ಚೆನ್ನೈ: ಉತ್ತರ ಚೆನ್ನೈನಲ್ಲಿರುವ ಖಾಸಗಿ ರಸಗೊಬ್ಬರ ತಯಾರಿಕಾ ಘಟಕಕ್ಕೆ ಜೋಡಿಸಲಾದ ಸಬ್ ಸೀ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಬುಧವಾರ ಸೋರಿಕೆಯಾಗಿದೆ. ಪರಿಣಾಮ ಸ್ಥಳೀಯ ನಿವಾಸಿಗಳು ಅಸ್ವಸ್ಥಗೊಂಡಿದ್ದು, ಸುಮಾರು 25 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಪೀಡಿತ ಜನರಲ್ಲಿ ಉಸಿರಾಟದ ತೊಂದರೆ ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋರಿಕೆಯು ಡಿಸೆಂಬರ್ 26 ರಂದು ರಾತ್ರಿ 11.45 ಕ್ಕೆ ಸಂಭವಿಸಿದ್ದು ಉತ್ತರ ಚೆನ್ನೈ ಪ್ರದೇಶಗಳಲ್ಲಿ ಗಾಳಿಯ ಮೂಲಕ ಜನರಿಗೆ ತೀವ್ರ ಅಸ್ವಸ್ಥತೆಯನ್ನು ಉಂಟುಮಾಡಿದೆ. ಗಂಟಲು ಮತ್ತು ಎದೆ ಸುಡುವ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ವೇಳೆ ಹಲವಾರು ವ್ಯಕ್ತಿಗಳು ಮೂರ್ಛೆ ಹೋಗಿದ್ದು, ನಿದ್ರೆಯಲ್ಲಿದ್ದ ಅನೇಕ ಜನರು ಗಾಬರಿಯಿಂದ ಎದ್ದು ತಮ್ಮ ಮನೆಗಳಿಂದ ಓಡಿಬಂದು ನೆರೆಹೊರೆಯವರಿಗೆ ಎಚ್ಚರಿಕೆ ನೀಡಿದ್ದಾರೆ. ಅದಾಗ್ಯೂ ಅವರೆಲ್ಲರೂ ಏನು ಮಾಡಬೇಕೆಂದು ತಿಳಿಯದೆ ಮುಖ್ಯ ರಸ್ತೆಗೆ ಓಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರು ಕಂಬಳ ಮಾದರಿಯಲ್ಲಿ ಕೊಬ್ಬರಿ ಹೋರಿ ನಡೆಸಿ | ಸಿಎಂ ಸಿದ್ದರಾಮಯ್ಯಗೆ ಪತ್ರ
ಉತ್ತರ ಚೆನ್ನೈನಲ್ಲಿ ಇತ್ತೀಚಿನ ತೈಲ ಸೋರಿಕೆ ಕೂಡಾ ಸಂಭವಿಸಿತ್ತು. ಇದೀಗ ಅಮೋನಿಯಾ ಅನಿಲ ಸೋರಿಕೆಯಿಂದ ಜನರು ತೀವ್ರ ಕಂಗಾಲಾಗಿದ್ದು, ರಸಗೊಬ್ಬರ ತಯಾರಿಕಾ ಘಟಕದ ಸಮೀಪದಲ್ಲಿ ವಾಸಿಸುತ್ತಿದ್ದ ಮಕ್ಕಳು ಸೇರಿದಂತೆ ಸುಮಾರು 25 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಅಸ್ವಸ್ಥತೆ, ಉಸಿರಾಟದ ತೊಂದರೆ, ವಾಕರಿಕೆ ಮತ್ತು ಮೂರ್ಛೆ ಹೋಗಿದ್ದಾರೆ.
ಮೀನುಗಾರರ ಗ್ರಾಮಗಳಾಗಿರುವ ಉತ್ತರ ಚೆನ್ನೈನ ಚಿನ್ನ ಕುಪ್ಪಂ, ಪೆರಿಯಾ ಕುಪ್ಪಂ, ನೇತಾಜಿ ನಗರ, ಬರ್ಮಾ ನಗರಗಳು ಸೋರಿಕೆಯಿಂದ ತೊಂದರೆಗೆ ಒಳಗಾಗಿದೆ ಎಂದು ತಿಳಿದುಬಂದಿದೆ. ಸೋರಿಕೆಯಿಂದ ಜನರು ಮಧ್ಯರಾತ್ರಿ ವಾಹನಗಳಿಲ್ಲದೆ ಪರದಾಡಿದ್ದು ಆಸ್ಪತ್ರೆಗಳನ್ನು ತಲುಪಲು ಆಟೋರಿಕ್ಷಾಗಳು ಮತ್ತು ಮೋಟಾರ್‌ಸೈಕಲ್‌ಗಳಂತಹ ವಾಹನಗಳನ್ನು ಬಳಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ವಾಂತಿಭೇದಿಯಿಂದ ವೃದ್ಧೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ರಸಗೊಬ್ಬರ ಘಟಕದ ಸ್ಥಳದಿಂದ ಅನೇಕ ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗಳಿಗೆ ಪೀಡಿತ ಜನರನ್ನು ತಕ್ಷಣ ಕರೆತರಲು ಅಧಿಕಾರಿಗಳು ಬಸ್‌ಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಬೀಚ್‌ಫ್ರಂಟ್‌ನಲ್ಲಿ ಇದ್ದ ಕೆಲವು ಮೀನುಗಾರರು ಮತ್ತು ಸ್ಥಳೀಯ ಜನರು ಸಮುದ್ರದ ಪೈಪ್‌ಲೈನ್‌ನ ಮೇಲಿರುವ ನಿರ್ದಿಷ್ಟ ಸ್ಥಳಗಳಿಂದ ಅಸಾಮಾನ್ಯ ಶಬ್ದ ಮತ್ತು ನೀರು ಹೊರಬರುವುದನ್ನು ಗಮನಿಸಿದ್ದಾರೆ.
ಇದನ್ನೂ ಓದಿ: ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಬೃಹತ್ ರ್‍ಯಾಲಿ
ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಭೇಟಿ ನೀಡಿ ಗ್ಯಾಸ್ ಪೀಡಿತ ಪ್ರದೇಶಗಳಿಂದ ದಾಖಲಾದ ಜನರೊಂದಿಗೆ ಮಾತನಾಡಿದ್ದಾರೆ ಮತ್ತು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕೋರಮಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್, ಮುರುಗಪ್ಪ ಗ್ರೂಪ್ ಕಂಪನಿ, “ದಿನನಿತ್ಯದ ಕಾರ್ಯಾಚರಣೆಯ ಭಾಗವಾಗಿ, ನಾವು 26/12/2023 ರಂದು 23.30 ಗಂಟೆಗೆ ಪ್ಲಾಂಟ್ ಆವರಣದ ಹೊರಭಾಗದಲ್ಲಿ ದಡದ ಬಳಿ ಅಮೋನಿಯಾ ಇಳಿಸುವ ಸಬ್‌ಸೀ ಪೈಪ್‌ಲೈನ್‌ನಲ್ಲಿ ಅಸಹಜತೆ ಗಮನಿಸಿದ್ದೇವೆ. ಈ ವೇಳೆ ನಮ್ಮ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನ ತಕ್ಷಣವೇ ಸಕ್ರಿಯಗೊಳಿಸಲಾಗಿದ್ದು, ನಾವು ಅಮೋನಿಯಾ ವ್ಯವಸ್ಥೆಯನ್ನು ಪ್ರತ್ಯೇಕಿಸಿ ಕಡಿಮೆ ಸಮಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದಿದ್ದೇವೆ” ಎಂದು ಹೇಳಿದ್ದಾರೆ.
ಕಂಪನಿಯ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಿದ ನಂತರ, ಪೊಲೀಸ್ ಸಿಬ್ಬಂದಿ ರಸ್ತೆಗಳಲ್ಲಿ ಜಮಾಯಿಸಿದ ಜನರನ್ನು ಸಮಾಧಾನಪಡಿಸಿದ್ದಾರೆ. ಮುಂದೆ ಯಾವುದೆ ‘ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ತಮ್ಮ ಮನೆಗಳಿಗೆ ಹಿಂತಿರುಗಲು ವಿನಂತಿಸಿದ್ದಾರೆ. ಆದರೆ ಉದ್ರಿಕ್ತ ನಿವಾಸಿಗಳು ಇಂದು ಬುಧವಾರ ಗೊಬ್ಬರ ತಯಾರಿಕಾ ಕಂಪನಿ ಆವರಣದ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿ ಘಟಕವನ್ನು ಕೂಡಲೇ ಮುಚ್ಚುವಂತೆ ಒತ್ತಾಯಿಸಿದ್ದಾರೆ.
ವಿಡಿಯೊ ನೋಡಿ: ಪ್ರಚೋದನಾಕಾರಿ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಸಿಪಿಐಎಂ ಒತ್ತಾಯ Janashakthi Media