ತ್ರಿಪಕ್ಷೀಯ ಐ.ಎಲ್.ಸಿ. ಅಧಿವೇಶನವನ್ನೇ ನಡೆಸದ ವೈಫಲ್ಯವನ್ನು ಮರೆಮಾಚುವ ತಂತ್ರ –ಸಿಐಟಿಯು
ತಿರುಪತಿ : ತಿರುಪತಿಯಲ್ಲಿ ಕಾರ್ಮಿಕರಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ಎರಡು ದಿನಗಳ ಮಂತ್ರಿ-ಅಧಿಕಾರಿಗಳ ಸಮಾವೇಶ ನಡೆಯಿತು. ಇದಕ್ಕೆ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ಎಂಬ ಹೆಸರು ಕೊಡಲಾಗಿತ್ತು. ಆದರೆ ಇದನ್ನು ಹಾಗೆಂದು ಕರೆಯಲು ಸಾಧ್ಯವಿಲ್ಲ, ಇದು ಕೇವಲ ಮಂತ್ರಿಗಳು ಮತ್ತು ಅದಿಕಾರಶಾಹಿಗಳ ಒಂದು ಸಭೆಯಷ್ಟೇ ಆಗಿತ್ತು ಎಂದು ದೇಶದ ಪ್ರಮುಖ ರಾಷ್ಟ್ರೀಯ ಮಟ್ಟದ ಕಾರ್ಮಿಕ ಸಂಘಟನೆಗಳಲ್ಲಿ ಒಂದಾದ ಸಿಐಟಿಯು ವರ್ಣಿಸಿದೆ. ವ್ಯಾಪಕವಾದ ವಂಚಕ ಮಾಧ್ಯಮ ಪ್ರಚಾರದ ಮೂಲಕ ಇದನ್ನು ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ಎಂದು ಹೆಸರಿಸುವ ಮೂಲಕ ಮೋದಿ ನೇತೃತ್ವದ ಸರಕಾರ ತನ್ನ ನಿರ್ಲಜ್ಜ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಜನರನ್ನು ದಾರಿತಪ್ಪಿಸುವ ಮತ್ತು ಗೊಂದಲಗೊಳಿಸುವ ಹತಾಶ ಪ್ರಯತ್ನವನ್ನು ಮಾಡುತ್ತಿದೆ ಎಂದು ಅದು ಬಲವಾಗಿ ಖಂಡಿಸಿದೆ.
ದುಡಿಮೆಯಪ್ರಪಂಚದ ಅತಿದೊಡ್ಡ ಭಾಗವಾದ ಕಾರ್ಮಿಕರು ಮತ್ತು ಅವರ ಸಂಘಗಳನ್ನು ಹೊರಗಿಟ್ಟು ನಡೆಸುವ ರಾಜ್ಯ ಮತ್ತು ಕೇಂದ್ರ ಕಾರ್ಮಿಕ ಮಂತ್ರಿಗಳು ಮತ್ತು ಅಧಿಕಾರಶಾಹಿಗಳನ್ನು ಒಳಗೊಂಡ ಮಂತ್ರಿ-ಅಧಿಕಾರಶಾಹಿಗಳ ಸಮಾವೇಶವನ್ನು ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ಎಂದು ಕರೆಯಲಾಗುವುದಿಲ್ಲ. ಈ ತಿರುಪತಿ ಸಮಾವೇಶವನ್ನು ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ಎಂದು ಬಿಂಬಿಸುವ ಮೋಸದ ಹಿಂದೆ, ಈ ಸರಕಾರ 2015 ರಿಂದ ಕಳೆದ ಏಳು ವರ್ಷಗಳಲ್ಲಿ, ಪ್ರತಿವರ್ಷ ನಡೆಯಬೇಕಾದ ತ್ರಿಪಕ್ಷೀಯ ‘ಭಾರತೀಯ ಕಾರ್ಮಿಕ ಸಮ್ಮೇಳನ’(ಐ.ಎಲ್.ಸಿ.)ವನ್ನು ನಡಸದೆ ವಿಫಲವಾಗಿದೆ, ಅದಕ್ಕಿಂತಲೂ ಹೆಚ್ಚಾಗಿ ನಡೆಸಲು ಹಿಂದೇಟು ಹಾಕಿದೆ ಎಂಬ ಸತ್ಯವನ್ನು ಮುಚ್ಚಿ ಹಾಕಲು ಪ್ರಧಾನ ಮಂತ್ರಿಗಳೂ ಸೇರಿದಂತೆ ಕೇಂದ್ರ ಮಂತ್ರಿಗಳು ನಡೆಸಿರುವ ಹತಾಶ ಪ್ರಯತ್ನ ಕಾಣುತ್ತದೆ ಎಂದು ಸಿಐಟಿಯು ಕಟುವಾಗಿ ಟಿಪ್ಪಣಿ ಮಾಡಿದೆ.
ಪ್ರಧಾನಿಗಳಿಂದಲೇ ತಪ್ಪು ಹೇಳಿಕೆಗಳ ಮಿಂಚಿನ ಪ್ರಚಾರ
ಕೇಂದ್ರದಲ್ಲಿ ಸರ್ಕಾರದ ಈ ನವ-ನವೀನ ಕಸರತ್ತಿನ ಉದ್ದೇಶ ತನ್ನ ಮಿಂಚಿನ ಪ್ರಚಾರದ ಮೂಲಕ ಜನರನ್ನು ದಾರಿತಪ್ಪಿಸುವುದು; ಸತ್ಯಗಳಿಂದಲ್ಲ, ಬದಲಾಗಿ ರಾಷ್ಟ್ರೀಯ ಸಂಪತ್ತನ್ನು ವಾಸ್ತವವಾಗಿ ಉತ್ಪಾದಿಸುವ ಮತ್ತು ಉತ್ಪತ್ತಿ ಮಾಡುವ, ಆದರೆ ಹಿಂಡಿ ಹಾಕಲಾಗುತ್ತಿರುವ, ಅಪಾರವಾದ ಅಭಾವ ಮತ್ತು ಸಂಕಟಕ್ಕೆ ಒಳಗಾಗಿರುವ ಕಾರ್ಮಿಕರ ಹಕ್ಕುಗಳು ಮತ್ತು ಪರಿಸ್ಥಿತಿಗಳ ಬಗ್ಗೆ ತಪ್ಪು ಹೇಳಿಕೆಗಳ ಮೂಲಕ; ಅದು ಕೂಡ ಸ್ವತಃ ದೇಶದ ಆಡಳಿತದಲ್ಲಿನ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ. ಇವೆಲ್ಲವೂ ಕೇವಲ ಬೆರಳೆಣಿಕೆಯಷ್ಟು ಖಾಸಗಿ ಕಾರ್ಪೊರೇಟ್ಗಳ ಜೇಬುಗಳನ್ನು ತುಂಬಿಸಲು ಮತ್ತು ಕಾರ್ಮಿಕರ ಮೇಲೆ ಗುಲಾಮಗಿರಿಯ ಷರತ್ತುಗಳನ್ನು ಹೇರಲು ಎಂದು ತಮ್ಮ ಕಟು ಟೀಕೆಯನ್ನು ಮುಂದುವರೆಸುತ್ತ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಹೇಳುತ್ತಾರೆ.
ಮಂತ್ರಿ-ಅಧಿಕಾರಶಾಹಿಗಳ ಸಮಾವೇಶದಲ್ಲಿ ದೂರದ ದಿಲ್ಲಿಯಿಂದಲೇ ಮಾಡಿದ ಉದ್ಘಾಟನಾ ಭಾಷಣವು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ “ಗುಲಾಮಗಿರಿಯ ಅವಧಿಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ” ಎಂದು ಹೇಳಿಕೊಂಡಿತು. ವಾಸ್ತವವು ತದ್ವಿರುದ್ಧವಾಗಿಯೇ ಇದೆ. ಬಹುಪಾಲು ಕೊವಿಡ್ ಮಹಾದೋಂಕಿನ ಲಾಕ್ಡೌನ್ ಕಾಲದಲ್ಲಿ ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಬಲವಂತ ಪಡಿಸಿರುವ ಈ ಕ್ರೂರ ಕಾರ್ಮಿಕ ಸಂಹಿತೆಗಳ ಮೂಲಕ, , ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳಲ್ಲಿ ಕರಾರುವಾಕ್ಕಾಗಿ ಕಾರ್ಮಿಕರಿಗೆ ಹೆಚ್ಚಿನ ಹಕ್ಕುಗಳು ಮತ್ತು ಹಕ್ಕುಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ದುರ್ಬಲಗೊಳಿಸಲಾಗಿದೆ ಮತ್ತು ತೆಗೆದುಹಾಕಲಾಗಿದೆ. ಕಾರ್ಮಿಕ ಸಂಹಿತೆಗಳು ಇಡೀ ದುಡಿಯುವ ಜನರ ಮೇಲೆ ಗುಲಾಮಗಿರಿಯ ಷರತ್ತುಗಳನ್ನು ವಿಧಿಸಲು ಪ್ರಯತ್ನಿಸುತ್ತವೆ ಮತ್ತು ಕಾರ್ಮಿಕರ ಮೇಲೆ ಪ್ರತೀಕಾರ ತೀರಿಸಲಾಗುತ್ತಿದ್ದೆಯೋ ಎಂಬಂತೆ ದುಡಿಸಿಕೊಳ್ಳುವ ವರ್ಗವನ್ನು ಸಶಕ್ತಗೊಳಿಸುತ್ತವೆ. ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳ ಬಹುಪಾಲು ಮಹತ್ವದ ನಿಬಂಧನೆಗಳ ಬದಲಾವಣೆಗಳಿಗೆ ಸಂಬಂಧಿಸಿದಂತೆಯೂ, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಕ್ತ ಅಧಿಕಾರವನ್ನು ನೀಡಲಾಗಿದೆ, ಆ ಮೂಲಕ ಸಂಸತ್ತಿನ ಮೂಲಕ ನಡೆಸಬೇಕಾದ ಸಮಸ್ತ ಪ್ರಜಾಸತ್ತಾತ್ಮಕ ಶಾಸಕಾಂಗ ಪ್ರಕ್ರಿಯೆಯನ್ನು ತುಳಿದು ಹಾಕಲಾಗಿದೆ ಎಂದು ತಪನ್ ಸೆನ್ ಹೇಳಿದ್ದಾರೆ.
ಕಾರ್ಮಿಕರ ಸಬಲೀಕರಣ–ಹಸಿಹಸಿ ಸುಳ್ಳು
ರದ್ದುಗೊಳಿಸಿರುವ ಈ 29 ಕಾರ್ಮಿಕ ಕಾನೂನುಗಳಲ್ಲಿ ಹೆಚ್ಚಿನ ಶಾಸನಗಳು ರೂಪಿವಾದದ್ದು ಮತ್ತು ನಂತರ ತಿದ್ದುಪಡಿಗಳು ಬಂದದ್ದು ದುಡಿಯುವ ಜನರ ಹೋರಾಟಗಳಿಂದಾಗಿಯೇ, ಇವುಗಳಲ್ಲಿ ಅನೇಕ ಮಿತಿಗಳು ಮತ್ತು ಲೋಪದೋಷಗಳು ಇದ್ದರೂ ಕೂಡ, ಇವು ದುಡಿಯುವ ಜನರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ, ಕೆಲಸದ ಪರಿಸ್ಥಿತಿಗಳು, ಕೆಲವು ಮೂಲಭೂತ ಶಾಸನಬದ್ಧ ಹಕ್ಕುಗಳು, ಸಾಮಾಜಿಕ ಭದ್ರತೆ, ಸುರಕ್ಷತೆ, ವಲಸೆ ಇತ್ಯಾದಿಗಳನ್ನು, ಸಂಘಟಿಸುವ ಮತ್ತು ಸಾಮೂಹಿಕವಾಗಿ ಪ್ರತಿಪಾದಿಸುವ ಮತ್ತು ಪ್ರತಿನಿಧಿಸುವ ಹಕ್ಕುಗಳನ್ನು ಒದಗಿಸಿವೆ. ಈಗ ಈ ಎಲ್ಲಾ ಹಕ್ಕುಗಳು ಮತ್ತು ಅರ್ಹತೆಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲಾಗಿದೆ ಮತ್ತು ಖಾಸಗಿ ಕಾರ್ಪೊರೇಟ್/ದೊಡ್ಡ ಬಂಡವಾಳಿಗ ದುಡಿಸಿಕೊಳ್ಳುವ ವರ್ಗದ ಪ್ರಯೋಜನಕ್ಕಾಗಿ ಮತ್ತು ಅವರನ್ನು ಅಧಿಕಾರ ಸಂಪನ್ನರಾಗಿ ಮಾಡಲಿಕ್ಕಾಗಿಯೇ ಈ ಕಾರ್ಮಿಕ ಸಂಹಿತೆಗಳಲ್ಲಿ ಅವನ್ನೆಲ್ಲಾ ಕಿತ್ತು ಹಾಕಲಾಗಿದೆ.
ಕಾರ್ಮಿಕ ಸಂಹಿತೆಗಳು “ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಭದ್ರತೆಯ ಮೂಲಕ ಕಾರ್ಮಿಕರ ಸಬಲೀಕರಣವನ್ನು ಖಾತ್ರಿಪಡಿಸುತ್ತವೆ” ಎಂದು ಉದ್ಘಾಟನಾ ಭಾಷಣದಲ್ಲಿ ಪ್ರಧಾನ ಮಂತ್ರಿಯವರ ದೊಡ್ಡ ಹೇಳಿಕೆಯು ಸಂಪೂರ್ಣವಾಗಿ ಹಸಿ-ಹಸಿ ಸುಳ್ಳು
ಉತ್ತುಂಗಕ್ಕೇರಿದ ಬೂಟಾಟಿಕೆ ಪ್ರದರ್ಶನ
ಅವರ ಭಾಷಣದಲ್ಲಿ ಮತ್ತು ಈ ಸಮಾವೇಶದ ಕಲಾಪಗಳಲ್ಲಿಯೂ ದೊಡ್ಡ ಸದ್ದು ಮಾಡಿದ ‘ಕೆಲಸದ ಪರಿಸ್ಥಿತಿಗಳಲ್ಲಿ ಹೊಂದಿಕೆ’ (ಫ್ಲೆಕ್ಸಿಬಿಲಿಟಿ) ಎಂಬುದು ಕಾನೂನಾತ್ಮಕ ಕೆಲಸದ ಸಮಯ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಇತ್ಯಾದಿ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಹೊರಗಟ್ಟುವ ಮೋಸದ ತಂತ್ರವಲ್ಲದೆ ಬೇರೇನೂ ಅಲ್ಲ. ಆ ಮೂಲಕ ಕಾರ್ಪೊರೇಟ್ ಮಾಲಕ ವರ್ಗಕ್ಕೆ ಆ ಎಲ್ಲಾ ಅಂಶಗಳಲ್ಲಿ ಅವರ ಎಲ್ಲಾ ಜವಾಬ್ದಾರಿಗಳಿಂದ ವಿನಾಯಿತಿ ನೀಡಲಾಗುತ್ತದೆ ಮತ್ತು ತನ್ಮೂಲಕ ಕೆಲಸದ ಸ್ಥಳಗಳಲ್ಲಿ ಗುಲಾಮಗಿರಿಯ ಅಡಿಪಾಯವನ್ನೇ ಹಾಕುತ್ತದೆ. ಮಹಿಳಾ ಕಾರ್ಮಿಕರ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ಉದ್ಘಾಟನಾ ಭಾಷಣದಲ್ಲಿ ತುಂಬಾ ಅದ್ದೂರಿಯ ಮಾತುಗಳಿವೆ. ಆದರೆ ಅಂಗನವಾಡಿಗಳು, ಮಧ್ಯಾಹ್ನದ ಊಟ, ಆಶಾ ಮತ್ತು ಇತರ ಸರ್ಕಾರಿ ಯೋಜನೆಗಳಲ್ಲಿ ದುಡಿಯುವ ಲಕ್ಷಾಂತರ ಯೋಜನಾ ಕಾರ್ಯಕರ್ತರು, ಪ್ರಧಾನವಾಗಿ ಮಹಿಳೆಯರೇ ಆಗಿದ್ದರೂ, ಇವರೆಲ್ಲರಿಗೆ ಕಾರ್ಮಿಕರೆಂಬ ಸ್ಥಾನಮಾನ, ಮತ್ತು ಅದಕ್ಕೆ ಅನುಗುಣವಾಗಿ ಶಾಸನಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯ ಹಕ್ಕುಗಳನ್ನು ನೀಡಬೇಕು ಎಂಬ ‘ಭಾರತೀಯ ಕಾರ್ಮಿಕ ಸಮ್ಮೇಳನ’(ಐ.ಎಲ್.ಸಿ.)ದ ಒಮ್ಮತದ ಶಿಫಾರಸನ್ನು ಜಾರಿಗೊಳಿಸುವ ತನ್ನ ಹೊಣೆಗಾರಿಕೆಯಿಂದ ಸರಕಾರ ನಾಚಿಕೆಯಿಲ್ಲದೆ ನುಣುಚಿಕೊಳ್ಳುತ್ತದೆ. ಇತ್ತ ದೇಶಾದ್ಯಂತ ದುಡಿಮೆಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಎಲ್ಲ ವಲಯಗಳಲ್ಲಿ ಸತತವಾಗಿ ತೀವ್ರವಾಗಿ ಕುಸಿಯುತ್ತಿದ್ದರೂ, ಅದನ್ನು ತಡೆಯುವ ಗೋಜಿಗೂ ಈ ಸರಕಾರ ಹೋಗುತ್ತಿಲ್ಲ. ಈ ತಥಾಕಥಿತ ‘ತಿರುಪತಿ ಸಮಾವೇಶ’ದಲ್ಲಿ ಬೂಟಾಟಿಕೆಯ ಪ್ರದರ್ಶನ ಉತ್ತುಂಗಕ್ಕೇರಿದೆ ಎಂದು ಸಿಐಟಿಯು ಖೇದ ವ್ಯಕ್ತಪಡಿಸಿದೆ.
ಸಮಸ್ತ ಕಾರ್ಮಿಕ ಆಂದೋಲನವು ಈ ಕರಾಳ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಒಮ್ಮತದಿಂದ ಒತ್ತಾಯಿಸುತ್ತಿರುವುದು ಕಾರಣಗಳಿಲ್ಲದೆ ಅಲ್ಲ. ದುಡಿಯುವ ಜನರ ಮೇಲೆ ಗುಲಾಮಗಿರಿಯನ್ನು ಹೇರುವ ಅವರ ಯೋಜನೆಯ ವಿರುದ್ಧ ನಾವು ಒಗ್ಗಟ್ಟಿನ ಹೋರಾಟವನ್ನು ಮುಂದುವರಿಸುತ್ತೇವೆ ಮತ್ತು ಆಡಳಿತದಲ್ಲಿ ತಮ್ಮ ಏಜೆಂಟರ ಮೂಲಕ ಕಾರ್ಪೊರೇಟ್ ಯಜಮಾನರ ನೀಚ ತಂತ್ರಗಳನ್ನು ಪ್ರತಿರೋಧಿಸುತ್ತೇವೆ ಎಂದು ಸಿಐಟಿಯು ಪುನರುಚ್ಚರಿಸಿದೆ.