ಯುಕೆ : ಟೋರಿ ಪರಾಭವ, ಲೇಬರ್ ಗೆ  ಭಾರಿ ಬಹುಮತ, ಆದರೆ ಭಾರೀ ಬೆಂಬಲವಿಲ್ಲ?!

-ವಸಂತರಾಜ ಎನ್.ಕೆ.

ಆಳುವ ಟೋರಿ (ಅಥವಾ ಕನ್ಸರ್ವೇಟಿವ್) ಪಕ್ಷ ಪರಾಭವ ಹೊಂದಿದೆ. ಇದರೊಂದಿಗೆ ಕಳೆದ 14 ವರ್ಷಗಳ ಸತತ ಟೋರಿ ಆಳ್ವಿಕೆ ಕೊನೆಗೊಂಡಿದೆ.  ಟೋರಿ ಗಳ ಮೇಲೆ ಜನರ ಆಕ್ರೋಶವಿದ್ದು, ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆಯೆಂಬುದು ಸ್ಪಷ್ಟವಿದೆ. ಟೋರಿಗಳ ಪರಾಭವ ಸಮಗ್ರವಾಗಿದೆ. ಬಹುಮತ ಮತ್ತು ಭಾರೀ ಸಂಖ್ಯೆಯಲ್ಲಿ ಸೀಟುಗಳನ್ನು ಕಳೆದುಕೊಂಡದ್ದು ಮಾತ್ರವಲ್ಲ, ಮತಗಳಿಕೆಯಲ್ಲೂ ಶೇ.20ರಷ್ಟು ನಷ್ಟವಾಗಿದೆ. ಮಾಜಿ ಪ್ರಧಾನಿ ಲಿಝ್ ಟ್ರಸ್ ಸೇರಿದಂತೆ 11 ಪ್ರಮುಖ ಸಚಿವರು ಸೋತಿದ್ದಾರೆ.
ಲೇಬರ್ ದೊಡ್ಡ ಸಂಖ್ಯೆಯಲ್ಲಿ (211) ಸೀಟು ಹೆಚ್ಚಿಸಿಕೊಂಡು ಭಾರೀ ಬಹುಮತ (ಶೇ. 63 ಪ್ರಮಾಣದ ಸೀಟುಗಳು) ಪಡೆದಿದ್ದರೂ, ಅದರ ಮತಗಳಿಕೆ ಪ್ರಮಾಣ ಶೇ.33.8 ಮಾತ್ರವಿದ್ದು, 2019ಕ್ಕೆ ಹೋಲಿಸಿದರೆ ಶೇ.1.7 ಗಳಷ್ಟು ಮಾತ್ರ ಏರಿತ್ತು. ಲೇಬರ್ ಪಕ್ಷ ಯು.ಕೆ ಯ ಚರಿತ್ರೆಯಲ್ಲೇ ಅತ್ಯಂತ ಕಡಿಮೆ ಮತಗಳಲ್ಲಿ ಅತಿ ಹೆಚ್ಚು ಸೀಟು ಗಳಿಸಿದ ರೆಕಾರ್ಡ್ ಮಾಡಿದೆಯಂತೆ! ಅದು ಹೇಗೆ ಸಾಧ್ಯ? ಈ ಚುನಾವಣೆಗಳಲ್ಲಿ ‘”ಮುಖ್ಯಧಾರೆ”ಯಲ್ಲದ ಪಕ್ಷಗಳು ಬರಿಯ ಶೇ.20ರಷ್ಟು ಸೀಟು ಗಳಿಸಿದ್ದರೂ, ಶೇ.40ರಷ್ಟು ಮತ ಗಳಿಸಿವೆ. ‘ದ್ವಿಪಕ್ಷೀತೆಯ ರಾಜಕೀಯ” ಕುಸಿಯುತ್ತಿರುವುದರ ಸಂಕೇತವಿದು. ವಿಶ್ಲೇಷಣೆ ಮತ್ತು ವಿವರಗಳಿಗೆ ಮುಂದೆ ಓದಿ.

ಯು.ಕೆ ಯಲ್ಲಿ ಜುಲೈ 4ರಂದು ನಡೆದ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಚಾರಿತ್ರಿಕ ಫಲಿತಾಂಶ ಬಂದಿದೆ. ಪ್ರಧಾನಿ ರಿಶಿ ಸುನಕ್ ಅವರ ಆಳುವ ಟೋರಿ (ಅಥವಾ ಕನ್ಸರ್ವೇಟಿವ್) ಪಕ್ಷ ಪರಾಭವ ಹೊಂದಿದೆ. ಇದರೊಂದಿಗೆ ಕಳೆದ 14 ವರ್ಷಗಳ ಸತತ ಟೋರಿ ಆಳ್ವಿಕೆ ಕೊನೆಗೊಂಡಿದೆ. ಟೋರಿ ಪಕ್ಷ 251 ಸೀಟು ಕಳೆದುಕೊಂಡು ಇತ್ತೀಚಿನ ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾದ 121 ಸೀಟುಗಳಿಗೆ ಕುಸಿದಿದೆ. ಲೇಬರ್ ಪಕ್ಷ 650 ಸೀಟುಗಳ ಪಾರ್ಲಿಮೆಂಟಿನಲ್ಲಿ 411 ಸೀಟುಗಳನ್ನು ಗಳಿಸಿ 1997ರ ನಂತರ ಅತಿ ಹೆಚ್ಚು ಸೀಟು ಗಳಿಸಿದೆ.

ಇದನ್ನೂ ಓದಿ: ತೂಗು ಸೇತುವೆ ಮತ್ತು ಅಭಿವೃದ್ಧಿ

ಮೂರನೇ ಎರಡು ಪ್ರಮಾಣದ (63% ಸೀಟುಗಳು) ಬಹುಮತಕ್ಕೆ ಹತ್ತಿರ ಬಂದಿದೆ. 2019ಕ್ಕೆ ಹೋಲಿಸಿದರೆ, 211 ಸೀಟುಗಳನ್ನು ಹೆಚ್ಚಿಸಿಕೊಂಡಿದೆ. ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿಯಾಗಿ  ನೇಮಿಸಲಾಗಿದೆ. ಲಿಬರಲ್ ಡೆಮೊಕ್ರಾಟಿಕ್ ಪಕ್ಷ ಸಹ ಅನಿರೀಕ್ಷಿತವಾಗಿ 71 ಸೀಟು ಗಳಿಸಿ ಪಕ್ಷದ ಚರಿತ್ರೆಯಲ್ಲೇ ಅತ್ಯಂತ ಹೆಚ್ಚು ಸೀಟು ಗಳಿಸಿದೆ. ಈ ಚುನಾವಣೆಯ ಮತದಾನದ ಪ್ರಮಾಣ (60%) 2001ರ ನಂತರ ಕಂಡು ಬಂದ ಅತಿ ಕಡಿಮೆ ಪ್ರಮಾಣ ಎನ್ನಲಾಗಿದೆ.

ಯುರೋ ಕೂಟದ ಚುನಾವಣೆಯಲ್ಲಿ ಹಲವು ಪ್ರಮುಖ ದೇಶಗಳಲ್ಲಿ ಉಗ್ರ ಬಲಪಂಥೀಯ ಪಕ್ಷಗಳ ಭಾರೀ ಮುನ್ನಡೆಯ ಮತ್ತು ಇತ್ತೀಚೆಗೆ ಫ್ರಾನ್ಸ್ ನ ಮೊದಲ ಸುತ್ತಿನಲ್ಲಿ ಉಗ್ರ ಬಲಪಂಥೀಯ ಪಕ್ಷ ಮೊದಲ ಸ್ಥಾನದಲ್ಲಿ ಬಂದು ಎರಡನೇ ಸುತ್ತಿನಲ್ಲಿ ಬಹುಮತ ಪಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಯುಕೆ ಚುನಾವಣೆ ಸ್ವಲ್ಪ ಸಮಾಧಾನ ತರಬಹುದಾದರೂ, ವಿವರಗಳಿಗೆ ಹೋದರೆ ಆಶ್ವರ್ಯ ಕಾದಿದೆ. ಹಲವು ಅವತಾರಗಳಲ್ಲಿ (ಬ್ರೆಕ್ಸಿಟ್, ಯುಕೆ ಇಂಡಿಪಿಂಡೆಂಟ್ ಇತ್ಯಾದಿ) ಬಹಳ ಕಾಲದಿಂದ ಯು.ಕೆ ಯಲ್ಲಿ ಇದ್ದ, ಈ ಬಾರಿ  ‘ರಿಫಾರ್ಮ್’ ಪಕ್ಷವಾಗಿ ಸ್ಪರ್ಧಿಸಿದ್ದ ಉಗ್ರ ಬಲಪಂಥೀಯ ಪಕ್ಷ  ಕೇವಲ 5 ಸೀಟು ಗಳಿಸಿದರೂ ಶೇ.14 ಮತ ಗಳಿಸಿದ್ದು ರಾಜಕೀಯವಾಗಿ ಗಮನಾರ್ಹ.

ಚುನಾವಣಾ ಫಲಿತಾಂಶಗಳ ವಿವರಗಳಿಗೆ ಹೋದರೆ ಇತರ ಕೆಲವು ಮುಖ್ಯ ಅಂಶಗಳು ಕಾಣಿಸುತ್ತಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.

ಟೋರಿ ಗಳಿಗೆ ಅವಮಾನಕಾರಿ ಸಮಗ್ರ ಸೋಲು

ಟೋರಿ ಗಳ ಮೇಲೆ ಜನರ ಆಕ್ರೋಶವಿದ್ದು, ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆಯೆಂಬುದು ಸ್ಪಷ್ಟವಿದೆ. ಟೋರಿ ಗಳ  ಪರಾಭವ ಸಮಗ್ರವಾಗಿದೆ. ಬಹುಮತ ಮತ್ತು ಭಾರೀ ಸಂಖ್ಯೆಯಲ್ಲಿ ಸೀಟುಗಳನ್ನು ಕಳೆದುಕೊಂಡದ್ದು ಮಾತ್ರವಲ್ಲ, ಮತಗಳಿಕೆಯಲ್ಲೂ ಶೇ.20ರಷ್ಟು ನಷ್ಟವಾಗಿದೆ. ಮಾಜಿ ಪ್ರಧಾನಿ ಲಿಝ್ ಟ್ರಸ್ ಸೇರಿದಂತೆ 11 ಪ್ರಮುಖ ಸಚಿವರು ಸೋತಿದ್ದಾರೆ. ಯಾವುದೇ ಮಾಜಿ ಪ್ರಧಾನಿ ಸೋತಿರುವುದು ಇದೇ ಮೊದಲು ಎನ್ನಲಾಗಿದೆ.  ಟೋರಿ ಪಕ್ಷ ಹೆಚ್ಚು ಕಡಿಮೆ ಎಲ್ಲ ಪ್ರದೇಶಗಳಲ್ಲಿ ನಷ್ಟ ಅನುಭವಿಸಿದೆ. ದಕ್ಷಿಣ ಇಂಗ್ಲೆಂಡಿನಲ್ಲಿ 100ಕ್ಕೂ ಹೆಚ್ಚು ಸೀಟು ಗಳಿಸಿದೆ. ವೇಲ್ಸ್ ನಲ್ಲಿ ಶೂನ್ಯ ಸಂಪಾದನೆ ಮಾಡಿದೆ.

ಮಿತವ್ಯಯದ ಹೆಸರಲ್ಲಿ ಸಾಮಾಜಿಕ ಸೇವೆಗಳಲ್ಲಿ ಭಾರೀ ಕಡಿತ; ರಾಷ್ಟ್ರೀಯ ಆರೋಗ್ಯ ಸೇವೆ ಸಂಪನ್ಮೂಲಗಳಿಲ್ಲದೆ ಭಾರೀ ವಿಳಂಬ ಮತ್ತು ಕಳಪೆಯಾಗಿರುವುದು; ಖಾಸಗೀಕರಿಸಿದ ಸಾರ್ವಜನಿಕ ಸೇವೆಗಳಲ್ಲಿ (ನೀರು ಪೂರೈಕೆ, ರೈಲು ಇತ್ಯಾದಿ) ಭ್ರಷ್ಟಾಚಾರ, ದುಬಾರಿ ಕೆಟ್ಟ ಸೇವೆ; ಕೊವಿದ್ ಮಹಾಸಾಂಕ್ರಾಮಿಕದ ನಿರ್ವಹಣೆಯಲ್ಲಿ ಕೊರತೆಯಿಂದ ಭಾರೀ ಸಾವು-ನೋವು; ಬ್ರೆಕ್ಸಿಟ್ ನಿಂದ ಮತ್ತು ಉಕ್ರೇನ್ ಯುದ್ಧದಿಂದ ಉಲ್ಬಣಗೊಂಡ  ಬೆಲೆ ಏರಿಕೆ ಮತ್ತು ಜೀವನ ವೆಚ್ಚದ ಏರಿಕೆಯ ಬಗ್ಗೆ ನಿರ್ಲಕ್ಷ; ಇತ್ತೀಚಿನ ಪ್ರಧಾನಿಗಳಾದ ಜಾನ್ಸನ್, ಲಿಝ್, ರಿಶಿ ಮತ್ತು ಹಲವು ಸಚಿವರ ಬೇಜವಾಬ್ದಾರಿ ವರ್ತನೆಗಳು, ವಿಚಿತ್ರ ನೀತಿಗಳು, ಕಳಪೆ ಸಾಧನೆ ಮತ್ತು  ಭ್ರಷ್ಟಾಚಾರ– ಇವೆಲ್ಲ  ಟೋರಿ ಪರಾಭವಕ್ಕೆ ಕಾರಣವೆನ್ನಲಾಗಿದೆ.

ಯುರೋ ಕೂಟ ಬಿಡಬೇಕೇ ಎಂಬ 2016ರ ‘ಬ್ರೆಕ್ಸಿಟ್’ ಎಂದು ಕರೆಯಲಾದ  ಜನಮತ ಸಂಗ್ರಹದಲ್ಲಿ ‘ಬಿಡಬೇಕು’ ಎಂದು ಭಾರೀ ಬಹುಮತದಲ್ಲಿ ಹೇಳಿದ ಕ್ಷೇತ್ರಗಳಲ್ಲಿ ಟೋರಿ ಪಕ್ಷ ಭಾರೀ ಮತ ಕಳೆದುಕೊಂಡು ಸೋತಿದೆ. ಬ್ರೆಕ್ಸಿಟ್ ನ್ನು ಟೋರಿ ಸರಕಾರ ಬೆಂಬಲಿಸಿತ್ತು, ಲೇಬರ್ ವಿರೋಧಿಸಿತ್ತು. ‘ಬ್ರೆಕ್ಸಿಟ್ ‘ ಗೆ ಪರ-ವಿರೋಧ ಮತಗಳಲ್ಲಿ ಸ್ವಲ್ಪವೇ ಅಂತರವಿದ್ದು, ಅದರ ಪರ ಮತ ಗಳಿಸಲು ಟೋರಿ ತನ್ನ ಪ್ರಚಾರದಲ್ಲಿ ಹಲವು ಸುಳ್ಳುಗಳನ್ನು, ಅತಿಶಯೋಕ್ತಿಗಳನ್ನು, ಭರವಸೆಗಳನ್ನು ನೀಡಿತ್ತು. ‘ಬ್ರೆಕ್ಸಿಟ್  ನಂತರ ಯುಕೆ ಜಾಗತಿಕ ವ್ಯಾಪಾರ ಹೆಚ್ಚುತ್ತದೆ’, ‘ಅದು ಯುಕೆ ಆರ್ಥಿಕಕ್ಕೆ ಒಳ್ಳೆಯದು’, ‘ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ’, ಆದರೆ ಇದು ವಾಸ್ತವದಲ್ಲಿ ತಿರುವು ಮುರುವಾದಾಗ ಜನರ ಆಕ್ರೋಶ ಹೆಚ್ಚಿತ್ತು. ಮನೆಸಾಲ ದರ ವಿಪರೀತವಾಗಿ ಏರಿದ್ದರಿಂದ ಮನೆಸಾಲ ಹೆಚ್ಚಿನ ಪ್ರಮಾಣದಲ್ಲಿದ್ದ ಕ್ಷೇತ್ರಗಳಲ್ಲೂ ಟೋರಿ ಪಕ್ಷ ಭಾರೀ ಮತ ಕಳೆದುಕೊಂಡು ಸೋತಿದೆ.

ವಿದೇಶಿ ವಲಸೆಗಾರರನ್ನು ತಡೆಯಲು ರಿಶಿ ಸುನಕ್ ಅವರ ಇತ್ತೀಚಿನ ವಿಚಿತ್ರ ಪರಿಹಾರ (ರವಾಂಡಾ ಕ್ಕೆ ಅವರನ್ನು ಕಳಿಸಿ ಅಲ್ಲಿ ಕ್ಯಾಂಪುಗಳಲ್ಲಿರಿಸುವ) ವಿವಾದಾಸ್ಪದವಾಗಿತ್ತು. ವಿದೇಶಿ ವಲಸೆಗಾರರ  ಸಂಖ್ಯೆ ಹೆಚ್ಚುತ್ತಿರುವುದರಿಂದ ಯುಕೆ ಜನರ ಒಂದು ವಿಭಾಗ ನಿಜವಾಗಿಯೂ ಆತಂಕಿತವಾಗಿದ್ದರೆ, ಇನ್ನೊಂದು ವಿಭಾಗ (ಸ್ವತಃ ಮಾಜಿ ವಲಸೆಗಾರರರು) ಮತ್ತು ವಲಸೆಗಾರರು ಯುಕೆ ಆರ್ಥಿಕ ಸಮಸ್ಯೆಗಳಿಗೆ ಕಾರಣರಲ್ಲವೆಂದು ಅರ್ಥ ಮಾಡಿಕೊಂಡಿರುವವರು ಈ ಸಮಸ್ಯೆಯನ್ನು ಉದ್ದೇಶಪೂರ್ವಕವಾಗಿ ಅತಿಯಾಗಿ ಹಿಗ್ಗಿಸಲಾಗುತ್ತಿದೆಯೆಂದು ನಂಭಿದ್ದರು. ಈ ವಿಭಾಗದ ಆಕ್ರೋಶ ಇದರಿಂದ ಹೆಚ್ಚಾಗಿರಬಹುದು.

ಅದೇ ರೀತಿ ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ಗೆ,  ಗಾಜಾ ನರಮೇಧದಲ್ಲಿ ಇಸ್ರೇಲಿಗೆ ಯುಕೆ ಸರಕಾರದ ಬೆಂಬಲದ ನೀತಿಗೆ ವ್ಯಾಪಕ ವಿರೋಧವಿತ್ತು. ಈ ನೀತಿಗಳ ವಿರುದ್ಧ ಸತತ ಭಾರೀ ಪ್ರದರ್ಶನಗಳು ನಡೆಯುತ್ತಿದ್ದು, ಅದನ್ನು ಸರಕಾರ ದಮನಗೊಳಿಸುತ್ತಿತ್ತು.  ಇದೂ ಚುನಾವಣಾ ವಿಷಯವಾಗಿದ್ದು, ಇದೂ ಟೋರಿಗಳಿಗೆ ಸಾಕಷ್ಟು ನಷ್ಟವುಂಟು ಮಾಡಿರಬಹುದು. ಪ್ರಮುಖವಾಗಿ ಗಾಜಾ ನರಮೇಧಕ್ಕೆ ಯುಕೆ ಬೆಂಬಲವನ್ನು ವಿರೋಧಿಸಿ ನಿಂತ 5 ಪಕ್ಷೇತರರು, ಟೋರಿ ಮತ್ತು ಈ ಕುರಿತು ಸ್ಪಷ್ಟ ದೃಢ ನಿಲುವು ತಳೆಯದ ಲೇಬರ್ ಅಭ್ಯರ್ಥಿ, ಇಬ್ಬರನ್ನೂ ಸೋಲಿಸಿ ಆಯ್ಕೆಯಾಗಿದ್ದಾರೆ. ಉಗ್ರ ಬಲಪಂಥೀಯ ರಿಫಾರ್ಮ್ ಪಕ್ಷ ಉಕ್ರೇನ್ ಯುದ್ಧ ವಿರೋಧಿಸಿದ್ದು, ಅದರ ಭಾರೀ ಮತ-ಏರಿಕೆಗೆ ಇದೂ ಒಂದು ಕಾರಣವಾಗಿರಬಹುದು.

ಕೋಷ್ಟಕ-1 ಯುಕೆ ಚುನಾವಣೆ ಫಲಿತಾಂಶ – ಪಕ್ಷಗಳ ಸೀಟು, ಮತಗಳಿಕೆ, ಬದಲಾವಣೆ

 ಲೇಬರ್ ಗೆ ಭಾರೀ ಬಹುಮತ, ಆದರೆ ಭಾರೀ ಬೆಂಬಲವಿಲ್ಲ

ಲೇಬರ್ ದೊಡ್ಡ ಸಂಖ್ಯೆಯಲ್ಲಿ (211) ಸೀಟು ಹೆಚ್ಚಿಸಿಕೊಂಡು ಭಾರೀ ಬಹುಮತ (ಶೇ. 63 ಪ್ರಮಾಣದ ಸೀಟುಗಳು) ಪಡೆದಿದ್ದರೂ, ಅದರ ಮತಗಳಿಕೆ ಪ್ರಮಾಣ ಶೇ.33.8 ಮಾತ್ರವಿದ್ದು, 2019ಕ್ಕೆ ಹೋಲಿಸಿದರೆ ಶೇ.1.7 ಗಳಷ್ಟು ಮಾತ್ರ ಏರಿತ್ತು. ಲೇಬರ್ ಪಕ್ಷ ಯು.ಕೆ ಯ ಚರಿತ್ರೆಯಲ್ಲೇ ಅತ್ಯಂತ ಕಡಿಮೆ ಮತಗಳಲ್ಲಿ ಅತಿ ಹೆಚ್ಚು ಸೀಟು ಗಳಿಸಿದ ರೆಕಾರ್ಡ್ ಮಾಡಿದೆಯಂತೆ! ಅದು ಹೇಗೆ ಸಾಧ್ಯ? ಇದು ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ  ಅತ್ಯಂತ ಹೆಚ್ಚು ಮತ ಪಡೆದ ಅಭ್ಯರ್ಥಿ ಗೆಲ್ಲುವ ಯು.ಕೆ ಚುನಾವಣಾ ವ್ಯವಸ್ಥೆಯ (ಭಾರತದಲ್ಲೂ ಇದೇ ವ್ಯವಸ್ಥೆಯಿದೆ) ವಿಪರೀತಗಳಲ್ಲಿ ಒಂದು. ಹೀಗಾಗಿ ಶೇ.33.8 ಮತ ಗಳಿಸಿದ ಲೇಬರ್ ಶೇ.63 (411) ಸೀಟುಗಳನ್ನು ಗಳಿಸಿದೆ. ಶೇ.14 ಮತ ಗಳಿಸಿದ ರಿಫಾರ್ಮ್ ಕೇವಲ ಶೇ.0.8 (5) ಸೀಟು ಗಳಿಸಿದೆ. ಟೋರಿ ಪಕ್ಷದ ಮತ ಪ್ರಮುಖವಾಗಿ ದೊಡ್ಡ ಪ್ರಮಾಣದಲ್ಲಿ  ರಿಫಾರ್ಮ್ ಪಕ್ಷಕ್ಕೆ ಹೋಗಿದೆ. ಹೀಗಾಗಿ ಲೇಬರ್ ಗೆ ಭಾರೀ ಬಹುಮತ ಬಂದಿದೆ. ಆದರೆ ಅದರ ಜನಬೆಂಬಲ ಗಮನಾರ್ಹವಾಗಿ ಹೆಚ್ಚಿಲ್ಲ.

ಇದಕ್ಕೆ ಕಾರಣ ಲೇಬರ್ ಟೋರಿ ಪಕ್ಷದ ನೀತಿಗಳ ಪರಿಣಾಮಗಳನ್ನು ಟೀಕಿಸುತ್ತಾ ಬಂದಿದ್ದರೂ, “ಬದಲಾವಣೆ” ಯ ಥೀಮ್ ಮೇಲೆ ಚುನಾವಣಾ ಪ್ರಚಾರ ನಡೆಸಿದರೂ, “ಬದಲಾವಣೆ” ಏನೆಂಬುದನ್ನು ವಿಷದೀಕರಿಸುವ ಬದಲಿ ನೀತಿಗಳನ್ನು ಕಾರ್ಯಕ್ರಮವಾಗಿ ದೃಢವಾಗಿ ಮುಂದಿಟ್ಟಿಲ್ಲ. ಈಗಿನ ನಾಯಕ ಸ್ಟಾರ್ಮರ್ ಹಿಂದಿನ ನಾಯಕ ಕಾರ್ಬಿನ್ ತಯಾರಿಸಿದ್ದ ಬದಲಿ ನೀತಿಗಳ ಕಾರ್ಯಕ್ರಮವನ್ನು ದುರ್ಬಲಗೊಳಿಸುವ ಅಥವಾ ಕೈ ಬಿಡುತ್ತಾ ಬಂದಿದ್ದರು. ಖಾಸಗೀಕರಣಗೊಂಡ ಎಲ್ಲ ಸಾಮಾಜಿಕ ಸೇವೆಗಳನ್ನು (ನೀರು, ರೈಲು ಇತ್ಯಾದಿ) ಮತ್ತೆ ರಾಷ್ಟ್ರೀಕರಣಗೊಳಿಸುವ ನೀತಿಯನ್ನು ಬರಿಯ ರೈಲ್ವೇ ರಾಷ್ಟ್ರೀಕರಣಕ್ಕೆ ಸೀಮಿತಗೊಳಿಸಿದ್ದರು.

ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಸೂಕ್ತ ಸಂಪನ್ಮೂಲಗಳೊಂದಿಗೆ ಬಲ ಪಡಿಸುವ ಭರವಸೆಯಿತ್ತಿದ್ದರೂ, ಆರೋಗ್ಯ ಸೇವೆಯಲ್ಲಿ “ದಕ್ಷತೆ ಮತ್ತು ಉತ್ತಮ ಸೇವೆ”ಗಾಗಿ ಖಾಸಗಿ ಪಾಲುದಾರಿಕೆ ಬೇಕಾಗುತ್ತದೆಯೆಂದು ಹೇಳಿದ್ದರು. ಸಾಮಾಜಿಕ ಸೇವೆ ಮತ್ತಿತರ ಕಲ್ಯಾಣ ಯೋಜನೆಗಳಿಗೆ ಸಂಪನ್ಮೂಲ ಹೊಂಚಲು ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಹಿಂದಿನ ಪ್ರಸ್ತಾಪಗಳ ಬಗ್ಗೆ ಮೌನವಾಗಿದ್ದರು. ಕಾರ್ಮಿಕರ ಆದಾಯ ಹೆಚ್ಚಿಸುವ ಕ್ರಮಗಳ, ಅದಕ್ಕಾಗಿ ಅವರ ಹೋರಾಟಗಳಾದಾಗ ಅದಕ್ಕೆ ಬೆಂಬಲಿಸುವ, ಸ್ಪಂದನ ತೋರುವ, ದಮನ ಮಾಡದಿರುವ ಕ್ರಮಗಳ ಬಗೆಗಾಗಲಿ ಹೆಚ್ಚು ಮಾತಾಡಲಿಲ್ಲ. ಈ ಕುರಿತ ಟೋರಿ ನೀತಿಗಳನ್ನು ಬದಲಿಸುವ ಭರವಸೆ ನೀಡಲಿಲ್ಲ.

ವಲಸೆಗಾರರ ವಿರುದ್ಧ ನವನಾಜಿ ದ್ವೇಷ ಪ್ರಚಾರ, ಇಸ್ಲಾಂ-ಭೀತಿ ಪ್ರಚಾರಗಳನ್ನು ದೃಢವಾಗಿ ವಿರೋಧಿಸಲಿಲ್ಲ. ಆ ಬಗ್ಗೆ ಟೋರಿ ವಿಚಿತ್ರ ನೀತಿಗಳನ್ನು ವಿರೋಧಿಸಿದರೆ ವಿನಹ, ತಮ್ಮ ನೀತಿಗಳನ್ನು ಸ್ಪಷ್ಟ ಪಡಿಸಲಿಲ್ಲ. ವಿದೇಶಾಂಗ ನೀತಿಯಲ್ಲಿ ಸಹ ಗಾಜಾ ನರಮೇಧದ ಮತ್ತು ಉಕ್ರೇನ್ ಯುದ್ಧದ  ವಿರುದ್ಧ ಪ್ರಬಲ ಜನಾಭಿಪ್ರಾಯ ರೂಪುಗೊಳ್ಳುತ್ತಿದ್ದರೂ ಟೋರಿ ನೀತಿಗಿಂತ ಲೇಬರ್ ನೀತಿ ಭಿನ್ನವಾಗಿರಲಿಲ್ಲ. ‘ಇಸ್ರೇಲ್ ಗೆ ತನ್ನ ಸ್ವರಕ್ಷಣೆಯ ಹಕ್ಕುಯಿದೆ’ ಎನ್ನುವ, ಗಾಜಾ ನರಮೇಧ ಖಂಡಿಸದಿರುವ ಮತ್ತು ನರಮೇಧ ನಡೆಸುತ್ತಿರುವ ಇಸ್ರೇಲಿಗೆ ಮಿಲಿಟರಿ ಪೂರೈಕೆ ನಿಲ್ಲಿಸದಿರುವ ಟೋರಿ ಸರಕಾರದ ನೀತಿಗಳನ್ನು ವಿರೋಧಿಸಲಿಲ್ಲ ಮಾತ್ರವಲ್ಲ, ಸಮರ್ಥಿಸಿತು. ಇದು ಮುಸ್ಲಿಂ ಗಮನಾರ್ಹ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಲೇಬರ್ ಸೋಲಿಗೂ ಕಾರಣವಾಯಿತು. ಭಾರೀ ಇಂಧನ ಬೆಲೆಏರಿಕೆ, ಹಣದುಬ್ಬರಕ್ಕೆ ಕಾರಣವಾಗಿ ಜನರ ಜೀವನವೆಚ್ಚವನ್ನು ಮತ್ತಷ್ಟು ಹದಗೆಡಿಸಿದ

ಉಕ್ರೇನ್ ಯುದ್ಧ ನಿಲ್ಲಿಸುವುದನ್ನು ಬಿಟ್ಟು, ಉಕ್ರೇನ್ ಗೆ ಭಾರಿ ಪ್ರಮಾಣದ ಮಿಲಿಟರಿ, ಹಣಕಾಸು ನೆರವು ನೀಡುವ ನೀತಿಯನ್ನೂ ಸಹ ಲೇಬರ್ ನಾಯಕ ವಿರೋಧಿಸಲಿಲ್ಲ ಮಾತ್ರವಲ್ಲ, ಸಮರ್ಥಿಸಿತು. ಈ ಎಲ್ಲ ನೀತಿಗಳ ವಿರುದ್ಧ ಲೇಬರ್ ಪಕ್ಷದ ಬೆಂಬಲಿಗರು, ನಾಯಕರು ವ್ಯಾಪಕವಾಗಿ ಸಾರ್ವಜನಿಕವಾಗಿ ಪ್ರತಿಭಟನಾ ಪ್ರದರ್ಶನ ಇತ್ಯಾದಿಗಳ ಮೂಲಕ ಅಭಿವ್ಯಕ್ತಪಡಿಸುತ್ತಿದ್ದರೂ ಅದಕ್ಕೆ ಸ್ಪಂದಿಸಲಿಲ್ಲ. ಮಾತ್ರವಲ್ಲ ಅವರ ಮೇಲೆ ಹಲವು ಕಡೆ ಶಿಸ್ತು ಕ್ರಮ ಕೈಗೊಳ್ಳಲಾಯಿತು. ಉದಾಹರಣೆಗೆ ಹಲವು ಪ್ಯಾಲೆಸ್ಟೀನ್ ಪರ ನಾಯಕರಿಗೆ ಟಿಕೇಟು ನಿರಾಕರಿಸಲಾಯಿತು. ಹೀಗೆ ಟೋರಿ ಪಕ್ಷಕ್ಕಿಂತ ಸ್ಪಷ್ಟವಾಗಿ ಭಿನ್ನವಾದ ಜನಪರ ನೀತಿಗಳನ್ನು ಮುಂದಿಡಲಿಲ್ಲ. ಹೀಗಾಗಿ ಲೇಬರ್ ಜನರಲ್ಲಿ ಉತ್ಸಾಹ ಮೂಡಿಸಲಿಲ್ಲ.

ಟೋರಿ ವಿರುದ್ಧದ ಪ್ರತಿಭಟನಾ ಮತಗಳು ಉಗ್ರ ಬಲಪಂಥೀಯ ಮತ್ತಿತರ ಪಕ್ಷಗಳಿಗೆ ಹೋಯಿತು. ಲೇಬರ್ ನಾಯಕ ಸ್ಟಾರ್ಮರ್ ಹೇಳಿದ “ಬದಲಾವಣೆ” ನಿಜವಾಗಿಯೂ ಕಾರ್ಬಿನ್ ನಾಯಕತ್ವದಲ್ಲಿ ಸ್ಪಷ್ಟ ಜನಪರ ನೀತಿ ಅಂಗೀಕರಿಸಿದ್ದ ಲೇಬರ್ ಪಕ್ಷವನ್ನು ಮತ್ತೆ ನವ-ಉದಾರವಾಧಿ ಬೆಂಬಲಿಗ ಟೋನಿ ಬ್ಲೇರ್ ಕಾಲದ “ನವ ಲೇಬರ್” ನತ್ತ ಬದಲಾಯಿಸುವ ಯೋಜನೆಯಿದ್ದ ಹಾಗಿದೆ. ಆದರೆ ಯು,ಕೆ ಜನತೆ ಸಾಮಾನ್ಯವಾಗಿ ಮತ್ತು ಲೇಬರ್ ಪಕ್ಷದ ಬೆಂಬಲಿಗ ದುಡಿಯುವ ಜನ, ಅವರ ಸಂಘಟನೆಗಳು ನಿಜವಾದ ಬದಲಿ ನೀತಿಗೆ ಒತ್ತಡ ಹಾಕಲಿವೆ. ಮಾಜಿ ಲೇಬರ್ ನಾಯಕ ಜೆರೆಮಿ ಕಾರ್ಬಿನ್ ಅವರನ್ನು ಪಕ್ಷದಿಂದ ಹಲವು ನೆಪವೊಡ್ಡಿ ಹೊರಹಾಕಿದರೂ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದಾರೆ, ಲೇಬರ್ ಪಕ್ಷದ ವೇದಿಕೆಗಳಲ್ಲಿ ಮತ್ತು ಕಾರ್ಪೊರೇಟ್ ಮಾಧ್ಯಮಗಳಲ್ಲಿ ಕಾರ್ಬಿನ್ ಅವರ ವಿರುದ್ಧದ ಪ್ರಚಾರದ ನಂತರ ಈ ಚುನಾವಣೆಯಲ್ಲಿ ಕಾರ್ಬಿನ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ನಿಲ್ಲದಂತೆ ಲೇಬರ್ ನಾಯಕತ್ವವು ನಿರ್ಬಂಧಿಸಿತು.

ಇತರ ಲೇಬರ್ ಸದಸ್ಯರು ಸ್ಪಷ್ಟವಾಗಿ ಎಡಕ್ಕೆ ವಾಲುವಂತೆ, ಕಾರ್ಬಿನ್ ಅವರು ಲೇಬರ್ ನಾಯಕರಾಗಿದ್ದ ಅವಧಿಯಲ್ಲಿ, ಸಾರ್ವಜನಿಕರಲ್ಲಿ ವ್ಯಾಪಕ ಬೆಂಬಲವನ್ನು ಪಡೆದರೂ ಸಹ, ಅವರ ನೀತಿಗಳ ವಿರುದ್ಧ ತೀವ್ರ ಒತ್ತಡ ಮತ್ತು ದಾಳಿಗಳನ್ನು ಎದುರಿಸಿದರು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೆ ಇತರ 4 ಸಮರಶೀಲ ನಾಯಕರು ಪಕ್ಷೇತರರಾಗಿ ಗೆದ್ದಿದ್ದಾರೆ, ಕಾರ್ಬಿನ್ ತಮ್ಮ ಮತ್ತು ಲೇಬರ್ ಪಕ್ಷದ ಬೆಂಬಲಿಗರ, ದುಡಿಯುವ ಜನತೆ ಲೇಬರ್ ನಿಜವಾಗಿಯೂ ಜನಪರ “ಬದಲಾವಣೆ” ತರುವಂತೆ ಒತ್ತಡ ಹಾಕಲಿವೆ ಎಂದಿದ್ದಾರೆ.

ಸ್ಕಾಟಿಶ್ ಪ್ರತ್ಯೇಕತಾವಾದಕ್ಕೆ ಏಟು

ಹಿಂದೆ ಪ್ರಬಲವಾಗಿದ್ದ ಸ್ಕಾಟಿಷ್ ರಾಷ್ಟ್ರೀಯ ಪಕ್ಷವು (ಎಸ್.ಎನ್.ಪಿ) ಒಂದು ದಶಕದಲ್ಲಿ ಮೊದಲ ಬಾರಿಗೆ ಹಿನ್ನಡೆ ಕಂಡಿದೆ. 2019 ರಲ್ಲಿ ಸ್ಕಾಟ್ಲೆಂಡ್ನಲ್ಲಿ 48 ಸ್ಥಾನಗಳನ್ನು ಗೆದ್ದ ಎಸ್.ಎನ್.ಪಿ 9 ಸೀಟುಗಳಿಗೆ ಕುಸಿಯುವ ಮೂಲಕ ಭಾರಿ ಹಿನ್ನಡೆ ಕಂಡಿದೆ.

2014 ರಲ್ಲಿ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ‘ಸ್ಕಾಟಿಷ್ ಸ್ವಾತಂತ್ರ್ಯ’ ಪರ ಬೆಂಬಲ ಪಡೆಯುವ ಪ್ರಯತ್ನದಲ್ಲಿ SNP ವಿಫಲವಾದರೂ ಅದು 2015 ರಿಂದ ಪ್ರತಿ UK ಚುನಾವಣೆಯಲ್ಲಿ ಬಹುಪಾಲು ಸ್ಕಾಟಿಷ್ ಸ್ಥಾನಗಳನ್ನು ಗೆದ್ದಿದೆ ಮತ್ತು 2007 ರಿಂದ ಪ್ರಾಂತೀಯ ಸರಕಾರವನ್ನು ನಡೆಸುತ್ತಿದೆ.

ಸ್ಕಾಟ್ಲೆಂಡ್ ನ 57 ಸ್ಥಾನಗಳಲ್ಲಿ ಬಹುಮತವನ್ನು ಗೆದ್ದರೆ ಎರಡನೇ ಸ್ವಾತಂತ್ರ್ಯ ಜನಾಭಿಪ್ರಾಯ ಸಂಗ್ರಹಣೆಗೆ ಜನಾದೇಶವಾಗಲಿದೆಯೆಂದು ಅದು ಪ್ರಚಾರ ಮಾಡಿತ್ತು. ಆದರೆ ಪಕ್ಷದ ಸಮಗ್ರ ಸೋಲು ಸಾಧ್ಯತೆಯನ್ನು ಸದ್ಯಕ್ಕೆ ಹಿನ್ನೆಲೆಗೆ ತಳ್ಳುತ್ತದೆ.

ಯುಕೆ ರಾಜಕೀಯದಲ್ಲೂ ದ್ವಿಪಕ್ಷೀಯತೆ ಕುಸಿಯುತ್ತಿದೆ

ಹೆಚ್ಚಿನ ಅಭಿವೃದ್ಧ ಬಂಡವಾಳಶಾಹಿ ದೇಶಗಳಲ್ಲಿ ಹೆಚ್ಚು ಕಡಿಮೆ ಒಂದೇ (ಆಳುವ ಬಂಡವಾಳಶಾಹಿ ವರ್ಗದ ಪರ) ಆರ್ಥಿಕ ನೀತಿಗಳನ್ನು ಪಾಲಿಸುವ, ಸಾಮಾಜಿಕ ನೆಲೆ ಮತ್ತು ಸಾಮಾಜಿಕ ನೀತಿಗಳಲ್ಲಿ ಮಾತ್ರ ವ್ಯತ್ಯಾಸವಿರುವ ಎರಡು “ಮುಖ್ಯಧಾರೆ”ಯ ಪಕ್ಷಗಳ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಧಿಕಾರ ಈ ಎರಡೂ ಪಕ್ಷಗಳ ನಡುವೆ ಗಿರಕಿ ಹೊಡೆದು ‘ಬದಲಾವಣೆ’ಯ ಪೋಸು ಕೊಡುತ್ತಿರುತ್ತದೆ. ಇತರ ಪಕ್ಷಗಳು ಅಧಿಕಾರಕ್ಕೂ, ಲೆಕ್ಕಕ್ಕೂ ಬಾರದಂತೆ ಹಣಬಲ, ಮಾಧ್ಯಮ ಬಲಗಳ ಮೂಲಕ ಕ್ರಮ ವಹಿಸಲಾಗಿದೆ. ಯು.ಎಸ್ ನಲ್ಲಿ  ಇದು ಅತ್ಯಂತ ಉಗ್ರ ರೂಪದಲಿದ್ದರೆ, ಯುರೋಪಿನಲ್ಲೂ ‘ಅನುಪಾತ ಪ್ರಾತಿನಿಧಿಕ ವ್ಯವಸ್ಥೆ’ ಇರುವಲ್ಲೂ ಈ ‘ದ್ವಿಪಕ್ಷೀತೆಯ ರಾಜಕೀಯ” ಜಾರಿಯಲ್ಲಿತ್ತು. ಆದರೆ ಬಂಡವಾಳಶಾಹಿ ವ್ಯವಸ್ಥೆ ಈಗಿನ ನವ-ಉದಾರವಾದಿ ಹಂತದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಬೆಲೆಏರಿಕೆ, ನಿರುದ್ಯೋಗ, ಅಸಮಾನತೆ ಮಿತಿಮೀರಿ ಜನರನ್ನು ಭೀಕರವಾಗಿ ತಟ್ಟುತ್ತಿರುವಾಗ ‘‘ದ್ವಿಪಕ್ಷೀತೆಯ ರಾಜಕೀಯ” ಕ್ಕೆ ತೀವ್ರ ಸವಾಲು ಎದುರಾಗಿದೆ. ಯುರೋಪಿನ ಹೆಚ್ಚಿನ ದೇಶಗಳಲ್ಲಿ ‘‘ದ್ವಿಪಕ್ಷೀತೆಯ ರಾಜಕೀಯ” ದ ‘”ಮುಖ್ಯಧಾರೆ”ಯ ಪಕ್ಷಗಳ ಜನಬೆಂಬಲ ಕುಸಿದಿದೆ. ಉಗ್ರ ಬಲಪಂಥೀಯ ನವ-ನಾಜಿ ರಾಜಕೀಯ ಶಕ್ತಿಗಳು, ವಿಶೇಷವಾಗಿ ಎಡಶಕ್ತಿಗಳು ದುರ್ಬಲವಾಗಿರುವಲ್ಲಿ, ಇದಕ್ಕೆ ಸವಾಲು ಹಾಕಿವೆ.

ಈ ವರೆಗೆ ಯುಕೆ ‘‘ದ್ವಿಪಕ್ಷೀತೆಯ ರಾಜಕೀಯ” ಇನ್ನೂ ಜಾರಿಯಲ್ಲಿತ್ತು. ಆದರೆ ಈ ಚುನಾವಣೆಗಳಲ್ಲಿ ‘”ಮುಖ್ಯಧಾರೆ”ಯಲ್ಲದ ಪಕ್ಷಗಳು ಬರಿಯ ಶೇ.20ರಷ್ಟು ಸೀಟು ಗಳಿಸಿದ್ದರೂ, ಶೇ.40ರಷ್ಟು ಮತ ಗಳಿಸಿವೆ. ‘ದ್ವಿಪಕ್ಷೀತೆಯ ರಾಜಕೀಯ” ಕುಸಿಯುತ್ತಿರುವುದರ ಸಂಕೇತವಿದು.

ಇದನ್ನೂ ನೋಡಿ: KRS ಆಣೆಕಟ್ಟೆಯ ಸುತ್ತಮುತ್ತಲ ಗಣಿಗಾರಿಕೆ ನಿಲ್ಲಿಸಿ – ರೈತ, ಕಾರ್ಮಿಕರ ಆಗ್ರಹJanashakthi Media

Donate Janashakthi Media

Leave a Reply

Your email address will not be published. Required fields are marked *