ಮೈಸೂರು: ಕೇಂದ್ರದ ಬಿಜೆಪಿ ಸರ್ಕಾರ ಹೊಸತಾಗಿ ಜಾರಿಗೆ ತಂದಿರುವ ಕ್ರಿಮಿನಲ್ ಕಾನೂನಿನ ವಿರುದ್ಧ ಲಾರಿ ಚಾಲಕರು ನಡೆಸುತ್ತಿರುವ ಮುಷ್ಕರದಿಂದಾಗಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ತರಕಾರಿ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ರಾಜ್ಯದ ರೈತರು ಸಹ ಕೂಡಾ ತೊಂದರೆಗೆ ಒಳಗಾಗಿದ್ದಾರೆ. ಹೊಸ ಕಾನೂನಿನಲ್ಲಿ ಹಿಟ್ ಆಂಡ್ ರನ್ ಪ್ರಕರಣಗಳಿಗೆ ಕಠಿಣ ಶಿಕ್ಷೆಯನ್ನು ನಿಗದಿ ಮಾಡಲಾಗಿದ್ದು, ಇದರಿಂದ ಟ್ರಕ್ ಚಾಲಕರು ತೀವ್ರ ಆತಂಕದಲ್ಲಿದ್ದು ಮುಷ್ಕರ ಹೂಡಿದ್ದಾರೆ.
ರಾಜ್ಯದಲ್ಲಿ ಬರಗಾಲದ ನಡುವೆಯೂ ತರಕಾರಿ ಬೆಳೆದ ರೈತರು ಇದೀಗ ಲಾರಿ ಮುಷ್ಕರದಿಂದಾಗಿ ಲಾಭದಾಯಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಷ್ಕರದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್, ಹಣ್ಣುಗಳು ಮತ್ತು ಇತರ ಉತ್ಪನ್ನಗಳಂತಹ ಅಗತ್ಯ ವಸ್ತುಗಳ ಪೂರೈಕೆಗೆ ಹೊಡೆತ ಬಿದ್ದಿದೆ. ತಾಜಾ ತರಕಾರಿಗಳ ಬೆಲೆ ಕುಸಿದಿರುವುದರಿಂದ ರೈತರಿಗೂ ಮುಷ್ಕರದ ಬಿಸಿ ತಟ್ಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದೇ ದರವಿದ್ದರೂ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಬೆಲೆ ಇಳಿಕೆಯಾಗಿದೆ.
ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನು ವಿರೋಧಿಸಿ ಟ್ರಕ್ ಚಾಲಕರ ದೇಶವ್ಯಾಪಿ ಪ್ರತಿಭಟನೆ
ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಲಾರಿ ಮುಷ್ಕರದಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳು ಕೊಳ್ಳುವವರು ಇಲ್ಲದ ಕಾರಣ ರಾಶಿ ರಾಶಿ ಬಿದ್ದಿದೆ ಎಂದು TNIE ವರದಿ ಹೇಳಿದೆ.
ಕೇರಳದಲ್ಲಿ ಬೆಲೆ ಹೆಚ್ಚಳ
ಮೈಸೂರು ಮತ್ತು ಚಾಮರಾಜನಗರ ಮಾರುಕಟ್ಟೆಗಳು ನೆರೆಯ ರಾಜ್ಯಗಳ ಮೇಲೆ ಅವಲಂಬಿತವಾಗಿದ್ದು, ಕೇರಳಕ್ಕೆ ದಿನವೊಂದಕ್ಕೆ 130 ರಿಂದ 150 ಟ್ರಕ್‌ಗಳು ತರಕಾರಿಗಳು ಸಾಗಣೆಯಾಗುತ್ತದೆ. ಬೇಡಿಕೆ ಮತ್ತು ಪೂರೈಕೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ಕೇರಳದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಮುಷ್ಕರದ ಕಾರಣಕ್ಕೆ ಕೇರಳದಲ್ಲಿ ಸಗಟು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 8 ರಿಂದ 12 ರೂ.ಗೆ ಏರಿಕೆಯಾಗಿದೆ. ಆದರೆ ಮುಷ್ಕರದ ತೀವ್ರತೆ ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಖೋದಂಡರಾಮ್ ಮಾತನಾಡಿ, “ಮಿನಿ ಟ್ರಕ್‌ಗಳನ್ನು ಹೊರತುಪಡಿಸಿ 6 ಸಾವಿರಕ್ಕೂ ಹೆಚ್ಚು ಟ್ರಕ್‌ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಕಾನೂನು ಚಾಲಕರ ಅನ್ನವನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಸರ್ಕಾರವು ನಿಬಂಧನೆಗಳನ್ನು ಮರುಪರಿಶೀಲಿಸಬೇಕಿದೆ. ಇಲ್ಲವೆಂದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಟ್ರಕ್ ಸಂಚಾರ ನಡೆಯದ ಕಾರಣ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಗಾಜಾದ ಅನ್ಯಾಯದ ಯುದ್ಧ ನಿಲ್ಲಿಸಿ’ | ಅಲಿಪ್ತ ಚಳವಳಿಯ ಸಮ್ಮೇಳನದಲ್ಲಿ ಆಫ್ರಿಕಾ ನಾಯಕರ ಒತ್ತಾಯ
ಹೊಸ ಕಾನೂನಿನಲ್ಲಿ ಹಿಟ್ ಆಂಡ್ ರನ್ ಮತ್ತು ಮಾರಣಾಂತಿಕ ಅಪಘಾತಗಳನ್ನು ವರದಿ ಮಾಡದೆ ಇದ್ದರೆ ಸುಮಾರು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ದೇಶದಲ್ಲಿ ಈ ಹಿಂದೆ ಇದ್ದ ಕಾನೂನಿನ ಅಡಿಯಲ್ಲಿ, ಚಾಲಕರ ವಿರುದ್ಧ IPC ಸೆಕ್ಷನ್ 304A (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿತ್ತು.
ಕೇಂದ್ರದ ಈ ಹೊಸ ನಿಬಂಧನೆಗಳು ಚಾಲಕರ ಜೀವನೋಪಾಯಕ್ಕೆ ಅಪಾಯ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. “ನಾವು ಕೇವಲ 10,000-12,000 ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಿದ್ದೇವೆ. ಹೀಗಿರುವಾಗ ಲಕ್ಷಗಟ್ಟಲೆ ದಂಡ ಕಟ್ಟಲು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.
“ಯಾವುದೇ ಅಪಘಾತ ನಡೆದರೆ ಚಾಲಕರ ಮೇಲೆ ಅಲ್ಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಾರೆ. ಒಂದು ವೇಳೆ ಅವರು ಓಡಿಹೋದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಕಾನೂನನ್ನು ತಿದ್ದುಪಡಿ ಮಾಡುವ ಮೊದಲು ನಮ್ಮೊಂದಿಗೆ ಕೂಡಾ ಸರ್ಕಾರ ಸಮಾಲೋಚನೆ ನಡೆಸಬೇಕಿತ್ತು. ಸಾರಿಗೆದಾರರು ಮತ್ತು ಚಾಲಕರು ದೇಶದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತಾರೆ” ಎಂದು ಚಾಲಕರು ಪ್ರತಿಪಾದಿಸಿದ್ದಾರೆ.
ವಿಡಿಯೊ ನೋಡಿ: ಸಂಯುಕ್ತ ಹೋರಾಟ ಕರ್ನಾಟಕ ನಾಯಕರ ಜೊತೆ ಸಿಎಂ ಮಾತುಕತೆ : ಸಿಎಂ ನೀಡಿದ ಭರವಸೆಗಳೇನು? Janashakthi Media