ರೈತ ನಾಯಕ ಯು. ಬಸವರಾಜು ಬಂಧನ : ಬೇಷರತ್‌ ಬಿಡೆಗಡೆಗೆ ರೈತರ ಆಗ್ರಹ

ಕಲಬುರ್ಗಿ : ಓರಿಯಂಟ್ ಸಿಮೆಂಟ್ ಕಂಪನಿಯ ಭೂ ಕಬಳಿಕೆ ವಿರುದ್ಧ ರೈತರಿಗೆ ರಕ್ಷಣೆ ನೀಡುವಂತೆ ಗುಲ್ಬರ್ಗದಲ್ಲಿ ಪ್ರತಿಭಟಿಸುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜು ಮತ್ತು ಇತರ 33 ರೈತ ಮುಖಂಡರ, ರೈತ ಪ್ರತಿಭಟನಾಕಾರರ ಬಂಧನ ಕಾನೂನು ಬಾಹಿರ ಹಾಗೂ ಅನ್ಯಾಯ ಪ್ರತಿಭಟಿಸುವ ಹಕ್ಕಿನ ಮೇಲೆ ನಡೆದ ಧಾಳಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.

ಭೂ ಸ್ವಾಧೀನ ಕಾಯ್ದೆ ಉಲ್ಲಂಘಿಸಿ ಆಕ್ರಮವಾಗಿ ಕೃಷಿ ಭೂಮಿಯನ್ನು ಕಬಳಿಸಿದ್ದರಿಂದ ಸಂತ್ರಸ್ತರಾಗಿರುವ ರೈತರಿಗೆ ನ್ಯಾಯ ಒದಗಿಸಬೇಕೆಂದು ಚಿತ್ತಾಪುರ ತಾಲೂಕಿನ ಇಟಗಾ ಗ್ರಾಮದಿಂದ ಗುಲ್ಬರ್ಗ ಜಿಲ್ಲಾಧಿಕಾರಿ ಕಛೇರಿಯವರೆಗೂ ಪಾದಯಾತ್ರೆಯ ಪ್ರತಿಭಟನೆಗೆ ಯು. ಬಸವರಾಜು ರವರು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನೊಂದ ರೈತರ ಅಹವಾಲು ಕೇಳದೇ ಗುಲ್ಬರ್ಗ ಜಿಲ್ಲಾಧಿಕಾರಿ ಅಹಂಕಾರದಿಂದ ವರ್ತಿಸಿ, ಹೋರಾಟ ನಿರತ ರೈತರನ್ನು ಬಂಧಿಸಲು ಪೊಲೀಸರನ್ನು ಛೂ ಬಿಟ್ಟಿರುವುದು ಸರ್ವಾಧಿಕಾರಿ ಅಹಂಕಾರದ ನಗ್ನ ಪ್ರದರ್ಶನ ಮತ್ತು ಗಂಭೀರ ಕರ್ತವ್ಯ ಲೋಪ. ಅದ್ದರಿಂದ ಈ ಕೂಡಲೇ ಬಂಧಿತ ರೈತ ನಾಯಕರಾದ ಯು. ಬಸವರಾಜು, ಶರಣ ಬಸವ ಮಮಶೆಟ್ಟಿ, ಪಾಂಡುರಂಗ ಮಾವಿನಕೆರ್ ಸೇರಿದಂತೆ ಎಲ್ಲಾ 33 ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ನಮ್ಮದು ರೈತ ಪರ ಸರ್ಕಾರ ಎನ್ನುವ ಬಸವರಾಜು ಬೊಮ್ಮಾಯಿ ರವರು ಈ ಕೂಡಲೇ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ, ರೈತರ ನ್ಯಾಯಬದ್ದವಾದ ಅಹವಾಲುಗಳನ್ನು ಇತ್ಯಾರ್ಥ ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಬಂಧನಕ್ಕೆ ಒಳಗಾದವರಲ್ಲಿ ಎರಡು ದಿನದಿಂದ ಪಾದಯಾತ್ರೆ ನಡೆಸಿ ದಣಿದಿದ್ದ ಸಣ್ಣ ಮಕ್ಕಳ ತಾಯಂದಿರು ಸೇರಿದಂತೆ 20 ಮಹಿಳೆಯರು ಕೂಡ ಸೇರಿದ್ದಾರೆ. ಓರಿಯಂಟ್ ಕಂಪನಿಯ ದೌರ್ಜನ್ಯ ದಿಂದ ನೊಂದಿದ್ದ ಅಸಹಾಯಕ ರೈತರಿಗೆ ಸಾಂತ್ವನ ಹೇಳುವ ಬದಲು ಸಣ್ಣ ಮಕ್ಕಳು, ಮಹಿಳೆಯರು ಎಂಬುದನ್ನು ನೋಡದೇ ಪೊಲೀಸ್ ದೌರ್ಜನ್ಯ ನಡೆಸಿರುವುದು ಜಿಲ್ಲಾಧಿಕಾರಿ ಗಳು ಓರಿಯಂಟ್ ಸಿಮೆಂಟ್ ಕಂಪನಿಗೆ ಎಷ್ಟು ನಿಷ್ಠರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಜನರ ಹಿತ ಕಾಪಾಡಲು ಇರುವ ಜಿಲ್ಲಾಧಿಕಾರಿ ಅಧಿಕಾರವನ್ನು ಕಂಪನಿ ದೌರ್ಜನ್ಯ ಬೆಂಬಲಿಸಲು ಬಳಸುತ್ತಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿಗಳ ಈ ವರ್ತನೆ ಖಂಡನೀಯ. ಮಾನ್ಯ ಮುಖ್ಯಮಂತ್ರಿಗಳು, ಕೂಡಲೇ ಮಧ್ಯೆ ಪ್ರವೇಶಮಾಡಿ ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘವು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *