ನವದೆಹಲಿ: ಶಿಕ್ಷಣವೆಂಬುದು ಲಾಭಗಳಿಸುವ ವ್ಯವಹಾರವಲ್ಲ ಮತ್ತು ಬೋಧನಾ ಶುಲ್ಕಗಳು ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಖಾಸಗಿ ಅನುದಾನರಹಿತ ವೈದ್ಯಕೀಯ ಕಾಲೇಜುಗಳಲ್ಲಿ ವಾರ್ಷಿಕ ಬೋಧನಾ ಶುಲ್ಕವನ್ನು ₹24 ಲಕ್ಷಕ್ಕೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಂಧ್ರ ಪ್ರದೇಶ ಹೈಕೋರ್ಟ್ ತಡೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ಎತ್ತಿಹಿಡಿದಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ ವಿಚಾರಣೆ ನಡೆಸಿ ಬೋಧನಾ ಶುಲ್ಕವನ್ನು ವರ್ಷಕ್ಕೆ ₹24 ಲಕ್ಷ ರೂ.ಗಳಿಗೆ ಶುಲ್ಕವನ್ನು ಹೆಚ್ಚಿಸುವುದು ಅಂದರೆ, ಮೊದಲು ನಿಗದಿಪಡಿಸಿದ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚು ಸಮರ್ಥನೀಯವಲ್ಲ.
2011ರಲ್ಲಿ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ 2017ರಲ್ಲಿ ನಿರ್ಧಾರ ಕೈಗೊಂಡಿತು. 2017ರ ಸೆಪ್ಟೆಂಬರ್‌ನಲ್ಲಿ ಹೊರಡಿಸಲಾದ ಸರ್ಕಾರಿ ಆದೇಶದ ಅನ್ವಯ ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ್ದ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸುವಂತೆ ವೈದ್ಯಕೀಯ ಕಾಲೇಜುಗಳಿಗೆ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಶುಲ್ಕದ ನಿರ್ಣಯ/ಶುಲ್ಕದ ಪರಿಶೀಲನೆಯು ನಿಗದಿತ ನಿಯಮಗಳ ನಿಯತಾಂಕಗಳೊಳಗೆ ಇರಬೇಕು ಮತ್ತು ವೃತ್ತಿಪರ ಸಂಸ್ಥೆಯ ಸ್ಥಳವನ್ನು ಒಳಗೊಂಡಿರುವ ನಿಯಮಗಳು, 2006 ರ ನಿಯಮ 4 ರಲ್ಲಿ ಉಲ್ಲೇಖಿಸಲಾದ ಅಂಶಗಳ ಮೇಲೆ ನೇರ ಸಂಬಂಧವನ್ನು ಹೊಂದಿರಬೇಕು. ಇವು ವೃತ್ತಿಪರ ಸಂಸ್ಥೆಯ ಸ್ಥಳವನ್ನು, ವೃತ್ತಿಪರ ಕೋರ್ಸ್ ಸ್ವರೂಪ, ಲಭ್ಯವಿರುವ ಮೂಲಸೌಕರ್ಯಗಳ ವೆಚ್ಚ, ಆಡಳಿತ ಮತ್ತು ನಿರ್ವಹಣೆಗೆ ಖರ್ಚು, ವೃತ್ತಿಪರ ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಸಮಂಜಸವಾದ ಹೆಚ್ಚುವರಿ ವೆಚ್ಚ ಸೇರಿದಂತೆ ಕಾಯ್ದಿರಿಸಿದ ವರ್ಗಕ್ಕೆ ಮತ್ತು ಸಮಾಜದ ಇತರ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಶುಲ್ಕವನ್ನು ಮನ್ನಾ ಮಾಡುವ ಕಾರಣದಿಂದಾಗಿ ಆದಾಯವನ್ನು ಬಿಟ್ಟುಬಿಡಲಾಗಿದೆ.
ಪ್ರವೇಶಾತಿ ಮತ್ತು ಶುಲ್ಕ ನಿಯಂತ್ರಣ ಸಮಿತಿಯು (ಎಎಫ್‌ಆರ್‌ಸಿ) ಈ ಹಿಂದೆ ನಿಗದಿಪಡಿಸಿದ್ದ ಬೋಧನಾ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಿದ್ದರೆ ಸಂಬಂಧಪಟ್ಟ ವಿದ್ಯಾರ್ಥಿಗಳಿಂದ ಆ ಮೊತ್ತವನ್ನು ಸಂಗ್ರಹಿಸಲು ವೈದ್ಯಕೀಯ ಕಾಲೇಜುಗಳು ಮುಕ್ತವಾಗಿರುತ್ತವೆ. ಆದರೆ, ಸಂಗ್ರಹಿಸಿದ ಮೊತ್ತ ಇರಿಸಿಕೊಳ್ಳಲು ಸಂಬಂಧಪಟ್ಟ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸರ್ಕಾರ ಹಾಗೂ ಅರ್ಜಿದಾರ ವೈದ್ಯಕೀಯ ಕಾಲೇಜಿಗೆ ತಲಾ ₹ 2.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ ದಂಡದ ಮೊತ್ತವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನಾ ಸಮಿತಿ(ಎಂಸಿಪಿಸಿ)ಗೆ ಪಾವತಿಸುವಂತೆ ಸೂಚಿಸಿತು.