ಬೆಂಗಳೂರು: ಇಂದು ರಂಗಶಂಕರದಲ್ಲಿ ಬೆಂಗಳೂರು ಸಮುದಾಯ ಆಯೋಜಿಸಿರುವ ʼಜುಗಾರಿಕ್ರಾಸ್ʼ ನಾಟಕದ 91 ನೇ ಪ್ರದರ್ಶನ ನಡೆಯಲಿದೆ.
ಜುಗಾರಿ ಕ್ರಾಸ್ ಕನ್ನಡದ ಪ್ರಮುಖ ಲೇಖಕರಾದ ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ ಅಧ್ಭುತ ಕಾದಂಬರಿ. ಜುಗಾರಿ ಕ್ರಾಸ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಇದು ಸಾಮಾನ್ಯ ರೈತ ದಂಪತಿಗಳ ಜೀವನದಲ್ಲಿ ನಡೆಯುವಂತಹ ಸಾಮಾನ್ಯ ಘಟನೆಗಳ ಸುತ್ತ ತಿರುಗುವ ಕಥೆಯಾಗಿದೆ. ಕಥೆಯು 24 ಗಂಟೆಗಳ ಅವಧಿಯಲ್ಲಿ ನಡೆಯುವ ಘಟನೆಗಳನ್ನು, ಇತಿಹಾಸದ ಕುರುಹು ಮತ್ತು ಸಾಹಿತ್ಯಿಕ ಅನ್ವೇಷಣೆಯೊಂದಿಗೆ, ಆದರೆ ತತ್ವಶಾಸ್ತ್ರ, ಸಾಹಿತ್ಯ ಮತ್ತು ಸಾಮಾನ್ಯ ಜನರ ಮೇಲೆ ಜಾಗತಿಕ ಆರ್ಥಿಕತೆಯ ಪ್ರಭಾವದ ತತ್ವಗಳ ವ್ಯಾಪಕ ಶ್ರೇಣಿಯನ್ನು ವಿಶ್ಲೇಷಿಸುವತ್ತ ಗಂಭೀರವಾಗಿ ಪ್ರಚೋದಿಸುತ್ತದೆ.
ಈ ಕಾದಂಬರಿಯ ಆಧಾರಿತವಾಗಿ ಬೆಂಗಳೂರು ಸಮುದಾಯ ಕಟ್ಟಿರುವ ನಾಟಕ ʼಜುಗಾರಿಕ್ರಾಸ್ʼ ಇಂದು ಬೆಂಗಳೂರಿನ ರಂಗಶಂಕರ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನಟರಾಜ್ ಹೊನ್ನವಳ್ಳಿ ಅವರು ನಾಟಕದ ನಿರ್ದೇಶನ ಮತ್ತು ರಂಗರೂಪವನ್ನು ಮಾಡಿದ್ದಾರೆ. ನಾಟಕದಲ್ಲಿ ಬರುವ ಸುರೇಶ, ಗೌರಿ, ಶೇಷಪ್ಪ, ಕುಟ್ಟಿ, ರಾಜಪ್ಪ, ದೌಲತ್ ರಾಮ, ಕುಂಟಾ ರಾಮ ಮುಂತಾದ ಪಾತ್ರಗಳು ಮತ್ತು ಪಾತ್ರದ ಡಯಾಲಾಗ್ಗಳು ಸರಳರೂಪದಲ್ಲಿ ಮೂಡಿಬಂದಿದ್ದು, ಪ್ರೇಕ್ಷಕರಲ್ಲಿ ಮುಂದೆ ಏನು ನಡೆಯಲಿದೆ ಎಂಬ ಕೂತುಹಲವನ್ನು ಮೂಡಿಸುತ್ತವೆ. ನಾಟಕದ ಸರಳತೆ ಮತ್ತು ವಾಸ್ತವಿಕ ನಟನೆ ಪ್ರೇಕ್ಷಕರನ್ನು ತನ್ನೊಳಗೆ ಸೆಳೆಯುತ್ತದೆ.
ಈಗಾಗಲೇ ಜುಗಾರಿಕ್ರಾಸ್ ನಾಟಕ 90 ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದು ಇಂದು 91ನೇ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಲವನಿಕ, ಅಶೋಕ್, ಶ್ವೇತ ಮೂರ್ತಿ, ಸಹನ, ಆನಂದ್ ಊಟಿ, ದರ್ಶನ್, ಸಿತಾರ, ಚಂದನ, ಆಧಿತ್ಯ ಪ್ರಭು, ವರ್ಷ ಜಾಯ್ಸ್, , ದೇವಿಕ, ದರ್ಶನ್ ಹೊನ್ನಾಲೆ, ಮೋಹನ್, ಮದನ್ ರಂಗಭೂಮಿ, ಚೇತನ್, ಸಫೀರ್, ಶುಭಮ್, ಯೋಗನಂದ, ಶ್ರೀಧರ್, ಅಮಿತ್, ಆನಂದ್, ಗಜ, ವಿಶ್ವ ಮುಂತಾದ ಕಲಾವಿದರು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ನಾಟಕದ ಪ್ರದರ್ಶನ ಇಂದು ಬೆಂಗಳೂರಿನ ರಂಗಶಂಕರ ರಂಗಮಂದಿರದಲ್ಲಿ ಸಂಜೆ 7:30ಕ್ಕೆ ನಡೆಯಲಿದ್ದು, ಟಿಕೆಟ್ ದರ 200 ರೂ ಆಗಿದೆ.