್ದ ʻಐಟಿಐ ಕಾರ್ಪೊರೇಟ್ ಕಛೇರಿ ಚಲೋʼ ಹೋರಾಟವನ್ನು ಹಮ್ಮಿಕೊಂಡಿದ್ದರು.
ಈ ರ‍್ಯಾಲಿಯನ್ನು ದಲಿತ ಚಳುವಳಿ, ರೈತ ಚಳುವಳಿ, ಮಹಿಳಾ ಚಳುವಳಿಗಳು ಒಳಗೊಂಡಂತೆ ಇತರೆ ಚಳುವಳಿಗಳ ನಾಯಕರು ಉದ್ಘಾಟಿಸಿ ಮಾತನಾಡಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ದಲಿತ ಸಮುದಾಯಕ್ಕೆ ಸೇರಿದ ಬಹುತೇಕ ಕಾರ್ಮಿಕರಿಗೆ ಕೆಲಸ ನಿರಾಕರಿಸಿರುವುದು ದುರಾದೃಷ್ಟಕರ. ಈ ಒಂದು ಏನು ವಿವಾದ ಇದೆಯೋ ಅದು ಐಟಿಐ ಕಾರ್ಮಿಕರಿಗೆ ಮಾತ್ರ ಸೀಮಿತವಲ್ಲ, ಈ ದೇಶದಲ್ಲಿ ಏನು ನಡೆಯುತ್ತಿದೆಯೋ, ಅದನ್ನು ತೋರಿಸುತ್ತದೆ. ಗುತ್ತಿಗೆ ಕಾರ್ಮಿಕ ಪದ್ಧತಿಯು ಜೀತ ಪದ್ಧತಿ ಅಲ್ಲದೆ ಬೇರೇನೂ ಅಲ್ಲ. ಈ ಒಂದು ಗುಲಾಮಿ ಪದ್ಧತಿಯನ್ನು ಹೋಗಲಾಡಿಸಲು ನಾವು ಒಗ್ಗಟ್ಟಿನಿಂದ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಸಂಯುಕ್ತ ಹೋರಾಟ-ಕರ್ನಾಟಕ ಸಂಚಾಲಕ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ. ಬೈಯಾರೆಡ್ಡಿ ಮಾತನಾಡಿ, ಕಾರ್ಮಿಕರು ಇಲ್ಲಿ ಹಲವಾರು ದಶಕಗಳಿಂದ ಕೆಲಸ ನಿರ್ವಹಿಸುತ್ತಿದ್ದರು, ಅವರಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡುತ್ತಿದ್ದಾರೆ. ದೇಶದ ಗಡಿ ಭಾಗದಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರನ್ನು ಇಷ್ಟು ನಿಕೃಷ್ಟವಾಗಿ ನೋಡಿಕೊಳ್ಳುತ್ತಿರುವುದು ಸರಿಯಲ್ಲ. ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್ ಸಿಂಗ್ ಸಂಘಟನೆಯ ಹಕ್ಕಿಗಾಗಿ ಹೋರಾಟ ಮಾಡಿದರು. ಆದರೆ ಇಂದು ಐಟಿಐ ಆಡಳಿತ ಮಂಡಳಿಯು ಬ್ರಿಟಿಷರಿಗೂ ಹೆಚ್ಚು ಕೆಟ್ಟ ಮಟ್ಟದ ಆಡಳಿತ ನಡೆಸುತ್ತಿದೆ. ಈ ಒಂದು ಹೋರಾಟ ಬಾರಿ ಇತಿ ಕಾರ್ಮಿಕರಿಗೆ ಸಂಬಂಧಪಟ್ಟಿದ್ದಲ್ಲ, ಕಾರ್ಮಿಕ ವರ್ಗ, ರೈತ ಚಳುವಳಿ, ದಲಿತ ಚಳುವಳಿ, ನಮ್ಮೆಲ್ಲರಿಗೂ ಸವಾಲಾಗಿದೆ. ಹೀಗಾಗಿ ನಾವೆಲ್ಲರೂ ಈ ಸವಾಲನ್ನು ಎದುರಿಸಬೇಕಾಗಿದೆ. ರೈತ ಹೋರಾಟವು ಗಳಿಸಿದಂತಹ ಜಯದ ಮಾದರಿಯಲ್ಲಿ ಈ ಹೋರಾಟವನ್ನು ತೆಗೆದುಕೊಂಡು ಹೋಗಬೇಕಾಗಿದೆ ಎಂದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಮಾತನಾಡಿ, ಐಟಿಐ ಸಾಕಷ್ಟು ಪ್ರತಿಭಟನೆಗಳನ್ನು ನೋಡಿದೆ, ಆದರೆ ಈ ಹೋರಾಟ ಐತಿಹಾಸಿಕವಾದದ್ದು. ಐಟಿಐ ಸಂಸ್ಥೆಯು ನಡೆಸುತ್ತಿರುವ ಶೋಷಣೆಯ ವಿರುದ್ಧ ಕಾರ್ಮಿಕರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ ಮತ್ತು ಸವಾಲಾಗಿ ತೆಗೆದುಕೊಂಡಿದ್ದಾರೆ.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ರಾಜ್ಯ ಸಂಚಾಲಕ ಕೆ. ವಿ. ಭಟ್ ಮಾತನಾಡಿ, ಐಟಿಐ ನ 80 ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವುದು ಇಡೀ ಕಾರ್ಮಿಕ ಸಮೂಹಕ್ಕೆ ದ್ರೋಹ ಮಾಡಿದ್ದಂತಾಗಿದೆ. ಈ ಕಾರ್ಮಿಕರು ಐಟಿಐ ಕಂಪನಿಯ ಉತ್ಪಾದನಾ ವಲಯದಲ್ಲಿ ಪ್ರಮುಖ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ಸಹ ಇಂದು ಈ ಕಾರ್ಮಿಕರಿಗೆ ಕೆಲಸ ನಿರಾಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ತೊಂದರೆ ಅನುಭವಿಸಬಹುದು. ಹೀಗಾಗಿ ನಾವು ಒಗ್ಗಟ್ಟಾಗಿ ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ಸೋಲಿಸಬೇಕಾಗಿದೆ ಎಂದು ಹೇಳಿದರು.
ರ‍್ಯಾಲಿಯ ಅಂತಿಮ ಭಾಗದಲ್ಲಿ ಐಟಿಐ ಕಾರ್ಪೊರೇಟ್ ಕಚೇರಿಗೆ ತಲುಪಿತು. ಅಲ್ಲಿ ಐಟಿಐ ಆಡಳಿತ ಮಂಡಳಿ ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯು ಸಂಘಟನೆ ಕಟ್ಟಿದ್ದಾರೆಂಬ ಏಕೈಕ ಕಾರಣಕ್ಕೆ ಕೆಲಸ ನಿರಾಕರಣೆಗೆ ಒಳಪಟ್ಟಿರುವ 80 ಕಾರ್ಮಿಕರನ್ನು ತಕ್ಷಣವೇ ವಾಪಸ್ಸು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿತು. ಐಟಿಐ ಆಡಳಿತ ಮಂಡಳಿಯು ಈ ವಿವಾದ ಕುರಿತು ಮಾತುಕತೆ ನಡೆಯುತ್ತಿದ್ದು, ಉನ್ನತ ಮಟ್ಟದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಬೇಕಾಗಿರುವುದರಿಂದ 2-3 ದಿನಗಳ ಕಾಲಾವಕಾಶ ಕೇಳಿದ್ದಾರೆ. ಕಾರ್ಮಿಕ ಸಂಘಟನೆಯ ಈ 80 ಕಾರ್ಮಿಕರಿಗೆ ನ್ಯಾಯ ಸಿಗುವ ವರೆಗೂ ತನ್ನ ಹೋರಾಟವನ್ನು ಮುಂದುವರೆಸಲು ನಿರ್ಧರಿಸಿದೆ.
ಈ ರ‍್ಯಾಲಿಯಲ್ಲಿ ಎಐಸಿಸಿಟಿಯು, ಡಿಎಸ್‌ಎಸ್ ಒಕ್ಕೂಟ (ವಿ. ನಾಗರಾಜ್ ಮತ್ತು ಮಾವಳ್ಳಿ ಶಂಕರ್), ಕೆಪಿಆರ್‌ಎಸ್, ಕೆಆರ್‌ಆರ್‌ಎಸ್ (ಬಡಗಲಪುರ ನಾಗೇಂದ್ರ), ಕೆಆರ್‌ಆರ್‌ಎಸ್ (ಕೋಡಿಹಳ್ಳಿ ಚಂದ್ರಶೇಖರ್), ಕರ್ನಾಟಕ ಸ್ಲಂ ಜನಾಂದೋಲನ, ಸ್ಲಂ ಜನರ ಸಂಘಟನೆ, ಕರ್ನಾಟಕ ಸೆಕ್ಷುವಲ್ ಮೈನೋರಿಟೀಸ್ ಫೋರಮ್, ಜನವಾದಿ ಮಹಿಳಾ ಸಂಘಟನೆ, ಐಪ್ವಾ, ಮತ್ತು ಇತರರು ಭಾಗವಹಿಸಿದ್ದರು.