ಬೆಂಗಳೂರು: ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯ ಸರಕಾರ ರಾಜ್ಯದಲ್ಲಿ ಜೂನ್ 14 ರವರೆಗೆ ಲಾಕ್‌ಡೌನ್ ಜಾರಿಗೊಳಿಸಿದೆ ಅದರೊಂದಿಗೆ ಹೆಚ್ಚಿವರಿಯಾಗಿ ₹ 500 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
ಈ ನಿರಂತರ ಲಾಕ್‌ಡೌನ್ ಕಾರಣದಿಂದ ರಾಜ್ಯದಲ್ಲಿ ಕಟ್ಠಡ ನಿರ್ಮಾಣ ಕಾಮಗಾರಿಗಳು ಮತ್ತೆ ಸ್ಥಗಿತಗೊಂಡು ಲಕ್ಷಾಂತರ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ ಕಲ್ಯಾಣ ಮಂಡಳಿ ಪರವಾಗಿ ಮುಖ್ಯಮಂತ್ರಿಗಳು ಕೇವಲ ₹ 3000 ಪರಿಹಾರ ಘೋಷಿಸಿ ಸುಮ್ಮನಾಗಿರುವುದು ಸರಿಯಲ್ಲ ಆದ್ದರಿಂದ ಈ ಕೂಡಲೇ ನೋಂದಾಯಿತರಾದ ಎಲ್ಲ ಕಟ್ಟಡ ಕಾರ್ಮಿಕರಿಗೆ ಮಾಸಿಕ 10 ಸಾವಿರ ರುಪಾಯಿಗಳ ಎರಡನೇ ಕೋವಿಡ್ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಡಬ್ಲ್ಯೂಎಫ್‌ಐ)- ಸಿಐಟಿಯು ಸಂಯೋಜಿತ ಸಂಘಟನೆಯು ಮುಖ್ಯಮಂತ್ರಿಗಳನ್ನು ಹಾಗೂ ಕಾರ್ಮಿಕ ಸಚಿವರನ್ನು ಆಗ್ರಹಿಸಿದೆ.
ಇದನ್ನು ಓದಿ: ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ: ಜೂನ್ 10ಕ್ಕೆ ಕರವೇ ಪ್ರತಿಭಟನೆ
ಇಂದು ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಅವರು ʻʻಕೋವಿಡ್ ಎರಡನೇ ಅಲೆಯ ಅಪಾಯವು ಮುಂದಿನ ಮೂರು ತಿಂಗಳವರೆಗೆ ಇರಲಿದೆ ಎಂದು ತಜ್ಞರು ಎಚ್ವರಿಕೆ ನೀಡಿರುವುದರಿಂದ ಬಹುತೇಕ ಕಟ್ಟಡ ಕಾರ್ಮಿಕರಿಗೆ ಈ ಮೂರು-ನಾಲ್ಕು ತಿಂಗಳುಗಳೇ ಉದ್ಯೋಗ ಸೃಷ್ಟಿಯ ದಿನಗಳಾಗಿದ್ದವು ಈಗಾಗಲೇ ರಾಜ್ಯಾದ್ಯಂತ ಮುಂಗಾರು ಅರಂಭಗೊಂಡಿದೆ. ಇದರಿಂದ ಮತ್ತೆ ಐದಾರು ತಿಂಗಳುಗಳ ಕಾಲ ಸಹಜವಾಗಿಯೇ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡು ಕಾರ್ಮಿಕರಿಗೆ ಕೆಲಸ ಸಿಗದೇ ಅವರು ನಿರುದ್ಯೋಗಕ್ಕೆ ಸಿಲುಕಲಿದ್ದಾರೆ. ಈಗಾಗಲೇ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಅವರ ಕುಟುಂಬಗಳು ಮತಷ್ಟು ತೊಂದರೆಗೆ ಸಿಲುಕಲಿವೆ ಎಂಬ ಸಂಗತಿಯನ್ನು ನಮ್ಮ ಸಂಘಟನೆ ಒಳಗೊಂಡು ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಹಲವು ಮನವಿಗಳನ್ನು ನೀಡಿ ಕಾರ್ಮಿಕ ಸಚಿವರಿಗೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿತ್ತುʼʼ ಎಂದು ಹೇಳಿದ್ದಾರೆ.
ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 2021ರ ಏಪ್ರಿಲ್‌ವರೆಗೆ 10,280.67 ಕೋಟಿ (ಹತ್ತು ಸಾವಿರ ಕೋಟಿ ಇನ್ನೂರೆಂಬತ್ತು ಕೋಟಿಗಿಂತ ಅಧಿಕ ಹಣ ಬ್ಯಾಂಕ್ ನಲ್ಲಿರುವ ಬಡ್ಡಿ ಸೇರಿ) ಸೆಸ್ ಹಣ ಸಂಗ್ರಹವಾಗಿದೆ. ಇದುವರೆಗೂ ಮಂಡಳಿಯಲ್ಲಿ17,93,693 ಪುರುಷರು 7,75,677 ಜನ ಮಹಿಳೆಯರು ಸೇರಿ ಒಟ್ಟು 29,90,256 ಜನರು ನೋಂದಾವಣೆಯಾಗಿದ್ದಾರೆ.
ಇದನ್ನು ಓದಿ: ರಾಮನಗರ: ನಿರ್ಮಾಣ ಹಂತದ ಮ್ಯಾನ್‌ಹೋಲ್‌ನಲ್ಲಿ ಮೂವರು ಕಾರ್ಮಿಕರು ಸಾವು
ಕಟ್ಟಡ ಕಾರ್ಮಿಕ ಸಂಘಗಳು 2021 ಮೇ ತಿಂಗಳಿಂದಲೇ ಮಾಸಿಕ 10 ಸಾವಿರ ಕೋವಿಡ್ ಪರಿಹಾರವನ್ನು ಮುಂದಿನ ಮೂರು ತಿಂಗಳವರೆಗೆ ಪ್ರಕಟಿಸಲು ಆಗ್ರಹಪಡಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಕೇವಲ ₹3000 ಹಣವನ್ನು ಮಾತ್ರ ಘೋಷಿಸಿ ಕಾರ್ಮಿಕರಿಗೆ ನಿರಾಶೆಯುಂಟು ಮಾಡಿದ್ದಾರೆ. ನಿನ್ನೆ ಘೋಷಿಸಿದ ಎರಡನೇ ಆರ್ಥಿಕ ಪ್ಯಾಕೇಜ್ ನಲ್ಲಿಯೂ ಕಟ್ಟಡ ಕಾರ್ಮಿಕರಿಗೆ ಮೋಸ ಆಗಿದೆ ಎನ್ನುವ ಭಾವನೆ ಕಾರ್ಮಿಕರಲ್ಲಿ ಮನೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘಟನೆಯ ಮೂಲಕ ಈ ಕೆಳಗಿನ ಎರಡು ಪ್ರಮುಖ ಅಂಶವನ್ನು ಸರಕಾರವು ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
- ಕೂಡಲೇ ಮಂಡಳಿಯಲ್ಲಿ ನೋಂದಾಯಿತವಾದ ಎಲ್ಲಾ ಕಾರ್ಮಿಕರಿಗೂ ಕೋವಿಡ್ ಎರಡನೇ ಅಲೆಯ ಪರಿಹಾರವೆಂದು ವಾರಕ್ಕೆ ತಲಾ ₹2,500 ದಂತೆ ತಿಂಗಳಿಗೆ ₹ 10,000 ಕೋವಿಡ್ ಪರಿಹಾರ ಹಣವನ್ನು ಮುಂದಿನ ಕನಿಷ್ಟ ಮೂರು ತಿಂಗಳು ಹಾಲಿ ಇರುವ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಇದರಲ್ಲಿ ಕಳೆದ ವರ್ಷ ಹಣ ಸಿಗದ ಒಂದು ಲಕ್ಷ ಕಾರ್ಮಿಕರಿಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಗ್ರಹಿಸಿದೆ.
- ಜೊತೆಗೆ ಮಂಡಳಿಯಲ್ಲಿ ನೋಂದಾಯಿತರಾಗಿರುವ, ನೋಂದಾಯಿತರಾಗದ ಎಲ್ಲ ಕಟ್ಟಡ ಕಾರ್ಮಿಕರಿಗೆ ವಲಸೆ ಕಾರ್ಮಿಕರಿಗೆ ಕನಿಷ್ಟ ಮೂರು ತಿಂಗಳಿಗೆ ಆಗುವಷ್ಟು ಆಹಾರ ಕಿಟ್‌ಗಳನ್ನು ವಿತರಿಸಬೇಕು. ಈ ಆಹಾರ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕ ಸಂಘಗಳು ಮತ್ತು ಇತರೆ ಕಾರ್ಮಿಕ ಸಂಘಗಳ ಸಹಾಯದಿಂದಲೇ ವಿತರಿಸಬೇಕು ಆ ಮೂಲಕ ವಿತರಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಗೊಳ್ಳಬೇಕೆಂದು ಆಗ್ರಹಿಸಿದೆ.