ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ? | ಭಾಗ – 01

ವಸಂತರಾಜ ಎನ್.ಕೆ

ಟ್ರಂಪ್ ಮಾಧ್ಯಮಗಳ ಸಮೀಕ್ಷೆಗಳನ್ನು ಸುಳ್ಳಾಗಿಸಿ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ರಿಪಬ್ಲಿಕನ್ ಪಕ್ಷ ದೀರ್ಘ ಅವಧಿಯ ನಂತರ ಅಧ್ಯಕ್ಷರ, ಮತ್ತು ಕಾಂಗ್ರೆಸ್ ನ (ಸೆನೆಟ್ ಮತ್ತು )ಎರಡೂ ಸದನಗಳಲ್ಲಿ ಬಹುಮತ ಗೆದ್ದಿದೆ. ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರೂ, ಟ್ರಂಪ್ ಬೆಂಬಲಿಸುವ ‘ಮಗ’ (Make America Great Again) ಚಳುವಳಿಯ ವಿಜಯವೂ ಇದಾಗಿದೆ. ಹೀಗೇಕಾಯಿತು ? ಡೆಮೊಕ್ರಾಟಿಕ್ ಮತದಾರರರು, ಅಲ್ಪಸಂಖ್ಯಾತರು ಬಲಪಂಥಕ್ಕೆ ತಿರುಗಿದರೆ ? ಜನಾಂಗ-ದ್ವೇಷ, ಸ್ತ್ರೀ ದ್ವೇಷ, ಪ್ರತಿಗಾಮಿ ನಿಲುವುಗಳಿಗೆ ಕುಪ್ರಸಿದ್ಧವಾದ ‘ಮಗ’ಕ್ಕೆ ಜನ ಯಾಕೆ ಮನ್ನಣೆ ಕೊಟ್ಟರು? ಇದನ್ನು ಪರಿಶೀಲಿಸುವ ಎರಡು ಭಾಗಗಳಲ್ಲಿರುವ ಲೇಖನ. ಮೊದಲ ಬಾಗದಲ್ಲಿ ಚುನಾವಣಾ ಫಲಿತಾಂಶದ ವಿವರಗಳು ಇದ್ದರೆ, ಎರಡನೇ ಭಾಗದಲ್ಲಿ ಟ್ರಂಪ್ ಮತ್ತು ‘ಮಗ’ ಚಳುವಳಿಯ ಗೆಲುವಿನ ಕಾರಣಗಳನ್ನು ವಿಶ್ಲೇಷಿಸಲಾಗಿದೆ.

ಇಡೀ ಜಗತ್ತೇ ಕಾತುರದಿಂದ ಎದುರು ನೋಡುತ್ತಿದ್ದ ಯು.ಎಸ್ ಅಧ್ಯಕ್ಷೀಯ ಚುನಾವಣೆಗಳ ಫಲಿತಾಂಶ ಘೋಷಣೆಯಾಗಿದೆ. ತೀರಾ ಅನಿರೀಕ್ಷಿತವಲ್ಲದಿದ್ದರೂ, ಬಹಳ ಬಿರುಸಿನ ಸ್ಪರ್ಧೆ ಎಂದು ಮಾಧ್ಯಮಗಳು ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಡೊನಾಲ್ಡ್ ಟ್ರಂಪ್ ಸಾಕಷ್ಟು ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಸಂವಿಧಾನ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಿ – ಎದ್ದೇಳು ಕರ್ನಾಟಕ ಆಗ್ರಹ

ಯು.ಎಸ್ ಅಧ್ಯಕ್ಷೀಯ ಚುನಾವಣೆಗಳಲ್ಲಿ ಜನ ನೇರವಾಗಿ ಮತ ಹಾಕಿದರೂ, ಕೊನೆಗೆ ಚುನಾವಣೆ ಒಂದು ರೀತಿಯಲ್ಲಿ ಪರೋಕ್ಷ ಚುನಾವಣೆಯೇ. ಯಾಕೆಂದರೆ ಅವರು ಚುನಾಯಿಸುವುದು ‘ಇಲೆಕ್ಟೊರಲ್ ಕಾಲೇಜಿ’ಗೆ ಪ್ರತಿನಿಧಿಗಳನ್ನು ಮಾತ್ರ. (ವಿವರಗಳಿಗೆ ‘ಯು.ಎಸ್ ಅಧ್ಯಕ್ಷೀಯ ಚುನಾವಣಾ ಪದ್ಧತಿ’ ಬಾಕ್ಸ್ ನೋಡಿ) ಈ ‘ಇಲೆಕ್ಟೊರಲ್ ಕಾಲೇಜಿ’ಗೆ ಆಯ್ಕೆ ಯಾಗುವ 538 ಪ್ರತಿನಿಧಿಗಳು ಅಧ್ಯಕ್ಷರನ್ನುಆಯ್ಕೆ ಮಾಡುತ್ತಾರೆ. ಟ್ರಂಪ್ 538ರಲ್ಲಿ 312 ಪ್ರತಿನಿಧಿಗಳನ್ನು ಗೆದ್ದುಕೊಂಡಿದ್ದಾರೆ.

ಕಮಲಾ ಹ್ಯಾರಿಸ್ ಕೇವಲ 226 ಪ್ರತಿನಿಧಿ ಗೆದ್ದಿದ್ದಾರೆ. ಟ್ರಂಪ್ ಒಟ್ಟು ಮತದಾನದಲ್ಲಿ ಸಹ ಶೇ.50.5 (ಮತ 7.46 ಕೋಟಿ) ಮತ ಪಡೆದು, ಕಮಲಾ ಹ್ಯಾರಿಸ್ (ಶೇ.48, ಮತ 7.09 ಕೋಟಿ) ಸಾಕಷ್ಟು ಅಂತರ (ಶೇ. 2.5 ಮತ್ತು 37 ಲಕ್ಷ ಮತ) ದಿಂದ ಸೋಲಿಸಿದ್ದಾರೆ. ಯು.ಎಸ್ ನ 50 ರಾಜ್ಯಗಳಲ್ಲಿ 31 ರಾಜ್ಯಗಳಲ್ಲಿ ಗೆದ್ದಿದ್ದಾರೆ. ಯು.ಎಸ್ ನಲ್ಲಿ ಹೆಚ್ಚು ಕಡಿಮೆ ಎರಡು ರಾಜಕೀಯ ಪಕ್ಷಗಳ ವ್ಯವಸ್ಥೆ ಜಾರಿಯಲ್ಲಿದೆ. ಸಂವಿಧಾನದಲ್ಲಿ ಹೆಚ್ಚಿನ ಪಕ್ಷಗಳಿಗೆ ಅವಕಾಶವಿದ್ದರೂ, ಕಳೆದ ಹಲವು ದಶಕಗಳಿಂದ ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್ ಪಕ್ಷಗಳು ಮಾತ್ರ ಪ್ರಧಾನ ಪಕ್ಷಗಳಾಗಿವೆ.

ಈ 50 ರಾಜ್ಯಗಳಲ್ಲಿ 43 ರಾಜ್ಯಗಳು ರಿಪಬ್ಲಿಕನ್ ಅಥವಾ ಡೆಮೊಕ್ರಾಟಿಕ್ ರಾಜ್ಯಗಳ ಪ್ರಬಲ ನೆಲೆಗಳು ಎಂದು ಗುರುತಿಸಲ್ಪಡುತ್ತವೆ. ಹೆಚ್ಚು ಕಡಿಮೆ ಯಾವಾಗಲೂ ಡೆಮೊಕ್ರಾಟಿಕ್ ಪಕ್ಷಕ್ಕೆ ಬಹುಮತ ನೀಡುವ ರಾಜ್ಯಗಳನ್ನು ಜತೆಗೆ ಕೊಟ್ಟಿರುವ ಮ್ಯಾಪ್ ನಲ್ಲಿ ನೀಲಿಯಲ್ಲಿ ಗುರುತಿಸಲಾಗಿದೆ. ಹೆಚ್ಚಿನ ಕೈಗಾರಿಕೀಕರಣಗೊಂಡ, ನಗರೀಕರಣಗೊಂಡ, ಬಹು-ಜನಾಂಗೀಯ ಮತ್ತು ನಿಬಿಡ ಜನಸಂಖ್ಯೆಯಿರುವ ಪಶ್ಚಿಮ ಕರಾವಳಿ, ಉತ್ತರ-ಪೂರ್ವದ ರಾಜ್ಯಗಳಲ್ಲಿ ಡೆಮೊಕ್ರಾಟಿಕ್ ಪಕ್ಷ ಪ್ರಬಲವಾಗಿದೆ. ಉಳಿದ ಪ್ರದಾನವಾಗಿ ಬಿಳಿಯರಿರುವ ಬಹುಭಾಗ ಗ್ರಾಮೀಣ ಪ್ರದೇಶವಾಗಿರುವ ದಕ್ಷಿಣ, ದಕ್ಷಿಣ-ಮಧ್ಯ ಮತ್ತು ಮಧ್ಯ ರಾಜ್ಯಗಳಲ್ಲಿ ರಿಪಬ್ಲಿಕನ್ ರಾಜ್ಯಗಳ ಪ್ರಬಲ ನೆಲೆಗಳನ್ನು ಮ್ಯಾಪ್ ನಲ್ಲಿ ಕೆಂಪಿನಲ್ಲಿ ಗುರುತಿಸಲಾಗಿದೆ.

ಅಧ್ಯಕ್ಷೀಯ ಚುನಾವಣೆ 2024

ಉಳಿದ 7 ‘ಹೊಯ್ದಾಡುವ’ (ಸ್ವಿಂಗ್) ಅಥವಾ ‘ಸೆಣಸಾಟ’ದ (ಬ್ಯಾಟಲ್ ಗ್ರೌಂಡ್) ರಾಜ್ಯಗಳು (ಉತ್ತರದಲ್ಲಿರುವ ಮಿಷಿಗನ್, ಪೆನ್ಸಿಲ್ವೇನಿಯ, ವಿಸ್ಕೊನ್ಸಿನ್, ದಕ್ಷಿಣದಲ್ಲಿರುವ ಅರಿಝೋನಾ, ನೆವಾಡಾ, ಮಧ್ಯ ಪೂರ್ವದಲ್ಲಿರುವ ಉತ್ತರ ಕೆರೊಲಿನಾ, ಜಾರ್ಜಿಯ) ಎಂದು ಕರೆಯಲಾಗುತ್ತದೆ. ಈ 7 ರಾಜ್ಯಗಳಲ್ಲಿ ಬಹುಪಾಲು ರಾಜ್ಯಗಳನ್ನು ಗೆದ್ದವರು ಅಧ್ಯಕ್ಷರಾಗುತ್ತಾರೆ.

ಟ್ರಂಪ್ ಈ ಬಾರಿ ಎಲ್ಲಾ 7 ರಾಜ್ಯಗಳನ್ನು ಗೆದ್ದಿದ್ದಾರೆ. ಕಳೆದ ಬಾರಿಗೆ ಬಿಡೆನ್ 7ರಲ್ಲಿ 4 ಗೆದ್ದಿದ್ದರು. 2016ರಲ್ಲಿ ಟ್ರಂಪ್ 7 ರಲ್ಲಿ 3 ಗೆದ್ದಿದ್ದರು. ಈ ರಾಜ್ಯಗಳನ್ನು
ಪ್ರತ್ಯೇಕ ಮ್ಯಾಪ್ ನಲ್ಲಿ ಗುರುತಿಸಲಾಗಿದೆ.

ಅಧ್ಯಕ್ಷೀಯ ಚುನಾವಣೆಗಳ ಜತೆ ನಡೆದ ಕಾಂಗ್ರೆಸ್ (ಪಾರ್ಲಿಮೆಂಟ್) ನ ಎರಡೂ ಸದನಗಳಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಪಡೆದಿದೆ. ಕೆಳಸದನ (ಪ್ರತಿನಿಧಿ
ಸಭೆ ಅಥವಾ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ – ನಮ್ಮ ಲೋಕಸಭೆಯಂತೆ) ನ 435 ಸೀಟುಗಳಲ್ಲಿ ರಿಪಬ್ಲಿಕನ್ ಪಕ್ಷ 2 ಸೀಟು ಕಳೆದುಕೊಂಡರೂ 220 ಸೀಟು ಪಡೆದು ಬಹುಮತ ಉಳಿಸಿಕೊಂಡಿದೆ. ಡೆಮೊಕ್ರಾಟಿಕ್ ಪಕ್ಷ 1 ಸೀಟು ಕಳೆದುಕೊಂಡು 212 ಸೀಟು ಪಡೆದಿದೆ. ಉಳಿದವನ್ನು ಇತರ ಪಕ್ಷಗಳು ಮತ್ತು ಪಕ್ಷೇತರರು ಗೆದ್ದಿದ್ದಾರೆ.

ಕೆಳಸದನ (ಪ್ರತಿನಿಧಿ ಸದನ) 2024

ಮೇಲು ಸದನವಾದ 100 ಸೀಟುಗಳ ಸೆನೆಟ್ (ನಮ್ಮ ರಾಜ್ಯಸಭಾ ದಂತೆ) ನ 34 ಸೀಟುಗಳಿಗೆ ಚುನಾವಣೆ ನಡೆದಿತ್ತು (ಪ್ರತಿ 2 ವರ್ಷಕ್ಕೊಮ್ಮೆ 1/3 ಸೀಟುಗಳಿಗೆ ಚುನಾವಣೆ ನಡೆಯುತ್ತದೆ) ಅದರಲ್ಲಿ 4 ಹೆಚ್ಚಿನ ಸೀಟು ಗೆದ್ದು 53 ಸೀಟು ಪಡೆದು ರಿಪಬ್ಲಿಕನ್ ಪಕ್ಷ ಬಹುಮತ ಪಡೆದಿದೆ. ಡೆಮೊಕ್ರಾಟಿಕ್ ಪಕ್ಷ 3 ಸೀಟು ಕಳೆದುಕೊಂಡು 44 ಕ್ಕೆ ಇಳಿದಿದೆ. ಉಳಿದವಲ್ಲಿ ಇತರ ಪಕ್ಷಗಳು ಮತ್ತು ಪಕ್ಷೇತರರು ಗೆದ್ದಿದ್ದಾರೆ. ಕಳೆದ ಸೆನೆಟ್ ನಲ್ಲಿ 4 ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ಡೆಮೊಕ್ರಾಟಿಕ್ ಪಕ್ಷಕ್ಕೆ ಬಹುಮತವಿತ್ತು.

ಸೆನೆಟ್ (ಮೇಲುಸದನ) 2024‌

ಯು.ಎಸ್ ಚುನಾವಣೆಗಳಲ್ಲಿ ಅಧ್ಯಕ್ಷ, ಕಾಂಗ್ರೆಸ್ ನ ಎರಡೂ ಸದನಗಳನ್ನು ಒಂದೇ ಪಕ್ಷ ಗೆಲ್ಲುವುದು ಅಪರೂಪ. ಮೂರರಲ್ಲಿ ಎರಡನ್ನು ಆಳುವ ಪಕ್ಷ ಗೆಲ್ಲುವುದು ಹೆಚ್ಚು ಸಾಮಾನ್ಯ. ಅದು ಅಧ್ಯಕ್ಷರ ಅಪರಿಮಿತ ಅಧಿಕಾರಕ್ಕೆ ಮೂಗುದಾರ ಹಾಕುತ್ತದೆಯಾದ್ದರಿಂದ ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವೆಂದು ಭಾವಿಸಲಾಗುತ್ತದೆ.

ಮೂರನ್ನು ಒಂದೇ ಪಕ್ಷ ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಲ್ಲವೆಂದು ಭಾವಿಸಲಾಗುತ್ತದೆ. ಈ ಬಾರಿ ಟ್ರಂಪ್ ನಾಯಕತ್ವದಲ್ಲಿ ಮೂರೂ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಸಾಧಿಸಿದೆ. ಯು.ಎಸ್ ನಲ್ಲಿ ನ್ಯಾಯಾಂಗವನ್ನೂ ಕಾಂಗ್ರೆಸ್ ನೇಮಿಸುವುದರಿಂದ ಸುಪ್ರೀಂ ಕೋರ್ಟು ನ್ಯಾಯಾಧೀಶರನ್ನು ಆಯಾ ಪಕ್ಷದವರು ಎಂದು ಹೇಳಲಾಗುತ್ತದೆ. ಈಗ ಸುಪ್ರೀಂ ಕೋರ್ಟು ನ್ಯಾಯಾಧೀಶರಲ್ಲಿ ರಿಪಬ್ಲಿಕನ್ ಬಹುಮತವಿದೆ. ಹಾಗಾಗಿ ರಿಪಬ್ಲಿಕನ್ ಪಕ್ಷಕ್ಕೆ ಮೂರೂ ಅಂಗಗಳಲ್ಲಿ ಬಹುಮತವಿದ್ದು ಪ್ರಭುತ್ವದ ಮೇಲೆ ಸಮಗ್ರ ನಿಯಂತ್ರಣ ಹೊಂದಿದೆ.

ಜಗತ್ತಿನ ಎಲ್ಲೆಡೆ ಮತ್ತು ಯು.ಎಸ್ ನಲ್ಲೂ ಚುನಾವಣೆಗಳನ್ನು ಬಹುವಾಗಿ ಪ್ರಭಾವಿಸುವ ಮತ್ತು ಅದರ ಭಾಗವೇ ಆಗಿರುವ ಮತದಾನ- ಪೂರ್ವ ಸಮೀಕ್ಷೆಗಳ ಬಗ್ಗೆ ಒಂದು ಮಾತು ಹೇಳಬೇಕು. ಬೈಡನ್ ಡೆಮೊಕ್ರಾಟಿಕ್ ಸ್ಪರ್ಧಿ ಆಗಿರುವ ವರೆಗೆ ಪ್ರಕಟವಾದ ಸಮೀಕ್ಷೆಗಳು ಟ್ರಂಪ್ ಮುಂದಿದ್ದಾರೆ ಅಂದಿದ್ದರೂ, ಕಮಲಾ ಹ್ಯಾರಿಸ್ ಸ್ಪರ್ಧೆಗೆ ಬಂದ ಮೇಲೆ ಎರಡನೆ ಹಂತದಲ್ಲಿ ಅವರು ಟ್ರಂಪ್ ಗಿಂತ ಮುಂದಿದ್ದಾರೆ ಎಂದು ಹೆಚ್ಚಿನ ಸಮೀಕ್ಷೆಗಳು ಹೆಚ್ಚಾಗಿ ಹೇಳಿದ್ದವು. ಚುನಾವಣಾ ದಿನ ಹತ್ತಿರ ಬಂದಂತೆ ತೀವ್ರ ಪೈಪೋಟಿ/ಸೆಣಸಾಟ ಇದೆ, ಆದರೆ ಕಮಲಾ ಒಟ್ಟಾರೆಯಾಗಿ ಮತ್ತು ಹೊಯ್ದಾಡುವ/ಸೆಣಸಾಟದ 7 ರಾಜ್ಯಗಳಲ್ಲಿ ಸಹ ಕನಿಷ್ಠ 4 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಿದ್ದವು.

ಇದನ್ನೂ ಓದಿ: ಮಂಡ್ಯ| ದೇಗುಲದೊಳಗೆ ದಲಿತರು ಪ್ರವೇಶಿಸಿದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ್ರು

ಕೆಲವು ಸಮೀಕ್ಷೆಗಳು, ಇಬ್ಬರ ಅಂತರ ಸಮೀಕ್ಷೆಯ ವಿಧಾನದ ತಪ್ಪಿನ ಸಾಧ್ಯತೆಯೊಳಗೆ ಇದ್ದು ಏನೂ ಹೇಳುವಂತಿಲ್ಲ ಎಂದಿದ್ದವು. ಯಾವ ಸಮೀಕ್ಷೆಯೂ ಹೊಯ್ದಾಡುವ/ಸೆಣಸಾಟದ ಎಲ್ಲ 7 ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸುತ್ತಾರೆ ಎಂದಿರಲಿಲ್ಲ. ಹೀಗೆ ಈ ಮಾಧ್ಯಮ ಸಂಸ್ಥೆಗಳು ಮತ್ತು ಅವುಗಳ ಸಮೀಕ್ಷೆಗಳು ಮತ್ತೆ ಟೀಕೆ/ಅಪಹಾಸ್ಯಕ್ಕೆ ಒಳಗಾಗಿವೆ. ಇಂತಹ ಸಮೀಕ್ಷೆಗಳು ಚುನಾವಣೆಗಳನ್ನು ಬಹುವಾಗಿ ಪ್ರಭಾವಿಸುವ ಪಾತ್ರ ವಹಿಸುತ್ತವೆಯೇ ವಿನಃ ಫಲಿತಾಂಶದ ಬಗ್ಗೆ ತಪ್ಪಾಗಿರುತ್ತವೆ ಎಂದು ಮತ್ತೆ ಸಾಬೀತಾಗಿದೆ.

ಯು.ಎಸ್ ‘ಮುಖ್ಯವಾಹಿನಿ ಮಾಧ್ಯಮ’ದ ದೊಡ್ಡ ವಿಭಾಗ ಡೆಮೊಕ್ರಾಟಿಕ್-ಪರ ಮತ್ತು ಟ್ರಂಪ್-ವಿರೋಧಿ ಯಾಗಿದ್ದು, ಅವುಗಳ ಬಗ್ಗೆ ಜನರ ಅಪನಂಬಿಕೆ ಹೆಚ್ಚಿದೆ. ಇದರರ್ಥ ಟ್ರಂಪ್ ಗೆ ಮಾಧ್ಯಮ ಬೆಂಬಲವಿರಲಿಲ್ಲ ಎಂದೇನಿಲ್ಲ. ಮಾಧ್ಯಮಗಳ ಒಂದು ವಿಭಾಗ ಟ್ರಂಪ್ ಪರವಾಗಿಯೂ ಇತ್ತು, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಸುದ್ದಿ, ವಿಡಿಯೋಗಳೊಂದಿಗೆ ಅತ್ಯಂತ ಕೆಳ ಮಟ್ಟದ ಪ್ರಚಾರವನ್ನು ಅದು ನಡೆಸಿತು.

 

ಯು.ಎಸ್ ಅಧ್ಯಕ್ಷೀಯ ಚುನಾವಣಾ ಪದ್ಧತಿ

ಯು.ಎಸ್ ನ ಅಧ್ಯಕ್ಷೀಯ ಚುನಾವಣಾ ಪದ್ಧತಿ ಒಂದು ರೀತಿಯ ಪರೋಕ್ಷ ಚುನಾವಣಾ ಪದ್ಧತಿ. ಇದರ ಪ್ರಕಾರ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ಇಡೀ ದೇಶದಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ಆಧಾರದ ಮೇಲೆ ಫಲಿತಾಂಶ ಘೋಷಿಸಲಾಗುತ್ತದೆ. ಆದರೆ ರಾಜ್ಯವಾರು ಹೆಚ್ಚಿನ ಮತ ಪಡೆದ ಅಭ್ಯರ್ಥಿಗೆ ಅದರ ಆಧಾರದ ಮೇಲೆ ಆ ರಾಜ್ಯದ ಎಲ್ಲ ಇಲೆಕ್ಟೊರಲ್ ಕಾಲೇಜು ಮತಗಳನ್ನು ಕೊಡಲಾಗುತ್ತದೆ. ಪ್ರತಿ ರಾಜ್ಯಕ್ಕೆ ಅದರ ಜನಸಂಖ್ಯೆ, ಗಾತ್ರದ ಆಧಾರದ ಮೇಲೆ ಇಲೆಕ್ಟೊರಲ್ ಕಾಲೇಜು ಮತಗಳನ್ನು ನಿಗದಿ ಪಡಿಸಲಾಗಿದೆ. ಈ ಮತಗಳು ನೇರವಾಗಿ ಜನಸಂಖ್ಯೆ ಅಥವಾ ಗಾತ್ರಕ್ಕೆ ನೇರವಾಗಿ ಅನುಪಾತದಲ್ಲಿ ಇಲ್ಲ. ಸಣ್ಣ ರಾಜ್ಯಗಳಿಗೂ ಈ ಚುನಾವಣೆ ಯಲ್ಲಿ ಸೂಕ್ತ ಸ್ಥಾನ ಇರುವಂತೆ ಅವನ್ನು ನಿಗದಿ ಪಡಸಿಲಾಗಿದೆ. ಉದಾಹರಣೆಗೆ ಅತಿ ದೊಡ್ಡ ಗಾತ್ರದ ಜನಸಂಖ್ಯೆಯ ರಾಜ್ಯ ಕ್ಯಾಲಿಫೊರ್ನಿಯಾ ಕ್ಕೆ 54 ಇಲೆಕ್ಟೊರಲ್ ಕಾಲೇಜು ಮತಗಳನ್ನು ನಿಗದಿ ಪಡಿಸಲಾಗಿದೆ. ಈ ರಾಜ್ಯ ಹಿಂದಿನಿಂದಲೂ ಡೆಮೊಕ್ರಾಟಿಕ್ ರಾಜ್ಯವಾಗಿದ್ದು ಈ ಬಾರಿ ಸಹ ಕಮಲಾ ಇಲ್ಲಿ ಬಹುಮತ ಗಳಿಸಿದ್ದಾರೆ. ಅದೇ ರೀತಿ ಫ್ಲಾರಿಡಾ ಗೆ 30 ಇಲೆಕ್ಟೊರಲ್ ಕಾಲೇಜು ಮತಗಳು ನಿಗದಿತವಾಗಿದ್ದು, ಇಲ್ಲಿ ಟ್ರಂಪ್ ಬಹುಮತ ಪಡೆದು, 30 ಮತಗಳನ್ನು ಪಡೆಯುತ್ತಾರೆ. ಮೈನ್ ಎಂಬ ಅತಿ ಸಣ್ಣ ರಾಜ್ಯ 1 ಮತ ಪಡೆದಿದೆ. ಹೆಚ್ಚಿನ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಮತ ಪಡೆದ ಅಭ್ಯರ್ಥಿಗೆ ಆ ರಾಜ್ಯದ ಎಲ್ಲ ಮತಗಳು ದೊರೆಯುತ್ತವೆ. ಆದರೆ ಕೆಲವು ರಾಜ್ಯಗಳಲ್ಲಿ ಇಲೆಕ್ಟೊರಲ್ ಕಾಲೇಜು ಮತಗಳನ್ನು ಅಭ್ಯರ್ಥಿಗಳು ಪಡೆದ ಮತಗಳ ಅನುಪಾತದಲ್ಲಿ ಕೊಡುವ ಪದ್ಧತಿ ಸಹ ಇದೆ. ಕೊನೆಯಲ್ಲಿ 270ಕ್ಕಿಂತ ಹೆಚ್ಚು ಇಲೆಕ್ಟೊರಲ್ ಕಾಲೇಜು ಮತಗಳನ್ನು ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ. ಈ ಪದ್ಧತಿಯಲ್ಲಿ 270ಕ್ಕಿಂತ ಹೆಚ್ಚು ಇಲೆಕ್ಟೊರಲ್ ಕಾಲೇಜು ಮತಗಳನ್ನು ಪಡೆದ ಅಭ್ಯರ್ಥಿ ಇಡೀ ದೇಶದಲ್ಲಿ ಅತಿ ಹೆಚ್ಚು ಮತ ಗಳಿಸಬೇಕೆಂದಿಲ್ಲ. ಉದಾಹರಣೆಗೆ ಅತಿ ಹೆಚ್ಚು ರಾಷ್ಟ್ರವ್ಯಾಫಿ ಮತಗಳನ್ನು (ಶೇ. 48.20) ಪಡೆದ ಹಿಲೆರಿ ಕ್ಲಿಂಟನ್ ಕೇವಲ 227 ಇಲೆಕ್ಟೊರಲ್ ಕಾಲೇಜು ಮತಗಳನ್ನು ಪಡೆದರು. ಡೊನಾಲ್ಡ್ ಟ್ರಂಪ್ ಶೇ. 46.1 (ಅಂದರೆ ಹಿಲೆರಿ ಅವರಿಗಿಂತ ಶೇ.2.1 ಕಡಿಮೆ) ಮತ ಪಡೆದರೂ, 304 ಇಲೆಕ್ಟೊರಲ್ ಕಾಲೇಜು ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು.

 

ಇದನ್ನೂ ನೋಡಿ: ಪ್ರೋಮೊ| ನಿರಂಜನ 100 – ಚಿರಸ್ಮರಣೆ ಮತ್ತು ಸಮಕಾಲೀನತೆ ಉಪನ್ಯಾಸ ಸರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *