ಮಾರ್ಕ್ಸಿಸ್ಟ್ ಆಗುವುದೆಂದರೆ…. | ಕಿರಂ ನೋಟ

ರಂಗನಾಥ ಕಂಟನಕುಂಟೆ
ಕಿರಂ ಮಾರ್ಕ್ಸ್ ವಾದಿ ಅಲ್ಲದಿದ್ದರೂ ಅವರಿಗೆ ಮಾಕ್ರ್ಸ್‍ವಾದದ ಬಗೆಗೆ ಆಳವಾದ ಪರಿಚಯವಿತ್ತು. ಒಮ್ಮೆ ‘ಆನ್ ಕಾಂಟ್ರಡಿಕ್ಶನ್ ಮತ್ತು ಆನ್ ಪ್ರಾಕ್ಟಿಸ್’ ಓದಿದೀರೇನ್ರಿ? ಎಂದರು. ಇಲ್ಲವೆನ್ನಲು ನಾಚಿಕೆ. ‘ಹೌದು ಸರ್ ಓದಿದ್ದೇನೆ’ ಎಂದೆ!

ಸಾಮಾನ್ಯವಾಗಿ ಅವರನ್ನು ಭೇಟಿ ಆಗುತ್ತಿದ್ದುದು ಸಂಜೆ ನಾಲ್ಕು ಗಂಟೆಯ ನಂತರವೇ ಆಗಿರುತ್ತಿತ್ತು. ಕಾಲೇಜಿನ ಕೆಲಸ ಮುಗಿದ ನಂತರ ಸಂಜೆಯ ಹೊತ್ತಿಗೆ ಭೇಟಿಯಾಗುತ್ತಿದ್ದೆ. ಬೇರೆ ಯಾರಾದರು ಇದ್ದರೆ ಮಾತುಕತೆ ಬೇರೆಯಾಗಿರುತ್ತಿತ್ತು. ನಾನು ಮತ್ತು ಅವರು ಇಬ್ಬರೇ ಇದ್ದಾಗ ಮಾತುಕತೆ ಬೇರೆಯಾಗಿರುತ್ತಿತ್ತು. ಅವರ ಎದುರಿಗಿದ್ದವರ ಆಸಕ್ತಿಗೆ ತಕ್ಕಂತೆ ವಿಚಾರಗಳು ಪ್ರಸ್ತಾಪವಾಗುತ್ತಿದ್ದವು. ಅವರು ಎಲ್ಲರನ್ನೂ ಅಡ್ರೆಸ್ ಮಾಡುತ್ತಿದ್ದ ಕಾರಣ ಅವರವರ ಆಸಕ್ತಿಗೆ ತಕ್ಕಹಾಗೆ ಚರ್ಚೆ ಇರುತ್ತಿತ್ತು. ಅದು ಚೆಲ್ಲಾಪಿಲ್ಲಿಯಾಗಿ ಇರುತ್ತಿತ್ತು. ಆದರೆ ಅವರ ಜೊತೆಗೆ ನಾನೊಬ್ಬನೇ ಇದ್ದಾಗ ಯಾವುದೋ ಒಂದು ವಿಶಯವನ್ನು ಕುರಿತು ಫೋಕಸ್ ಆಗಿ ಅವರ ಮಾತು ಇರುತ್ತಿತ್ತು. ಒಂದು ಸಣ್ಣ ಮತ್ತು ತುಂಬಾ ಮಾಮೂಲಿ ಎನ್ನಿಸುತ್ತಿದ್ದ ವಿಶಯವನ್ನು ತೆಗೆದುಕೊಂಡು ಚರ್ಚೆಗೆ ಮೊದಲಾಗುತ್ತಿದ್ದರು. ಒಮ್ಮೆ ಬೇರೆ ಯಾವುದನ್ನೋ ಕುರಿತು ಮಾತನಾಡುತ್ತ ಮಾತಿನ ನಡುವೆ ಮಾರ್ಕ್ಸ್‌ವಾದ  ಅಂದರೆ ಏನು ಗೊತ್ತೇನ್ರಿ?’ ಎಂದರು!

ನಾನು ಪಿಳಿಪಿಳಿ ಕಣ್ಣು ಬಿಡುತ್ತಿದ್ದೆ. ಈ ಪ್ರಶ್ನೆ ಕೇಳಲು ಕಾರಣವೂ ಇತ್ತು. ಆಗ ನಾನು ಎಡಚಳವಳಿಗಳ ಕಾರ್ಯಕರ್ತನಾಗಿ ಕೆಲಸ ಮಾಡುತ್ತ, ಮಾರ್ಕ್ಸ್ ಹೆಸರನ್ನು ಉಲ್ಲೇಖಿಸಿಕೊಂಡು ತಿರುಗಾಡುತ್ತಿದ್ದ ಕಾಲವದು. ಅವರ ಪ್ರಶ್ನೆಗೆ ನಾನು ಉತ್ತರ ಕೊಡಲಿಲ್ಲ. ಯಾಕೆಂದರೆ ಉತ್ತರ ನೀಡುವಾಗ ಕೊಂಚ ಲಯ ತಪ್ಪಿದ್ದರೂ ಸ್ಪೋಟಗೊಳ್ಳುತ್ತಿದ್ದರು. ಇಂತಹ ಮಾತುಕತೆಗಳಲ್ಲಿ ಪೊಲಿಟಿಕಲಿ ಕರೆಕ್ಟ್ ಆದ ಇಲ್ಲವೇ ಸಂಕುಚಿತ ದೃಶ್ಟಿಕೋನದ ಉತ್ತರ ನೀಡಿದಾಗ ವ್ಯಗ್ರಗೊಳ್ಳುತ್ತಿದ್ದರು. ಅನೇಕರು ಇಂತಹ ದಾಳಿಗೆ ಒಳಗಾಗಿದ್ದನ್ನು ಕಂಡಿದ್ದೇನೆ. ಒಮ್ಮೆ ಗೆಳೆಯ ಶಾಂತರಾಜ ಕುವೆಂಪು ಕುರಿತು ವ್ಯಕ್ತಪಡಿಸಿದ ಮಾತಿಗೆ ವ್ಯಗ್ರಗೊಂಡಿದ್ದರು. ಹಾಗೆಯೇ ಟಿ.ಎನ್. ವಾಸುದೇವ ಮೂರ್ತಿ ಅವರು ಗಾಂಧಿ ಕುರಿತು ಆಡಿದ ಮಾತಿಗೆ ವಿಪರೀತ ಸಿಟ್ಟಾಗಿದ್ದರು. ಆದರೆ ಅವರು ಅದೆಶ್ಟೇ ಕೋಪ ಆವೇಶಗೊಂಡಿದ್ದರೂ ನಿಧಾನವಾಗಿ ತಮ್ಮ ಆವೇಶವನ್ನು ಇಳಿಸಿಕೊಳ್ಳುತ್ತ ಮಾತು ಮುಂದುವರಿಸುತ್ತಿದ್ದರು. ಎದುರಿಗಿದ್ದವರಿಗೆ ತಮ್ಮ ವಾಕ್ಝರಿಯ ಮೂಲಕ ವಿಶಯದ ಅರಿವಿನ ಹೊಳೆ ಹರಿಸುತ್ತ ಅವರನ್ನು ಕನ್ವಿನ್ಸ್ ಮಾಡುತ್ತ ಅವರನ್ನು ಸಮಾಧಾನ ಪಡಿಸಿಸುತ್ತ ವಿಶಯವನ್ನು ಸಾದರಪಡಿಸುತ್ತಿದ್ದರು. ಅವರು ಹಾಗೆ ಸ್ಪೋಟಗೊಂಡಿದ್ದಾರೆಂದರೆ ನಂತರ ಒಳ್ಳೆಯ ವಿಚಾರವನ್ನು ಮಂಡಿಸುತ್ತಾರೆಂದೇ ಅರ್ಥ. ಹಾಗೆ ಆವೇಶಗೊಂಡ ನಂತರ ಯಾರನ್ನು ಎದುರಿಸಿ ಓಡಿಸುತ್ತಿರಲಿಲ್ಲ. ಬದಲಿಗೆ ತಾವೇ ವಿಶಯಕ್ಕೆ ನೇರ ಪ್ರವೇಶ ಪಡೆದು ಹೊಸ ಹೊಸ ಹೊಳಹುಗಳನ್ನು ನೀಡುತ್ತಿದ್ದರು. ಅಂತಹ ಹೊಸ ಹೊಳಹುಗಳನ್ನು ಕೇಳಬಯಸಿದವರು ಕಿರಂ ಅವರ ಸ್ಪೋಟಕ ವರ್ತನೆಯನ್ನು ಸಹಿಸಿಕೊಳ್ಳಲೇಬೇಕಿತ್ತು. ಅದನ್ನು ಇಶ್ಟಪಡದವರನ್ನು ಸಹಿಸದವರನ್ನು ಬಹಳ ಬೇಗ ಗ್ರಹಿಸಿ ಅವರನ್ನು ಸಾವಧಾನವಾಗಿ ತೆರಳುವಂತೆ ನೋಡಿಕೊಳ್ಳುತ್ತಿದ್ದರು. ಇದನ್ನು ನೋಡಿ ಗೊತ್ತಿದ್ದ ಕಾರಣ ಅವರ ಮಾತಿಗೆ ಪ್ರತಿಕ್ರಿಯೆ ನೀಡಲಿಲ್ಲ. ಸುಮ್ಮನೆ ಅವರನ್ನೇ ದಿಟ್ಟಿಸಿ ನೋಡುತ್ತಿದ್ದೆ.

ಆಗ ಅವರೇ ಮಾತು ಮುಂದುವರಿಸಿ ‘ಮಾರ್ಕ್ಸ್ ವಾದ ಎಂದರೆ ಲೋಕವನ್ನು ಬದುಕನ್ನು ಸಮಶ್ಟಿಯಾಗಿ ಗ್ರಹಿಸುವುದು ಎಂದರ್ಥ. ಜ್ಞಾನ ಎನ್ನುವುದು ಅಖಂಡ ಕಲ್ಪನೆ. ಇಂದು ಜ್ಞಾನವನ್ನು ಕಂಪಾರ್ಟ್‍ಮೆಂಟಲೈಸ್ ಮಾಡಲಾಗಿದೆ. ಈಗ ನೋಡಿ ನಮ್ಮ ದೇಹ ಒಂದು. ಆದರೆ ಕಣ್ಣಿಗೆ ಒಬ್ಬ ಡಾಕ್ಟರ್, ಹಲ್ಲಿಗೊಬ್ಬ, ಹೃದಯ, ಕಿಡ್ನಿ ಹೀಗೆ ಒಂದೊಂದು ಅಂಗಕ್ಕೂ ಪ್ರತ್ಯೇಕ ಡಾಕ್ಟರ್ ಇದ್ದಾರೆ. ಆದರೆ ಜ್ಞಾನ ಅನ್ನೋದು ಹೀಗೆ ವಿಭಜನೆಗೊಂಡಿರುವುದಿಲ್ಲ. ಲೋಕದೆಲ್ಲವನ್ನು ಇಡಿಯಾಗಿ ನೋಡುವುದೇ ಜ್ಞಾನಿಯ ಕೆಲಸವಾಗಿರುತ್ತದೆ. ಅಂದರೆ ಮಾರ್ಕ್ಸ್ ವಾದವು ಕೇವಲ ವರ್ಗಗಳನ್ನು ಅವುಗಳ ಸಂಬಂಧವನ್ನು ಮಾತ್ರ ವಿವರಿಸುವುದಿಲ್ಲ. ಬದಲಿಗೆ ಇಡೀ ಲೋಕವನ್ನು ಇಡಿಯಾಗಿ ನೋಡುವ ಕೆಲಸವನ್ನು ಮಾರ್ಕ್ಸ್‌ವಾದ ಮಾಡುತ್ತದೆ.

ಮಾರ್ಕ್ಸ್ ವಾದಿಯಾಗುವುದೆಂದರೆ ಇಡೀ ಲೋಕವನ್ನು ಅಖಂಡವಾಗಿ ಸಮಶ್ಟಿಯಾಗಿ ಗ್ರಹಿಸುವುದೇ ಆಗಿರುತ್ತದೆ’ ಎಂದರು. ಅವರ ಈ ಮಾತೇ ಮಾರ್ಕ್ಸ್‌ವಾದವನ್ನು ಗ್ರಹಿಸುವ ಬಗೆಯನ್ನು ನನಗೆ ಕಲಿಸಿಕೊಟ್ಟಿದ್ದು. ಅಲ್ಲಿಯವರೆಗೂ ಎಡ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದರೂ ಮಾಕ್ರ್ಸ್‍ವಾದವನ್ನು ಹೀಗೆ ಗ್ರಹಿಸುವ ಬಗೆಯೇ ತಿಳಿದಿರಲಿಲ್ಲ. ಆರ್ಥಿಕ ವಿಚಾರಗಳು ಮತ್ತು ವರ್ಗ ಸಂಬಂಧಗಳನ್ನು ವಿವರಿಸಿಕೊಳ್ಳುವುದಶ್ಟೇ ಮಾರ್ಕ್ಸ್‌ವಾದದ ಕೆಲಸ ಎಂದು ನಂಬಿದ್ದ ಕಾಲವದು. ಅಂದರೆ ಮಾರ್ಕ್ಸ್ ವಾದದ ಬಗೆಗೆ ಕಾಳಜಿಯಿದ್ದಾಗಲೂ ಅದನ್ನು ವಿವರಿಸಿಕೊಳ್ಳುವ ಬಗೆಗೆ ಸರಿಯಾಗಿ ತಿಳಿಯದ ಕಾಲವದು. ಮಾರ್ಕ್ಸ್‌ವಾದ  ಬಗೆಗೆ ನನಗೆ ಒಲವಿದೆ ಎಂಬುದನ್ನು ಅರಿತಿದ್ದ ಅವರು ನನ್ನ ಅರಿವನ್ನು ಒರೆಹಚ್ಚಿ ನೋಡುತ್ತ ನನ್ನ ತಿಳುವಳಿಕೆಯನ್ನು ವಿಸ್ತರಿಸುವ ಕೆಲಸ ಮಾಡಿದರು. ಅಂದು ಅವರು ಮಾರ್ಕ್ಸ್‌ವಾದ ಎಂದರೇನು? ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಅವರು ಒಬ್ಬನನ್ನೇ ಕೂರಿಸಿಕೊಂಡು ಮಾಡಿದ ಪಾಠ ಮರೆಯಲಾಗದ್ದು. ಇಂತಹ ಪಾಠವನ್ನು ಅವರ ಎಂ. ಎ. ತರಗತಿಗಳಲ್ಲಿಯೂ ಸಿಕ್ಕಿರಲಿಲ್ಲ. ಅವರ ಪಾಠ ಹೆಚ್ಚು ಪರಿಣಾಮಕಾರಿಯಾಗಿ ಮನಸ್ಸಿಗೆ ಇಳಿದಿದ್ದು ಅವರು ಮನೆಯಲ್ಲಿ ಒಬ್ಬನನ್ನೇ ಕೂರಿಸಿಕೊಂಡು ಚರ್ಚಿಸಿದ ವಿಚಾರಗಳೇ ಹೆಚ್ಚು ಪರಿಣಾಮ ಬೀರಿವೆ. ಇಂತಹ ಪಾಠಗಳಿಗೆ ಕೇಳುಗನಾದದ್ದರ ಮೌಲ್ಯ ಈಗ ತಿಳಿಯುತ್ತಿದೆ.

ಇದನ್ನೂ ಓದಿತೊಂಬತ್ತರ ದಶಕ ಮತ್ತು ಆ ನಂತರದ ಕನ್ನಡದ ಚಿಂತನೆಗಳ ಚಹರೆಗಳು

ಅಂದರೆ ಚಳವಳಿಗಳಲ್ಲಿ ಸಕ್ರಿಯವಾಗಿದ್ದು ಕೆಲಸ ಮಾಡುತ್ತಿದ್ದಾಗಲೂ ಸೈದ್ಧಾಂತಿಕವಾಗಿ ಮಾರ್ಕ್ಸ್ ವಾದವನ್ನು ಅರಿತುಕೊಳ್ಳುವ ಕೆಲಸವನ್ನು ಅಗತ್ಯವಿರುವಶ್ಟು ಮಾಡುತ್ತಿರಲಿಲ್ಲ. ಮೇಲ್ಮಟ್ಟದಲ್ಲಿಯೇ ಅದನ್ನು ತಿಳಿಯಲಾಗುತ್ತಿತ್ತು. ಕಿರಂ ಮಾರ್ಕ್ಸ್ ವಾದಿ ಅಲ್ಲದಿದ್ದರೂ ಅವರಿಗೆ ಮಾಕ್ರ್ಸ್‍ವಾದದ ಬಗೆಗೆ ಆಳವಾದ ಪರಿಚಯವಿತ್ತು. ಒಮ್ಮೆ ‘ಆನ್ ಕಾಂಟ್ರಡಿಕ್ಶನ್ ಮತ್ತು ಆನ್ ಪ್ರಾಕ್ಟಿಸ್’ ಓದಿದೀರೇನ್ರಿ? ಎಂದರು. ಇಲ್ಲವೆನ್ನಲು ನಾಚಿಕೆ. ‘ಹೌದು ಸರ್ ಓದಿದ್ದೇನೆ’ ಎಂದೆ! ಅವರು ಓದಿರಬಹುದು ಎಂದು ಭಾವಿಸಿದರು ಎನ್ನಿಸುತ್ತದೆ. ಹಾಗೆ ಕೇಳಿದವರು ಜ್ಞಾನ ಎಂದರೇನು? ಯಾವುದು ಜ್ಞಾನ? ಎನ್ನುವುದನ್ನು ಮಾವೋನ ಮಾತುಗಳನ್ನು ಉಲ್ಲೇಖಿಸಿ ವಿವರಿಸಿದರು. ಅದನ್ನು ಗಮನಿಟ್ಟು ಕೇಳಿಸಿಕೊಂಡೆ. ಅಂದು ಅವರು ಮಾರ್ಕ್ಸ್‌ವಾದ , ಜ್ಞಾನದ ಸ್ವರೂಪಗಳನ್ನು ಕುರಿತು ವಿವರವಾಗಿ ಮಾತಾಡಿದ್ದರು. ಅಂದು ಅವರಿಂದ ಮಾವೋನ ವಿಚಾರಗಳನ್ನು ಕೇಳಿದ ನಂತರವೇ ‘ಆನ್ ಕಾನ್ಟ್ರಡಿಕ್ಷನ್ ಮತ್ತು ಆನ್ ಪ್ರಾಕ್ಟಿಸ್’ ಪುಸ್ತಕಗಳನ್ನು ಸಂಗ್ರಹಿಸಿ ಓದಿದ್ದು. ವಿಶ್ವವಿದ್ಯಾಲಯಗಳ ಪಂಡಿತರ ಜ್ಞಾನದ ವಿಶಯಗಳಿಗಿಂತ ಜನರ ಮಧ್ಯೆ ಆಚರಣೆಯಲ್ಲಿ ತೊಡಗಿದ್ದ ಮಾವೋ ಮಂಡಿಸಿರುವ ವಿಚಾರಗಳು ಎಶ್ಟೊಂದು ತರ್ಕಬದ್ಧವಾಗಿವೆ; ವೈಜ್ಞಾನಿಕವಾಗಿವೆ ಎನ್ನಿಸಿದ್ದು ಕಿರಂ ಅವರಿಂದ ವಿಚಾರಗಳನ್ನು ಕೇಳಿದ ತರುವಾಯವೇ ಆಗಿದೆ. ಅವರು ಹೇಳಿದ ನಂತರ ಮಾವೋನ ಪುಸ್ತಕಗಳನ್ನು ಓದಿ ಕಿರಂ ಅವರು ಮಂಡಿಸಿದ್ದ ವಿಚಾರಗಳನ್ನು ಖಚಿತಪಡಿಸಿಕೊಂಡೆ. ಮತ್ತು ಅವರು ಮಾವೋ, ಮಾರ್ಕ್ಸ್ ಮುಂತಾದವರ ಬಗೆಗೆ ಹೊಂದಿರುವ ಅರಿವು ಎಶ್ಟೊಂದು ಆಳವಾಗಿತ್ತು ಎಂಬುದನ್ನು ಮನನ ಮಾಡಿಕೊಂಡೆ. ಹೀಗೆ ಕನ್ನಡದಲ್ಲಿ ಮಾವೋನ ಈ ಎರಡು ಕೃತಿಗಳ ಬಗೆಗೆ ಅಶ್ಟೇ ಸ್ಪಶ್ಟವಾಗಿ ಮಾತನಾಡಿದ ಮತ್ತೋರ್ವ ಚಿಂತಕರೆಂದರೆ ಕೆ. ವಿ. ನಾರಾಯಣ ಅವರು. ಅವರು ಕೂಡ ಒಮ್ಮೆ ಚರ್ಚೆಯ ಮಧ್ಯೆ ಮಾವೋ ಚಿಂತನೆಗಳನ್ನು ಸಮರ್ಥಿಸಿ ಮಾತನಾಡಿದ್ದರು. ಅಂದರೆ ನಮ್ಮ ಹಿಂದಿನ ತಲೆಮಾರಿನ ಹಿರಿಯ ವಿದ್ವಾಂಸರ ಸಾಹಿತ್ಯ, ಕಾವ್ಯ ಮಾತ್ರವಲ್ಲದೆ ವಿವಿಧ ಜ್ಞಾನಶಿಸ್ತುಗಳನ್ನು ಕೈವಶ ಮಾಡಿಕೊಳ್ಳುವ, ಜ್ಞಾನದ ಎಲ್ಲೆಗಳನ್ನು ದಾಟುವ ಕೆಲಸವನ್ನು ಮಾಡುತ್ತಿದ್ದರು.

ಆದರೆ ಇಂದು ಸಾಹಿತ್ಯ ಕೃಶಿಯಲ್ಲಿ ತೊಡಗಿ ಕತೆ ಕಾದಂಬರಿ, ಕವಿತೆ, ವಿಮರ್ಶೆಗಳಲ್ಲಿ ತೊಡಗಿರುವ ಅನೇಕರು ಮಾರ್ಕ್ಸ್‌ವಾದ , ಅಂಬೇಡ್ಕರ್ ಚಿಂತನೆಗಳು, ಲೋಹಿಯಾ ಚಿಂತನೆಗಳು ಮುಂತಾದ ಸೈದ್ಧಾಂತಿಕ ಬರೆಹಗಳನ್ನು ಸಂಶಯದಿಂದ ನೋಡುತ್ತಾರೆ. ಸಾಹಿತ್ಯ ಕೃಶಿಯಲ್ಲಿ ತೊಡಗಿರುವವರಿಗೆ ಸಿದ್ಧಾಂತಗಳ ಅಗತ್ಯವಿದೆಯೇ? ಇಸಂಗಳಿಗೆ ಅಂಟಿಕೊಳ್ಳಬೇಕೆ? ಚಳವಳಿಯ ಸಖ್ಯದಲ್ಲಿ ಇರಬೇಕೆ? ಮುಂತಾದ ಪ್ರಶ್ನೆಗಳನ್ನು ಕೇಳುತ್ತಾರೆ. ಹೀಗೆ ಪ್ರಶ್ನೆಗಳನ್ನು ಕೇಳುವವರು ಸಾಹಿತ್ಯ ವಿಮರ್ಶೆ, ಮೀಮಾಂಸೆಗಳನ್ನೇ ಸಂಶಯಿಸುವ ಮಟ್ಟಿಗೆ ಬೆಳೆದಿದ್ದಾರೆ. ಹೀಗೆ ಪ್ರಶ್ನೆ ಕೇಳುವವರ ಮಾತು ಮತ್ತು ಬರೆಹಗಳನ್ನು ಗಮನಿಸಿದರೆ ಅವರ ಕೃತಿಗಳಲ್ಲಿ ಕಾಣುವ ದುರ್ಬಲವಾದ ಲೋಕದರ್ಶನ ನಿರೂಪಿತವಾಗಿರುವುದನ್ನು ಕಂಡರೆ ಅವರು ಯಾಕೆ ದುರ್ಬಲವಾಗಿದ್ದಾರೆ ಎಂಬುದಕ್ಕೆ ಅವರ ಪೆದ್ದ ಪ್ರಶ್ನೆಗಳಲ್ಲಿಯೇ ಉತ್ತರವಿರುತ್ತದೆ. ಆದರೆ ಯಾರೂ ತಮ್ಮ ಕೃತಿಗಳ ಮಾತಿನಲ್ಲಿರುವ ಪೊಳ್ಳುತನಗಳನ್ನೇ ಅರಿಯದೇ ದೊಡ್ಡ ಬರೆಹಗಾರರ ಹಾಗೆ ವರ್ತಿಸುತ್ತಿರುವುದು ಇಂದು ಒಂದು ಸಾಹಿತ್ಯದ ದೊಡ್ಡ ರೋಗದಂತೆ ಕಾಣುತ್ತಿದೆ. ಇಂತಹ ರೋಗಕ್ಕೆ ಬಲಿಯಾದವರು ತಮ್ಮದಲ್ಲದ ತಮ್ಮ ಓರಗೆಯ ಬೇರೊಬ್ಬರ ಕೃತಿಯನ್ನು ಓದದ ಮಟ್ಟಕ್ಕೆ ತಲುಪಿದ್ದಾರೆ. ಅಂದರೆ ತಮ್ಮ ಸಮಕಾಲೀನರು, ತಮ್ಮ ಪೂರ್ವಸೂರಿಗಳು ಹಾಗೂ ಬೇರೆ ಭಾಶೆಗಳ ಲೇಖಕರು ಏನನ್ನು ಬರೆದಿದ್ದಾರೆ ಎನ್ನುವುದನ್ನು ಅರಿಯದೆ ಕೇವಲ ತಮ್ಮೊಳಗಿನ ಅನುಭವವೇ ಸಾರ್ವಕಾಲಿಕ ಸತ್ಯವೆಂದು ಭಾವಿಸಿ ಅದರಿಂದಲೇ ಎಲ್ಲವನ್ನು ಮಂಡಿಸಲು ಹೊರಡುತ್ತಾರೆ. ಹಾಗಾಗಿ ಅಂತಹವರ ಕೃತಿಗಳಲ್ಲಿ ದುರ್ಬಲವಾದ ತಾತ್ವಿಕತೆಯೊಂದು ತೆಳುವಾಗಿ ಅವರ ಬರೆಹಗಳೇ ಮೂಲೆಗೆ ಸರಿಯುತ್ತಿವೆ. ಆದರೂ ಎಲ್ಲ ತಿಳಿದ ಬಲ್ಲ ಠೇಂಕಾರದಲಿ ವರ್ತಿಸುವುದನ್ನು ಕಾಣಬಹುದು.

ಆದರೆ ಕುವೆಂಪು, ಕಾರಂತ, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಗಿರೀಶ್ ಕಾರ್ನಾಡ್, ಕಿರಂ, ಕೆ.ವಿಎನ್., ಡಿಆರ್‌ಎನ್ ಅವರನ್ನು ಒಂಗೊಂಡಂತೆ ನೂರಾರು ಲೇಖಕರು ವಿವಿಧ ಜ್ಞಾನಶಿಸ್ತುಗಳಲ್ಲಿನ ಅರಿವನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿದ್ದರು. ಆ ಮೂಲಕ ಲೋಕವನ್ನು ಆಳವಾಗಿ ಮತ್ತು ಅಖಂಡವಾಗಿ ಗ್ರಹಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಮ್ಮ ಮತ್ತು ನಮ್ಮ ನಂತರದ ತಲೆಮಾರು ಏಕಬೆಳೆ ಪದ್ದತಿಯ ಹಾಗೆ ಯಾವುದೋ ಒಂದು ಪ್ರಕಾರಕ್ಕೆ ಒಂದು ವಿಶಯಕ್ಕೆ ನಿಶ್ಟರಾಗಿ ಬದುಕನ್ನು ಬಹಳ ಪೇಲವವಾಗಿ ಗ್ರಹಿಸುತ್ತಿದ್ದಾರೆ ಮತ್ತು ಅದನ್ನು ಕೃತಿಗಳಲ್ಲಿ ನಿರೂಪಿಸುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಕನ್ನಡ ಸಾಹಿತ್ಯ ದುರ್ಬಲ ತಾತ್ವಿಕತೆ ಮತ್ತು ಅನುಭವಗಳಿಂದ ನರಳುತ್ತಿದೆ. ಅಂದರೆ ವೈವಿಧ್ಯಮಯ ವಿಚಾರಧಾರೆಗಳಿಂದ ಕಲಿಯುವ ಅಭ್ಯಾಸ ಕ್ರಮ ತಪ್ಪಿಹೋಗಿದೆ. ಇಂದು ಕಿರಂ ಅವರ ಹೆಸರನ್ನು ಹೇಳಿಕೊಂಡು ತಿರುಗಾಡುವ ಅನೇಕ ಸಾಹಿತ್ಯಾಸಕ್ತರು ಕೂಡ ಕಿರಂ ಅವರ ಲೋಕದೃಶ್ಟಿ ಮತ್ತು ಜ್ಞಾನದ ಕಲ್ಪನೆಗಳ ಅರಿವಿಲ್ಲದೆ ವರ್ತಿಸುತ್ತಾರೆ. ಕಿರಂ ಕಾವ್ಯವನ್ನು ಓದುತ್ತಿದ್ದರು, ವ್ಯಾಖ್ಯಾನಿಸುತ್ತಿದ್ದರು, ವಿಮರ್ಶೆ ಮಾಡುತ್ತಿದ್ದರು ಎಲ್ಲವು ನಿಜ. ಅವರು ಕಾವ್ಯತಪಸ್ವಿ ಎಂದರೂ ಸರಿ. ಆದರೆ ಕಿರಂ ಅವರಿಗೆ ಕಾವ್ಯವೊಂದೇ ಆಸಕ್ತಿಯ ಕ್ಶೇತ್ರವಾಗಿರಲಿಲ್ಲ. ಸಂಗೀತ, ಕ್ರೀಡೆ, ರಾಜಕಾರಣ, ಆರ್ಥಿಕತೆ, ವಿವಿಧ ಸಾಹಿತ್ಯ ಸಿದ್ದಾಂತಗಳು, ವೈದ್ಯಕೀಯ ವಿಜ್ಞಾನ, ಜಾಗತಿಕ ಭಾಶೆಗಳ ಕ್ಲಾಸಿಕಲ್ ಸಾಹಿತ್ಯ ಕೃತಿಗಳು, ಸಾಮಾಜಿಕ ರಾಜಕೀಯ ಚಳವಳಿಗಳು, ಸಮಾಜ ವಿಜ್ಞಾನಗಳಲ್ಲಿನ ಹೊಸ ಶೋಧಗಳು. ಸಂಸ್ಕೃತಿ ಚಿಂತನೆಗಳು, ರಾಡಿಕಲ್ ಚಳವಳಿಗಳು ಹೀಗೆ ಎಲ್ಲವುಗಳ ಬಗೆಗೂ ಆಸಕ್ತಿ ಇತ್ತು. ಈ ಎಲ್ಲವೂ ಲೋಕಕ್ಕೆ ಸಂಬಂಧಿಸಿದ್ದೇ ಆಗಿದ್ದರಿಂದ ಎಲ್ಲವುಗಳನ್ನು ತಿಳಿಯುವ ಮೂಲಕ ಲೋಕವನ್ನು ತಿಳಿಯುವುದು ಅವರ ಆಸಕ್ತಿಯಾಗಿತ್ತು. ಹಾಗಾಗಿಯೇ ಅವರಿಗೆ ಮಾರ್ಕ್ಸ್ ವಾದಿ ಚಿಂತನಾ ಪರಂಪರೆಯಲ್ಲಿನ ದೊಡ್ಡ ಲೇಖಕರ ಬಗೆಗೆ ಅಪಾರವಾದ ಒಲವಿತ್ತು. ಮ್ಯಾಕ್ಸಿಮ್ ಗಾರ್ಕಿ, ರೇಮಂಡ್ ವಿಲಿಯಮ್ಸ್, ವಾಲ್ಟರ್ ಬೆಂಜಮಿನ್, ಬೆರ್ಟೋಲ್ಟ್ ಬ್ರೆಕ್ಟ್, ಪಾಬ್ಲೋ ನೆರೂಡ, ಮಯಕೋವ್‍ಸ್ಕಿ ಮುಂತಾದವರ ಬಗ್ಗೆ ಮಾತಾಡುತ್ತಿದ್ದರು. ಆ ಮೂಲಕ ಮಾರ್ಕ್ಸ್‌ವಾದ ಪಾಠ ಮಾಡಿದ್ದಾರೆ. ಅವರ ಮಾತಿನ ನೆರಳು ನನ್ನೊಳಗೆ ಈಗಲೂ ಉಳಿದಿದೆ.

ಕನ್ನಡದ ಅನೇಕ ವಿದ್ವಾಂಸರು ಮಾರ್ಕ್ಸ್ ವಾದ , ಮಾರ್ಕ್ಸ್ ವಾದಿಗಳ ಬಗೆಗೆ ವ್ಯಂಗ್ಯ ಲೇವಡಿಗಳನ್ನು ಮಾಡುತ್ತಿದ್ದರೂ ಕಿರಂ ಎಂದೂ ಮಾರ್ಕ್ಸ್‌ವಾದವನ್ನು ಲೇವಡಿ ಮಾಡಿದ್ದನ್ನು ಕೇಳಿಲ್ಲ. ಇದಕ್ಕೆ ಕಾರಣ ಕಿರಂ ಮಾರ್ಕ್ಸ್ ವಾದವನ್ನು ಲೋಕವನ್ನು ತಿಳಿಯುವ ಒಂದು ತತ್ವಶಾಸ್ತ್ರವನ್ನು ಒಪ್ಪಿಕೊಂಡಿದ್ದರು. ಅದು ಬದುಕನ್ನು ಲೋಕವನ್ನು ಇಡಿಯಾಗಿ ಗ್ರಹಿಸುವ ಒಂದು ವಿಚಾರಧಾರೆ ಎಂದು ಭಾವಿಸಿದ್ದರು. ಹಾಗಾಗಿಯೇ ಅವರು ಎಂದೂ ಮಾರ್ಕ್ಸ್ ವಾದವನ್ನು ಹೀಗಳೆಯಲಿಲ್ಲ. ಮಾರ್ಕ್ಸಿಸ್ಟ್ ಬರೆಹಗಾರರಲ್ಲಿ ಅವರಿಗೆ ಪ್ರಮುಖ ಕವಿಯಾಗಿದ್ದವನೆಂದರೆ ಪಾಬ್ಲೋ ನೆರೂಡ. ಅನೇಕ ಸಾರಿ ಅವನ ಬಗೆಗೆ ಮಾತನಾಡಿದ್ದರು. ಅವನು ಕಾವ್ಯ ಕಟ್ಟುವಾಗ ಪ್ರತಿಮೆಗಳನ್ನು ಕಟ್ಟುವ ವಿಶಿಶ್ಟತೆಯನ್ನು ಕಂಡು ರೋಮಾಂಚನಗೊಳ್ಳುತ್ತಿದ್ದರು. ಕಣ್ಣೆದುರು ಕಾಣುವ ಲೋಕವನ್ನು ಕಾವ್ಯದಲ್ಲಿ ಪ್ರತಿಮೆಗಳನ್ನಾಗಿಸುವ ಅದ್ಭುತ ಕಲೆ ನೆರೂಡನಿಗೆ ಸಿದ್ದಿಸಿದೆ ಎಂದು ಸಂಭ್ರಮಿಸುತ್ತಿದ್ದರು. ‘ನಿಂಬೆ’ ಹಣ್ಣನ್ನು ಒಂದು ಇಮೇಜಾಗಿಸಿ ನೆರೂಡ ಬರೆದಿರುವ ಪದ್ಯವನ್ನು ಓದುತ್ತ ನೋಡ್ರಿ ಇವನು ಹೇಗೆ ಜಗತ್ತನ್ನು ಕಾವ್ಯದಲ್ಲಿ ತರ್ತಾನೆ; ವಸ್ತುಗಳನ್ನು ಪ್ರತಿಮೆಗಳನ್ನಾಗಿಸುತ್ತಾನೆ’ ಎಂದು ಸಂತಸಪಟ್ಟಿದ್ದರು. ಅವರು ಹಾಗೆ ಓದಿದ ನಂತರ ನೆರೂಡನಂತಹ ಕವಿಯ ಕಾವ್ಯದ ಕಸುವನ್ನು ತಿಳಿಯಲು ಸಾಧ್ಯವಾಯಿತು. ಅವರಿಂದ ಪ್ರೇರಣೆಗೊಂಡು ನಿಸಾರ್ ಅಹಮದ್ ಅನುವಾದಿಸಿರುವ ‘ಬರೀ ಮರ್ಯಾದಸ್ಥರೆ’ ಕೃತಿಯ ಪದ್ಯಗಳನ್ನು ಮತ್ತೆ ಮತ್ತೆ ಓದಿದ್ದೇನೆ. ಆ ಮೂಲಕ ನೆರೂಡನ್ನು ಒಳಗುಮಾಡಿಕೊಳ್ಳಲು ಯತ್ನಿಸಿದ್ದೇನೆ.

ಅಂದರೆ ಕಿರಂ ಅವರ ಆಸಕ್ತಿಗಳು ವೈವಿಧ್ಯಮಯ. ಅವುಗಳನ್ನು ಆವಾಹಿಸಿಕೊಳ್ಳುವಲ್ಲಿ ಅವರಿಗೆ ಅವರೇ ಸಾಟಿ. ಆದರೆ ಇದನ್ನು ಗ್ರಹಿಸದ ಹಲವರು ಕಿರಂ ಅವರನ್ನು ಕಾವ್ಯದ ಸೀಮಿತ ಪರಿಧಿಯೊಳಗೆ ಬಂಧಿಸುವ ಕೆಲಸ ಮಾಡುತ್ತಾರೆ. ಇದು ಕಿರಂ ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸುವ ಪ್ರಯತ್ನವೇ ಸರಿ. ಕಿರಂ ಅವರ ಬಗೆಗೆ ನಿಜವಾದ ಕಾಳಜಿ ಇರುವವರು ಅವರ ಆಸಕ್ತಿಗಳ ವೈವಿಧ್ಯ, ಜ್ಞಾನದ ಸಾಮರ್ಥ್ಯ ಮತ್ತು ಅವುಗಳ ವ್ಯಾಪ್ತಿ ಅರಿಯಬೇಕು. ಅವರು ಕಟ್ಟಲು ಬಯಸಿದ್ದ ಸಮಾಜದ ಕಲ್ಪನೆಯೇನು? ಎಂಬುದನ್ನು ಗ್ರಹಿಸಬೇಕಾಗುತ್ತದೆ. ಆ ಮೂಲಕ ಅವರ ಚಿಂತನೆಗಳನ್ನು ಬೆಳೆಸುತ್ತ ಅವರ ವಾರಸುದಾರರಾಗಿ ಅವರ ಜ್ಞಾನದ ಪರಂಪರೆಯನ್ನು ಮುಂದುವರಿಸಬೇಕಾಗುತ್ತದೆ.

 

Donate Janashakthi Media

Leave a Reply

Your email address will not be published. Required fields are marked *