ಟಿ ಎಸ್ ಗೊರವರ| ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’

– ರಾಜು ಹಗ್ಗದ

ಸಾಹಿತ್ಯ ಹುಲುಸಾದ ಫಸಲಿದ್ದಂತೆ. ಅದು ರೈತ ಬಿತ್ತಿ ಬೆಳೆದು ಫಲ ಪಡೆಯುವ ಬಗೆಬಗೆಯ ಬೆಳೆಗಳಂತೆ. ರೈತ ಬೆಳೆವ ಬೆಳೆಗಳು ಹೇಗೆ ಬೇರೆ ಬೇರೆಯಾಗಿರುತ್ತವೆಯೋ ಹಾಗೆ ನಮ್ಮ ಸಾಹಿತ್ಯದ ಪ್ರಕಾರಗಳೂ ಬಹಳ. ಒಂದಕ್ಕಿಂದ ಒಂದರ ರಚನಾ ವಿಧಾನ, ಬರಹದ ಶೈಲಿ, ಅನುಭವದ ಮೂಟೆ ಎಲ್ಲವೂ ಭಿನ್ನ ಭಿನ್ನವೇ. ಕತೆ, ಕಾದಂಬರಿ, ಕವಿತೆ, ಪ್ರಬಂಧಗಳು, ನಾಟಕ, ಬಿಡಿ ಲೇಖನಗಳನ್ನು ಓದಿರುವ ನನ್ನಂತಹ ಹೊಸ ತಲೆಮಾರಿನ ಸಾಹಿತ್ಯಾಸಕ್ತ ಓದುಗರಿಗೆ ಗದ್ಯಕವಿತೆಗಳು ಹೊಸ ಬೆಳೆಯಂತೆ ಗೋಚರಿಸುತ್ತವೆ. ಇಷ್ಟವೂ ಆಗುತ್ತವೆ. ಗೊರವರ

ಸಜ್ಜೆ, ಜೋಳ, ಹೆಸರು, ತೊಗರಿ, ಸೂರ್ಯಕಾಂತಿ ಬೆಳೆಗಳನ್ನೇ ಬೆಳೆಯುವ ನಮ್ಮ ಭಾಗದ ಸೀಮೆಯೊಂದರಲ್ಲಿ ರೈತನೊಬ್ಬ ರಾಗಿ ಬೆಳೆ ಬೆಳೆದರೆ! ಅಚ್ಚರಿಯ ಜೊತೆಗೆ ಆ ಬೆಳೆಯನ್ನು ನಮ್ಮ ಜಮೀನಿನಲ್ಲೂ ಬಿತ್ತಿ ತೆಗೆಯಬಹುದೇ ಎಂಬ ಕುತೂಹಲ ನಮ್ಮೊಳಗೆ ನೆಲೆಯೂರುತ್ತದೆ‌. ಅಂತಹ ಖುಷಿಯೇ ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’ ಗದ್ಯಕವಿತೆ ಓದಿದಾಗ ನನಗಾಯ್ತು.

ಈಗಾಗಲೇ ‘ಮಲ್ಲಿಗೆ ಹೂವಿನ ಸಖ’, ‘ಕುದುರಿ ಮಾಸ್ತರ’, ‘ಭ್ರಮೆ’, ‘ರೊಟ್ಟಿ ಮುಟಗಿ’, ‘ಆಡು ಕಾಯೋ ಹುಡುಗನ ದಿನಚರಿ’ ಕೃತಿಗಳ ಮೂಲಕ ಪರಿಚಿತರಾದ ಟಿ ಎಸ್ ಗೊರವರ ಅವರ ಮತ್ತೊಂದು ಹೊಸ ಭಾವದ ಮಜಲೇ ಗದ್ಯ ಕವಿತೆಗಳ ಸಂಗ್ರಹವಾದ ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’ ಕೃತಿ.

ಭಾವತೀವ್ರತೆ, ರೂಪಕಗಳ ಬಳಕೆ, ಭಾವನಾತ್ಮಕ ಮಿಡಿತ, ಬಾಲ್ಯದ ಬಹುಪಾಲು ಬೆರಗುಗೊಳಿಸುವ, ಸಂಕಟಕ್ಕೀಡು ಮಾಡುವ ನೆನಪುಗಳ, ಕಳೆದುಕೊಂಡ ಮೂಖ ಪ್ರಾಣಿಯ ಭಾವನಾತ್ಮಕ ನೆನಪು, ಕರುಳಕುಡಿಯ ಅಗಲಿ ದೂರವಿರಬೇಕಾದ ಅನಿವಾರ್ಯತೆಯ ಸಂಕಟದ ಭಾವ ಹೀಗೆ ಮುಂಜಾನೆಯ ಎಳೆ ಬಿಸಿಲಿಗೆ ನಿಂತಾಗ ಮೈಮನಗಳೆರಡು ಪಡೆಯುವ ವಿಶೇಷ ಭಾವಸ್ಪರ್ಷದಂತೆ ಇಲ್ಲಿರುವ ಗದ್ಯಕವಿತೆಗಳು ಓದುಗರಿಗೆ ಹೊಸತನದ ಸಂತಸದ ನೀಡುತ್ತವೆ. ಗೊರವರ

ಇದನ್ನೂ ಓದಿ : ಪುಸ್ತಕ ವಿಮರ್ಶೆ | ʼಮರಕುಂಬಿ ಚಾರಿತ್ರಿಕ ತೀರ್ಪುʼ ಪ್ರಕರಣದ ಕುರಿತು ತಿಳಿಯಬೇಕಾದರೆ ಈ ಪುಸ್ತಕ ಓದಬೇಕು

‘ಬಿಸಿಲಿಗೆ ಒಣ ಹಾಕಿದ ಆತ್ಮ’ ಗದ್ಯ ಕವಿತೆಯ ‘ನನ್ನೊಳಗೆ ನಾ ನೋಡಿಕೊಂಡೆ. ನುಸಿಗಳಂತೆ ಪ್ರಮಾದಗಳು ಮುಲುಕಾಡತೊಡಗಿದ್ದವು. ಆತ್ಮವನು ಕಿತ್ತು ಬಿಸಿಲಿಗೆ ಒಣ ಹಾಕಿದೆ.’ ಎಂಬ ಸಾಲು ಬಹಳ ಕಾಡಿತು, ಇಷ್ಟವೂ ಆಯ್ತು. ‘ಮಗಳೆ, ಇಷ್ಟೆಲ್ಲ ಒಂದು ರೊಟ್ಟಿಗಾಗಿ’, ‘ತಮ್ಮನಂತಿದ್ದ ‘ರಾಜ’ನನ್ನು ನೆನೆಯುತ್ತಾ….’ ಬಹಳ ಕಾಡಿದ ಗದ್ಯಕವಿತೆಗಳು. ‘ಪೋಸ್ಟ್ ಮಾಡು ನಿನ್ನ ನೀಳ ಕೂದಲೊಂದು’, ‘ಅವಳ ವಿಳಾಸ ಸಿಕ್ಕಿತು’, ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’ ಪ್ರೇಮಕಾವ್ಯದಂತೆ ಸುಂದರ ರೂಪಕಗಳನು ಹೊತ್ತ ಕವಿತೆಗಳು. ಹೀಗೆ ಭಿನ್ನ ಭಿನ್ನ ಬಿಡಿಬಿಡಿ ಚೂರು ಚೂರು ಕಲರ್ ಕಲರ್ ಬಣ್ಣದ ಹಾಳೆಗಳನ್ನು ಮಕ್ಕಳೆದುರು ಸುರುವಿದಾಗ ಅವರ ಕಂಗಳಲ್ಲಿ, ಮುಖದಲ್ಲಿ ಮೂಡುವ ಭಾವಲಹರಿಯಂತೆ ಇಲ್ಲಿಯ ಬರಹಗಳು ಓದುಗರನ್ನು ಆವರಿಸಿಕೊಂಡು ಹೊಸತನದ ಖುಷಿಯನ್ನು ನೀಡುತ್ತವೆ.

ಲೇಖಕರು ಮುನ್ನುಡಿಯಲ್ಲಿ ಹೇಳಿದಂತೆ ‘ಕಾವ್ಯದ ಲಯ, ಕಲಾತ್ಮಕತೆ, ಅದರ ಚೆಲುವು ಮತ್ತು ಗದ್ಯದ ಕುಸುರಿತನ ಮಿಳಿತಗೊಳಿಸಿ ಬರೆದ ರಚನೆಗಳು ಇಲ್ಲಿವೆ’. ಲೇಖಕರ ಅನುಭವದ ಮೂಸೆಯಲ್ಲಿ ಮೂಡಿಬಂದ ಈ ಹೊಸತನದ ಗದ್ಯಕವಿತೆಗಳು ನಿಜಕ್ಕೂ ಓದುಗರಿಗೆ ಹೊಸತನದ ಖುಷಿಯನ್ನು ಕೊಡುತ್ತವೆ. ಹೊಸ ತಲೆಮಾರಿನ ಯುವ ಬರಹಗಾರರು ಹಾಗೂ ಓದುಗರು ಓದಲೇಬೇಕಾದ ಕೃತಿ. ಹೊಸ ಬರಹಗಾರರು ಇಂತಹ ಹೊಸ ಸಾಹಿತ್ಯ ಪ್ರಕಾರವನ್ನು ರಚಿಸಿದರೆ ಅವರ ಸಾಹಿತ್ಯದ ಫಸಲು ಹುಲುಸಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ.

ಒಂದೇ ಬಾರಿಗೆ ಓದಿ ಮುಗಿಸಿದಾಗ ಮೂಡಿದ ಭಾವವಿಷ್ಟು. ಮತ್ತೆ ಮತ್ತೆ ಓದಿ ಖುಷಿಪಡುವೆ. ಮಗುವಿನ ನಗುವಿನಲ್ಲಿರುವ ಸಣ್ಣ ಕೇಕೆಯ ಧ್ವನಿಯಂತೆ ಇಲ್ಲಿಯ ಪ್ರತಿ ಕವಿತೆಯೂ ನನಗೆ ಆನಂದ ನೀಡಿವೆ. ಪದೇ ಪದೇ ಓದಿ ನಮ್ಮನ್ನು ನಾವು ಕಂಡುಕೊಳ್ಳಬೇಕಾದ ಕವಿತೆಗಳು ಇಲ್ಲಿವೆ. ಗೊರವರ

ಇದನ್ನೂ ನೋಡಿ : ಸವಿತಕ್ಕ ಜೊತೆ ಸಂಕ್ರಾಂತಿ ಸುಗ್ಗಿ ಹಾಡು, ಒಂದಿಷ್ಟು ಮಾತುJanashakthi Media

Donate Janashakthi Media

Leave a Reply

Your email address will not be published. Required fields are marked *