ಹಿಜಾಬ್ ವಿವಾದ: ಕರ್ನಾಟಕದ ನಡೆಯನ್ನು ಟೀಕಿಸಿದ ಅಮೆರಿಕ ಹೇಳಿದ್ದು ಹೀಗೆ.

ಹೊಸದಿಲ್ಲಿ: ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂಬ ಮುಸ್ಲಿಂ ವಿದ್ಯಾರ್ಥಿಗಳ ಬೇಡಿಕೆಯ ನಡುವೆಯೇ ಕರ್ನಾಟಕ ಸರಕಾರದ ನಡೆಯನ್ನು ಅಮೆರಿಕ ಟೀಕಿಸಿದೆ. ವಿದೇಶಗಳ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಿಗಾ ವಹಿಸುವ ಮತ್ತು ವರದಿ ಮಾಡುವ ಅಮೆರಿಕ ಸರ್ಕಾರಿ ಸಂಸ್ಥೆ ಈ ಟೀಕೆ ಮಾಡಿದೆ.

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿರುವ ರಶಾದ್​ ಹುಸೈನ್​ ಅವರು ಕರ್ನಾಟಕದ ಹಿಜಾಬ್​ ವಿವಾದದ ಕುರಿತು ಟ್ವೀಟ್​ ಮಾಡಿದ್ದಾರೆ. ಶಾಲೆಗಳಲ್ಲಿ ಹಿಜಾಬ್​ ನಿಷೇಧಿಸುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘನೆಯಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಭಾರತದ ಕರ್ನಾಟಕ ರಾಜ್ಯವು ಧಾರ್ಮಿಕ ಉಡುಪುಗಳ ಅನುಮತಿಯನ್ನು ನಿರ್ಧರಿಸಬಾರದು. ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಮಹಿಳೆಯರು ಮತ್ತು ಹುಡುಗಿಯರನ್ನು ಕಡೆಗಣಿಸಿದಂತಾಗುತ್ತದೆ ಎಂದು ಟೀಕಿಸಿದ್ದಾರೆ.

ರಶಾದ್‌ ಹುಸೇನ್ ಅವರು ರಾಯಭಾರಿಯಾಗಿರುವ ದಿ ಮಿನಿಸ್ಟೇರಿಯಲ್‌ ಟು ಅಡ್ವಾನ್ಸ್‌ ರಿಲಿಜಿಯಸ್‌ ಫ್ರೀಡಂ ಸಚಿವಾಲಯವು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಇಲಾಖೆ ಅಡಿಯಲ್ಲಿ ಬರುತ್ತದೆ. ಈ ಹಿಂದೆಯೂ ಇದು ಭಾರತದಲ್ಲಿನ ಕೋಮು ಉದ್ವಿಗ್ನತೆಗಳ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಿತ್ತು.

ಇದನ್ನೂ ಓದಿ : ಶಾಲು-ಹಿಜಾಬ್​ ಧರಿಸಿ ಶಾಲೆಗೆ ಹೋಗುವಂತಿಲ್ಲ: ಹೈಕೋರ್ಟ್ ಮಧ್ಯಂತರ ಆದೇಶ – ಮುಂದಿನ ವಿಚಾರಣೆ ಫೆ.14ಕ್ಕೆ

ಹಿಜಾಬ್‌ ವಿವಾದದ ಬಗ್ಗೆ ಹುಸೇನ್ ನೀಡಿರುವ ಪ್ರತಿಕ್ರಿಯೆಗೆ ಭಾರತ ಇನ್ನೂ ಯಾವುದೇ ಪ್ರತ್ಯುತ್ತರ ನೀಡಿಲ್ಲ. ರಶಾದ್‌ ಹುಸೇನ್ ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಮೆರಿಕದ ಸೆನೆಟ್‌ ಐಆರ್‌ಎಫ್‌ ರಾಯಭಾರಿಯಾಗಿ ನೇಮಿಸಿತ್ತು. ಅವರು ಐಆರ್‌ಎಫ್‌ನ ಮೊದಲ ಮುಸ್ಲಿಂ ರಾಯಭಾರಿಯಾಗಿದ್ದಾರೆ. ಈ ಹಿಂದೆ ಒಬಾಮಾ ಆಡಳಿತದಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆಯ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಮೆರಿಕ ಸರ್ಕಾರದಲ್ಲಿ ಹಲವಾರು ಉನ್ನತ ಮಟ್ಟದ ಹುದ್ದೆಗಳನ್ನು ಅವರು ಈ ಹಿಂದೆ ನಿಭಾಯಿಸಿದ್ದರು.

ರಾಜ್ಯದ ಹಿಜಾಬ್‌ ವಿವಾದ ಹೈಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ವಿಚಾರಣೆ ಮುಗಿಯುವವರೆಗೆ ಶಾಲೆ-ಕಾಲೇಜುಗಳನ್ನು ಮುಚ್ಚುವ ಸಂದಿಗ್ಧ ಸ್ಥಿತಿಗೆ ಕರ್ನಾಟಕ ತಲುಪಿದೆ. ಹಿಜಾಬ್ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು  ಫೆ 14 ಕ್ಕೆ (ಸೋಮವಾರ) ಪುನರಾರಂಭಿಸುವುದಾಗಿ ಕರ್ನಾಟಕ ಹೈಕೋರ್ಟ್ ಹೇಳಿದೆ. ಇದಕ್ಕೂ ಮೊದಲು ಗುರುವಾರ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್‌, ಅಂತಿಮ ತೀರ್ಪಿಗೂ ಮುನ್ನ ಶಿಕ್ಷಣ ಸಂಸ್ಥೆಗಳ ಒಳಗೆ ಶಾಲು ಅಥವಾ ಹಿಜಾಬ್ ಯಾವುದೇ ಧಾರ್ಮಿಕ ಉಡುಗೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿತ್ತು.

 

Donate Janashakthi Media

Leave a Reply

Your email address will not be published. Required fields are marked *