ದೇಶದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈವರೆಗೆ ಕೋವಿಡ್ ನಿಂದ ಸುಮಾರು 12,492 ಜನ ಮೃತಪಟ್ಟಿದ್ದಾರೆ. ಸರ್ಕಾರ ಸತ್ತವರ ಸಂಖ್ಯೆಯನ್ನು ಬಚ್ಚಿಡಲು ಪ್ರಯತ್ನಿಸುತ್ತಿದೆ. ತಾನು ತೆಗೆದುಕೊಂಡ ಕ್ರಮಗಳಿಂದ ಸಾವುಗಳ ಸಂಖ್ಯೆ ಕಡಿಮೆ ಎಂದು ಸರ್ಕಾರ ಸ್ವಯಂ ಸ್ತುತಿಯಲ್ಲಿ ತೊಡಗಿದೆ. ಜನರಲ್ಲಿ ಭೀತಿಯನ್ನು ಹುಟ್ಟಿಸುತ್ತದೆಯೇ ಹೊರತು ಧೈರ್ಯ ತುಂಬುವುದಿಲ್ಲ.
ಹಿಂದಿನ ಬಾರಿ ಯೋಜನಾಬದ್ಧವಾದ ಲಾಕ್ ಡೌನ್ ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿತ್ತು. ಅದರಿಂದಾಗಿ ಅಮಾಯಕ ಜನರು ಗೋಳಾಡುವಂತಾಗಿತ್ತು. ಅಂದು ಬೀದಿಪಾಲಾದ ಜನರು ಇಂದಿಗೂ ಚೇತರಿಸಿಕೊಂಡಿಲ್ಲ. ಅವರಿಗೆ ಪುನರ್ವಸತಿ ಕಲ್ಪಿಸಲು ಯಡಿಯೂರಪ್ಪ ಸಫಲವಾಗಿಲ್ಲ. ಅಪಾರ ಸಂಖ್ಯೆಯಲ್ಲಿ ಕಾರ್ಮಿಕರು, ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿತ್ತು. ಸಹಸ್ರಾರು ಜನ ಬೇರೆ ರಾಜ್ಯಗಳಿಂದ ವಲಸೆ ಬಂದವರಾಗಿದ್ದು ಇಲ್ಲಿಯೇ ಉಳಿಯಲಾಗದೆ, ತಮ್ಮ ಹುಟ್ಟೂರುಗಳಿಗೆ ವಾಪಸ್ ಹೋಗಲಾಗದೆ ಸಂಕಟ ಪಟ್ಟಿದ್ದರು. ಅವರಿಗೆ ಕನಿಷ್ಠ ಆಹಾರ ಧಾನ್ಯಗಳನ್ನು ಉಚಿತವಾಗಿ ಪೂರೈಸಲು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆಸ್ಪತ್ರೆಗಳಲ್ಲಿ ಆರೋಗ್ಯಕರ ಪರಿಸರ ನಿರ್ಮಾಣ ಮಾಡಲಾಗಲಿಲ್ಲ. ರೋಗಿಗಳನ್ನು ಕಾಳಜಿಯಿಂದ ಆರೈಕೆ ಮಾಡುವ ಆದರ್ಶಗಳು ವಿರಳವಾಗಿದ್ದವು. ಮಾನವೀಯತೆಯುಳ್ಳ ಕೆಲವು ಆರೋಗ್ಯ ಕಾರ್ಯಕರ್ತರು ಮತ್ತು ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ರೋಗಿಗಳ ಸೇವೆ ಮಾಡಿದ್ದು ಮಾತ್ರ ಶ್ಲಾಘನೀಯವಾಗಿತ್ತು.
ಈಗಲೂ ಸರ್ಕಾರ ಮಾಸ್ಕ್ ಹಾಕಿಕೊಳ್ಳಿ, ಪರಸ್ಪರ ಅಂತರ ಕಾಯ್ದುಕೊಳ್ಳಿ, ದೊಡ್ಡ ಸಂಖ್ಯೆಯಲ್ಲಿ ಸಭೆ-ಸಮಾರಂಭಗಳಲ್ಲಿ ಭಾಗವಹಿಸಬೇಡಿ ಎಂದು ಹೇಳುತ್ತಿದೆ. ಇಂತಹ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವೂ ಇದೆ. ಆದರೆ ಅದಷ್ಟೇ ಸಾಲದು. ಪ್ರತಿದಿನ ದುಡಿದು ಜೀವನ ಸಾಗಿಸುತ್ತಿರುವವರು ಗುತ್ತಿಗೆ ಕಾರ್ಮಿಕರು ಕೋವಿಡ್ ಭೀತಿಯಲ್ಲಿ ಮನೆಯಲ್ಲೇ ಇದ್ದು ಅವರು ತಮ್ಮ ಮಕ್ಕಳನ್ನು ಹೇಗೆ ಸಲಹಬಹುದು? ಕೆಲಸ ಕಳೆದುಕೊಳ್ಳುವ ಅಪಾಯ ಇರುವವರಿಗೆ ಅಗತ್ಯ ರಕ್ಷಣೆ ಒದಗಿಸಲು ಸರ್ಕಾರ ಮುಂದಾಗಬೇಕು.
ಬೆಂಗಳೂರು ನಗರದ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸಕ್ಕಿದ್ದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೋವಿಡ್ ಸೋಂಕು ಹರಡಲು ಆರಂಭವಾದ ಬಳಿಕ ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೆಲವರಿಂದ ಬಲವಂತದ ರಾಜೀನಾಮೆ ಪಡೆಯಲಾಗಿದೆ. ಇನ್ನು ಕೆಲವರಿಗೆ ಕಾನೂನುಬದ್ಧ, ನ್ಯಾಯಯುತ ಪರಿಹಾರವನ್ನು ನೀಡದೆ ಕೆಲಸದಿಂದ ಕಿತ್ತು ಹಾಕಲಾಗುತ್ತದೆ. ಕೆಲವು ಕಾರ್ಮಿಕರು ಜೀವನ ನಿರ್ವಹಣೆಗೆ ಬೇರೆ ದಾರಿಯಿಲ್ಲದೆ ತಮ್ಮ ಭವಿಷ್ಯ ನಿಧಿ ಹಣವನ್ನು ಹಿಂಪಡೆಯುವುದಕ್ಕಾಗಿ ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ. ಸರಿಯಾಗಿ ಯೋಜನೆ ಇಲ್ಲದೆ ಜಾರಿಗೆ ತಂದ ಕ್ರಮಗಳಿಂದ ಈಗಲಾದರೂ ಸರ್ಕಾರ ಪಾಠ ಕಲಿಯಬೇಕು.
ಕೋವಿಡ್ ಕಾರಣಕ್ಕೆ ಕೆಲಸ ಕಳೆದುಕೊಳ್ಳುವ ಕಾರ್ಮಿಕರಿಗೆ ಅಗತ್ಯ ಪುನರ್ವಸತಿ ಯೋಜನೆಯನ್ನು ಸರ್ಕಾರ ಪರಿಸ್ಥಿತಿ ಕೈಮೀರಿ ಹೋಗುವುದರೊಳಗಾಗಿ ಜಾರಿಗೆ ತರಬೇಕು. ಬೆಂಗಳೂರಿನಲ್ಲಿ ಮತ್ತು ಇತರ ನಗರಗಳಲ್ಲಿ ಕೆಲಸ ಮಾಡುತ್ತಿರುವ ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ರೂ.7,500 ಪರಿಹಾರ ನೀಡಬೇಕು. ಈ ಹಣವನ್ನು ಪ್ರತಿ ತಿಂಗಳ 5 ರೊಳಗಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿದವರಿಗೆ ಅಗತ್ಯ ಆಹಾರ ದಾನ್ಯಗಳನ್ನು ಉಚಿತವಾಗಿ ಪೂರೈಸಬೇಕು. ಪರಿಹಾರ ರೂಪದಲ್ಲಿ ಮಾಸಿಕ ರೂ. 7500 ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಬೇಕು. ಸೋಂಕು ನಿರೋಧಕ ಲಸಿಕೆಗಳನ್ನು ಮತ್ತಿತರ ಔಷಧಿಗಳನ್ನು ಉಚಿತವಾಗಿ ಪೂರೈಸಬೇಕು. ಚಿಕಿತ್ಸೆಯನ್ನು ಜನರು ಅನುಮಾನದಿಂದ ನೋಡುವುದನ್ನು ತಡೆಯಲು ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ರೋಗಿಗಳ ಸೇವೆಯಲ್ಲಿ ತೊಡಗುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಗರಿಷ್ಠ ಪ್ರೋತ್ಸಾಹ ಧನವನ್ನು ಹಾಗೂ ವೇತನವನ್ನು ತಪ್ಪದೇ ಒದಗಿಸಬೇಕು. ಉದ್ಯೋಗಗಳ ರಕ್ಷಣೆಗೆ ಆದ್ಯತೆ ನೀಡಬೇಕು. ವಲಸೆ ಕಾರ್ಮಿಕ ಕುಟುಂಬಗಳಿಗೆ ಗರಿಷ್ಠ ರಕ್ಷಣೆ ಒದಗಿಸಬೇಕು.