ಉದ್ಯೋಗ ಕೇಳಿದರೆ ಜೈಲಿಗೆ ಅಟ್ಟುವ ಸರ್ಕಾರ: ಡಿವೈಎಫ್‌ಐ ಆರೋಪ

ಮುಂಬೈ: ಎರಡು ಕೋಟಿ ಉದ್ಯೋಗ ಎಲ್ಲಿ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಡಿವೈಎಫ್ಐ ನಾಯಕಿಯನ್ನು ಮುಂಬೈನಲ್ಲಿ  ಬಂಧಿಸಲಾಗಿದೆ. ಈ ಬಂಧನವನ್ನು ಜನಪರ ಸಂಘಟನೆಗಳು ಖಂಡಿಸಿವೆ.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಪ್ರೀತಿ ಶೇಖರ್ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಆಸೆ ತೋರಿಸಿ ಇಂದು ಉದ್ಯೋಗ ಕೇಳಿದ ಯುವತಿಯನ್ನು ಬಂಧಿಸಿದ್ದಾರೆ. ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಹಾಗೂ ವಿದ್ಯಾರ್ಥಿ – ಯುವಜನರಿಗೆ ಉದ್ಯೋಗದ ಭರವಸೆ ನೀಡುವಂತೆ ಒತ್ತಾಯಿಸಿದರೆ ಹೋರಾಟಗಾರರನ್ನು ಜಾಮೀನು ರಹಿತ ಬಂಧನ ಮಾಡುತ್ತಾರೆಂದರೆ ಆಳುವ ಸರ್ಕಾರಕ್ಕೆ ಹೋರಾಟಗಾರರನ್ನು ಕಂಡರೆ ಅದೆಷ್ಟು ಭಯ ಇರಬೇಕು. ಯುವಜನರ ಹೋರಾಟದ ಹಕ್ಕುವಿನ ದಮನವನ್ನು ನಾಚಿಕೆರಹಿತವಾಗಿ ಸರ್ಕಾರ ಮಾಡುತ್ತಿದೆ.

ದೇಶದಲ್ಲಿನ ನಿರುದ್ಯೋಗದ ಪ್ರಮಾಣ 45 ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಗಳು ಖಾಲಿ ಇದೆ ಎಂದರೆ, ಅವುಗಳನ್ನು ಭರ್ತಿ ಮಾಡಿ ಸಂಬಳ ನೀಡಬೇಕು ಎಂದಾದರೆ ನಾವು ಖಜಾನೆ ಖಾಲಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಜನಪ್ರತಿನಿಧಿಗಳು ಉಡಾಫೆ ಉತ್ತರ ನೀಡುತ್ತಾರೆ.

ಪ್ರೀತಿ ಶೇಖರ್ ಅವರ ಬಂಧನ ಖಂಡಿಸಿರುವ ಡಿವೈಎಫ್‌ಐ ಸಂಘಟನೆಯು ಬಂಧಿಸಿದ ಯುವಜನ ನಾಯಕಿಯನ್ನು ಕೂಡಲೇ ಬಿಡುಗಡೆ ಮಾಡಿ ಉದ್ಯೋಗ ಸೃಷ್ಟಿಯ ಕಡೆ ಗಮನ ಕೊಡಬೇಕು ಎಂದು ಆಗ್ರಹಿಸಿದೆ.

ವರದಿ: ಭೀಮನಗೌಡ ಸುಂಕೇಶ್ವರಹಾಳ

Donate Janashakthi Media

Leave a Reply

Your email address will not be published. Required fields are marked *