ತೀಸ್ತಾ ಸೆಟಲ್ವಾಡ್‌ ಬಂಧನ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ನಿವೃತ್ತ ಡಿಜಿಪಿ ಶ್ರೀಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳನ್ನು ನಡೆಸಲಾಗಿದೆ. ತೀಸ್ತಾ ಸೆಟಲ್ವಾಡ್‌ ಅವರ ಬಂಧನವು ನಾಗರಿಕ ಸಮಾಜಕ್ಕೆ ಮಾಡಿದ ಅಪಚಾರವಾಗಿದೆ. ದೇಶದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು  ದಮನಿಸುವ ತಂತ್ರವಾಗಿದೆ ಎಂದರು.

2002 ರ ಗುಜರಾತ್ ಗಲಭೆಯ ನಂತರ ರಚಿಸಲಾದ ‘ಸಿಟಿಝನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್’ ಎಂಬ ಎನ್‌ಜಿಒ ನಡೆಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ನೆನ್ನೆ(ಜೂನ್‌ 26)  ಮುಂಬೈನಲ್ಲಿ ಬಂಧಿಸಿದೆ.‌

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, 2002ರಲ್ಲಿ ಗುಜರಾತ್ ನಲ್ಲಿ ನಡೆದ ಕೋಮು ಹಿಂಸಾಚಾರದ ನರಮೇಧದಲ್ಲಿ ಆಗಿನ ಸರಕಾರದ ಪಾತ್ರ – ಇದ್ದುದನ್ನು ಸತತವಾಗಿ ಬಹಿರಂಗಪಡಿಸುತ್ತಲೇ ಇರುವ ತೀಸ್ತಾ ಸೆಟಲ್ವಾಡ್‌ ವಿರುದ್ಧ ಫ್ಯಾಶಿಸ್ಟ್ ಸರಕಾರ ನಡೆಸಿರುವ ದಾಳಿ ಅತ್ಯಂತ ಹೇಯವಾದ ಕೃತ್ಯ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ಶಕ್ತಿ ಮತ್ತು ಸೌಂದರ್ಯವೆಂದರೆ ಪ್ರಶ್ನೆ ಮಾಡುವುದು. ಭಿನ್ನಾಭಿಪ್ರಾಯ ಹೊಂದುವುದು. ಆದರೆ ಈಗಿನ ಬಿಜೆಪಿ ಸರಕಾರ ದ್ವೇಷದ, ಸೇಡಿನ ರಾಜಕೀಯವನ್ನು ದೇಶದ ತುಂಬೆಲ್ಲ ಹರಡಿಸುತ್ತಿದೆ. ಅದನ್ನು ಜನಮಾನಸದಲ್ಲಿ ಕಸಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದರು.

ಟೀಸ್ಟಾ ಸೆಟಲ್ವಾಡ್ ಹಾಗೂ ಶ್ರೀಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರಭುಖಾನಾಪುರೆ, ಅರ್ಜುನ್ ಭದ್ರೆ, ಪಾಂಡುರಂಗ ಮಾವಿನಕರ್, ರೇವಣಸಿದ್ದ, ಸಿದ್ದು ಹರವಾರ್ ಸೇರಿದಂಥೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪತ್ರಕರ್ತೆ ಎಸ್. ಸತ್ಯಾ ಅವರು, ಭಾರತದ ಎಲ್ಲೇ ಆದರೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಅದರ ಪರವಾಗಿ ದಣಿವರಿಯದೆ ಹೋರಾಟ ಮಾಡುವವರು ತೀಸ್ತಾ. ತಮ್ಮ ಜನಪರ ಕೆಲಸಗಳಿಗಾಗಿ ಪದ್ಮಶ್ರೀ ಪ್ರಶಸ್ತಿ, ಪಿಯುಸಿಲ್ ಜರ್ನಲಿಸಂ ಪ್ರಶಸ್ತಿ, ಚಮೇಲಿದೇವಿ ಪತ್ರಿಕೋದ್ಯಮ ಪ್ರಶಸ್ತಿ, ರಾಜೀವ್‌ ಗಾಂಧಿ ಸದ್ಭಾವನಾ ಪ್ರಶಸ್ತಿ, ನಾನಿ ಪಾಳ್ಟೀವಾಲ ಪ್ರಶಸ್ತಿ ಅಂತಾರಾಷ್ಟ್ರೀಯ ಪ್ಯಾಕ್ಸ್ ಕ್ರಿಸ್ಪಿ ಶಾಂತಿ ಪ್ರಶಸ್ತಿ, ಪ್ರಜಾಪ್ರಭುತ್ವದ ಸಮರ್ಥಕಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಅವರಿಗೆ ಸಂದಿವೆ ಎಂದು ಅವರ ಕಾರ್ಯಗಳನ್ನು ನೆನಪಿಸಿದರು.

ಬಂಧನ ವಿರೋಧಿಸಿ ಬೇಷರತ್ ಬಿಡುಗಡೆಗೆ ಅಗ್ರಹಿಸಿ ಕಲ್ಬುರ್ಗಿ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದಿದೆ.

Donate Janashakthi Media

Leave a Reply

Your email address will not be published. Required fields are marked *