ತ್ರಿಪುರಾ ಎಡರಂಗ, ಈ ವರ್ಷದ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲರಿಗಿಂತ ಮೊದಲು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಆಡಳಿತಾರೂಢ ಬಿಜೆಪಿ-ಐಪಿಎಫ್‌ಟಿ ಸರ್ಕಾರ ಭಯೋತ್ಪಾದನೆಯ ಆಳ್ವಿಕೆಯನ್ನು ಸ್ಥಾಪಿಸಿದೆ ಎಂದು ಖಂಡಿಸಿದೆ.
“ತ್ರಿಪುರಾದಲ್ಲಿ ಒಂದೇ ಪಕ್ಷದ ಫ್ಯಾಸಿಸ್ಟ್ ಆಡಳಿತವಿದೆ” ಎಂದು ಪ್ರಣಾಳಿಕೆ ಹೇಳಿದೆ, ಪ್ರಸ್ತುತ ಆಡಳಿತ ತ್ರಿಪುರಾದಲ್ಲಿ ಪ್ರಜಾಪ್ರಭುತ್ವವನ್ನು “ನಾಶಗೊಳಿಸಿದೆ” ಎಂದು ಪ್ರಣಾಳಿಕೆ ಹೇಳಿದೆ. ರಾಜ್ಯದಲ್ಲಿ ಮುಕ್ತ ಚುನಾವಣೆಯ ಪ್ರಕ್ರಿಯೆಗೆ ಧಕ್ಕೆ ಉಂಟಾಗಿದ್ದು, ಪತ್ರಿಕಾ ಸ್ವಾತಂತ್ರ‍್ಯದ ಮೇಲೆ ದಾಳಿ ನಡೆಯುತ್ತಿದೆ. “ರಾಜ್ಯದಲ್ಲಿ ಜಾತ್ಯತೀತತೆಯ ವಿಚಾರವನ್ನು ನಾಶಪಡಿಸಲಾಗಿದೆ. ಅಲ್ಪಸಂಖ್ಯಾತ ವಿಭಾಗದವರಿಗೆ ತಮ್ಮ ಧರ್ಮವನ್ನು ಆಚರಿಸುವುದು ಕಷ್ಟಕರವಾಗಿದೆ, ಅವರ ಮೇಲೆ ತೀವ್ರ ಒತ್ತಡವಿದೆ” ಎಂದು ಎಡರಂಗ ಆರೋಪಿಸಿದೆ.
ಇದನ್ನು ಓದಿ: ಮೂರು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ; ಫೆ.16ಕ್ಕೆ ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್- ಮೇಘಾಲಯದಲ್ಲಿ ಮತದಾನ
ರಾಜ್ಯದಲ್ಲಿನ ತಳಮಟ್ಟದ ಕುಟುಂಬಗಳಿಗೆ ಉಚಿತ ವಿದ್ಯುತ್, ಕೃಷಿಕರಿಗೆ ನೀರಾವರಿಗೆ ಉಚಿತ ನೀರು, ಎಲ್ಲಾ ವಿಭಾಗಗಳ ಕಾರ್ಮಿಕರಿಗೆ ರಾಜ್ಯದಲ್ಲಿ ಕನಿಷ್ಠ ವೇತನ ಹೆಚ್ಚಳ ಮತ್ತು ಮುಂದಿನ ಐದು ವರ್ಷಗಳಲ್ಲಿ 2.5 ಲಕ್ಷ ಉದ್ಯೋಗಗಳಂತಹ ಪ್ರಮುಖ ಘೋಷಣೆಗಳನ್ನು ಪ್ರಣಾಳಿಕೆಯು ಒಳಗೊಂಡಿದೆ. ಎಡರಂಗ ನೇತೃತ್ವದ ಸರ್ಕಾರ ರಚನೆಯಾಗುವುದರಿಂದ ರಾಜ್ಯದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಅರಳುವಂತೆ ಖಚಿತಪಡಿಸುತ್ತದೆ ಎಂದು ಅದು ಭರವಸೆ ನೀಡಿದೆ. ಇದಲ್ಲದೆ, ಇದು ಶಿಕ್ಷಣ ಸಂಸ್ಥೆಗಳ ಖಾಸಗೀಕರಣಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದೂ ಅದು ಹೇಳಿದೆ.
ಅಧಿಕಾರಕ್ಕೆ ಬಂದರೆ, ಬಿಜೆಪಿ ಸರ್ಕಾರ ಕಾನೂನು ಪ್ರಶ್ನೆಗಳನ್ನು ಉಲ್ಲೇಖಿಸಿ ವಜಾಗೊಳಿಸಿರುವ 10,323 ಶಿಕ್ಷಕರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಸ್ಥಳೀಯ ಕೊಕ್ ಬರಕ್ ಭಾಷೆಯನ್ನು ಭಾರತೀಯ ಸಂವಿಧಾನದ 8 ನೇ ಪರಿಚ್ಛೇಧದಲ್ಲಿ ತರಲು ಸರ್ಕಾರವು ಕೆಲಸ ಮಾಡುತ್ತದೆ.
“ಜನಸಂಖ್ಯೆಯ ಅಂಚಿನಲ್ಲಿರುವ ವರ್ಗಗಳಿಗೆ ಎಡರಂಗ ಸರ್ಕಾರದ ಕೆಲಸ ತಿಳಿದಿದೆ. ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಜಾಲವನ್ನು ಹೆಚ್ಚಿಸಲಾಗುವುದು; ಕೃಷಿ ಮತ್ತು ಚಹಾ ಉದ್ಯಮದಂತಹ ಪ್ರಾಥಮಿಕ ವಲಯಗಳಿಗೆ ಉತ್ತೇಜನ ನೀಡಲಾಗುವುದು. ಎರಡನೆಯದಾಗಿ, ಸಣ್ಣ-ಪ್ರಮಾಣದ ಕೈಗಾರಿಕೆ ಮತ್ತು ಮಧ್ಯಮ-ಪ್ರಮಾಣದ ಕೈಗಾರಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು” ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ತಪನ್ ಚಕ್ರವರ್ತಿ ಪ್ರಣಾಳಿಕೆ ಮತ್ತು ರಾಜ್ಯದ ಸಾಮಾನ್ಯ ಸ್ಥಿತಿಯ ಕುರಿತು ಮಾತನಾಡುತ್ತ ಹೇಳಿದ್ದಾರೆ.
ಇದನ್ನು ಓದಿ: ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿರುವಂತೆಯೇ ತ್ರಿಪುರಾದಲ್ಲಿ ತೀವ್ರಗೊಂಡ ಹಲ್ಲೆ
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಈ ಕ್ಷೇತ್ರಗಳು ನಾಶವಾಗಿವೆ ಎಂದು ಆರೋಪಿಸುತ್ತ “ಅವರು ವಿಷನ್ ಡಾಕ್ಯುಮೆಂಟ್ ನಲ್ಲಿ ನೀಡಿದ ಭರವಸೆಗಳೆಲ್ಲವೂ ಈಡೇರದೆ ಉಳಿದಿವೆ. ಅವರು ಈ ಬಾರಿ ಯಶಸ್ವಿಯಾಗುವುದಿಲ್ಲ” ಎಂದು ಮುಂದುವರೆದು ಅವರು ಹೇಳಿದರು.
ಈ ಚುನಾವಣೆಯಲ್ಲಿ ಎಡರಂಗ ಮತ್ತು ಕಾಂಗ್ರೆಸ್ ನಡುವೆ ಸಿಟುಗಳ ಹೊಂದಾಣಿಕೆ ನಡೆದಿದ್ದು ಎಡರಂಗ 47 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 13 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಇದಕ್ಕೆ ಮೊದಲು ಕಾಂಗ್ರೆಸ್ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಿದ್ದಕ್ಕಿಂತ ಹೆಚ್ಚಿನ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು… ಆದರೆ, ಈಗ ಆ ಮೂವರು ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ ಎಂದು ಹೇಳಿದೆ.
ತ್ರಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರಾದ ಬಿರ್ಜೀತ್ ಸಿನ್ಹ ತ್ರಿಪುರಾಕ್ಕೆ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ಮರಳಿ ತರಲು ಬಿಜೆಪಿಯ ವಿರುದ್ಧ ಒಂದು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ತಮ್ಮ ಪಕ್ಷದ ಎಲ್ಲ ಸದಸ್ಯರಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ತ್ರಿಪುರಾದಲ್ಲಿ ಮೋಸದ ಚುನಾವಣೆಯ ಪ್ರಹಸನ
ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಬಳಿಕ 60 ವಿಧಾನಸಭಾ ಕ್ಷೇತ್ರಗಳಿಗೆ 251 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಡರಂಗವು 46 ಸ್ಥಾನಗಳಲ್ಲಿ ಹೋರಾಡುತ್ತಿದೆ; ಎಡ-ಬೆಂಬಲಿತ ಪಕ್ಷೇತರರು ಒಂದು ಸ್ಥಾನದಲ್ಲಿ, ಮತ್ತು ಕಾಂಗ್ರೆಸ್ 13 ಸ್ಥಾನಗಳಲ್ಲಿ. ಸ್ಥಳೀಯ ಗುಂಪು ತಿಪ್ರಾ ಮೋಥಾ 42 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಿಜೆಪಿ 55 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಅದರ ಮೈತ್ರಿ ಪಾಲುದಾರ ಐಪಿಎಫ್‌ಟಿ ಆರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಟಿಎಂಸಿ 28 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಸಿಪಿಐ(ಎಂ)ನ 43 ಅಭ್ಯರ್ಥಿಗಳಲ್ಲಿ 28 ಮಂದಿ ಹೊಸಬರು ಎಂಬುದು ಗಮನಾರ್ಹ.
ಈ ಬಾರಿಯಾದರೂ ಇಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯುತ್ತದೆ ಎಂಬ ವಿಶ್ವಾಸ ಚುನಾವಣಾ ಆಯೋಗದ ನಡವಳಿಕೆಯಿಂದ ಮೂಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಬಗ್ಗೆ ಮತ್ತೆ ಕಳವಳ ಉಂಟಾಗುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನು ಸಿಪಿಐ(ಎಂ) ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ಕೇಂದ್ರದಲ್ಲಿ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ