ನವದೆಹಲಿ: ಸಂಶೋಧಾ ವಿದ್ಯಾರ್ಥಿಯೋರ್ವನನ್ನು ಕೇಂದ್ರ ಸರ್ಕಾರದ ವಿರುದ್ಧದ ನೀತಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಂಬ ಕಾರಣಕ್ಕಾಗಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‌ಎಸ್) ಅಮಾನತುಮಾಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎರಡು ವರ್ಷಗಳ ಅವಧಿಗೆ ಟಿಐಎಸ್‌ಎಸ್ ರಾಮದಾಸ್ ಪ್ರಿನಿ ಶಿವಾನಂದ ಎಂಬ ಸಂಶೋಧನಾ ವಿದ್ಯಾರ್ಥಿಯನ್ನು ಅಮಾನತು ಮಾಡಿದೆ.
ರಾಮದಾಸ್ ಪ್ರಿನಿ ಶಿವಾನಂದ ದಲಿತ ಸಮುದಾಯಕ್ಕೆ ಸೇರಿದವರು ಎನ್ನಲಾಗಿದ್ದು, ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರೊಗ್ರೇಸಿವ್ ಸ್ಟೂಡೆಂಟ್ಸ್ ಪೋರಂ (ಪಿಎಸ್‌ಎಫ್) ಸಂಘಟನೆಯನ್ನು ಪ್ರತಿನಿಧಿಸಿ ಪಾಲ್ಗೊಂಡಿದ್ದರು. ಟಿಐಎಸ್‌ಎಸ್-ಪಿಎಸ್‌ಎಫ್ ಎಂಬ ಬ್ಯಾನರ್ ಅಡಿಯಲ್ಲಿ ಶಿವಾನಂದ ಅವರು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
16 ವಿದ್ಯಾರ್ಥಿ ಸಂಘಟನೆಗಳ ಜಂಟಿ ವೇದಿಕೆಯಾದ ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾದ ಬ್ಯಾನರ್ ಅಡಿಯಲ್ಲಿ “ಶಿಕ್ಷಣವನ್ನು ಉಳಿಸಿ, ಎನ್‌ಇಪಿ ತಿರಸ್ಕರಿಸಿ, ಭಾರತವನ್ನು ಉಳಿಸಿ, ಬಿಜೆಪಿಯನ್ನು ತಿರಸ್ಕರಿಸಿ” ಎಂಬ ಘೋಷಣೆಯೊಂದಿಗೆ ಜನವರಿಯಲ್ಲಿ ಸಂಸತ್ತಿಗೆ ಮೆರವಣಿಗೆ ಆಯೋಜಿಸಲಾಗಿತ್ತು.
ಇದನ್ನೂ ಓದಿ: “ನಿಮ್ಮ ಮನೆ ಎಲ್ಲಿದೆ ಎಂದು ನನಗೆ ಗೊತ್ತು…”: ಮತದಾರರಿಗೆ ಬುಲ್ಡೋಜ್‌ರ್ ಬೆದರಿಕೆ ಹಾಕಿದ ಅಸ್ಸಾಂ ಬಿಜೆಪಿ ಶಾಸಕ
ಪಿಎಸ್‌ಎಫ್ ಸಂಘಟನೆ ಟಿಐಎಸ್‌ಎಸ್‌ನ ಅಧಿಕೃತ ಸಂಘಟನೆಯಲ್ಲ. ಶಿವಾನಂದ, ಸಂಘಟನೆಯ ಹೆಸರಿನ ಜೊತೆ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಟಿಐಎಸ್‌ಎಸ್ ಆರೋಪಿಸಿ, ಕಳೆದ ಏಪ್ರಿಲ್ 18ರಂದು ಅಮಾನತು ಮಾಡಿದೆ. ಇನ್ನು ಟಿಐಎಸ್‌ಎಸ್, ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಬಂಧ ಉತ್ತರ ಕೇಳಿ ಮಾರ್ಚ್ 7ರಂದು ಶೋಕಾಸ್ ನೊಟೀಸ್ ನೀಡಲಾಗಿತ್ತು.
ಶೋಕಾಸ್ ನೋಟಿಸ್‌ನಲ್ಲಿ, ಜನವರಿಯಿಂದ ಶಿವಾನಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಪೋಸ್ಟ್‌ಗಳಿಗೆ ಆಕ್ಷೇಪಣೆಗಳನ್ನು ಎತ್ತಿದೆ. ಜನವರಿ 26 ರಂದು ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸೇರಲು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದನ್ನು ‘ಅಗೌರವದ ಗುರುತು’ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ವಿರುದ್ಧದ ಪ್ರತಿಭಟನೆಯಾಗಿದೆ ಎಂದಿದೆ. ‘ರಾಮ್ ಕೆ ನಾಮ್’ ಆನಂದ್ ಪಟವರ್ಧನ್ ಶಿವಾನಂದರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರವಾಗಿದೆ.ಈತನ ವಿರುದ್ಧ ‘ಪುನರಾವರ್ತಿತ ದುರ್ನಡತೆ ಮತ್ತು ದೇಶವಿರೋಧಿ ಚಟುವಟಿಕೆ’ಗಳ ಆರೋಪ ಹೊರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಶಿವಾನಂದ ಅಮಾನತು ಆದೇಶದ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‌ಎಫ್ ಸಂಘಟನೆ, “ಮೆರವಣಿಗೆ ಆಯೋಜಿಸಿರುವ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಅದರ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು. ಆದರೆ, ವಿದ್ಯಾರ್ಥಿಯನ್ನು ಅಮಾನತುಗೊಳಿಸಿ, ಎರಡು ವರ್ಷಗಳ ಕಾಲ ಟಿಐಎಸ್‌ಎಸ್‌ನ ಯಾವುದೇ ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆದಿರುವುದು ಟಿಐಎಸ್‌ಎಸ್ ಆಡಳಿತ ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂಬುವುದನ್ನು ತೋರಿಸುತ್ತದೆ” ಎಂದಿದೆ.
ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಶಿವಾನಂದ, ಪಿಎಸ್‌ಎಫ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಪ್ರಸ್ತುತ ಪಿಎಸ್‌ಎಫ್‌ನ ಮಾತೃ ಸಂಸ್ಥೆಯಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಎಸ್‌ಎಫ್‌ಐ ಮಹಾರಾಷ್ಟ್ರ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.
ಇದನ್ನೂ ನೋಡಿ: ಕೋಲಾರ ಲೋಕಸಭಾ ಕ್ಷೇತ್ರ : ಒಳ ಜಗಳದ ಲಾಭ ಯಾರಿಗೆ? ಮಹಿಳಾ ಮತಗಳು ನಿರ್ಣಾಯಕ Janashakthi Media