ತಿಂಗಳ ಪಗಾರ ತುಂಬಾ ಕಡಿಮೆ-ಅದೂ ಸರಿಯಾಗಿ ಬರಲ್ಲ: ಸಂಜೀವಿನಿ ನೌಕರರು

ಬೆಂಗಳೂರು: ಮಹಿಳಾ ಸಬಲೀಕರಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿ, ಕಾರ್ಯನಿರ್ವಹಿಸಲು ನಮ್ಮನ್ನು ನೇಮಿಸಿಕೊಂಡು ಬಿಟ್ಟಿ ಚಾಕರಿಯಡಿ ದುಡಿಸಿಕೊಳ್ಳುತ್ತಿದೆ. ಇದು ಜೀತಪದ್ದತಿಗೆ ಸಮಾನಾಗಿದ್ದು ಇದನ್ನು ತೊಲಗಿಸಬೇಕೆಂದು ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘದ ಆಗ್ರಹವಾಗಿದೆ.

ಇದನ್ನು ಓದಿ: ಸಂಜೀವಿನಿ ನೌಕರರು ಮತ್ತು ಫಲಾನುಭವಿಗಳ ಹಕ್ಕೊತ್ತಾಯಗಳನ್ನು ಈಡೇರಿಸಿ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ್ನು ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಮುಖಂಡ ಯು. ಬಸವರಾಜ ಅವರು, ಸಂಜೀವಿನಿ ಕಾರ್ಮಿಕರನ್ನು ಸರ್ಕಾರದ ಹಲವು ಯೋಜನೆಗಳ ಜಾರಿಯ ಕೆಲಸದಲ್ಲಿ ನೇಮಿಸಿಕೊಂಡು ಕೆಲಸ ನಿರ್ವಹಿಸುತ್ತಿದೆ. ಅವರಿಗೆ ಗೌರವಧನವಾಗಿ 2 ರಿಂದ 3 ಸಾವಿರ ರೂಪಾಯಿಯಂತೆ ನೀಡಲಾಗುತ್ತಿದೆ. ಅದನ್ನು ಪಡೆದುಕೊಳ್ಳಲು ಸಾಕಷ್ಟು ಶ್ರಮವಹಿಸಬೇಕು. ಕೆಲವೊಮ್ಮೆ ಆರು ತಿಂಗಳು ಕಳೆದರೂ ಪಗಾರ ಸಿಗುವುದಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 6 ಸಾವಿರ ಗ್ರಾಮ ಪಂಚಾಯತಿ, ನಗರ ಮತ್ತು ಪಟ್ಟಣಗಳ ವಾರ್ಡ್‌ ಮಟ್ಟಗಳಲ್ಲಿ, 10 ನೌಕರರಂತೆ ರಾಜ್ಯದಲ್ಲಿ 60 ಸಾವಿರ ನೌಕರರು ಸಂಜೀವಿನಿ ಯೋಜನೆಯಡಿ ನೇಮಿಸಿಕೊಂಡ ಸರ್ಕಾರ ದುಡಿಮೆ ಮಾಡಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮಹಿಳಾ ನೌಕರರನು ದುಡಿಮೆ ಮಾಡಿಸಿಕೊಳ್ಳುತ್ತಿದೆ. ಆದರೆ, ಅವರಿಗೆ ನೌಕರರಿಗೆ ಸಿಗಬೇಕಾದ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಒಂದೆಡೆ ಬರುವ ವೇತನ ಕಡಿಮೆ, ಮತ್ತೊಂದೆಡೆ ನೌಕರರೇ ತಮ್ಮ ಹಣದಿಂದಲೇ, ಪುಸ್ತಕ ಸೇರಿದಂತೆ ಸಾಮಗ್ರಿಗಳನ್ನು ಖರೀದಿ ಮಾಡಬೇಕು. ತಮ್ಮ ಕೈಯಿಂದಲೇ ಮೊಬೈಲ್‌ ಗೆ ಕರೆನ್ಸಿ ಹಾಕಿಸಿಕೊಂಡು ಕೆಲಸದಲ್ಲಿ ತೊಡಗಬೇಕು. ಇದಕ್ಕೂ ಹಣ ನೀಡುವುದಿಲ್ಲ. ಬಹಳಷ್ಟು ಸೌಲಭ್ಯಗಳಿಲ್ಲದೆ ವಂಚನೆಗೆ ಒಳಗಾಗಿದ್ದಾರೆ ಎಂದರು.

ಇದನ್ನು ಓದಿ: ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಆದ್ಯತೆ ನೀಡಲು ಆಗ್ರಹಿಸಿ ಫೆ.10ರಂದು ಸಿಐಟಿಯು ಪ್ರತಿಭಟನೆ

ಸಂಜೀವಿನಿ ಯೋಜನೆಯಡಿ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿ ಸಹಾಯಕರು ಮತ್ತು ವಿವಿಧ ಸಖಿ ಕಾರ್ಯಕರ್ತರು, ಕಸ ನಿರ್ವಹಕ ಸಿಬ್ಬಂದಿಗಳು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಮಹಿಳಾ ಒಕ್ಕೂಟದ ಮುಖ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಿಗಿನಿಂದ ಸಂಜೆಯ ವರೆಗೂ ಕೆಲಸ ಮಾಡಲಾಗುತ್ತಿದೆ. ನಾಲ್ಕು ಗೋಡೆಯೊಳಗೆ ದುಡಿಯುವ ಬಿಟ್ಟಿ ಚಾಕರಿಯ ಬಂಧನದಿಂದ ಹೊರಬಂದು ಮುಖ್ಯವಾಹಿನಿಯಲ್ಲಿ ದುಡಿಮೆ ಮಾಡಲಾಗುತ್ತಿದ್ದರೂ ಇದರಲ್ಲಿಯೂ ಬಿಟ್ಟಿ ಚಾಕರಿಯಾಗಿಯೇ ಸರ್ಕಾರವೇ ದುಡಿಸಿಕೊಳ್ಳುತ್ತಿದೆ.

ಸರ್ಕಾರ ಗೌರವ ವೇತನವೆಂದು ಹೇಳುತ್ತಿದ್ದರೂ ಸಹ ವೇತನ ಸರಿಯಾಗಿ ಕೈ ಸೇರುತ್ತಿಲ್ಲ. ತಿಂಗಳುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಮಹಿಳಾ ಸಬಲೀಕರಣದ ನೀತಿ, ಸಬಲೀಕರಣದ ಬದಲಿಗೆ ಅವರ ಮೇಲೆ ಮತ್ತಷ್ಟು ಹೊರೆಗಳನ್ನು ಹೇರಿ ದೌರ್ಜನ್ಯ ಎಸಗುತ್ತಿದೆ ಎಂಬುದು ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿನಗಳ ಸಂಘದ ಆಕ್ರೋಶವಾಗಿದೆ.

ಜನಸಂಖ್ಯೆಗೆ ಅರ್ಧಭಾಗ ಮಹಿಳೆಯರಿದ್ದರೂ ಬಜೆಟ್‌ನಲ್ಲಿ ನ್ಯಾಯವಾಗಿ ಅರ್ಧದಷ್ಟು ಅನುದಾನ ಒದಗಿಸದಿರುವುದು ಮಹಿಳಾ ಸಬಲೀಖರಣದ ಒಟ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ದುಡಿಯುವವರಿಗೆ ನೆರವಾಗಲು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಇದನ್ನು ಓದಿ: ಕಾರ್ಮಿಕರ ಐಕ್ಯತೆ – ಜನತೆಯ ಸೌಹಾರ್ದತೆಗಾಗಿ ಸಿಐಟಿಯು 15ನೇ ರಾಜ್ಯ ಸಮ್ಮೇಳನ

ಮೂರು ನಾಲ್ಕು ಬಾರಿ ಒಂದು ವಾರ ಕಾಲ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ನಾವುಗಳು ಗಣತಿ ಕಾರ್ಯದಲ್ಲಿ ತೊಡಗಿದ್ದು ಯಾವುದೇ ಭತ್ಯೆಯನ್ನು ನೀಡಿರುವುದಿಲ್ಲ. ಸದರಿ ಭತ್ಯೆ ನೀಡದಿರುವ ವಿಚಾರವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ, ದಿನ ಭತ್ಯೆಯಂತೆ ಗಣತಿ ಕಾರ್ಯದ ಎಲ್ಲಾ ದಿನಗಳಿಗೆ ತಕ್ಷಣವೇ ಹಣವನ್ನು ನಮ್ಮ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಶೌಚಾಲಯ ಹಾಗೂ ಪೀಠೋಪಕರಣ ಹಾಗೂ ಗಣಕಯಂತ್ರಗಳ ಸಹಿತ ಕಛೇರಿಗಳನ್ನು ಒದಗಿಸಬೇಕೆಂದಿರುವ ಸಂಘಟನೆಯು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪುಸ್ತಕ ಬರಹಗಾರರ ವೇತನ ರೂ. 15 ಸಾವಿರಕ್ಕೆ, ಸಂಪನ್ಮೂಲ ಸಹಾಯಕರಿಗೆ ಕನಿಷ್ಠ 13 ಸಾವಿರ ರೂ., ವಿವಿಧ ಸಖಿ ಕಾರ್ಯಕರ್ತರಿಗೆ ಮತ್ತು ಕಸ ನಿರ್ವಹಕ ಸಿಬ್ಬಂದಿಗೆಗಳಿಗೆ ತಲಾ ರೂ. 8 ಸಾವಿರ ವೇತನವನ್ನು ನಿಗದಿಪಡಿಸಬೇಕೆಂದು ಸಂಘಟನೆಯ ಬೇಡಿಕೆಯಾಗಿದೆ.

ಪ್ರತಿಭಟನೆಯನ್ನು ಉದ್ದೇಶಿಸಿ, ಸಂಘದ ರಾಜ್ಯ ಮುಖಂಡರಾದ ಬಿ. ಮಾಳಮ್ಮ, ಸಂಚಾಲಕ ಜಿ. ನಾಗರಾಜ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರಾಜ್ಯ ಪದಾಧಿಕಾರಿಗಳಾದ ಗೌರಮ್ಮ, ಕೆ.ಎಸ್.‌ ಲಕ್ಷ್ಮಿ, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಪದಾಧಿಕಾರಿ ಜಿ.ಎನ್‌.ನಾಗರಾಜ್‌, ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.‌ ವರಲಕ್ಷ್ಮಿ, ರಾಜ್ಯ ಪದಾಧಿಕಾರಿ ಯಮುನಾ ಗಾಂವ್ಕರ್‌, ಮತ್ತಿತರರು ಮಾತನಾಡಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *