ಅಂತಾರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಎದುರಾಗಿ ಮೋದಿ ಸರ್ಕಾರಕ್ಕೆ ಇರುವಷ್ಟು ಅಂಜುಬುರುಕುತನ ಜಗತ್ತಿನಲ್ಲಿ ಬಹುಷಃ ಯಾರಿಗೂ ಇರಲಿಕ್ಕಿಲ್ಲ. ಅಂತೆಯೇ, ದೇಶದ ದುಡಿಯುವ ಜನರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಜಗತ್ತಿನಲ್ಲೇ ಅಷ್ಟೊಂದು ಪಾಷಾಣ ಹೃದಯ ಹೊಂದಿದ ಸರ್ಕಾರ ಮತ್ತೊಂದು ಬಹುಷಃ ಇರಲಾರದು. ಇಕ್ಕೆಲಗಳಲ್ಲಿರುವ ಇವುಗಳನ್ನು ನೋಡಲು ಮಗ್ಗಲು ಮಗುಚಿದರೆ ಸಾಕು. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಸರ್ಕಾರವು ತಳೆದಿದ್ದ ಆರ್ಥಿಕ ನಿಲುವಿನಲ್ಲಿ ಅದರ ಅಂಜುಬುರುಕುತನವನ್ನು ಮತ್ತು ಅದರ ಪಾಷಾಣ ಹೃದಯವನ್ನು ಸಲೀಸಾಗಿ ಗುರುತಿಸಬಹುದು.
ಕೊರೊನಾ ಸಾಂಕ್ರಾಮಿಕ ಸಂಬಂಧಿತ ಲಾಕ್‌ಡೌನ್ ಅವಧಿಯಲ್ಲಿ ಆದಾಯ ಮೂಲಗಳು ಬತ್ತಿ ಹೋಗಿದ್ದರಿಂದ, ಎಲ್ಲ ಮುಂದುವರಿದ ದೇಶಗಳ ಸರ್ಕಾರಗಳೂ ಆದಾಯ ಕಳೆದುಕೊಂಡ ತಮ್ಮ ಜನರಿಗೆ ಸಾಕಷ್ಟು ಪ್ರಮಾಣದ ಪರಿಹಾರ ಪ್ಯಾಕೇಜ್‌ಗಳನ್ನು ಒದಗಿಸಿದವು. ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಕೂಡ ಜಿಡಿಪಿಯ ಶೇ.10ರಷ್ಟು ಮೊತ್ತದ ಒಂದು ಪ್ಯಾಕೇಜನ್ನು ಒದಗಿಸಿತು. ಪ್ರತಿ ಕುಟುಂಬಕ್ಕೂ ಹಲವು ತಿಂಗಳ ಕಾಲ ನಗದು ವರ್ಗಾವಣೆ ಮಾಡುವ ಕ್ರಮವನ್ನು ಟ್ರಂಪ್ ಪ್ಯಾಕೇಜ್ ಒಳಗೊಂಡಿತ್ತು. ಭಾರತದಲ್ಲಿ, ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಕುಟುಂಬಗಳಿಗೂ, ಪರಿಸ್ಥಿತಿ ಸುಧಾರಿಸುವವರೆಗೂ, ಪ್ರತಿ ಕುಟುಂಬಕ್ಕೂ ತಿಂಗಳಿಗೆ 7,000 ರೂ ನಗದು ವರ್ಗಾವಣೆ ಮಾಡುವಂತೆ ವಿರೋಧ ಪಕ್ಷಗಳು, ಅರ್ಥಶಾಸ್ತ್ರಜ್ಞರು ಮತ್ತು ನಾಗರಿಕ ಸಮಾಜ ಸಂಘಟನೆಗಳು ಒಕ್ಕೊರಲಿನಿಂದ ಒತ್ತಾಯಿಸಿದ್ದರೂ ಸಹ, ಸರಕಾರ ಸ್ಪಂದಿಸಲಿಲ್ಲ. ಗುರುತಿಸಿದ ಕೆಲವು ನಿರ್ದಿಷ್ಟ ಗುಂಪುಗಳಿಗೆ ಅಲ್ಪ ಮೊತ್ತದ ನೆರವಿನ ಭರವಸೆ ಮಾತ್ರ ನೀಡಲಾಗಿತ್ತು. ಅದೂ ಸಹ ಅವರಿಗೆ ತಲುಪಲಿಲ್ಲವೆಂದು ತೋರುತ್ತದೆ. ಕೊರೊನಾ ಅಪ್ಪಳಿಸುವ ಮೊದಲು ಕೆಲಸ ಮಾಡುತ್ತಿದ್ದವರ ಪೈಕಿ ಸುಮಾರು 25% ಮಂದಿ ಕೆಲಸ ಕಳೆದುಕೊಂಡರು. ಆದಾಯ ಕಳೆದುಕೊಂಡ ಈ ಮಂದಿ ನಿರೀಕ್ಷೆಯಿಂದ ಸರ್ಕಾರದತ್ತ ಮುಖ ಮಾಡಿದಾಗ, ಸರ್ಕಾರವು ಕೋಪಗೊಂಡ ಆಂಜನೇಯನಂತೆ ಮತ್ತೊಂದು ಕಡೆ ಮುಖ ತಿರುಗಿಸಿಕೊಂಡಿತು.
ಬಳಸದೆ ಸುಮ್ಮನೆ ಬಿದ್ದಿದ್ದ ಸಂಪನ್ಮೂಲಗಳ ಬಗ್ಗೆ ಯೋಚಿಸಿ. ಬೃಹತ್ ಪ್ರಮಾಣದ ನಿರುದ್ಯೋಗ ಮತ್ತು ಬಳಕೆಯಾಗದ ಸಾಮರ್ಥ್ಯ ಇವೆರಡೂ ಏಕಕಾಲದಲ್ಲಿ ಒಟ್ಟಿಗೇ ಇದ್ದವು. ಅವುಗಳನ್ನು ಬಳಸಿಕೊಳ್ಳಬಹುದಿತ್ತು. ಒಂದು ಸಮಯದಲ್ಲಿ ಆಹಾರ ಧಾನ್ಯಗಳ ದಾಸ್ತಾನು 100 ದಶಲಕ್ಷ ಟನ್ನುಗಳಿಗೂ ಹೆಚ್ಚಿಗೆ ಇತ್ತು ಮತ್ತು ಸಾಧಾರಣವಾಗಿ ಇಟ್ಟುಕೊಳ್ಳುವುದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ವಿನಿಮಯದ ಸಂಗ್ರಹವೂ ಗಮನಾರ್ಹವಾಗಿ ಏರಿಕೆಯಾಗಿತ್ತು. ಬೃಹತ್ ಪ್ರಮಾಣದ ನಿರುದ್ಯೋಗ, ಆರ್ಥಿಕ ಸಂಕಟಗಳು ಮತ್ತು ಬಳಕೆಯಾಗದೆ ಸುಮ್ಮನೆ ಬಿದ್ದಿದ್ದ ಸಂಪನ್ಮೂಲಗಳು ಒಟ್ಟಿಗೆ ಇದ್ದಾಗ ಸರ್ಕಾರವು ಹೆಚ್ಚಿನ ಖರ್ಚು-ವೆಚ್ಚಗಳನ್ನು ಕೈಗೊಳ್ಳಬೇಕೆಂದು ಮುಖ್ಯಧಾರೆ ಅರ್ಥಶಾಸ್ತ್ರದ ಪ್ರಾಥಮಿಕ ಪಠ್ಯ ಪುಸ್ತಕವೂ ತಿಳಿಸುತ್ತದೆ. ಆದರೆ, ಮೋದಿ ಸರ್ಕಾರವು ಬಳಕೆಯಾಗದೆ ಸುಮ್ಮನೆ ಬಿದ್ದಿದ್ದ ಈ ಯಾವ ಸಂಪನ್ಮೂಲಗಳನ್ನೂ ಬಳಕೆ ಮಾಡಿಕೊಳ್ಳಲಿಲ್ಲ.
- ಮೋದಿ ಸರ್ಕಾರಕ್ಕೆ, ಕೊರೊನಾ ಸಾಂಕ್ರಾಮಿಕವನ್ನು ಎದುರಿಸುವಲ್ಲಿ, ಯೂರೋಪಿನ ಸರ್ಕಾರಗಳ ರೀತಿಯಲ್ಲಿ, ವಿತ್ತೀಯ ಕೊರತೆಯ ಮಿತಿಯನ್ನು ದಾಟಿ ಜಾಗತಿಕ ಹಣಕಾಸು ಬಂಡವಾಳವನ್ನು ಎದುರಿಸುವ ಧೈರ್ಯವೂ ಇಲ್ಲ ಮತ್ತು ಆ ಕೆಲಸಕ್ಕೆ ಬೇಕಾಗುವ ಪ್ರೇರಣೆಯನ್ನು ಒದಗಿಸುವ ಜನ-ಪರ ಕಾಳಜಿಯೂ ಇಲ್ಲ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಎದುರಿಗೆ ಅಂಜುಬುರುಕುತನ, ದೇಶದ ದುಡಿಯುವ ಜನತೆಯ ಬಗ್ಗೆ ನಿರ್ದಯತೆ ಮತ್ತು ಮತದಾರರನ್ನು ಹಾಗೂ ಶಾಸಕರನ್ನು ಮರುಳುಗೊಳಿಸುವ ಸಿನಿಕತನ-ಇಂತಹ ಸಂಯೋಜನೆಯೇ ಮೋದಿ ಸರ್ಕಾರವನ್ನು ಬಹುಶಃ ಜಗತ್ತಿನ ಅತ್ಯಂತ ಉಗ್ರ-ಬಲ ಪಂಥೀಯ ಸರ್ಕಾರವನ್ನಾಗಿ ರೂಪುಗೊಳಿಸಿದೆ.
ಮಾರ್ಚ್ ತಿಂಗಳ ಕೊನೆಯಲ್ಲಿ 477 ಶತಕೋಟಿ ಡಾಲರ್ ಮೊತ್ತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಡಿಸೆಂಬರ್ ಅಂತ್ಯದ ವೇಳೆಗೆ 580 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಲು ಕಾರಣವೆಂದರೆ, ಮುಂದುವರಿದ ದೇಶಗಳಲ್ಲಿ ಒದಗಿಸಿದ ಪರಿಹಾರ ಪ್ಯಾಕೇಜ್‌ಗಳ ಪ್ರಮಾಣದ ಅಗಾಧತೆ. ಪರಿಹಾರದ ಈ ಪ್ಯಾಕೇಜ್‌ಗಳು ಈ ದೇಶಗಳಲ್ಲಿ ವಿತ್ತೀಯ ಕೊರತೆಯ ಪ್ರಮಾಣವನ್ನು ಏರಿಸಿದವು. ಬಡ್ಡಿ ದರಗಳನ್ನು ಉದ್ದೇಶಪೂರ್ವಕವಾಗಿ ಕೆಳ ಮಟ್ಟದಲ್ಲಿ ಇಡಲಾಗಿದ್ದ ಪರಿಸ್ಥಿತಿಯಲ್ಲಿ, ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ವಿತ್ತೀಯ ಕೊರತೆಯನ್ನು ಈ ದೇಶಗಳು ಹೊಸ ಹಣವನ್ನು ಮುದ್ರಿಸುವ ಮೂಲಕ ನಿಭಾಯಿಸಿಕೊಂಡವು. ಈ ದೇಶಗಳಲ್ಲಿ ಹೆಚ್ಚಿಗೆ ಹಣವನ್ನು ವ್ಯವಸ್ಥೆಯ ಒಳಗೆ ತುಂಬಿದ ಪರಿಣಾಮವಾಗಿ ಹಣದ ಲಭ್ಯತೆ ಅಪಾರಗೊಂಡಿತು. ನಂತರ, ಸುಲಭವಾಗಿ ಕೈಗೆಟುಕುತ್ತಿದ್ದ ಈ ಹಣವನ್ನು ಲಾಭ ಪಡೆಯುವ ಉದ್ದೇಶದಿಂದ ಜಗತ್ತಿನಾದ್ಯಂತ ಹೂಡಿಕೆಯಾಗಿ ಹರಿಸಲಾಯಿತು.
ಭಾರತದಲ್ಲಿ ಬಡ್ಡಿದರಗಳು, ಸಾಮಾನ್ಯವಾಗಿ, ಮುಂದುವರಿದ ದೇಶಗಳಲ್ಲಿ ಇರುವ ದರಗಳಿಗಿಂತ ಹೆಚ್ಚಿನ ಮಟ್ಟದಲ್ಲಿರುವ ಕಾರಣದಿಂದ, ಭಾರತಕ್ಕೆ ಹಣಕಾಸಿನ(ಬಂಡವಾಳ) ಒಳಹರಿವು ಹೆಚ್ಚಿತು. ಒಳ ಹರಿದ ಈ ಬಂಡವಾಳವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ವಿನಿಮಯ ಮೀಸಲಿಗೆ ಸೇರಿಸಿತು. ಈ ವಿದ್ಯಮಾನವು, ಅಮೇರಿಕಾ ಮತ್ತು ಇತರ ಮುಂದುವರಿದ ಬಂಡವಾಳಶಾಹಿ ದೇಶಗಳು ಜಗತ್ತಿನಾದ್ಯಂತ ಹಣದ ಲಭ್ಯತೆಯನ್ನು ಹೆಚ್ಚಿಸುತ್ತಿವೆಯೊ ಏನೋ ಎನ್ನುವಂತಿತ್ತು. ಒಳ ಹರಿದ ಈ ಬಂಡವಾಳವನ್ನು ಸರ್ಕಾರವು ತನ್ನ ಖರ್ಚು-ವೆಚ್ಚಗಳನ್ನು ಹಿಗ್ಗಿಸಿಕೊಳ್ಳಲು ಬಳಸಿಕೊಳ್ಳಬಹುದಿತ್ತು. ಬದಲಿಗೆ, ಅದನ್ನು ಸುಮ್ಮನೇ ವಿದೇಶಿ ವಿನಿಮಯದ ಮೀಸಲಿಗೆ ಸೇರಿಸಲಾಯಿತು.
ಒಳ ಹರಿದ ಈ ವಿದೇಶಿ ಬಂಡವಾಳವನ್ನು ಆಧರಿಸಿ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ವೃದ್ಧಿಸಿದ ದೇಶದ ಆದಾಯವನ್ನು ಆಮದುಗಳಿಗೆ ಬಳಸಿಕೊಂಡರೆ, ಒಂದೊಮ್ಮೆ ವಿದೇಶಿ ಹಣಕಾಸು(ಬಂಡವಾಳ)ಹಠಾತ್ತಾಗಿ ಹೊರ ಹರಿಯುವ ಪ್ರಸಂಗ ಉದ್ಭವಿಸಿದರೆ ದೇಶವು ಅಪಾಯಕ್ಕೆ ಸಿಲುಕುತ್ತದೆ ಎಂಬ ಕಾರಣದ ಮೇಲೆ ಸರ್ಕಾರದ ವಕ್ತಾರರು ಈ ಅಭಿಪ್ರಾಯವನ್ನು ವಿರೋಧಿಸುತ್ತಿದ್ದರು. ಆದರೆ, ವಿದೇಶಿ ಹಣಕಾಸು ಹಠಾತ್ತಾಗಿ ಹೊರ ಹರಿಯುತ್ತದೆ ಎಂಬ ಭಯದಲ್ಲಿ ಇಡೀ ಒಳಹರಿವನ್ನು ಮೀಸಲು ರೂಪದಲ್ಲಿ ಹಿಡಿದಿಟ್ಟುಕೊಳ್ಳಬಾರದು. ಏಕೆಂದರೆ, ಈ ಕ್ರಮವು ದೇಶವನ್ನು ವಿದೇಶಿ ಹಣಕಾಸಿಗೆ ಒಂದು ತಂಗುದಾಣವಾಗಿಸುತ್ತದೆ. ಮೇಲಾಗಿ, ಈ ವಿದೇಶಿ ಹಣವನ್ನು ಮೀಸಲು ರೂಪದಲ್ಲಿ ಇಟ್ಟುಕೊಳ್ಳಲು ತಗಲುವ ವೆಚ್ಚವೂ ದುಬಾರಿಯೇ. ಒಳಹರಿದ ಈ ವಿದೇಶಿ ಹಣದ ಮೇಲೆ ತೆರಬೇಕಾದ ಬಡ್ಡಿಯು, ಮೀಸಲು ರೂಪದಲ್ಲಿ ಅದು ಗಳಿಸುವ ಬಡ್ಡಿಗಿಂತ ಹೆಚ್ಚಾಗಿರುತ್ತದೆ. ವಾಸ್ತವವಾಗಿ, ಒಳ ಹರಿದ ಇಡೀ ವಿದೇಶಿ ಹಣವನ್ನು ಮೀಸಲು ರೂಪದಲ್ಲೇ ಇಟ್ಟುಕೊಳ್ಳುವ ಕ್ರಮವು, ತಾರ್ಕಿಕವಾಗಿ, ಠೇವಣಿಯಾದ ಇಡೀ ಹಣವನ್ನು (ನೂರಕ್ಕೆ ನೂರು ರೂಗಳನ್ನು) ಬ್ಯಾಂಕ್‌ಗಳು ನಗದು ರೂಪದಲ್ಲೇ ಇಟ್ಟುಕೊಂಡಂತಾಗುತ್ತದೆ. (ಸಾಲ ಕೊಡುವುದಕ್ಕಾಗಿಯೇ ಠೇವಣಿಗಳನ್ನು ಸ್ವೀಕರಿಸುವುದೇ ಬ್ಯಾಂಕ್‌ಗಳ ಉದ್ದೇಶ. ಆದ್ದರಿಂದ, ಕಡಿಮೆ ಬಡ್ಡಿಗೆ ಠೇವಣಿಯಾದ ಹಣವನ್ನು ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿಯ ಮೇಲೆ ಸಾಲ ಕೊಟ್ಟು ಲಾಭ ಗಳಿಸುತ್ತವೆ. ಮತ್ತು, ಠೇವಣಿಗಳ ಸುರಕ್ಷತೆಯ ದೃಷ್ಟಿಯಿಂದ ನಿಯಮಗಳ ಪ್ರಕಾರ ಠೇವಣಿಗಳ ಒಂದು ಸಣ್ಣ ಭಾಗವನ್ನು ಮಾತ್ರ ನಗದು ರೂಪದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ). ಹಾಗಾಗಿ, ಒಳ ಹರಿದ ಇಡೀ ವಿದೇಶಿ ಹಣವನ್ನು ಮೀಸಲು ರೂಪದಲ್ಲೇ ಇಟ್ಟುಕೊಳ್ಳುವ ಕ್ರಮವು ಕತ್ತೆ ಮೈ ತೂರಿಸಿದಂತಾಗುತ್ತದೆ.
ಕಳೆದ ಕೆಲವು ತಿಂಗಳುಗಳಲ್ಲಿ ಒಳ ಹರಿದ ಅರ್ಧದಷ್ಟು ಹಣವನ್ನು ಮೀಸಲಿಗೆ ಸೇರಿಸಲಾಗಿದೆ ಮತ್ತು ಉಳಿದ ಅರ್ಧ ಭಾಗವನ್ನು ಹೆಚ್ಚಿನ ಆಮದುಗಳಿಗೆ ಬಳಸಲಾಗಿದೆ ಎಂದು ನಾವು ವಾದಕ್ಕಾಗಿ ಭಾವಿಸೋಣ. ಈ ಭಾವನೆಯ ಆಧಾರದ ಮೇಲೆ ಒಂದು ನಿದರ್ಶನಾತ್ಮಕ ಲೆಕ್ಕಾಚಾರವನ್ನು ಮಾಡೋಣ. 2020ರ ಮಾರ್ಚ್ ಅಂತ್ಯದಿಂದ ಡಿಸೆಂಬರ್ ಅಂತ್ಯದವರೆಗೆ 6.7 ಲಕ್ಷ ಕೋಟಿ ರೂ.ಗಳಿಗೆ ಸಮನಾದ ವಿದೇಶಿ ವಿನಿಮಯ ಸಂಗ್ರಹವಾಗಿದೆ. ಈ ಮೊತ್ತದಲ್ಲಿ, ಮೇಲಿನ ಉದಾಹರಣೆಯ ಪ್ರಕಾರ, ಆಮದು-ಜಿಡಿಪಿ ಅನುಪಾತವು 15% ಎಂದು ಪರಿಗಣಿಸಿ, 3.35 ಲಕ್ಷ ಕೋಟಿ ರೂ.ಗಳನ್ನು ದೊಡ್ಡ ದೊಡ್ಡ ಆಮದುಗಳಿಗೆ ಬಳಸಿಕೊಂಡು, ಜಿಡಿಪಿಯನ್ನು ಸುಮಾರು 22 ಲಕ್ಷ ಕೋಟಿ ರೂ ಗಳಷ್ಟು ಹೆಚ್ಚಿಸಬಹುದಿತ್ತು. ಅಂದರೆ, ವಿವಿಧ ರೀತಿಯಲ್ಲಿ ಅಧಿಕ ಬೇಡಿಕೆಯನ್ನು ಸೃಷ್ಟಿಸುವ ಮೂಲಕ, ಸರ್ಕಾರದ ಆದಾಯವನ್ನು ಎರಡು ಪಟ್ಟು ಹೆಚ್ಚಿಸಿಕೊಂಡು, ಸುಮಾರು ರೂ.11 ಲಕ್ಷ ಕೋಟಿಗಳಷ್ಟು ಅಧಿಕ ವೆಚ್ಚವನ್ನು ಸರ್ಕಾರವು ಕೈಗೊಳ್ಳಬಹುದಿತ್ತು, ಅದೂ ಕೂಡ ವಿದೇಶಿ ವಿನಿಮಯದ ಮೀಸಲಿಗೆ ಯಾವುದೇ ಧಕ್ಕೆ ತಗುಲಿಸದಂತೆ.
ಈ 11 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜಿಡಿಪಿಯನ್ನು 22 ಲಕ್ಷ ಕೋಟಿ ರೂಗಳಷ್ಟು ಹೆಚ್ಚಿಸಿಕೊಂಡಿದ್ದರೆ, ಆಗ, ಸರ್ಕಾರಕ್ಕೆ (ಕೇಂದ್ರ ಮತ್ತು ರಾಜ್ಯಗಳಿಗೆ ಒಟ್ಟಾಗಿ) 3.3 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತದೆ, ತೆರಿಗೆ-ಜಿಡಿಪಿ ಅನುಪಾತವನ್ನು 15% ಎಂದು ಭಾವಿಸಿಕೊಂಡರೆ. ಈ ಪ್ರಮಾಣದ ಜಿಡಿಪಿಯನ್ನು ಹೆಚ್ಚಿಸಿಕೊಳ್ಳಲು, 7.7 ಲಕ್ಷ ಕೋಟಿ ರೂಗಳ ಮಟ್ಟದ ವಿತ್ತೀಯ ಕೊರತೆ ಬೀಳುತ್ತಿತ್ತು (ಅಂದರೆ, ಸರ್ಕಾರದ ಸುಮಾರು ರೂ.11 ಲಕ್ಷ ಕೋಟಿಗಳಷ್ಟು ಅಧಿಕ ವೆಚ್ಚದಲ್ಲಿ 3.3 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ತೆರಿಗೆ ಸಂಗ್ರಹವನ್ನು ಕಳೆದರೆ, 7.7 ಲಕ್ಷ ಕೋಟಿ ರೂಗಳ ವಿತ್ತೀಯ ಕೊರತೆ ಉಳಿಯುತ್ತದೆ). ಇದು, 2019-20ರ ಜಿಡಿಪಿಯ 3.5% ಆಗುತ್ತದೆ. ಒಟ್ಟಾರೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಸುಮಾರು 7.5%ಗೆ ಏರಿಸುತ್ತಿತ್ತು (ಪರಿಹಾರ ವೆಚ್ಚವನ್ನು ವಾಸ್ತವವಾಗಿ ಕೈಗೊಂಡಿದ್ದರೆ ಕೂಡ ವಿತ್ತೀಯ ಕೊರತೆಯು 2020-21ರ ಜಿಡಿಪಿಯ 7.5% ಆಗುತ್ತಿತ್ತು).
ಈ ಅಂಕಿ-ಅಂಶಗಳು ಕೇವಲ ಉದಾಹರಣೆಗಳು. ಅವು ಬಿಗಿಯಾಗಿ ಮಾಡಿದ ಅಂದಾಜುಗಳು. ವಿತ್ತೀಯ ಕೊರತೆಯ ಗಾತ್ರವನ್ನು ಜಿಡಿಪಿಯ ಶೇ.12ಕ್ಕೆ ಏರಿಸಬಹುದು ಎಂದು ಅನೇಕರು ವಾದಿಸಿದ್ದಾರೆ. ನಿಖರ ಅಂಕಿ-ಅಂಶಗಳಿಗಿಂತ ಮುಖ್ಯವಾದ ವಿಷಯವೇನೆಂದರೆ, ವಿತ್ತೀಯ ಕೊರತೆಯು ಗಣನೀಯವಾಗಿ ಏರಿಕೆಯಾದರೂ ಸಹ, ನೊಂದ ಜನರಿಗೆ ಅಗತ್ಯ ಪರಿಹಾರ ಒದಗಿಸಲು ಸಾಕಷ್ಟು ಪ್ರಮಾಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಮೋದಿ ಸರ್ಕಾರವು ಅದನ್ನು ನಿರ್ಲಕ್ಷಿಸಿದೆ. ಅದಕ್ಕಿಂತಲೂ ಮುಖ್ಯವಾಗಿ, ಕೇವಲ ನಾಲ್ಕು ಗಂಟೆಗಳ ಮುನ್ಸೂಚನೆಯನ್ನಷ್ಟೇ ಕೊಟ್ಟು ಘೋಷಣೆ ಮಾಡಿದ ಒಂದು ಘೋರ ಮತ್ತು ಸಂಪೂರ್ಣ ನಿಷ್ಪ್ರಯೋಜಕ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಮಂದಿ ದುಡಿಯುವ ಜನರು ಉದ್ಯೋಗ ಕಳೆದುಕೊಂಡರು. ಅವರಿಗೆ ಅಗತ್ಯವಿದ್ದ ನೆರವನ್ನು ಸುಲಭವಾಗಿ ಒದಗಿಸಬಹುದಿತ್ತು. ಅದನ್ನೂ ಗಮನಾರ್ಹ ಪ್ರಮಾಣದಲ್ಲಿ ಒದಗಿಸಲಿಲ್ಲ. ಅವರು ಉದ್ಯೋಗಹೀನರೂ ಆದರು, ಆದಾಯಹೀನರೂ ಆದರು.
ಈಗ ವಿಷಯವೆಂದರೆ: ಮೋದಿ ಸರ್ಕಾರವು ಏಕೆ ಹೀಗೆ ಮಾಡಿತು ಎಂಬುದು. ಜಗತ್ತಿನಲ್ಲಿ ಯಾರಿಗೂ ಇಲ್ಲದಷ್ಟು ಅಂಜುಬುರುಕುತನ ಮೋದಿ ಸರ್ಕಾರಕ್ಕೆ ಮಾತ್ರ ಇದೆ ಎಂಬುದು ಗೊತ್ತಾಗುವುದು ಇಲ್ಲಿಯೇ. ಮೋದಿ ಸರ್ಕಾರದ ಕ್ರಿಯೆಗಳ ಬಗ್ಗೆ ಸಾಕಷ್ಟು ಉದಾರವಾಗಿಯೇ ಹೇಳುವುದಾದರೆ, ವಿತ್ತೀಯ ಕೊರತೆಯನ್ನು ಹೆಚ್ಚಿಸಿದರೆ, ಅದನ್ನು ಎಳ್ಳಷ್ಟೂ ಇಷ್ಟಪಡದ ಜಾಗತೀಕರಣಗೊಂಡಿರುವ ಹಣಕಾಸು ಬಂಡವಾಳವು ಕೋಪಗೊಳ್ಳಬಹುದು ಎಂಬ ಹೆದರಿಕೆ ಮೋದಿ ಸರ್ಕಾರಕ್ಕೆ. ಅದನ್ನು ಸಂತೃಪ್ತಗೊಳಿಸಲಿಕ್ಕೇ ತಾನೇ ಎಫ್‌ಆರ್‌ಬಿಎಂ ಕಾಯ್ದೆಯು ಸರ್ಕಾರದ ವಿತ್ತೀಯ ಕೊರತೆಯ ಮಿತಿಯನ್ನು ಜಿಡಿಪಿಯ ಶೇ.3ರಷ್ಟು ಎಂದು ನಿಗದಿಪಡಿಸಿರುವುದು. ವಾಸ್ತವವಾಗಿ, ಅನೇಕ ಸರ್ಕಾರಗಳು, ಅದರಲ್ಲೂ ವಿಶೇಷವಾಗಿ ಯೂರೋಪಿನ ಅನೇಕ ಸರ್ಕಾರಗಳು ಈ ಮಿತಿಯನ್ನು ಎಗ್ಗಿಲ್ಲದೆ ದಾಟುವ ಕೆಲಸ ಮಾಡಿದ್ದವು; ಅದಕ್ಕೆ ಕೊರೊನಾ ಸಾಂಕ್ರಾಮಿಕದ ಸಮರ್ಥನೆಯನ್ನು ಕೊಟ್ಟವು. ಆದರೆ, ಮೋದಿ ಸರ್ಕಾರಕ್ಕೆ, ಯೂರೋಪಿನ ಸರ್ಕಾರಗಳ ರೀತಿಯಲ್ಲಿ, ವಿತ್ತೀಯ ಕೊರತೆಯ ಮಿತಿಯನ್ನು ದಾಟಿ ಜಾಗತಿಕ ಹಣಕಾಸು ಬಂಡವಾಳವನ್ನು ಎದುರಿಸುವ ಧೈರ್ಯವೂ ಇರಲಿಲ್ಲ ಮತ್ತು ಆ ಕೆಲಸಕ್ಕೆ ಬೇಕಾಗುವ ಪ್ರೇರಣೆಯನ್ನು ಒದಗಿಸುವ ಜನ-ಪರ ಕಾಳಜಿಯೂ ಇರಲಿಲ್ಲ. ಹಣಕಾಸು ಬಂಡವಾಳ ಮತ್ತು ಜನರ ನಡುವಿನ ವೈರುಧ್ಯವು ನವ-ಉದಾರವಾದದ ಇಡೀ ಯುಗದ ಗುಣಲಕ್ಷಣವಾಗಿದ್ದು, ಈ ವೈರುಧ್ಯವು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಸಮಯದಲ್ಲಿ ಮತ್ತು ಹಣಕಾಸು ಬಂಡವಾಳದ ನಿರ್ದೇಶನಗಳನ್ನು ಉಲ್ಲಂಘಿಸುವ ಸುವರ್ಣಾವಕಾಶ ದೊರೆತ ಸಂದರ್ಭದಲ್ಲೂ ಸಹ, ಕಣ್ಣು ರೆಪ್ಪೆಯನ್ನೂ ಮಿಟುಕಿಸದೆ, ಭಿನ್ನಮತದ ಕೊಂಚ ಗೊಣಗಾಟವೂ ಇಲ್ಲದೆ, ಮೋದಿ ಸರ್ಕಾರವು ಹಣಕಾಸು ಬಂಡವಾಳಕ್ಕೆ ಡೊಗ್ಗು ಸಲಾಮು ಹೊಡೆಯುವ ದಾರಿಯನ್ನೇ ಆಯ್ಕೆ ಮಾಡಿಕೊಂಡಿತು.
ದೇಶದ ದುಡಿಯುವ ಜನರ ಬಗ್ಗೆ ಮೋದಿ ಸರ್ಕಾರವು ಹೊಂದಿರುವ ನಿರ್ದಯತೆಯು ಅಲ್ಲಿಗೆ ಮುಗಿಯುವುದಿಲ್ಲ. ಯಾವುದೇ ಪ್ರಜಾಪ್ರಭುತ್ವದಲ್ಲಿ ಜನರು ಚುನಾವಣೆಯ ಸಂದರ್ಭದಲ್ಲಿ ಕಡೆಗಣಿಸುವ ಭಯ ಆಡಳಿತ ಪಕ್ಷಗಳಿಗೆ ಇದ್ದೇ ಇದೆ. ಹಾಗಾಗಿ, ಡೊನಾಲ್ಡ್ ಟ್ರಂಪ್ ಅವರ ಅಮೇರಿಕಾ ಸೇರಿದಂತೆ ಮುಂದುವರಿದ ದೇಶಗಳ ಸರ್ಕಾರಗಳು ಗಣನೀಯ ಪ್ರಮಾಣದ ಪರಿಹಾರ ಪ್ಯಾಕೇಜ್‌ಗಳನ್ನು ಒದಗಿಸಲು ಮುಂದೆ ಬಂದವು. ಅದರ ಅರ್ಥ ಅವರಿಗೆ ಜನರ ಬಗ್ಗೆ ಅಪಾರ ಪ್ರೀತಿ ಇತ್ತು ಎಂದಲ್ಲ. ಜನರ ಬಗ್ಗೆ ಕಾಳಜಿ ವಹಿಸುವಂತೆ ಪ್ರಜಾಸತ್ತೆಯ ಸಂಸ್ಥೆಗಳು ಈ ಸರ್ಕಾರಗಳನ್ನು ಒತ್ತಾಯಿಸಿದವು. ಆದರೆ, ಪ್ರಜಾಸತ್ತೆಯ ಸಂಸ್ಥೆಗಳ ಅಂತಹ ಒತ್ತಾಯಗಳಿಗೆ ಯಾವತ್ತೂ ಮಣಿಯದ ಮೋದಿ ಸರ್ಕಾರವು ಜನರಿಗೆ ಪರಿಹಾರ ಒದಗಿಸುವ ಆಸಕ್ತಿ ವಹಿಸಲಿಲ್ಲ.
ಆಟದಲ್ಲಿ ಹಿಂದುತ್ವದ ಇಸ್ಪೀಟೆಲೆಯನ್ನು ಸರಿಯಾದ ಸಮಯದಲ್ಲಿ ಎಸೆಯುವ ಮೂಲಕ ಮತ್ತು ಚುನಾವಣೆಯ ಮೊದಲೇ ಮತ್ತು ಚುನಾವಣೆಯ ನಂತರದಲ್ಲಿಯೂ ಹಣಬಲದ ಮೂಲಕ ವಿರೋಧ ಪಕ್ಷಗಳ ಸದಸ್ಯರನ್ನು ಸೆಳೆಯುವ ಮೂಲಕ ಅಧಿಕಾರ ಹಿಡಿಯುವ ಕಲೆಯನ್ನು ಬಿಜೆಪಿಯು ಕರಗತ ಮಾಡಿಕೊಂಡಿದೆ. ಅದರ ಸಿನಿಕತನ ಅಪರಿಮಿತ. ಕೋಮು ದ್ವೇಷ ಹರಡುವಲ್ಲಿ ಅದಕ್ಕೆ ಯಾವುದೇ ಅಳುಕೂ ಇಲ್ಲ, ಗೊಂದಲವೂ ಇಲ್ಲ; ಅದು ರಾಜಕೀಯವನ್ನು ಎಷ್ಟರ ಮಟ್ಟಿಗೆ ಒಂದು ಸರಕನ್ನಾಗಿ ಮಾಡಿದೆಯೆಂದರೆ, ಜನರು ಯಾವುದೇ ರಾಜಕೀಯ ಪಕ್ಷಕ್ಕೆ ಮತ ನೀಡಿರಲಿ, ಗೆದ್ದವರನ್ನು ಖರೀದಿಸಿ ತಾನೇ ಸರ್ಕಾರ ರಚಿಸುವುದಂತೂ ಖಚಿತವೇ.
ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಎದುರಿಗೆ ಅಂಜುಬುರುಕುತನ, ದೇಶದ ದುಡಿಯುವ ಜನತೆಯ ಬಗ್ಗೆ ನಿರ್ದಯತೆ ಮತ್ತು ಮತದಾರರನ್ನು ಹಾಗೂ ಶಾಸಕರನ್ನು ಮರುಳುಗೊಳಿಸುವ ಸಿನಿಕತನ- ಇಂತಹ ಸಂಯೋಜನೆಯೇ ಮೋದಿ ಸರ್ಕಾರವನ್ನು ಬಹುಶಃ ಜಗತ್ತಿನ ಅತ್ಯಂತ ಉಗ್ರ-ಬಲ ಪಂಥೀಯ ಸರ್ಕಾರವನ್ನಾಗಿ ರೂಪುಗೊಳಿಸಿದೆ.
ಅನು: ಕೆ.ಎಂ. ನಾಗರಾಜ್