ನವದೆಹಲಿ: ಮಹಾರಾಷ್ಟ್ರ ಸರ್ಕಾರ ಕಾನೂನು ಪ್ರಕಾರ ಕಾರ್ಯನಿರ್ಹಹಿಸಲಿಲ್ಲ. ಉದ್ಧವ್ ಠಾಕ್ರೆ ಸರ್ಕಾರವನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ಮಹಾರಾಷ್ಟ್ರ ಮೂಲ ಶಿವಸೇನೆಯಿಂದ ಬಂಡಾಯವೆದ್ದು ಏಕನಾಥ ಶಿಂಧೆ ಹಿಂದೆ ಹೋಗಿದ್ದ 16 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿ ಸೇರಿದಂತೆ 2 ತೀರ್ಪುಗಳನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸಿದೆ. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಅವರನ್ನು ಮತ್ತೆ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಉರುಳಿಸಿದ ಫ್ಲೋರ್ ಟೆಸ್ಟ್ (ಬಹುಮತ ಸಾಬೀತು) ಕೂಡ ಕಾನೂನುಬದ್ಧವಾಗಿಲ್ಲ. ಉದ್ಧವ್ ಅವರು ಸದನದಲ್ಲಿ ಬಹುಮತವನ್ನು ಕಳೆದುಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದ ರಾಜ್ಯಪಾಲ ಬಿಎಸ್ ಕೋಶ್ಯಾರಿ ಅವರು ತಪ್ಪೆಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ. ಅಂತರ್ ಅಥವಾ ಪಕ್ಷದೊಳಗಿನ ವಿವಾದಗಳನ್ನು ಬಗೆಹರಿಸಲು ಫ್ಲೋರ್ ಟೆಸ್ಟ್ ನ್ನು ಮಾಧ್ಯಮವಾಗಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ : ಶಿವ ಸೇನಾ ಬಣ ರಾಜಕೀಯ; ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ ಅವರು ಬಹುಪಾಲು ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸುವಲ್ಲಿ ರಾಜ್ಯಪಾಲರು ತಪ್ಪು ಎಸಗಿದ್ದಾರೆ ಎಂದು ಶಿಂಧೆ ಬಣಕ್ಕೆ ಸಹಾಯ ಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ನ್ಯಾಯಾಲಯ ಖಂಡಿಸಿತು. ಮಹಾರಾಷ್ಟ್ರ ರಾಜ್ಯಪಾಲರ ವಿವೇಚನಾಧಿಕಾರವು ಭಾರತದ ಸಂವಿಧಾನಕ್ಕೆ ಅನುಗುಣವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಪೀಕರ್ ನಡೆಗೆ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ. ರಾಜಕೀಯ ಪಕ್ಷ ನೇಮಿಸುವ ವಿಪ್ಗೆ ಮಾತ್ರ ಸ್ಪೀಕರ್ ಮಾನ್ಯತೆ ನೀಡಬೇಕು. ಗೊಗವಾಲೆ (ಶಿಂಧೆ ಗುಂಪು) ಅವರನ್ನು ಶಿವಸೇನಾ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಿದ ಸ್ಪೀಕರ್ ನಿರ್ಧಾರ ಕಾನೂನುಬಾಹಿರ. ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸಲು ಬಹುಮತ ಸಾಬೀತುಪಡಿಸುವುದು ಮಾಧ್ಯಮವಾಗಿ ಬಳಸಬಾರದು. ಸಂವಿಧಾನ ಅಥವಾ ಕಾನೂನು ರಾಜ್ಯಪಾಲರಿಗೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಮತ್ತು ಅಂತರ್ ಪಕ್ಷ ಅಥವಾ ಪಕ್ಷದ ಆಂತರಿಕ ವಿವಾದಗಳಲ್ಲಿ ಪಾತ್ರ ವಹಿಸಲು ಅಧಿಕಾರ ನೀಡುವುದಿಲ್ಲ. ಮಹಾರಾಷ್ಟ್ರ ರಾಜ್ಯಪಾಲರ ವಿವೇಚನಾಧಿಕಾರವು ಸಂವಿಧಾನಿಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.