ವೈರಲ್‌ ಅಡ್ಡ : ಪರಿಷತ್‌ ಗೆ ಹೆಸರು ಸೂಚಿಸುವಂತೆ ಬಿಳಿಮಲೆ ಆಗ್ರಹ, ಬಿಜೆಪಿ ಸೇರಿದಂತೆ ಕನಸು ಕಂಡ ಪತ್ರಕರ್ತ ತ್ಯಾಗಿ

“ವಿಧಾನ ಪರಿಷತ್ತಿಗೆ ಸನತ್ ಕುಮಾರ ಬೆಳಗಲಿ, ನಾ ದಿವಾಕರ ಮತ್ತು ನನ್ನನ್ನು ನೇಮಕ ಮಾಡಿರಿ! ಮಾಡ್ಲಿಕ್ಕೆ ಆಗದಿದ್ದರೆ ಹೋಗ್ಲಿ ಬಿಡಿ, ಬೇಕಾದವರನ್ನು ಮಾಡ್ಕೊಳ್ಳಿ! ”  ಎಂದು ಚಿಂತಕ ಪುರುಷೋತ್ತಮ ಬಿಳಿಮಲೆಯವರು ಸಾಮಾಜಿಕ ಜಾಲತಾಣದಲ್ಲೊಂದು ಪೋಸ್ಟ್‌ ಹಾಕಿದ್ದರು. ಪರಿಷತ್‌ ಚುನಾವಣೆಗೆ ರಾಜಕೀಯ ಪಕ್ಷಗಳು ಆಯ್ಕೆ ಮಾಡುತ್ತಿರುವ ವ್ಯಕ್ತಿಗಳನ್ನು ಹಾಗೂ ರಾಜಕೀಯ ಪಕ್ಷಗಳ ನಡೆಯನ್ನು ವಿಮರ್ಶಿಸಿ ಅವರು ಈ ರೀತಿಯ ಪೋಸ್ಟ್‌ ಹಾಕಿದ್ದರು. ಅವರ ಪೋಸ್ಟ್‌ನ್ನು 414 ಜನ ಲೈಕ್‌ ಮಾಡಿದ್ದು, 58 ಮಂದಿ ಕಮೆಂಟ್‌ ಮಾಡಿದ್ದರು.
ಇದನ್ನೆ ಆಧಾರವಾಗಿಟ್ಟುಕೊಂಡು ಹಿರಿಯ ಪತ್ರಕರ್ತ ಟಿ.ಕೆ.ತ್ಯಾಗರಾಜ್‌ ವಿಡಂಬನಾತ್ಮಕ ಸುದ್ದಿಯನ್ನು ಮಾಡಿದ್ದಾರೆ. ಅದು ಈ ಕೆಳಗಿನಂತಿದಿ.

 

ಕನ್ನಡ ಸುದ್ದಿ ವಾಹಿನಿಗಳಲ್ಲಿ ಒಂದೇ ರೀತಿಯ ಫ್ಲ್ಯಾಷ್ ನ್ಯೂಸ್

——————————————————————————

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾಣ ನಡೆ: ಬಿಜೆಪಿ ನೆಲೆ ವಿಸ್ತರಿಸಲು ನಿರ್ಧಾರ; ಪುರುಷೋತ್ತಮ ಬಿಳಿಮಲೆ ಸೇರಿದಂತೆ ಅವರು ಸೂಚಿಸಿದ ಎಲ್ಲರಿಗೂ ಟಿಕೆಟ್!

—————————————————————————-

ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಮಹತ್ವದ ವಿದ್ವಾಂಸ, ಚಿಂತಕ ಪುರುಷೋತ್ತಮ ಬಿಳಿಮಲೆ ತಮಗೂ ತಮ್ಮ ಗೆಳೆಯರಿಗೆ ವಿಧಾನ ಪರಿಷತ್ ಗೆ ಟಿಕೆಟ್ ನೀಡುವಂತೆ ಮಾಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ದೆಹಲಿಯಲ್ಲಿರುವ ಬಿಳಿಮಲೆ ಜತೆ ದೂರವಾಣಿ ಮೂಲಕ ಮಾತನಾಡಿ ಅವರ ಮನವಿಯನ್ನು ಪುರಸ್ಕರಿಸುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರಿಗೆ ತಕ್ಷಣ ಬರುವಂತೆಯೂ ಸಾದ್ಯವಾಗದಿದ್ದರೆ ದೆಹಲಿಯಲ್ಲೇ ಇರುವ ತಮ್ಮ ಪಕ್ಷದ ಅಧ್ಯಕ್ಷರು ಬಿಳಿಮಲೆ ಅವರನ್ನು ಸಂಪರ್ಕಿಸುವುದಾಗಿಯೂ ಮುಖ್ಯಮಂತ್ರಿ ತಿಳಿಸಿದರು.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ದೆಹಲಿ ಪ್ರತಿನಿಧಿ ಜಿಂಗ್ ಚಾಕ್ ಜನಿವಾರೇಶ್ ಅವರಿಂದ ಪಡೆಯೋಣ. ಗುಡ್ ಈವ್ನಿಂಗ್ ಜಿಂಗ್ ಚಾಕ್, ವಿದ್ವಾಂಸ ಬಿಳಿಮಲೆ ಅವರಿಗೆ ಸಂಬಂಧಿಸಿದ ಲೇಟೆಸ್ಟ್ ಮಾಹಿತಿ ಏನಿದೆ?

ಗುಡ್ ಈವ್ನಿಂಗ್ ಸೀನಿಯರ್ ಜನಿವಾರೇಶ್, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಬಿಳಿಮಲೆ ಅವರ ನಿವಾಸಕ್ಕೆ ಬಂದಿದ್ದರಿಂದ ರೋಮಾಚನಗೊಂಡ ಬಿಳಿಮಲೆ ಅವರು ಭಾರತ್ ಮಾತಾಕಿ ಜೈ ಎನ್ನುತ್ತಾ ಮೋದಿ ಅವರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡರು. ಅಪ್ಪುಗೆ ಖ್ಯಾತಿಯ ಪ್ರಧಾನಿ ಅವರು ಬಿಳಿಮಲೆ ಅವರನ್ನು ಅಪ್ಪಿಕೊಳ್ಳಲು ಹೋದಾಗ ಹೈಟ್ ಸಾಕಾಗದೇ ಬಿಳಿಮಲೆ ಅವರನ್ನು ಸ್ಟೂಲ್ ನ ಮೇಲೆ ನಿಲ್ಲಿಸಿ ಅಪ್ಪಿಕೊಂಡರು. ಭಾವೋದ್ವೇಗಕ್ಕೆ ಒಳಗಾದ ಬಿಳಿಮಲೆ ಮತ್ತೊಮ್ಮೆ ಭಾರತ್ ಮಾತಾಕೀ ಜೈ, ಹಿಂದೂಸ್ಥಾನ್ ಹಮಾರಾ ಹೈ, ಮೋದಿ ಮಹಾರಾಜ್ ಕೀ‌ ಜೈ ಎಂದು ಘೋಷಣೆ ಕೂಗತೊಡಗಿದರು. ಆಗ ಮೋದಿ, ನೀವು ಬಹಳ ಎತ್ತರ ಇದ್ದೀರಿ ಎಂದು ಭಾವಿಸಿದ್ದೆ ಬಿಳಿಮಲೆ …..ಎಂದು ವಾಕ್ಯ ಪೂರ್ಣ ಮಾಡುವುದಕ್ಕೆ ಮೊದಲೇ ಬಿಳಿಮಲೆ ಅವರು ನೀವು ಕನ್ ಫ್ಯೂಸ್ ಮಾಡಿಕೊಂಡಿದ್ದೀರಿ ಸರ್. ಅದು ಕನ್ನಡ‌ ಸಾಹಿತ್ಯದಲ್ಲಿ ನನ್ನ ಎತ್ತರ, ದೈಹಿಕವಾಗಿ ಇಷ್ಟೇ ಎಂದು ತಮ್ಮ ಎಂದಿನ ಧಾಟಿಯಲ್ಲಿ ನಕ್ಕು ಮೋದಿ ಕನ್ನಡದಲ್ಲಿ ಮಾತನಾಡಿದ್ದು ನೆನಪಾಗಿ ಜೈ ಕನ್ನಡ ಭುವನೇಶ್ವರಿ ತಾಯಿ ಎಂದು , ಏನ್ಸಾರ್, ನೀವು ಕನ್ನಡದಲ್ಲಿ ಮಾತಾಡ್ತಿದೀರ ಎಂದು ಅಚ್ಚರಿ ವ್ಯಕ್ತಪಡಿಸಿದಾಗ ಗಂಭೀರವದನರಾದ ಮೋದಿ, ನಮ್ಮದು ಒಕ್ಕೂಟ ರಾಷ್ಟ್ರ. ನಾನು ಒಕ್ಕೂಟ ರಾಷ್ಟ್ರದ ಪ್ರಧಾನಿಯಾಗಿ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಕಲಿಯುವುದು ನನ್ನ ಕರ್ತವ್ಯ ಎನ್ನುತ್ತಿದ್ದಂತೆ ಬಿಳಿಮಲೆ ಅವರು ಆನಂದದ ಭಾಷ್ಪ ಸುರಿಸತೊಡಗಿದರು. ಸ್ವತಃ ಮೋದಿ ಅವರೇ ತಮ್ಮ ಜುಬ್ಬಾದಲ್ಲಿದ್ದ ಕರ್ಚೀಫ್ ತೆಗೆದು ಬಿಳಿಮಲೆ ಅವರ ಕಣ್ಣೀರೊರೆಸಿದರು ಸೀನಿಯರ್ ಜನಿವಾರೇಶ್.

ನಿಲ್ಲಿಸಬೇಡಿ ಮುಂದೇನಾಯ್ತು ಹೇಳಿ. ಇವತ್ತು ಅಷ್ಟೊಂದು ಜಾಹೀರಾತಿನ ಒತ್ತಡ ಇಲ್ಲ. ನಿಮಗೆ ಸಾಕು ಅನ್ನಿಸುವಷ್ಟರವರೆಗೆ ಮಾತಾಡಿ ಜಿಂಗ್ ಚಾಕ್.

ಒಕ್ಕೂಟ ವ್ಯವಸ್ಥೆಯನ್ನು ನೀವು ಅರ್ಥ ಮಾಡಿಕೊಂಡಿರುವ‌ ಬಗೆಯೇ ಅನನ್ಯ. ಅದಕ್ಕಾಗಿ ಈಗ ಒಂದು ಭಾಷಾ ಆಟ ಆಡೋಣ ಸರ್. ನಾನು ಕೂಡ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವುದರಿಂದ ನಾನು ಹಿಂದಿಯಲ್ಲಿ ಮಾತನಾಡಿದರೆ ನೀವು ಕನ್ನಡದಲ್ಲಿ ಮಾತಾಡಿ ಸರ್ ಎಂದು ಮೋದಿ ಅವರಿಗೆ‌ ಮನವಿ ಮಾಡಿದರು.

ಓ ಅದಕ್ಕೇನಂತೆ ನೀವೇ ಶುರು ಮಾಡಿ ಬಿಳಿಮಲೆ ಎಂಬ. ಮೋದಿ ಉತ್ತರಕ್ಕೆ ಖುಷಿಯಾದ ಬಿಳಿಮಲೆ,

ಸರ್ , ಆಪ್ ಕಾ ನಾಮ್ ಕ್ಯಾ ಹೈ?

ನನ್ನ ಹೆಸರು ನರೇಂದ್ರ ದಾಮೋದರ ಮೋದಿ.

ದಿಲ್ಲಿಕಾ ವೆದರ್ ಕೈಸಾ ಹೈ?

ದೆಹಲಿಯ ಹವಾಮಾನ ತುಂಬ ಹಿತವಾಗಿದೆ.

ಟಮಾಟರ್ ಕಾ ಸಾಮ್ನೇ ಪೆಟ್ರೋಲ್ ಕಾ ರೇಟ್ ಅಭೀ ಕಮ್ ಹೋನಾ ಚಾಹೀಯೇ.

ಹೌದು. ನನ್ನ ಉದ್ದೇಶವೂ ಅದೇ ಬಿಳಿಮಲೆಯವರೇ.ಜನಸಾಮಾನ್ಯರು ಸುಖವಾಗಿರಬೇಕು.

ಇಸ್ ಕೇ ಲಿಯೇ ಆಪ್ ಕ್ಯಾ ಪ್ಲ್ಯಾನ್ ಕಿಯಾ?

ತುಂಬ ಸುಲಭ ಉಪಾಯ ಇದೆ. ಟೊಮೇಟೋ ಬೆಲೆಯನ್ನು ಇನ್ಮಷ್ಟು ಏರಿಸುತ್ತೇನೆ.

ವಾವ್ ಸರ್. ಆಪ್ ಕಾ ಪ್ಲ್ಯಾನ್ ಬಹೂತ್ ಅಚ್ಚಾ ಹೈ.

ಆಪ್ ಕಿಸ್ ಕ್ಲಾಸ್ ತಕ್ ಪಡೀ ಹೈ?

ಬಿಳಿಮಲೆಯವರೇ ನಿಮ್ಮ ಹಿಂದಿ ಇನ್ಮಷ್ಟು ಸುಧಾರಿಸಬೇಕಿದೆ. ನೀವು ಹಿಂದಿಯನ್ನು ಚೆನ್ಮಾಗಿ ಕಲಿತ ಮೇಲೆ ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಈ ಆಟ ಕೆಲವು ಸೆಕಂಡ್‌ಗಳ ಕಾಲ ನಡೆಯುತ್ತಿದ್ದಂತೆ ಏನೋ ಜ್ಞಾಪಕವಾದಂತೆ ಕಂಡ ಪ್ರಧಾನಿ‌ ಅವರು ಅಲ್ಲಿಂದಲೇ ಜೆಪಿ ನಡ್ಡಾ ಅವರಿಗೆ ಕರೆ ಮಾಡಿ ಬಿಳಿಮಲೆ ನಿವಾಸಕ್ಕೆ ಕರೆಸಿಕೊಂಡರು. ಮೋದಿ ಅವರ ಕಿವಿಯಲ್ಲಿ ನಡ್ಡಾ ಏನೋ ಉಸುರುತ್ತಿದ್ದಂತೆ ಗಾಬರಿಯಾದ ಮೋದಿ ಅಲ್ಲಿಂದಲೇ ಎಲ್ಲರನ್ನೂ ಬಿಜೆಪಿ ಪ್ರಧಾನ ಕಾರ್ಯಾಲಯಕ್ಕೆ ಕರೆದೊಯ್ದರು. ನೀವು ಬಿಜೆಪಿ ಸೇರುತ್ತೀರಾ ಎಂದು ಮೋದಿ ಪ್ರಶ್ನಿಸುತ್ತಿದ್ದಂತೆ ಬಿಳಿಮಲೆ ಅವರು ಇಡೀ ದೇಶದಲ್ಲಿ ಏಕಪಕ್ಷ ವ್ಯವಸ್ಥೆ ಬರಬೇಕೆಂಬ ನಿಮ್ಮ ನಿಲುವನ್ನು ಬೆಂಬಲಿಸುವವನು. ಹೀಗಾಗಿ ಬಿಜೆಪಿ ಸೇರಲು ಅಭ್ಯಂತರ ಇಲ್ಲ ಎಂದರು. ಬಿಳಿಮಲೆ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಕೆಲವೇ ಸೆಕಂಡ್ ಗಳಲ್ಲಿ ಆತುರಾತುರವಾಗಿ ಮುಗಿದು ಹೋಯಿತು. ಸೀನಿಯರ್ ಜನಿವಾರೇಶ್, ದುರದೃಷ್ಟ ಎಂದರೆ ಬಿಳಿಮಲೆ ಪಕ್ಷ ಸೇರ್ಪಡೆ ವೇಳೆ ವಿದ್ಯುತ್ ಕೈಕೊಟ್ಟು ಅದನ್ನು ಸರಿಪಡಿಸುವಷ್ಟರಲ್ಲಿ ಎಲ್ಲ ವಿಡಿಯೋ ಕ್ಯಾಮರಾಗಳು ಕೆಟ್ಟು ಆ ಪವಿತ್ರ ಗಳಿಗೆಯನ್ನು ಸೆರೆ ಹಿಡಿಯುವುದಾಗಲೀ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುವುದಾಗಲೀ ಸಾಧ್ಯವಾಗಲಿಲ್ಲ.

ಜಿಂಗದ ಚಾಕ್ , ಅಂದ್ರೆ ಬಿಳಿಮಲೆ ಬಿಜೆಪಿ ಸೇರಿದ್ರಾ? ಸ್ಟುಡಿಯೋದಲ್ಲೇ ನ್ಯೂಸ್ ರೀಡರ್ ಸೀನಿಯರ್ ಜನಿವಾರೇಶ್, ನಮ್ಮ ಪಕ್ಷಕ್ಕೆ ಬಿಳಿಮಲೆ ಬಂದ್ರು ಎಂದು ಕುಣಿದು ಕುಪ್ಪಳಿಸಿ, ಜಿಂಗ್ ಚಾಕ್, ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ನಡೆದದ್ದಾದರೂ ಏನೆಂದು ವಿವರಿಸಿ.

ಸೀನಿಯರ್ ಜನಿವಾರೇಶ್, ಬಿಜೆಪಿಗೆ ಈವರೆಗೆ ನಗರದ ನಕ್ಸಲ್ ಗಳು ಎಂದು ಬಿಜೆಪಿಯಿಂದಲೇ ಕರೆಸಿಕೊಂಡಿದ್ದ ಬುದ್ಧಿಜೀವಿಗಳನ್ನು ಪಕ್ಷಕ್ಕೆ ಕರೆತರುವ‌ ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಮೊದಲ ಕಂತಿನಲ್ಲಿ ಪುರುಷೋತ್ತಮ ಬಿಳಿಮಲೆ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ. ಅವರು ತಮ್ಮ ಗೆಳೆಯರು‌ ಮತ್ತು ತಮ್ಮ ಬಂಧುಗಳಲ್ಲಿ ಯಾರ್ಯಾರಿಗೆ ಟಿಕೆಟ್ ಕೊಡಬೇಕೆಂದು ಸೂಚಿಸಿದ್ದಾರೋ ಅವರೆಲ್ಲರಿಗೆ ಅವರು ಕೇಳಿದ ಊರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ. ಸನತ್ ಕುಮಾರ್ ಬೆಳಗಲಿ, ಶ್ರೀನಿವಾಸ್ ಕಾರ್ಕಳ, ನಾ.ದಿವಾಕರ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಪುರುಷೋತ್ತಮ ಬಿಳಿಮಲೆ ಅವರು ಶಿಫಾರಸು ಮಾಡದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ತಮಗೂ ಟಿಕೆಟ್ ಬೇಕೆಂದಿರುವ‌ ಅಶೋಕ್ ಶೆಟ್ಟರ್ ಹೆಸರನ್ನೂ ಪರಿಗಣಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಪುರುಷೋತ್ತಮ ಬಿಳಿಮಲೆ ಮತ್ತು ಅವರ ಅನುಯಾಯಿಗಳನ್ನು ಬಿಜೆಪಿಗೆ ಸೇರ್ಪಡೆ ಮಾಡುವ ಮಹಾಮನ್ವಂತರ ಕಾರ್ಯಕ್ರಮವನ್ನು ಶೀಘ್ರದಲ್ಲೇ ಬೆಂಗಳೂರಿನಲ್ಲೇ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಸಲು‌ ತೀರ್ಮಾನಿಸಲಾಗಿದೆ ಸೀನಿಯರ್ ಜನಿವಾರೇಶ್.

ಹಾಗಾದ್ರೆ ಬಿಳಿಮಲೆ ಅವರೆಲ್ಲ ಸಿದ್ದರಾಮಯ್ಯ ಮಂತ್ರ ಜಪಿಸುವುದನ್ನು ಬಿಟ್ಟು ನಮೋ ಎನ್ನತೊಡಗಿದ್ದಾರೆ., ವೀಕ್ಷಕರೇ ಈ ಸುದ್ದಿ ನಮ್ಮಲ್ಲೇ ಮೊದಲು. ಮನೆಯಲ್ಲಿ ಹೋಮ‌ ಮಾಡುತ್ತಿರುವ ನಮ್ಮ ಪ್ರಧಾನ‌ ಸಂಪಾದಕರಾದ ವೀರ ಮಾರ್ತಾಂಡ ಬುರ್ಜಿ ಈ ಬಗ್ಗೆ ಏನು ಹೇಳ್ತಾರೆ ಅಂತ ಕೇಳೋಣ. ಸರ್, ಬಿಳಿಮಲೆ ಸಂಗಡಿಗರು ಬಿಜೆಪಿ ಸೇರಿದ್ದಾರೆ. ಏನನ್ಸುತ್ತೆ ಸಾರ್?

ಅನ್ಸೋದು ಏನು? ನನಗೆ‌ ಮೊದಲೇ ಗೊತ್ತಿತ್ತು. ಈ ಚಿಂತಕರೆಲ್ಲ ಟ್ಯೂಬ್ ಲೈಟ್ ಗಳು ಅಂತ. ‌ಹೊತ್ತಿಕೊಳ್ಳೋದು ನಿಧಾನ.‌ ಈಗ ಜ್ಞಾನೋದಯವಾಗಿದೆ. ಕೊನೆಗೂ ನಮ್ಮ ಪಕ್ಷಕ್ಕೆ ಬಂದ್ರಲ್ಲಾ ಅಂತ ಖುಷಿ ಪಡೋದಾ ದುಖಃ ಪಡೋದಾ? ಒಟ್ಟಿನಲ್ಲಿ ಕನ್ಫ್ಯೂಷನ್.

ದೆಹಲಿಯ ಬಿಜೆಪಿ ಪ್ರಧಾನ‌ಕಾರ್ಯಾಲಯದಲ್ಲಿ ಬಿಳಿಮಲೆ ಬಿಜೆಪಿ ಸೇರ್ಪಡೆ ವೇಳೆ ವಿದ್ಯುತ್, ವಿಡಿಯೋ ಕೈಕೊಟ್ಟ ಅಪಶಕುನದ ಬಗ್ಗೆ ನಮ್ಮ ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಂಪಾದಿಸಿರುವ ಕೂಜಿಪಾಜಿ ಗುರುಗಳ ಜತೆ ಬೆಳಿಗ್ಗೆ 10.30 ಕ್ಕೆ ವಿಶೇಷ ಕಾರ್ಯಕ್ರಮ‌ ಇದೆ.‌ ಅಲ್ಲಿವರೆಗೆ ಚಾನಲ್‌ ಚೇಂಜ್ ನೋಡ್ತಾ ಇರಿ. ನ್ಯೂಸ್ ಅಂದ್ರೆ ಗಟಾರ ಟಿವಿ. ಶುಭ ರಾತ್ರಿ.

ಲೇಟೆಸ್ಟ್ ನ್ಯೂಸ್, ವೀಕ್ಷಕರೇ ನಮಸ್ಕಾರ. ಮತ್ತೊಮ್ಮೆ ನಿಮಗೆ ಗಟಾರ ಟಿವಿ ನ್ಯೂಸ್ ಗೆ ಸ್ವಾಗತ. ಇದೀಗ ಬಂದ ಸುದ್ದಿ. ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿರುವ ಕನ್ನಡನಾಡಿನ ಅನೇಕ ಚಿಂತಕರು, ವಿಚಾರವಾದಿಗಳು, ಪ್ರಗತಿಪರರು, ಮೋದಿ ವಿರೋಧಿ ವ್ಯಾಧಿಯಿಂದ ಬಳಲುತ್ತಿದ್ದ ಸಾಮಾಜಿಕ ಜಾಲತಾಣ ಯುವಜನ ಪುರೋಗಾಮಿ ವೇದಿಕೆ ಸದಸ್ಯರು ಬಿಜೆಪಿ ಪ್ರಧಾನ ಕಾರ್ಯಾಲಯದ ಬಳಿ ಜಮಾಯಿಸಿರುವ ದೃಶ್ಯ ನೀವು ನೋಡಬಹುದು. ನೂರಾರು ಪ್ರಗತಿಪರರು ಬಂದಿದ್ದಾರೆ. ಯುವ ಮತ್ತು ಹಿರಿಯ ಪ್ರಗತಿಪರರು ಬಂದಿದ್ದಾರೆ

ಅಲ್ಯಾರೋ ಕೂಗುತ್ತಿದ್ದಾರೆ, ಅವರು ಗಡ್ಡ ಬಿಟ್ಟಿಲ್ಲ, ಅವರು ಬುದ್ಧಿಜೀವಿಗಳಲ್ಲ. ಅವರನ್ನು ಹೊರಗಟ್ಟಿ ಎಂದು ಬಿಜೆಪಿ ಕಾರ್ಯಾಲಯದ ಉಸ್ತುವಾರಿಗೆ ಹೇಳುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಗಡ್ಡ ಇಲ್ಲದ ಬುದ್ಧಿಜೀವಿ, ಗಡ್ಡಬಿಟ್ಟವರೆಲ್ಲ ಬುದ್ಧಿಜೀವಿಗಳಲ್ಲ, ಲದ್ದಿಜೀವಿಗಳೂ ಇದ್ದಾರೆ ಎನ್ನುತ್ತಿದ್ದಂತೆ ಅವರ ನಡುವೆಯೇ ಜಗಳ ಶುರುವಾಯಿತು.‌ ಅವನು ನಮ್ಮವನಲ್ಲ, ಯಾವ ಕಡೆ ಅಂತ ಗೊತ್ತಾಗ್ತಿಲ್ಲ ಅವನನ್ನು ಹೊರಗೆ ತಳ್ಳಿ ಎಂದು ಪ್ರಗತಿಪರರೆಲ್ಲ ಸೂಚಿಸುತ್ತಿದ್ದಂತೆ ಪೊಲೀಸರ ಲಾಠಿ ಪ್ರಹಾರದ ಪೆಟ್ಟಿನಿಂದ ನನಗೆ ಎಚ್ಚರವಾಗಿ ವಿಪರೀತ ಚಳಿಯಿಂದ ಕಂಬಳಿ ಎಳೆದುಕೊಳ್ಳುತ್ತಿದ್ದಂತೆ ಅಯ್ಯೋ ಇದೂ ಕನಸಾ ಎಂದು ಮಗ್ಗುಲು ಬದಲಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *