ಚೇತನಾ ತೀರ್ಥಹಳ್ಳಿ
“ಮುಚ್ಕೊಂಡ್ ಕೂತ್ಕೊಳಪ್ಪ”
ಅಂತ ಈಗಿನ್ನೂ ಹತ್ತು ನಿಮಿಷದ ಹಿಂದೆ ಒಬ್ಬ ತಮ್ಮನ ಮೆಸೇಜಿಗೆ ರಿಪ್ಲೇ ಮಾಡಿದೆ.
ಉಡುಪಿ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ನನ್ನ ಅನಿಸಿಕೆ ಸರಿಯಾಗಿದೆ ಅಂತ ಬರೆದವ, ಎರಡನೇ ಸಾಲಲ್ಲಿ ಮುಸ್ಲಿಮರು ಹೆಣ್ಣುಮಕ್ಕಳ ಮೇಲೆ ವಿಪರೀತ ಹೇರಿಕೆ ಮಾಡ್ತಾರೆ, ನಿಮ್ಮಂಥ ಸ್ತ್ರೀವಾದಿಗಳು ಧರ್ಮ ನೋಡದೆ ಹೆಣ್ಮಕ್ಕಳ ಹಿಜಾಬ್ ವಿರುದ್ಧ ಮಾತಾಡಿದ್ದು ಖುಷಿಯಾಯ್ತು ಅಂದ.
ಅದಕ್ಕೆ ನಾನು ಕೊಟ್ಟ ಉತ್ತರ – “ಮುಚ್ಕೊಂಡ್ ಕೂತ್ಕೊಳಪ್ಪ” ಎಂದಾಗಿತ್ತು.
ಸಾಮಾನ್ಯವಾಗಿ, ಸಾಧ್ಯವಾದಷ್ಟೂ ಒಳ್ಳೆಯ ಪದಗಳಲ್ಲೆ ಮಾತಾಡಲು ಬಯಸ್ತೀನಿ ನಾನು. ಟಾಂಟ್ ಕೊಟ್ಟರೂ ಶಾಲಲ್ಲಿ ಸುತ್ತಿಯೇ! ಅಂಥಾದ್ರಲ್ಲಿ ಅಷ್ಟು ಸರ್ರನೆ ಸಿಟ್ಟು ನೆತ್ತಿಗೇರಲು ಕಾರಣ ಎಲ್ಲಾ ಗಂಡಸರ ಹಣೆಬರಹವನ್ನು ಅವ ‘ಮುಸ್ಲಿಮರಲ್ಲಿ’ ಅಂತ ಸೀಮಿತಗೊಳಿಸಿದ್ದೇ ಆಗಿತ್ತು.
ಇನ್ನೂ ಮುಂದುವರೆದು, ಮುಸ್ಲಿಮರಲ್ಲಿ ಹೇರಿಕೆ ಕೊನೆಪಕ್ಷ ಎದ್ದು ಕಾಣುವಂತೆ ತೋರಿಯಾದರೂ ತೋರುತ್ತೆ, ನೇರವಾಗಿ ಖಂಡಿಸಬಹುದು. ಹಿಂದೂಗಳಲ್ಲಿ ಸೂಕ್ಷ್ಮವಾಗಿ ಕಂಡೂಕಾಣದಂತೆ ಹೆಜ್ಜೆಹೆಜ್ಜೆಗೂ ಹೇರುವ ನಿರ್ಬಂಧಗಳ ಹೊರೆಯನ್ನು ಖಂಡಿಸೋದು ಹೇಗೆ? ಆಧುನಿಕತೆ, ಮುಕ್ತ ವಾತಾವರಣಕ್ಕೆ ಹೆಸರಾದ ಧರ್ಮ ಎಂದು ಹೆಸರಾದ ಕ್ರೈಸ್ತರಲ್ಲಂತೂ ಈ ಹೊರೆ ಇನ್ನಷ್ಟು ವಿಚಿತ್ರ. ಇವೆಲ್ಲವನ್ನೂ ಆಯಾ ಧರ್ಮದ ಹೆಣ್ಣುಮಕ್ಕಳಷ್ಟೇ ಅಧಿಕೃತವಾಗಿ ಹೇಳಬಲ್ಲರು. (ಇವು ಮೂರು ಮೇಲ್ನೋಟದ ಉದಾಹರಣೆಗಳು. ಎಷ್ಟು ಧರ್ಮಗಳೋ ಅಷ್ಟು ಬಗೆಯ ಪುರುಷಪ್ರಧಾನ ಹೇರಿಕೆಗಳು. ಹೆಚ್ಚಿಲ್ಲ, ಕಡಿಮೆಯಿಲ್ಲ…)
ಆ ತಮ್ಮನಿಗೆ ವಿವರಿಸಿದಂತೆ, ಈಗಿನ್ನೂ ಫರ್ಜಾನಾ`ಗೆ ಕಮೆಂಟ್ ಮಾಡಿದ್ದಂತೆ; ಹಿಂದೂಗಳಲ್ಲಿ ಒಂದು ಪುಟ್ಟ ಬೊಟ್ಟು ಕೂಡಾ ಕೆಲವೊಮ್ಮೆ ಹೇರಿಕೆ. ಇಟ್ಟುಕೊಂಡರೆ ನಮ್ಮದೇನೂ ಜೀವ ಹೋಗೋದಿಲ್ಲ, ಇಡದಿದ್ದರೆ ನಮ್ಮ ಮನೆ ಜನಗಳದ್ದೂ. ಆದರೆ ಹಿಂದೂ ಹೆಣ್ಣುಮಕ್ಕಳು, ಅದರಲ್ಲೂ ಬ್ರಾಹ್ಮಣರ ಹೆಣ್ಣುಮಕ್ಕಳು ಅಪ್ಪೀತಪ್ಪಿ ಹಣೆಯ ಚುಕ್ಕಿ ಇಲ್ಲವಾದರೂ “ಮುಂಡೇರು” ಅಂತ ಬೈಸಿಕೊಂಡು ಮೈಯೆಲ್ಲ ಮುಳ್ಳಾಗಿಸಿಕೊಳ್ಳುವ ಅನುಭವ ಎಷ್ಟು ಜನಕ್ಕಿಲ್ಲ?
ಇವತ್ತಿಗೂ ಬಾಡಿಗೆ ಮನೆ ಹುಡುಕಲು ಹೋದರೆ ಕಾಲುಂಗುರ ಹುಡುಕೋ ಜನ, ಹೆಣ್ಣಿಗೊಬ್ಬ ಗಂಡ ಇರಲೇಬೇಕು ಅಂತ ಬಯಸುವ ಜನ, ವಿಧವೆಗೆ ಕುಂಕುಮ ಕೊಡದೆ ಕಣ್ತಪ್ಪಿಸುವ ಜನ, ಮುಟ್ಟಾದರೆ ದೇವರ ಪಟವನ್ನೂ ಮುಟ್ಟಗೊದದ ಜನ, ಆಧುನಿಕ ಉಡುಗೆ ತೊಡುವವಳನ್ನು “ಈಸಿ” ಅಂದುಕೊಳ್ಳುವ ಜನ ಎಷ್ಟಿಲ್ಲ?
ತಲೆ ಮೇಲೆ ತುಂಡು ಬಟ್ಟೆ ಹಾಕಲೇಬೇಕು ಅನ್ನುವ ಹೇರಿಕೆ ದಕ್ಷಿಣ ಭಾರತೀಯರಲ್ಲಿ ಇಲ್ಲ ಅಷ್ಟೇ. ಅಥವಾ ಶಾಲೆಗಳಿಗೆ ಅಂಥದೇನೂ ತೊಟ್ಟು ಹೋಗದಿರಬಹುದು ಅಷ್ಟೇ. ಆದರೆ ಉತ್ತರದಲ್ಲಿ, ಅಥವಾ ಇಲ್ಲೇ ಮಾರವಾಡಿ ಹೆಣ್ಮಕ್ಕಳು ತಲೆ ಮೇಲೆ ಸೆರಗು ಹೊದೆಯದೆ ಓಡಾಡೋದಿಲ್ಲ. ತಾವು ಕುಳಿತಿರುವಾಗ ಯಾರಾದರೂ ಗಂಡಸು ಬಂದರೆ ಅವರು ಥಟ್ಟನೆ ಎದ್ದು ತಲೆ ಮೇಲೆ ಸೆರಗು ಹೊದ್ದು ಬದಿಗೆ ನಿಲ್ಲೋದನ್ನು ನನ್ನ ಕಣ್ಣಾರೆ ನೋಡಿದ್ದೇನೆ. ಗಂಡು ಮಗು ಹುಟ್ಟುವವರೆಗೂ ಹೆಂಡತಿ ಹೆರಬೇಕೆಂದು ಹಿಂಸೆ ಮಾಡುವವರನ್ನು ನೋಡಿದ್ದೇನೆ. ಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೀವಿ ಅನ್ನುತ್ತಲೇ ತಾವು ಅಳೆದು ತೂಗಿ ನೋಡಿದ ಗಂಡನ್ನೇ ಮದುವೆಯಾಗುವಂತೆ ಬಲವಂತ ಮಾಡುವ, ಆಗದಿದ್ದರೆ ಕೊಂದೇಹಾಕುವ ಹಿಂದೂಗಳನ್ನೂ ನಾವೆಲ್ಲರೂ ನೋಡಿದ್ದೇವೆ.
ನಾನು ಈಗಲೂ ಶಾಲೆಗೆ ಮಕ್ಕಳು ಹಿಜಾಬ್ ತೊಟ್ಟು ಹೋಗೋದನ್ನು ಒಪ್ಪೋದಿಲ್ಲ. ಅದೇ ವೇಳೆಗೆ ಗೆಳೆಯರೊಬ್ಬರು ಹಿಂದೂ ಹೆಣ್ ಮಕ್ಕಳು ಬಿಂದಿ ತೊಟ್ಟು ಹೋಗೋದಿಲ್ವಾ ಅಂದರು. ನಾನು ಆ ಕ್ಷಣಕ್ಕೆ ಅವರಿಗೆ ‘ಹಿಜಾಬ್’ ಪುರುಷಪ್ರಧಾನ ಹೇರಿಕೆ, ಬಿಂದಿ ಅಲಂಕಾರ ಅಂದುಬಿಟ್ಟೆ. ಫೋನ್ ಇಟ್ಟಮೇಲೆ ಪಶ್ಚಾತ್ತಾಪವಾಯ್ತು. ನಾನು ನನಗೇ ಗೊತ್ತಿಲ್ಲದೆ ಅಪ್ರಾಮಾಣಿಕ ಉತ್ತರ ಕೊಟ್ಟಿದ್ದೆ. ಕೆಲವಷ್ಟಾದರೂ ಹಿಂದೂ ಹೆಣ್ಣುಮಕ್ಕಳು, ಅದರಲ್ಲೂ ಬ್ರಾಹ್ಮಣ ಹೆಣ್ಣುಮಕ್ಕಳು ಹಣೆಗೆ ಇಡೋದೇ ಮನೆಯಲ್ಲಿ ಬೈತಾರೆ ಅನ್ನೋ ಕಾರಣಕ್ಕೆ. ನಾನು ನನ್ನ ಉದಾಹರಣೆಯನ್ನೆ ಮರೆತಿದ್ದೆ.
ಅಪ್ಪನ ಹತ್ರ ಉಗಿಸಿಕೊಂಡು ಹಣೆಗಿಟ್ಟು ಮನೆ ಬಿಡುತ್ತಿದ್ದ ನಾನು ಜಾನುವಾರು ಜಾತ್ರೆ ಬಯಲಿಗೆ ಇಳಿಯುತ್ತಲೇ ಸ್ಕರ್ಟಿನ ಮೇಲೆ ಎರಡು ಮಡಿಕೆ ಮಡಚಿಕೊಂಡು, ಹಣೆಗಿಟ್ಟ ಬಿಂದಿ ಅಳಿಸಿಕೊಂಡು ಶಾಲೆಗೆ ಹೋಗುತ್ತಿದ್ದೆ. ವಾಪಸ್ ಬರುವಾಗ ಅಪ್ಪ ಆಫೀಸಿಂದ ಬಂದಿರುತ್ತಿರಲಿಲ್ಲ, ಅಮ್ಮ ಯಾವತ್ತೂ ಅಂಥ ಹೇರಿಕೆ ಮಾಡುತ್ತಿರಲಿಲ್ಲ.
ಹಾಗಾದರೆ ಬಿಂದಿ ಕೂಡಾ ಹಿಜಾಬಿನದ್ದೇ ಮತ್ತೊಂದು ರೂಪ ಅಲ್ಲವೆ?
ಸಮವಸ್ತ್ರದ ಬಟ್ಟೆ ವಿಷಯಕ್ಕೆ ಸೀಮಿತವಾಗಿ ಯಾವತ್ತೂ ನಾನು ಅದರ ವಿರೋಧಿಯೇ. ಆದರೆ ಹಿಜಾಬೇ ಬೇರೆ, ಬಿಂದಿಯೇ ಬೇರೆ ಅನ್ನೋದನ್ನ ನಾನು ಒಪ್ಪಲಾರೆ. ಬಿಂದಿ ಮಾತ್ರ ಅಲ್ಲ, “ಜನ ಆಡ್ಕೋತಾರೆ, ಮನೆಯೋರು ಬೈತಾರೆ” ಅನ್ನುವ ಕಾರಣಗಳಿಂದ ನಾವು ಅನುಸರಿಸುವ ಯಾವುದೇ ಸಂಗತಿಯೂ ಹೇರಿಕೆಯೇ. ಅವುಗಳ ಅಂದ ಆಕಾರ ಬೇರೆ ಬೇರೆಯಾಗಿರಬಹುದು.
ಆದ್ದರಿಂದ, ಹಿಜಾಬ್ ವಿರೋಧಿಸ್ತೀವಿ ಅಂದ ಮಾತ್ರಕ್ಕೆ ಯಾರೂ ಖುಷಿ ಪಡೋದು ಬೇಕಿಲ್ಲ. ನಾನು ಅಷ್ಟೇ ಪ್ರಮಾಣದಲ್ಲಿ ‘ಹೇರಿಕೆಯ’ ಬಿಂದಿಯನ್ನೂ ಬಳೆಯನ್ನೂ ಕಾಲುಂಗುರವನ್ನೂ ಮೂಗುಬೊಟ್ಟನ್ನೂ ವಿರೋಧಿಸ್ತೀನಿ. ನನಗೆ ಖುಷಿ ಬಂದಾಗ ಅಲಂಕಾರವಾಗಿ ತೊಟ್ಟುಕೊಳ್ತೀನಿ. ನಾನು ಹಣೆಗೆ ಬೊಟ್ಟಿಡದ ನನ್ನ ಆಯ್ಕೆ ಸಂಪೂರ್ಣ ಪಾಲಿಸಲು ಅಪ್ಪ, ಗಂಡ ಮತ್ತವನ ಮನೆ ಮಂದಿ, ಅಣ್ಣ – ಇವಿಷ್ಟೂ ಜನರ ಮರ್ಜಿಯಿಂದ ಹೊರಗೆ ಬರಬೇಕಾಯ್ತು. ಬಂಡಾಯ ಗುಣವಿದ್ದರೂ ಅವರ ಜೊತೆಗೆ ಇರುತ್ತಲೇ ಇದನ್ನು ಮಾಡಲಾಗಲಿಲ್ಲ.
ಯಾವ ಮತಧರ್ಮದ ಗಂಡಸರಾದರೇನು; ಅವರು ನಮ್ಮ ಮುಂದೆ ಇಡುವುದು ಎರಡೇ ಆಯ್ಕೆ. ಒಂದೋ ನಾವು ಹಾಕಿದ ಕಟ್ಟುಪಾಡುಗಳನ್ನು ತಕ್ಕಮಟ್ಟಿಗಾದರೂ ಒಪ್ಪಿಕೊಂಡು ನಮ್ಮ ಜೊತೆ ಬಿದ್ದಿರಬೇಕು. ಅಥವಾ, ಅವನ್ನು ಮೀರುವುದಾದರೆ ನಮ್ಮ ಪರಿಧಿಯಿಂದ ಹೊರಗೆ ಹೋಗಬೇಕು.
ನಾನು ಇವತ್ತು ಬೊಟ್ಟು, ಬಳೆಗಳಿಂದ ಮುಕ್ತಳಾಗಿದ್ದೇನೆ ಅಂದರೆ; ಎಲ್ಲ ಸಂಬಂಧಗಳಿಂದ ಮುಕ್ತಳಾಗಿದ್ದೇನೆ ಅಂತಲೇ ಅರ್ಥ.
ಆದ್ದರಿಂದ, ಮತ್ತೊಬ್ಬರತ್ತ ಬೆಟ್ಟು ಮಾಡದೆ ನಿಮ್ಮ ನಿಮ್ಮ ಹುಳುಕು ನೋಡಿಕೊಳ್ಳಿ. ಮತ್ತು, ‘ಮುಚ್ಕೊಂಡ್ ಇರಿ’