ಉದ್ಯೋಗ ಖಾತ್ರಿ ಯೋಜನೆ ಅನುದಾನ ಕಡಿತಕ್ಕೆ ಕೃಷಿ ಕೂಲಿಕಾರ ಸಂಘಟನೆಯಿಂದ ಆಕ್ರೋಶ

ಗಜೇಂದ್ರಗಡ,ಫೆ.12 : ಕೃಷಿ ರಂಗದಲ್ಲಿ ಮುಂದುವರೆದಿರುವ ಬಿಕ್ಕಟ್ಟಿನಿಂದಾಗಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಾ ಇದ್ದು ಕೃಷಿ ರಂಗದಲ್ಲಿ ಕೂಲಿಕೆಲಸದ ಲಭ್ಯತೆಯು ಸಹ ಕುಗ್ಗುತ್ತಾ ಇದ್ದು ಹಳ್ಳಿಗಳಲ್ಲಿ ಕೂಲಿಕಾರರಿಗೆ ಪರ್ಯಾಯ ಕೆಲಸವೇನೂ ಸಿಗುತ್ತಿಲ್ಲ. ಮಿಲಿಯಾಂತರ ವಲಸೆ ಕೆಲಸಗಾರರು ಕೆಲಸವನ್ನು ಹುಡುಕುತ್ತಾ ನಗರ ಪ್ರದೇಶಗಳಿಗೆ ವಲಸೆ ಹೋದವರು ಕೆಲಸ ಸಿಗದೆ ವಾಪಸ್ ಹಳ್ಳಿಗಳಿಗೆ ಬರುತ್ತಿರುವುದರಿಂದಲೂ ಗ್ರಾಮಾಂತರ ಭಾರತದಲ್ಲಿ ಕೂಲಿಕೆಲಸದ ಬೇಡಿಕೆ ಅಧಿಕವಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಬಾಲು ರಾಠೋಡ ಹೇಳಿದರು.

ನಗರದ ತಹಶಿಲ್ದಾರ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಮನವಿ ಸಲ್ಲಿಸಿ ಮಾತನಾಡಿದರು. ಕಳೆದ ಜನವರಿ 19 ರಂದು ಇದ್ದಂತೆ ಸುಮಾರು 76.7 ಮಿಲಿಯ ಕುಟುಂಬಗಳು ಮತ್ತು 118 ಮಿಲಿಯಕ್ಕೂ ಹೆಚ್ಚು ಜನರು ಮನರೇಗಾ ಅಡಿಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದರ ಅರ್ಥ, 2019-20 ರ ಇಡೀ ವರ್ಷಕ್ಕೆ ಹೋಲಿಸಿದರೆ ಸುಮಾರು 20 ಮಿಲಿಯ ಹೆಚ್ಚುವರಿ ಕುಟುಂಬಗಳು ಮತ್ತು 27 ಮಿಲಿಯ ಹೆಚ್ಚುವರಿ ಜನರು ಕೆಲಸ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಸಕ್ತ ಬಜೆಟ್‌ನಿಂದ  ಕೆಲಸದ ನಿರೀಕ್ಷೆಯಲ್ಲಿದ್ದ ಜನರಿಗೆ ತೀವ್ರ ನಿರಾಸೆಯಾಗಿದೆ ಎಂದರು.

ಅಷ್ಟೇಯಲ್ಲದೆ ಕಳೆದ ಸಾಲಿನಲ್ಲಿ 40,000 ಕೋಟಿ ರೂ. ಪ್ರೋತ್ಸಾಹ ಧನವೂ ಸೇರಿದಂತೆ ಒಟ್ಟು 1,01,500 ಕೋಟಿ ರೂ. ಒದಗಿಸಲಾಗಿತ್ತು. ಅನೇಕ ವರದಿಗಳು ಹೇಳುವ ಪ್ರಕಾರ ಈ ಮೊತ್ತವು ಎಲ್ಲ ಅರ್ಜಿದಾರರಿಗೆ ಕೆಲಸ ಒದಗಿಸಲು ಸಾಕಾಗಲಿಲ್ಲ. ಈ ವರ್ಷ ಕೇವಲ 73,000 ಕೋಟಿ ರೂ. ಅನುದಾನ ಘೋಷಣೆಯಾಗಿದೆ.

ರೈತ ಮುಖಂಡ ಚೆನ್ನಪ್ಪ ಗುಗಲೊತ್ತರ ಮಾತನಾಡಿ ಉದ್ಯೋಗ ಖಾತ್ರಿ ಕೆಲಸಗಾರರಿಗೆ ವೇತನ ಸಂದಾಯ ಮತ್ತು ಇತರ ಕಾನೂನು ಬದ್ಧ ಸೌಲಭ್ಯಗಳನ್ನು ತಪ್ಪದೆ ಸಮರ್ಪಕವಾಗಿ ಒದಗಿಸಬೇಕು ಎಂದರು. ಒಟ್ಟಾರೆ, ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಒದಗಿಸಲು ನಿಜವಾಗಿ ಖರ್ಚು ಮಾಡಲಾದ ಹಣಕ್ಕಿಂತ ಈ ಸಲ 41% ರಷ್ಟನ್ನು ಕಡಿತಮಾಡಲಾಗಿದೆ.

ಆದ್ದರಿಂದ ನಾವು ಈ ಮೂಲಕ ಕನಿಷ್ಠ 2,00,000 ಕೋಟಿ ರೂ.ಗಳನ್ನು ಒದಗಿಸಬೇಕೆಂದು ತಹಶಿಲ್ದಾರರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ತಹಶಿಲ್ದಾರರ ಕಚೇರಿ ಸಿಬ್ಬಂದಿ ಗಣೇಶ ಅವರು ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಈ ಸಂಧರ್ಭದಲ್ಲಿ ಕರಿಯಮ್ಮ ಗುರಿಕಾರ ಅನುಶಮ್ಮ ಕಾರಡಗಿಮಠ ಯಲ್ಲಮ್ಮ ದಿಂಡೂರ ಕನಕಮ್ಮ ಮಾದರ. ಚನ್ನಪ್ಪ ಗುಗಲೋತ್ತರ. ಮಹಬುಬ್ ಹವಾಲ್ದಾರ ಉಪಸ್ಥಿತರಿದ್ದರು.

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *