ಲಿಂಗತ್ವ ಸಾಬೀತುಪಡಿಸಿ ಎಂದು ಲಿಂಗತ್ವ ಅಲ್ಪಸಂಖ್ಯಾತಳ ಬಟ್ಟೆ ಬಿಚ್ಚಿಸಿದ ಪೊಲೀಸರು – ದೂರು ದಾಖಲು

ಅಗರ್ತಲಾ: ಪೊಲೀಸರು ನಮ್ಮನ್ನು ಬಂಧಿಸಿ, ಲಿಂಗತ್ವ ಸಾಬೀತುಪಡಿಸಿಕೊಳ್ಳಲು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ತೃತೀಯ ಲಿಂಗಿಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ನಮ್ಮ ಸಮುದಾಯದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ನಮ್ಮ ಲಿಂಗತ್ವವನ್ನು ಸಾಬೀತುಪಡಿಸಲು ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದಾರೆ. ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತರೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ.

ನಮ್ಮ ಮೇಲೆ (ನಾಲ್ವರು) ಸುಲಿಗೆ ಆರೋಪ ಹೊರಿಸಿ ಪಶ್ಚಿಮ ಅಗರ್ತಲಾ ಮಹಿಳಾ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಇದ್ದ ಪುರುಷ ಮತ್ತು ಮಹಿಳಾ ಪೊಲೀಸ್‌ ಅಧಿಕಾರಿಗಳು ನಮ್ಮನ್ನು ವಿವಸ್ತ್ರಗೊಳಿಸಿದರು. ನಿಮ್ಮ ಲಿಂಗತ್ವವನ್ನು ಸಾಬೀತುಪಡಿಸಿ ಎಂದು ಪೊಲೀಸರು ನಮ್ಮ ಬಟ್ಟೆಗಳನ್ನು ಬಿಚ್ಚಿಸಿದ್ದಾರೆ. ನಮ್ಮ ವಿಗ್‌ ಮತ್ತು ಒಳ ಉಡುಪುಗಳನ್ನು ಪೊಲೀಸ್‌ ಠಾಣೆಯಲ್ಲೇ ಇರಿಸಿಕೊಂಡಿದ್ದಾರೆ. ಯಾವುದೇ ಪುರಾವೆಗಳಿಲ್ಲದೇ ನಮ್ಮ ವಿರುದ್ಧ ಸುಲಿಗೆ ಆರೋಪ ಹೊರಿಸಲಾಗಿದೆ. ಪೊಲೀಸರು ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಸಂತ್ರಸ್ತ ತೃತೀಯ ಲಿಂಗಿ ದೂರಿನಲ್ಲಿ ತಿಳಿಸಿದ್ದಾರೆ.

ತೃತೀಯಲಿಂಗಿ ಸಮುದಾಯದ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಲಾಗಿದೆ. ಸುಪ್ರೀಂ ಕೋರ್ಟ್‌ನ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ತೀರ್ಪಿನಲ್ಲಿ, ಸೆಕ್ಷನ್‌ 377 ನಿಂದ ಈ ಹಕ್ಕನ್ನು ಒದಗಿಸಲಾಗಿದೆ ಎಂದು ತೃತೀಯಲಿಂಗಿಗಳು ಪ್ರತಿಪಾದಿಸಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ಸ್ನೇಹಾ ಗುಪ್ತಾ ರಾಯ್‌ ಪ್ರತಿಕ್ರಿಯಿಸಿದ್ದು, ” ಇವರಿಗೆ ಸಾಕಷ್ಟು ಕಿರುಕುಳ ಮಾಡಲಾಗಿದೆ. ಅಷ್ಟೆ ಅಲ್ಲದೆ ಈ ಸಮುದಾಯವನ್ನು ಪೊಲೀಸರು ಅವಮಾನಿಸಿದ್ದಾರೆ. ಅವರ ಕುಟುಂಬಗಳಿಗೆ ಬೆದರಿಕೆ ಹಾಕಿದ್ದಾರೆ” ಇಂತಹ ದುಷ್ಕೃತ್ಯ ಎಸಗಿದ ಪೊಲೀಸರ ಮೇಲೆ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಘಟನೆಯು ಲಿಂಗತ್ವ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲದೆ ಮಾನವ ಹಕ್ಕುಗಳ ಸಂಪೂರ್ಣ ನಿರಾಕರಣೆಯಾಗಿದೆ ಎಂದು ವಕೀಲರಾದ ನಿಲಾಂಜನಾ ರಾಯ್ ಹೇಳಿದ್ದಾರೆ. ತ್ರಿಪುರಾದಲ್ಲಿ ಜನಸಾಮಾನ್ಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಪೊಲೀಸರು ಮತ್ತು ಸರಕಾರ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಘಟನೆ ಸಂಬಂಧ ವರದಿ ಕೇಳಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ತ್ರಿಪುರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್‌ 151ರಡಿ (ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಗೆ ಭಂಗವುಂಟುಮಾಡುವುದು) ಈ ನಾಲ್ವರನ್ನು ಬಂಧಿಸಲಾಗುತ್ತು ಎಂದು ನಮ್ಮ ಕಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ಕಾರಣದಿಂದಾಗಿ ಅವರನ್ನು ಬಂಧಿಸಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿಲ್ಲ. ಪ್ರಕರಣ ಕುರಿತು ಗಮನ ಹರಿಸಲಾಗಿದೆ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *