ದ್ವೇಷದ ಸುರುಳಿ ಅಂತ್ಯವಾಗಬೇಕು – ಅಪರಾಧಿಗಳಿಗೆ ಶಿಕ್ಷೆಯಾಗಬೇಕು

ನ್ಯಾಯಭಂಗ ಸಂಭವಿಸಲಾಗದು, ಸಂಭವಿಸಬಾರದು

ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಮತ್ತು ಹಿಂಸಾಚಾರದ ವಾತಾವರಣವು ನಮ್ಮ ಸಮಾಜವನ್ನು ಅಮಾನವೀಯಗೊಳಿಸುತ್ತಿದೆ. ಈ ಬೆಂಕಿಯು ಉರಿಯುತ್ತಲೇ ಇರುವಂತೆ ಮಾಡಬಾರದು. ಗುಜರಾತ್ ಎಸ್.ಐ.ಟಿ.ಗೆ ಈಗ ಕ್ಲೀನ್‍ ಚಿಟ್ ನೀಡಿರುವ ಸುಪ್ರಿಂ ಕೋರ್ಟಿನ ರಜಾಕಾಲದ ಪೀಠದ ತೀರ್ಪು ಹಿಂದಿನ ಸಮಸ್ತ ನ್ಯಾಯಾಂಗ ತೀರ್ಪುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ ಮತ್ತು ತಿರಸ್ಕರಿಸುತ್ತದೆ. ಇಲ್ಲಿ ನ್ಯಾಯ ಪ್ರಕ್ರಿಯೆಯ ಗರ್ಭಪಾತವಾಗಿದೆ ಎಂದೇ ಹೇಳಬೇಕಾಗುತ್ತದೆ. ತೀಸ್ತಾ ಮತ್ತು ಶ್ರೀಕುಮಾರ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಸಂವಿಧಾನ  ಸ್ಥಾಪಿಸಿರುವ ಸ್ವತಂತ್ರ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಪಾವಿತ್ರ‍್ಯತೆಯನ್ನು ಎತ್ತಿಹಿಡಿಯಬೇಕು ಮತ್ತು ಬಲಪಡಿಸಬೇಕು. ಇಂತಹ ಅಘಾತಕಾರಿ ನ್ಯಾಯಭಂಗಗಳು ಸಂಭವಿಸುವ ಸ್ಥಿತಿ ಇರಲು ಸಾಧ್ಯವಿಲ್ಲ ಮತ್ತು ಇರಬಾರದು.

ಪ್ರಕಾಶ್ ಕಾರಟ್

ಪ್ರಕಾಶ್ ಕಾರಟ್

ರಾಜಾಸ್ತಾನ ರಾಜ್ಯದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಯನ್ನು ಸಾರ್ವತ್ರಿಕವಾಗಿ ಖಂಡಿಸಲಾಗಿದೆ. ಆಡಳಿತವು ಈ ಕಗ್ಗೊಲೆ ನಡೆಸಿದವರನ್ನು ಬಂಧಿಸುವ  ಕೆಲಸ ಮಾಡಿದೆ. ತಪ್ಪಿತಸ್ಥರಿಗೆ ಕಠಿಣವಾದ  ಶಿಕ್ಷೆಯಾಗಬೇಕು. ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಮತ್ತು ಹಿಂಸಾಚಾರದ ವಾತಾವರಣವು ನಮ್ಮ ಸಮಾಜವನ್ನು ಅಮಾನವೀಯಗೊಳಿಸುತ್ತಿದೆ. ಈ ದ್ವೇಷದ ಸುರುಳಿ ಅಂತ್ಯವಾಗಬೇಕು. ಕೇಂದ್ರ ಸರ್ಕಾರವು ಪ್ರಕರಣವನ್ನು ಎನ್.ಐ.ಎ.ಗೆ ವಹಿಸುವಂತೆ ಆದೇಶಿಸಿರುವುದು ದ್ವೇಷ ಮತ್ತು ಹಿಂಸಾಚಾರದ ಬೆಂಕಿಯು ಉರಿಯುತ್ತಲೇ ಇರುವಂತೆ ಮಾಡಬಾರದು.

ಸಾಮಾಜಿಕ ಮಾಧ್ಯಮದಲ್ಲಿ ಕೋಮು ಭಾವೋದ್ರೇಕಗಳನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿರುವ ನಕಲಿ/ಸುಳ್ಳು ಸುದ್ದಿಗಳು, ವಿಷಕಾರಿ ದ್ವೇಷ ಮತ್ತು ಹಿಂಸಾಚಾರದ ಕಿಡಿಹೊತ್ತಿಸುವಲ್ಲಿ ಅಪಾರ ಕೊಡುಗೆ ನೀಡುತ್ತವೆ. ಇಂತಹ ಸುಳ್ಳು ಸುದ್ದಿಗಳನ್ನು ಬಹಿರಂಗಪಡಿಸುವುದು ಮತ್ತು ಸತ್ಯಗಳನ್ನು ಜನರ ಮುಂದಿಡುವುದು ಕೋಮುದ್ವೇಷವನ್ನು ಕುಗ್ಗಿಸಲು ಕೊಡುಗೆ ನೀಡುತ್ತದೆ. ‘ಆಲ್ಟ್ ನ್ಯೂಸ್’ ಪೋರ್ಟಲ್ ಈ ದಿಸೆಯಲ್ಲಿ ಉತ್ತಮ ಸೇವೆಯನ್ನು ಮಾಡಿದೆ. ವಿಪರ್ಯಾಸವೆಂದರೆ ಅದರ ಸಹಸ್ಥಾಪಕ, ಮೊಹಮ್ಮದ್ ಜುಬೇರ್ ಅವರನ್ನು 2018 ರಲ್ಲಿ ಮಾಡಿದ ಒಂದು ಟ್ವೀಟ್‌ನ ಸಂಬಂಧ ಐ.ಪಿ.ಸಿ.ಯ 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಆರೋಪದ ಅಡಿಯಲ್ಲಿ ಈಗ ಬಂಧಿಸಲಾಗಿದೆ. ಮೋದಿ ಸರ್ಕಾರವು ತಪ್ಪು ಮಾಹಿತಿಯನ್ನು ಮತ್ತು ನಕಲಿ ಸುದ್ದಿಗಳನ್ನು ಬಯಲಿಗೆಳೆಯುವ ಯಾವುದೇ ಸಂಸ್ಥೆಗೆ ಹೆದರುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿ, ಸಾಬೀತಾಗುತ್ತದೆ. ಈ ಬಂಧನಕ್ಕೆ ಯಾವುದೇ ಆಧಾರವಿಲ್ಲ,  ಜುಬೇರ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು.

ಜುಬೇರ್ ಬಂಧನಕ್ಕೊಳಗಾದ ದಿನ ಪ್ರಧಾನಿ ಮೋದಿಯವರು ಜಿ-7 ಶೃಂಗಸಭೆಯಲ್ಲಿ ಆಹ್ವಾನಿತರಾಗಿ ಭಾಗವಹಿಸಿದ್ದರು .ಅವರು ಅಲ್ಲಿ “ಅಭಿವ್ಯಕ್ತಿ ಮತ್ತು ಅಭಿಪ್ರಾಯದ ಸ್ವಾತಂತ್ರ್ಯಗಳನ್ನು, ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾಧ್ಯಮಗಳಲ್ಲಿ ರಕ್ಷಿಸಲು ಮತ್ತು ಮುಕ್ತ ಮತ್ತು ಸ್ವತಂತ್ರ ಮಾಧ್ಯಮ ನೆಲೆಗಟ್ಟನ್ನು ರಕ್ಷಿಸುವುದನ್ನು ಖಾತ್ರಿಪಡಿಸಲು ”  ನಿರ್ಧರಿಸಿದ ಜಂಟಿ ಹೇಳಿಕೆಗೆ ಸಹಿ ಹಾಕಿದರು.

ಪೈಶಾಚಿಕ ಠಕ್ಕುತನ ಇದಕ್ಕಿಂತ ಹೆಚ್ಚು ಸ್ಪಷ್ಟವಾಗಿ ಕಾಣುವುದು ಸಾಧ್ಯವಿಲ್ಲ.

ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಮತ್ತು ಸಂಜೀವ್ ಭಟ್ (ಈಗಾಗಲೇ ಬೇರೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ) ಬಂಧನದ ಬೆನ್ನಲ್ಲೇ ಜುಬೇರ್ ಬಂಧನವಾಗಿದೆ. ತೀಸ್ತಾ 2002ರ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ನಿರಂತರವಾಗಿ ದಣಿವರಿಯದ ಹೋರಾಟ ನಡೆಸಿದರು. ಇದರಿಂದ ಹಿಂಸಾಚಾರದ ಒಟ್ಟು 68 ಪ್ರಕರಣಗಳಲ್ಲಿ 120 ಅಪರಾಧಿಗಳು ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗುವಂತಾಯಿತು. ಭಾರತದಲ್ಲಿ ಯಾವುದೇ ಕೋಮು ಗಲಭೆಯ ಅಪರಾಧಿಗಳನ್ನು ಶಿಕ್ಷಿಸುವ ವಿಷಯದಲ್ಲಿ ಇದೊಂದು ದಾಖಲೆಯಾಗಿದೆ.

ತೀಸ್ತಾ ಅವರ ಬಂಧನವು ಜನರ ಸಾಂವಿಧಾನಿಕವಾಗಿ ಖಾತರಿಪಡಿಸಿದ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ನಾಚಿಕೆಗೆಟ್ಟ ದಾಳಿಯಾಗಿದೆ.  ಯಾರ ಆಳ್ವಿಕೆಯ ಅಡಿಉಲ್ಲಿ ಭೀಕರ ಕೋಮುಗಲಭೆಗಳು ನಡೆಯುತ್ತವೆಯೋ, ಅವುಗಳಲ್ಲಿ ಆಡಳಿತದ ಪಾತ್ರವನ್ನು ಜನರು ಪ್ರಶ್ನಿಸುವ ಧೈರ್ಯ ಮಾಡಬಾರದು ಎಂಬ ಸ್ಪಷ್ಟ ಸಂಕೇತವನ್ನು ಇದು ಕಳುಹಿಸುತ್ತದೆ.

ವಿಪರ್ಯಾಸವೆಂದರೆ, ಗುಜರಾತ್ ಪೊಲೀಸರು ತೀಸ್ತಾ ಅವರನ್ನು ಬಂಧಿಸಲು ಅನುವು ಮಾಡಿಕೊಟ್ಟಿರುವುದು ದೇಶದ ಸರ್ವೋಚ್ಚ ನ್ಯಾಯಾಲಯವೇ. ಗುಜರಾತ್ ಕೋಮುಗಲಭೆಯಲ್ಲಿ ಕ್ರೂರವಾಗಿ ಹತ್ಯೆಗೀಡಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಪರವಾಗಿ ತೀಸ್ತಾ ಅವರು ನಡೆಸುತ್ತಿದ್ದ ಪ್ರಕರಣವನ್ನು ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಈ ಕೋಮುಗಲಭೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿದ ರೀತಿಯಲ್ಲಿ ನ್ಯಾಯಾಲಯಕ್ಕೆ ಯಾವುದೇ ತಪ್ಪು ಕಂಡಿಲ್ಲ. ಮೋದಿಯನ್ನು ದೋಷಮುಕ್ತಗೊಳಿಸುತ್ತ ಈ ತೀರ್ಪು, “ಕೇವಲ ರಾಜ್ಯ ಆಡಳಿತದ ವೈಫಲ್ಯ ಅಥವಾ ನಿಷ್ಟ್ರಿಯತೆ” ಯಲ್ಲಿ “ಪಿತೂರಿಯನ್ನು ಅನುಮಾನಿಸಲು ಯಾವುದೇ ಆಧಾರವಿಲ್ಲ” ಎಂದು ಹೇಳುತ್ತದೆ. ಇನ್ನೂ ಕೆಟ್ಟದ್ದದ್ದೆಂದರೆ, ಈ ತೀರ್ಪು ನೇರವಾಗಿ ನ್ಯಾಯವನ್ನು ಕೋರುವ ಅರ್ಜಿದಾರರನ್ನು ಆರೋಪಿಯಾಗಿ ಪರಿವರ್ತಿಸುತ್ತದೆ. ” ದುರುದ್ದೇಶದಿಂದ ಕೆಲವರು ಈ ವಿಷಯದಲ್ಲಿ ಬೆಂಕಿ ಉರಿಯುತ್ತಲೇ ಇರುವಂತೆ ಪ್ರಯತ್ನಿಸಿದ್ದಾರೆ” ಎಂದದ್ದಲ್ಲದೇ, ಈ ತೀರ್ಪು “ಇಂತಹ ಪ್ರಕ್ರಿಯೆಯ ದುರುಪಯೋಗದಲ್ಲಿ ತೊಡಗಿರುವವರೆಲ್ಲರೂ ಕಟಕಟೆಯಲ್ಲಿರಬೇಕು ಮತ್ತು ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು” ಎಂದು ಹೇಳುವ ಮೂಲಕ ಬಂಧಿಸುವಂತೆ ನಿರ್ದೇಶಿಸುತ್ತದೆ.

ವ್ಯಂ‍ಗ್ಯಚಿತ್ರ ಕೃಪೆ: ಪಿ.ಮಹಮ್ಮದ್

ಯಾವುದೇ ನ್ಯಾಯಾಲಯವು ಸ್ಥಾಪಿಸಿದ ಎಸ್.ಐ.ಟಿ.ಯ ವರದಿಯ ವಿರುದ್ಧದ ಮೇಲ್ಮನವಿಗಳು “ಪ್ರಕ್ರಿಯೆಯ ದುರುಪಯೋಗ?” ಹೇಗಾಗುತ್ತದೆ? ಇನ್ನು ಮುಂದೆ ಎಸ್.ಐ.ಟಿ. ವರದಿಗಳು ನ್ಯಾಯಾಂಗ ಮೇಲ್ಮನವಿಯ ವ್ಯಾಪ್ತಿಯಿಂದ ಹೊರಗಿರುತ್ತವೆಯೇ?

ಗುಜರಾತ್ ಎಸ್.ಐ.ಟಿ.ಗೆ ನೀಡಿರುವ ಈ  ದೋಷಮುಕ್ತತೆಯ ಪ್ರಮಾಣ ಪತ್ರ  ಮಾನವ ಹಕ್ಕುಗಳ ಆಯೋಗವು (ಎನ್.ಎಚ್.ಆರ್.ಸಿ.) ಮೇ 2002 ರಲ್ಲಿ ಹೇಳಿದ್ದಕ್ಕೆ  ವಿರುದ್ಧವಾಗಿದೆ. ಅಷ್ಟೇ ಅಲ್ಲ, ಏಪ್ರಿಲ್ 2004 ರಲ್ಲಿ ಬೆಸ್ಟ್ ಬೇಕರಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ನರೋಡಾ ಪಾಟಿಯಾ ಪ್ರಕರಣದ ಕುರಿತು ಗುಜರಾತ್ ಹೈಕೋರ್ಟ್ ನೀಡಿದ ತೀರ್ಪು ಮತ್ತು ಮೋದಿಯವರ ಕುರಿತ ಎಸ್.ಐ.ಟಿ.ಯ ವಿಚಾರಣೆಯಲ್ಲಿನ ಅಸಮರ್ಪಕತೆ ಮತ್ತು ಅಸಂಗತತೆಗಳ ಕುರಿತ ತೀರ್ಪಿಗೂ ವಿರುದ್ಧವಾಗಿದೆ.

ಎನ್.ಎಚ್.ಆರ್.ಸಿ.ಯು “ತನಿಖಾ ಪ್ರಕ್ರಿಯೆಯ ಸಮಗ್ರತೆಯಲ್ಲಿ  ಮತ್ತು ತನಿಖೆ ನಡೆಸುವವರ ಸಾಮರ್ಥ್ಯದಲ್ಲಿ ವ್ಯಾಪಕ ನಂಬಿಕೆಯ ಕೊರತೆಯಿದೆ…” ಎಂದು ಗಮನಿಸಿತ್ತು.

 “ಆದ್ದರಿಂದ, ಎಸಗಿದ ಅಪರಾಧಗಳನ್ನು ತನಿಖೆ ಮಾಡುವ  ಮತ್ತು ವಿಚಾರಣೆಗೆ ಒಳಪಡಿಸುವ ಪ್ರಯತ್ನವು ಇದುವರೆಗೆ ಕಂಡು ಬಂದಿರುವಂತಿರದೆ,   ‘ಬಾಹ್ಯ ರಾಜಕೀಯ ಮತ್ತು ಇತರ ಪ್ರಭಾವಗಳಿಂದ’ ಮುಕ್ತವಾಗಿ ಮತ್ತು ಒಂದು ಹೆಚ್ಚಿನ ಸಮಗ್ರತೆಯ ಭಾವದಿಂದ ಹೆಚ್ಚಿನ ಕೌಶಲ್ಯ ಮತ್ತು ದೃಢತೆಯಿಂದ ನಿರ್ದೇಶಿತವಾಗದಿದ್ದರೆ, ವ್ಯಾಪಕ ಪ್ರಮಾಣದ ಹಾಗೂ ಆತ್ಮಸಾಕ್ಷಿಯಿಲ್ಲದ   ನ್ಯಾಯಭಂಗ ಸಂಭವಿಸುವ  ಅಪಾಯವು  ಮುಂದುವರಿಯುತ್ತದೆ ಎಂದು ಆಯೋಗವು ಎಚ್ಚರಿಸಲು ಬಯಸುತ್ತದೆ.” ಎಂದು ಮುಂದುವರೆದು ಅದು ಹೇಳಿತ್ತು.

ಸುಪ್ರೀಂ ಕೋರ್ಟ್ ತನ್ನ 2004 ರ ತೀರ್ಪಿನಲ್ಲಿ ಇನ್ನೂ ಹೆಚ್ಚು ಕಟುವಾಗಿ ಹೀಗೆ  ಹೇಳಿತ್ತು:

“ಪ್ರಕರಣದ ದಾಖಲೆಗಳ ಮೇಲೆ ಸುಮ್ಮನೇ ಕುತೂಹಲದಿಂದ ಯಾರಾದರೂ ಒಮ್ಮೆ ಕಣ್ಣು ಹಾಯಿಸಿದರೆ,  ಇಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯ ಮೇಲೆಯೇ ಸವಾರಿ ಮಾಡಲಾಗುತ್ತಿದೆ ಮತ್ತು ಅಕ್ಷರಶಃ, ನ್ಯಾಯಾಂಗ ವ್ಯವಸ್ಥೆಗೆ ಅಪಚಾರ ಬಗೆಯಲು, ಅದನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಕಪಟೋಪಾಯಗಳ ಮೂಲಕ ವಿರೂಪಗೊಳಿಸಲು ಬಿಡಲಾಗಿದೆ ಎಂಬ ಭಾವನೆ ಬರುತ್ತದೆ.’’

ಆಧುನಿಕ ಕಾಲದ ‘ನೀರೋಗಳು’ ಬೆಸ್ಟ್ ಬೇಕರಿ ಮತ್ತು ಮುಗ್ಧ ಮಕ್ಕಳು ಮತ್ತು ಅಸಹಾಯಕ ಮಹಿಳೆಯರು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ, ಬೇರೆಲ್ಲೋ ನೋಡುತ್ತಿದ್ದರು ಮತ್ತು ಬಹುಶಃ ದು ಅಪರಾಧ ಎಸಗುತ್ತಿದ್ದವರನ್ನು ಹೇಗೆ ಉಳಿಸಬಹುದು ಅಥವಾ ರಕ್ಷಿಸಬಹುದು ಎಂದು ಚರ್ಚಿಸುತ್ತಿದ್ದರು.”  ಎಂದು ಸಹ  ಅದು ಹೇಳಿತ್ತು.

ನರೋಡಾ ಪಾಟಿಯಾ ಪ್ರಕರಣದ ಗುಜರಾತ್ ಹೈಕೋರ್ಟ್ ತೀರ್ಪು ಎಸ್.ಐ.ಟಿ. ತನಿಖೆಯನ್ನು ನೇರವಾಗಿ ಪ್ರಶ್ನಿಸಿದೆ ಮತ್ತು ಹೀಗೆ ಹೇಳಿದೆ: “ಆದಾಗ್ಯೂ, ಪೊಲೀಸರು ಮತ್ತು ಎಸ್.ಐ.ಟಿ. ಇಬ್ಬರೂ ವಿಚಾರಣೆಯನ್ನು ನೈಪುಣ್ಯವಿಲ್ಲದ  ನಡೆಸಿದ  ವಿಧಾನ ಮತ್ತು ಅಷ್ಟೇ  ಅಸಮರ್ಥ ರೀತಿಯಲ್ಲಿ ವಿಚಾರಣೆ ನಡೆಸಿರುವುದು  ಸಂಬಂಧಪಟ್ಟ ಎಲ್ಲರ ಉದ್ದೇಶಗಳ ಬಗ್ಗೆ ಬಹಳಷ್ಟು ಹೇಳುತ್ತವೆ.”

ಮೋದಿ, ಆ ದಿನ ರಾತ್ರಿ ನಡೆದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತ ಪರಿಶೀಲನಾ ಸಭೆಯಲ್ಲಿ ಮಾತ್ರ ಎಹ್ಸಾನ್ ಜಾಫ್ರಿ ಹತ್ಯೆಯಾದ ಗುಲ್ಬರ್ಗ್ ಸೊಸೈಟಿ ದಾಳಿಯ ಬಗ್ಗೆ ತನಗೆ ತಿಳಿದದ್ದು ಎಂದು ಹೇಳುವ ಮೂಲಕ, ಶಸ್ತ್ರಸಜ್ಜಿತ ಗುಂಪುಗಳಿಂದ ಗುಲ್ಬರ್ಗ್ ಸೊಸೈಟಿ ಮೇಲೆ ನಡೆಯುತ್ತಿದ್ದ ದಾಳಿಯ ಬಗ್ಗೆ ಆಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದು ಎಸ್‌ಐಟಿ ಮುಂದೆ ಹೇಳಿದರು. ಆದರೆ ಜಾಫ್ರಿ ಅವರು ಸಹಾಯಕ್ಕಾಗಿ ಮುಖ್ಯಮಂತ್ರಿ ಮೋದಿಯವರಿಗೆ ದೂರವಾಣಿ ಕರೆ ಮಾಡಿದ್ದು, ಮೋದಿ ಜಾಫ್ರಿಯವರ ಮಾತನ್ನು ಕೇಳಲಿಲ್ಲ, ವಾಸ್ತವವಾಗಿ ಮೋದಿಯವರು ಜಾಫ್ರಿಯವರನ್ನು ನಿಂದಿಸಿದರು ಎಂದು ಎಸ್.ಐ.ಟಿ.ಯ ಮುಂದೆ ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದಾರೆ. ಆದರೂ, ಎಸ್.ಐ.ಟಿ.ಯು ಈ ಕುರಿತು ಪ್ರಮಾಣ ಮಾಡಿ ಹೇಳಿದ ಸಾಕ್ಷ್ಯಗಳ ಬಗ್ಗೆ  ಮೋದಿಯವರನ್ನು ಪಾಟಿ ಸವಾಲಿಗೆ ಒಡ್ಡದಿರಲು ನಿರ್ಧರಿಸಿದಂತೆ ಕಾಣುತ್ತದೆ.

ಪ್ರಸ್ತುತ ರಜಾಕಾಲದ ಪೀಠದ ತೀರ್ಪು ಹಿಂದಿನ ಸಮಸ್ತ ನ್ಯಾಯಾಂಗ ತೀರ್ಪುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ ಮತ್ತು ತಿರಸ್ಕರಿಸುತ್ತದೆ. ಆದ್ದರಿಂದ ಇಲ್ಲಿ ನ್ಯಾಯ ಪ್ರಕ್ರಿಯೆಯ ಗರ್ಭಪಾತವಾಗಿದೆ ಎಂದೇ ಹೇಳಬೇಕಾಗುತ್ತದೆ. ತೀಸ್ತಾ ಮತ್ತು ಶ್ರೀಕುಮಾರ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಸಂವಿಧಾನ  ಸ್ಥಾಪಿಸಿರುವ ಸ್ವತಂತ್ರ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಪಾವಿತ್ರ‍್ಯತೆಯನ್ನು ಎತ್ತಿಹಿಡಿಯಬೇಕು ಮತ್ತು ಬಲಪಡಿಸಬೇಕು. ನ್ಯಾಯ ನೀಡಿಕೆಯಲ್ಲಿ ಇಂತಹ ಅಘಾತಕಾರಿ ಗರ್ಭಪಾತಗಳು ಸಂಭವಿಸುವ ಸ್ಥಿತಿ ಇರಲು ಸಾಧ್ಯವಿಲ್ಲ ಮತ್ತು ಇರಬಾರದು.

ಅನು: ಆರ್. ರಾಮಕೃಷ್ಣ

Donate Janashakthi Media

Leave a Reply

Your email address will not be published. Required fields are marked *