ಬೆಂಗಳೂರು : ಬಿಡದಿ ಬಳಿ ಇರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಕಂಪನಿಯ ಮ್ಯಾನೇಜ್ಮೆಂಟ್ ಹಾಗೂ ಕಾರ್ಖಾನೆ ನೌಕರರ ನಡುವೆ ಉಲ್ಬಣಗೊಂಡಿರುವ ಸಮಸ್ಯೆ ತಾರಕಕ್ಕೆರಿದ್ದರೂ, ಸರ್ಕಾರ ಮಾತ್ರ ಇನ್ನು ಮಧ್ಯ ಪ್ರವೇಶ ಮಾಡದೆ ನಿರಾಸಕ್ತಿ ತೋರುತ್ತಿರುವುದು ನೌಕರರ ಆಕ್ರೋಶವನ್ನು ಹೆಚ್ಚಿಸುತ್ತಿದೆ.
ಆಡಳಿತ ಮಂಡಳಿಯ ದೌರ್ಜನ್ಯದ ವಿರುದ್ಧ ಪ್ರತಿಭಟಿಸುತ್ತಿರುವ ಕಂಪನಿಯ ಸುಮಾರು 3500 ಕಾರ್ಮಿಕರು ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಕೋವಿಡ್-19 ಆರಂಭದಿಂದಲೂ ಕಂಪನಿ ಕಾರ್ಮಿಕರನ್ನು ಪಶುಗಳಂತೆ ನಡೆಸಿಕೊಳ್ಳುತ್ತಿದೆ. ಕೆಲಸ ಮಾಡಲು ಅಸಾಧ್ಯವಾದ ರೀತಿಯಲ್ಲಿ ಕಾರ್ಮಿಕರ ಮೇಲೆ ಒತ್ತಡ ಹೇರಿ, ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿ ದುಡಿಸಿಕೊಳ್ಳುತ್ತಿದೆ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ. ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಹಲವು ಕಾರ್ಮಿಕರನ್ನು ಅಮಾನತ್ತು ಮಾಡಲಾಗಿದೆ. ಅಮಾನತ್ತನ್ನು ವಾಪಸ್ಸ ಪಡೆಯಬೇಕು ಹಾಗೂ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾರ್ಮಿಕರು ಆಗ್ರಹಿಸುತ್ತಿದ್ದಾರೆ.
ಕಾರ್ಮಿಕರ ಬೇಡಿಕೆಗಳೇನು? ಅವೈಜ್ಞಾನಿಕವಾಗಿ ಕೆಲಸವನ್ನು ನಿಗದಿ ಮಾಡುವ ಮೂಲಕ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ. ಕೆಲಸದ ನಿರ್ವಹಣೆಗೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಕೆಲಬಾರಿ 48 ಗಂಟೆಗಳ ಕಾಲ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ನಿದ್ರೆ ಇತ್ಯಾದಿ ಸಮಸ್ಯೆಗಳಿಂದ ಕಾರ್ಮಿಕರು ತಡವಾಗಿ ಬಂದರೆ ಅನಧಿಕೃತ ರಜೆ ಎಂದು ನಮೂದಿಸುತ್ತಿದ್ದಾರೆ. ಆರೋಗ್ಯ ಸೇತು ಆ್ಯಪ್ ಬಳಸದಂತೆ ಆದೇಶ ಹೊರಡಿಸಿದ್ದಾರೆ, ಪ್ರಶ್ನಿಸುವ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಬೇಕು ಎಂದು ಟಿಕೆಎಂಇಯು ನ ಅಧ್ಯಕ್ಷರಾದ ಸಿ.ಎನ್. ಪ್ರಸನ್ ಕುಮಾರ್ ಆಗ್ರಹಿಸಿದ್ದಾರೆ.
ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಬಲ ಸೂಚಿಸಿದ್ದಾರೆ. ಸಿಐಟಿಯು, ಎಐಟಿಯುಸಿ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ, ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ, ದೌರ್ಜನ್ಯವನ್ನು ಸರಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಕ್ಕಟ್ಟು ಶಮನಕ್ಕೆ ಮುಂದಾದ ಕಾರ್ಮಿಕ ಸಚಿವ : ಕಾರ್ಖಾನೆ ನೌಕರರ ಹಾಗೂ ಆಡಳಿತ ಮಂಡಳಿಯ ನಡುವೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ಮಂಗಳವಾರ ದಂದು ಉಪಮುಖ್ಯಮಂತ್ರಿಗಳಾದ ಡಾ. ಅಶ್ವಥ್ ನಾರಾಯಣ್ ಅವರ ಜೊತೆಯಲ್ಲಿ ಬೆಂಗಳೂರಿನ ವಿಕಾಸಸೌಧದ ಕಛೇರಿಯಲ್ಲಿ ಸಂಧಾನ ಸಭೆಯನ್ನು ಕರೆಯಲಾಗಿದೆ. ಈ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ ಕಾರ್ಖಾನೆಯ ಕಾರ್ಯನಿರ್ವಹಿಸುತ್ತಿರುವ ಸುಮಾರು 4000 ಕ್ಕೂ ಹೆಚ್ಚಿನ ನೌಕರರಿಗೆ ನ್ಯಾಯ ಒದಗಿಸುವುದು ಮತ್ತು ಆಡಳಿತ ಮಂಡಳಿಯವರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಸರಕಾರದ್ದಾಗಿದೆ” ಎಂದು ಶಿವರಾಮ ಹೆಬ್ಬಾರ್ ಸೋಮವಾರ ರಾತ್ರಿ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.