ನವದೆಹಲಿ: ಕೇಂದ್ರ ಸರ್ಕಾರ ಹದಿನೈದನೆ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ವಿವಿಧ ರಾಜ್ಯಗಳಿಗೆ ಒಟ್ಟು 1,78,173 ಕೋಟಿ ರೂ ತೆರಿಗೆ ಪಾಲು ಹಂಚಿಕೆ ಮಾಡಿದೆ.
ಇದರಲ್ಲಿ ಕರ್ನಾಟಕಕ್ಕೆ 6,498 ಕೋಟಿ ರೂ ಸಿಕ್ಕಿದೆ. ಉತ್ತರಪ್ರದೇಶಕ್ಕೆ 31,000 ಕೋಟಿ ರೂಗೂ ಅಧಿಕ ಮೊತ್ತ ಸಿಕ್ಕಿದ್ದು, ಅತಿಹೆಚ್ಚು ತೆರಿಗೆ ಪಾಲು ಪಡೆದ ರಾಜ್ಯವೆನಿಸಿದೆ.
ಹಬ್ಬದ ಸೀಸನ್ ಇರುವುದರಿಂದ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋಜನೆಗಳಿಗೆ ವೆಚ್ಚ ಮಾಡಲು ನೆರವಾಗಲು ಕೇಂದ್ರ ಸರ್ಕಾರ ಮುಂಗಡವಾಗಿ ಒಂದು ಕಂತನ್ನು ಹೆಚ್ಚುವರಿಯಾಗಿ ನೀಡಿದೆ. ಇದರಿಂದಾಗಿ ಈ ಬಾರಿ ರಾಜ್ಯಗಳಿಗೆ ಸಿಕ್ಕ ತೆರಿಗೆ ಪಾಲು ಎರಡು ಪಟ್ಟು ಹೆಚ್ಚಿದೆ.
ತೆರಿಗೆ ಹಂಚಿಕೆಯಲ್ಲಿ ಉತ್ತರಪ್ರದೇಶಕ್ಕೆ ಸಿಂಹಪಾಲು ಮುಂದುವರಿದಿದೆ. 1.78 ಲಕ್ಷ ಕೋಟಿ ರೂ ಪೈಕಿ ಉತ್ತರಪ್ರದೇಶಕ್ಕೆ 31,962 ಕೋಟಿ ರೂ ಸಿಕ್ಕಿದೆ. ಮಹಾರಾಷ್ಟ್ರ ಬಿಟ್ಟರೆ ಅತಿಹೆಚ್ಚು ತೆರಿಗೆ ಸಂಗ್ರಹಿಸುವ ಕರ್ನಾಟಕವು ತೆರಿಗೆ ಹಂಚಿಕೆ ಪ್ರಮಾಣದಲ್ಲಿ 10ನೇ ಸ್ಥಾನದಲ್ಲಿದೆ.
ಇದನ್ನು ಓದಿ : ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ತಿರುಚಲಾಗಿದೆ: ಕಾಂಗ್ರೆಸ್ ಆರೋಪಕ್ಕೆ ಕೈ ಜೋಡಿಸಿದ ಜಗನ್ ಮೋಹನ್ ರೆಡ್ಡಿ
ತಮಿಳುನಾಡು, ಆಂಧ್ರಪ್ರದೇಶಗಳಿಗೆ ಕರ್ನಾಟಕಕ್ಕಿಂತಲೂ ಹೆಚ್ಚು ತೆರಿಗೆ ಹಂಚಿಕೆ ಆಗಿದೆ.ಕೇಂದ್ರ ಸರ್ಕಾರ 2024-25ರ ಹಣಕಾಸು ವರ್ಷಕ್ಕೆ 12.20 ಲಕ್ಷ ಕೋಟಿ ರೂ ತೆರಿಗೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. 89,086 ರೂಗಳ 14 ಕಂತುಗಳಲ್ಲಿ ಈ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ.
ಒಟ್ಟು ತೆರಿಗೆ ಹಂಚಿಕೆ: 1,78,173 ಕೋಟಿ ರೂ
- ಉತ್ತರಪ್ರದೇಶ: 31,962 ಕೋಟಿ ರೂ
- ಬಿಹಾರ: 17,921 ಕೋಟಿ ರೂ
- ಮಧ್ಯಪ್ರದೇಶ: 13,987 ಕೋಟಿ ರೂ
- ಪಶ್ಚಿಮ ಬಂಗಾಳ: 13,404 ಕೋಟಿ ರೂ
- ಮಹಾರಾಷ್ಟ್ರ: 11,255 ಕೋಟಿ ರೂ
- ರಾಜಸ್ಥಾನ: 10,737 ಕೋಟಿ ರೂ
- ಒಡಿಶಾ: 8,068 ಕೋಟಿ ರೂ
- ತಮಿಳುನಾಡು: 7,268 ಕೋಟಿ ರೂ
- ಆಂಧ್ರಪ್ರದೇಶ: 7,211 ಕೋಟಿ ರೂ
- ಕರ್ನಾಟಕ: 6,498 ಕೋಟಿ ರೂ
- ಗುಜರಾತ್ : 6,197 ಕೋಟಿ ರೂ
- ಛತ್ತೀಸ್‌ಗಡ್ : 6,070 ಕೋಟಿ ರೂ
- ಜಾರ್ಖಂಡ್: 5,892 ಕೋಟಿ ರೂ
- ಅಸ್ಸಾಂ: 5,573 ಕೋಟಿ ರೂ
- ತೆಲಂಗಾಣ: 3,745 ಕೋಟಿ ರೂ
- ಕೇರಳ: 3,430 ಕೋಟಿ ರೂ
- ಪಂಜಾಬ್: 3,220 ಕೋಟಿ ರೂ
- ಅರುಣಾಚಲಪ್ರದೇಶ: 3,131 ಕೋಟಿ ರೂ
- ಉತ್ತರಾಖಂಡ್: 1,992 ಕೋಟಿ ರೂ
- ಹರಿಯಾಣ: 1,947 ಕೋಟಿ ರೂ
- ಹಿಮಾಚಲಪ್ರದೇಶ: 1,479 ಕೋಟಿ ರೂ
- ಮೇಘಾಲಯ: 1,367 ಕೋಟಿ ರೂ
- ಮಣಿಪುರ: 1,276 ಕೋಟಿ ರೂ
- ತ್ರಿಪುರ: 1,261 ಕೋಟಿ ರೂ
- ನಾಗಾಲ್ಯಾಂಡ್ : 1,014 ಕೋಟಿ ರೂ
- ಮಿರ್ಝೋರಾಂ: 891 ಕೋಟಿ ರೂ
- ಸಿಕ್ಕಿಂ: 691 ಕೋಟಿ ರೂ
- ಗೋವಾ: 688 ಕೋಟಿ ರೂ
ರಾಜ್ಯಗಳ ಆದಾಯ, ಜನಸಂಖ್ಯೆ, ವಿಸ್ತೀರ್ಣ, ತೆರಿಗೆ ಸಂಗ್ರಹ ಹೀಗೆ ಬೇರೆ ಬೇರೆ ಅಂಶಗಳನ್ನು ನಿರ್ದಿಷ್ಟ ಆದ್ಯತಾನುಸಾರ ಪರಿಗಣಿಸಿ ತೆರಿಗೆ ಹಂಚಿಕೆಯ ಸೂತ್ರವನ್ನು ಮುಂದಿಡುತ್ತದೆ ಹಣಕಾಸು ಆಯೋಗ. 15ನೇ ಹಣಕಾಸು ಆಯೋಗ ಯಾವ್ಯಾವ ಅಂಶಗಳನ್ನು ಪರಿಗಣಿಸಿದೆ, ಮತ್ತು ಅವುಗಳಿಗೆ ಎಷ್ಟು ಆದ್ಯತೆ ಕೊಟ್ಟಿದೆ ಎಂಬ ವಿವರ ಇಲ್ಲಿದೆ:
- ಆದಾಯ ಅಂತರ: ಶೇ. 45
- ಪ್ರದೇಶದ ವಿಸ್ತೀರ್ಣತೆ: ಶೇ. 15
- ಜನಸಂಖ್ಯೆ: ಶೇ. 15
- ಜನಸಂಖ್ಯಾ ನಿಯಂತ್ರಣ ಪ್ರಯತ್ನ: ಶೇ. 12.5
- ಅರಣ್ಯ ಮತ್ತು ಪರಿಸರ: ಶೇ. 10
- ತೆರಿಗೆ ಮತ್ತು ಹಣಕಾಸು ಪ್ರಯತ್ನ: ಶೇ. 2.5
ಇಲ್ಲಿ ಇನ್ಕಮ್ ಡಿಸ್ಟೆನ್ಸ್ ಅಥವಾ ಆದಾಯ ಅಂತರ ಎಂದರೆ ಇಡೀ ದೇಶದ ಒಟ್ಟಾರೆ ಸರಾಸರಿ ತಲಾದಾಯಕ್ಕೆ ಹೋಲಿಸಿದರೆ ಒಂದು ರಾಜ್ಯದ ತಲಾದಾಯ ಎಷ್ಟಿದೆ ಎನ್ನುವುದು. ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ಪ್ರಮುಖ ರಾಜ್ಯಗಳು ಅಸಮಾಧಾನಗೊಂಡಿವೆ. ತಮ್ಮ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂಬುದು ಅವುಗಳ ವಾದ. ತೆರಿಗೆ ಹಂಚಿಕೆ ಸೂತ್ರದಲ್ಲಿ ಇಡಲಾಗಿರುವ ಮಾನದಂಡ ಮತ್ತು ಆದ್ಯತೆಗಳನ್ನು ಬದಲಿಸಬೇಕು ಎಂಬುದು ಈ ರಾಜ್ಯಗಳ ಒತ್ತಾಯವಾಗಿದೆ.
ಇದನ್ನು ನೋಡಿ : ಹರಿಯಾಣ| ಜಮ್ಮು – ಕಾಶ್ಮೀರ | ಚುನಾವಣಾ ಫಲಿತಾಂಶದ ವಿಶ್ಲೇಷಣೆ Janashakthi Media