ಇತ್ತೀಚೆಗೆ ಆದ 5 ಹುಲಿಗಳ ಕಗ್ಗೊಲೆ ಅತ್ಯಂತ ಖಂಡನೀಯ ವಿಷಯ. ಆದರೆ ಹುಲಿಗಳು ಈ ರೀತಿ ಸತ್ತಾಗ ಮಾಧ್ಯಮದಲ್ಲಿ ಆಗುವ ದೊಡ್ಡ ಮಟ್ಟದ ಸುದ್ಧಿ, ಅದರ ತನಿಖೆ, ಸಂಚಲನ ಇತರ ಪ್ರಾಣಿಗಳಾದ ಹಸು, ಎಮ್ಮೆ, ಕುರಿ ಇವು ನೂರಾರು ಸಂಖ್ಯೆಯಲ್ಲಿ ಸತ್ತಾಗ ಆಗುವುದಿಲ್ಲವಲ್ಲ? ಮತ್ತು ಇವುಗಳನ್ನು ಇಷ್ಟೇಕೆ ಕೀಳಾಗಿ ನೋಡಲಾಗುತ್ತಿದೆ ಎಂಬುದು ಪಶುಪಾಲಕರ ಚಿಂತನೆ. ಹುಲಿಗಳು
-ಡಾ. ಎನ್. ಬಿ. ಶ್ರೀಧರ
ಹುಲಿಗಳಿಂದ ದೇಶದ ಅಥವಾ ರಾಜ್ಯದ ಬೊಕ್ಕಸಕ್ಕೆ ಅಥವಾ ದೇಶದ ಆರ್ಥಿಕತೆಗೆ ಏನು ಕೊಡುಗೆ ಇದೆ? ಅವುಗಳ ರಕ್ಷಣೆಗೆ ಖರ್ಚು ಮಾಡುವುದು ಜಾಸ್ತಿಯಲ್ಲವೇ? ಈ ಪ್ರಶ್ನೆಯನ್ನು ಸ್ವೀಕರಿಸಲೂ ಸಾಧ್ಯವಿಲ್ಲದಷ್ಟು ಕೆಂಡಾಮಂಡಲರಾಗುತ್ತಾರೆ ಅನೇಕರು. ಅದರಲ್ಲಿಯೂ ಪರಿಸರವಾದಿಗಳಿಗೆ ಇದು ದೊಡ್ಡ ತಲೆಹರಟೆಯ ವಿಷಯ. ಅದೇನೆ ಇರಲಿ, ಅವು ಕೇವಲ ಆದಾಯವನ್ನು ಹೀರುವ ಬಿಳಿಯಾನೆಗಳೋ ಅಥವಾ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಪ್ರಕೃತಿಯ ಸಮತೋಲನ ಜೀವ ವೈವಿಧ್ಯ, ಆಹಾರ ಸರಪಳಿ ಇತ್ಯಾದಿಗಳಿಗೆ ನೀಡಿರುವ ಕೊಡುಗೆಯ ಕಡೆಗಣನೆ ಆಗುತ್ತಿದೆಯೇ ಎಂಬ ಬಗ್ಗೆ ವಾಸ್ತವಿಕತೆಯ ಜಿಜ್ಞಾಸೆ ಆಗಬೇಕು. ಹುಲಿಗಳು
ಸಾರ್ವಜನಿಕರ ತೆರಿಗೆ ಹಣ ಇದಕ್ಕೆ ವ್ಯಯವಾಗುತ್ತಿದೆ ಎಂದರೆ ಇದರ ಬಗ್ಗೆ ಚರ್ಚೆಯಾಗಬೇಕು ಮತ್ತು ಪಾರದರ್ಶಕತೆ ಬೇಕು. ಹುಲಿಗಳ ಆಧಾರಿತ ಪ್ರವಾಸೋಧ್ಯಮದಿಂದ ಅವುಗಳ ಸ್ವಯಂ ನಿರ್ವಹಣೆ ಆಗುತ್ತಿದ್ದರೆ ಅಥವಾ ಸಾರ್ವಜನಿಕ ತೆರಿಗೆಯ ಬಿಡಿಕಾಸು ಖರ್ಚಾಗದೇ ಸ್ವಂತ ಅನುದಾನದಲ್ಲಿ ಹುಲಿಗಳ ಪಾಲನೆ ಮತ್ತು ಪೋಷಣೆ, ಸಂರಕ್ಷಣೆ ನಡೆಯುತ್ತಿದೆ ಎಂದರೆ ಸಾರ್ವಜನಿಕರು ಕೇಳಲು ಹಕ್ಕು ಹೊಂದಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಹತ್ತು ಪೈಸೆ ಖರ್ಚು ಮಾಡಿದರೂ ಲೆಕ್ಕ ಕೊಡಲೇ ಬೇಕು. ಸಾರ್ವಜನಿಕರು ಮುಂದಿಡುವ ಪ್ರಶ್ನೆಗಳಿಗೆ ಉತ್ತರಿಸಿದರೇ ಹೋಗುವುದು ನಿರುಂಕಶ ಮನೋಭಾವ. ಹುಲಿಗಳು
ಕಾನೂನು ಏನು ಹೇಳುತ್ತದೆ?
ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಪ್ರಕಾರ ಕ್ರಿಮಿಕೀಟಗಳನ್ನು ಹೊರತು ಪಡಿಸಿ ಕಾಡಿನಲ್ಲಿ ಯಾವುದೇ ಮಾಲಕನಿಲ್ಲದೇ ಬದುಕುವ ಕಾಡು ಪ್ರಾಣಿಗಳನ್ನು ಬೇಟೆಯಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೇ ಈ ಕಾಯ್ದೆಯ ಸೆಕ್ಷನ್ 9 ಉಪನಿಯಮ I ರ ಪ್ರಕಾರ ಹುಲಿ, ಆನೆ, ಚಿರತೆ, ಘೇಂಡಾಮೃಗಗಳಂತಹ ಬೇಟೆಯನ್ನು ಸಂಪೂರ್ಣವಾಗಿ ನಿಶೇಧಿಸಲಾಗಿದ್ದು ಇದಕ್ಕೆ ಕನಿಷ್ಠ 3-7 ವರ್ಷಗಳ ಜೈಲು ಶಿಕ್ಷೆ , ₹10,000-₹50,000 ರವರೆಗಿನ ದಂಡ ಮತ್ತು ಪುನರಾವರ್ತಿತ ಅಪರಾಧಕ್ಕೆ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಮತ್ತು ₹25,000 ದಂಡ ಇತ್ಯಾದಿ ಕಠಿಣ ಶಿಕ್ಷೆ ಇದೆ. ಭಾರತದಲ್ಲಿ ಪರಿಸರ ಅಸಮತೋಲನ ಮತ್ತು ಅಳಿವನ್ನು ತಡೆಗಟ್ಟಲು, ಈ ಪ್ರಾಣಿಗಳ ಸಂಖ್ಯೆ ಹೆಚ್ಚಿದ್ದರೂ ಸಹ, ಕಾಡು ಪ್ರಾಣಿಗಳನ್ನು ಕೊಲ್ಲುವುದನ್ನು ನಿರ್ಬಂಧಿಸಲಾಗಿದೆ. ಹುಲಿಗಳು
ಭಾವನಾತ್ಮಕಕ್ಕಿಂತ ವಾಸ್ತವಿಕ ವಿಷಯ ಮುಖ್ಯ
ಯಾವುದೇ ಪ್ರಾಣಿಗಳ ಸಾವು ಖಂಡನೀಯ. ಅದರ ಸೂಕ್ತ ತನಿಖೆ ಆಗಿ ಕಾರಣರಾದವರಿಗೆ ಶಿಕ್ಷೆ ಆಗಬೇಕು, ಹುಲಿಯ ಅಗತ್ಯತೆ ಅರಣ್ಯದಲ್ಲಿ ಏಕೆ ಅವಶ್ಯ ಎನ್ನುವುದನ್ನು ಸುತ್ತಿ ಬಳಸಿ ಹೇಳಲಾಗಿದೆ. ಆದರೆ ಅವು ಏಕೆ ಇರಬೇಕು ಎನ್ನುವುದನ್ನೇ ಹೇಳಲಿಲ್ಲ. ನೀಡಿದ ಉದಾಹರಣೆಗಳು ಊಹೆಯ ಮೇಲೆ ನಿಂತಿವೆ. ದೇಶದಲ್ಲಿ ಎಷ್ಟು ಹುಲಿಗಳಿವೆ, ಎಷ್ಟು ಜಿಂಕೆಗಳಿವೆ, ಎಷ್ಟು ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿದೆ? ಅದನ್ನು ಕಡಿಮೆಗೊಳಿಸಲು ಅದೆಷ್ಟು ಹುಲಿಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಯಾವುದೇ ಅಂಕಿ ಅಂಶಗಳಿಲ್ಲ. ಹುಲಿ ರಾಷ್ಟ್ರೀಯ ಪ್ರಾಣಿ ಎಂಬುದು ಒಂದು ಭಾವನಾತ್ಮಕವಾದ ವಿಷಯ. ಹಾಗಿದ್ದರೆ ಅದರ ಸಂರಕ್ಷಣೆಗೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವಷ್ಟು ನಮ್ಮ ದೇಶ ಶ್ರೀಮ೦ತವೇ? ಹುಲಿಗಳ ರಕ್ಷಣೆಗೆ ವೇದಿಕೆಯ ಭಾಷಣ ಮಾಡುವವರು ಮತ್ತು ದೊಡ್ಡ ದೊಡ್ಡ ಪುಸ್ತಕ ಬರೆಯುವವರು ನೈಜ ಚಿತ್ರಣ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದು.
ಇದನ್ನೂ ಓದಿ: ಕರ್ನಾಟಕದಲ್ಲಿ ಬಲವಂತದ ಭೂ ಸ್ವಾಧೀನ – ಭಾಗ 1
ಹುಲಿಗಳು ಜೀವವೈವಿಧ್ಯ ಕಾಪಾಡಲು. ಪೃಕೃತಿಯಲ್ಲಿರಬೇಕು. ಆದರೆ ಸಾಮಾನ್ಯ ತೆರಿಗೆದಾರರ ಹಣವನ್ನು ಅವುಗಳ ರಕ್ಷಣೆಯ ಕುರಿತು ಹೋಗುತ್ತದೆ, ಸರ್ಕಾರಗಳು ಅದೆಷ್ಟು ಖರ್ಚು ಮಾಡುತ್ತಿವೆ, ಎಷ್ಟು ಹುಲಿಗಳು ಜಾಸ್ತಿ ಆಗಿವೆ ? ಎಂಬ ಬಗ್ಗೆ ಮಾಹಿತಿ ಅಗತ್ಯ. ಹೆಚ್ಚುತ್ತಿರುವ, ಕಾಡು ಕೋಣ, ಜಿಂಕೆ, ಇತರ ಸಸ್ಯಾಹಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಇತರ ಮಾರ್ಗಗಳು ಯಾವವೂ ಇಲ್ಲವೇ? ಹುಲಿಗಳ ಹೆಚ್ಚಿದ ಸಂಖ್ಯೆಯಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯವೇ? ಪರ್ಯಾಯ ಮಾರ್ಗಗಳೇನು? ಹುಲಿಗೆ ಕೊಡುತ್ತಿರುವ ಆಧ್ಯತೆ ಜಾಸ್ತಿಯಾಗುತ್ತಿದೆಯೇ? ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ತಿದ್ದುಪಡಿಗಳಾಗಬೇಕೆ? ಎಂಬೆಲ್ಲಾ ವಿಷಯಗಳ ಬಗೆಗೂ ಸಹ ಚರ್ಚೆ ಅಗತ್ಯ. ಕಾಡು ಪ್ರಾಣಿಯ ಜೀವಕ್ಕೆ ಜಾಸ್ತಿ ಬೆಲೆ, ನಾಡಪ್ರಾಣಿಗಳ ಜೀವಕ್ಕೆ ಕಡಿಮೆ ಬೆಲೆ ಎಂಬುದು ಪ್ರಾಣಿಗಳಲ್ಲೇ ಮಾಡುವ ಜಾತಿ ಬೇಧವೇ? ಕೆಲವೊಂದು ಪ್ರಾಣಿಗಳಿಗೆ ವಿಐಪಿ ಸ್ಥಾನಮಾನ, ಕೆಲವೊಂದು ಪ್ರಾಣಿಗಳಿಗೆ ನೋವಿಲ್ಲದೇ ಸಾಯುವ ಹಕ್ಕೂ ಇಲ್ಲದಿರದಿರುವುದು ಪ್ರಾಣಿಗಳಲ್ಲಿಯೇ ಮಾಡುತ್ತಿರುವ ತಾರತಮ್ಯವೇ?
ಹುಲಿಗಳ ಸಮರ್ಥಕರ ವಾದ
“ನಮ್ಮ ಮನೆಯಲ್ಲಿ ನಲ್ಲಿ ತಿರುಗಿಸಿದ ತಕ್ಷಣ ನೀರು ಬರುತ್ತದೆ. ನಮ್ಮ ನಲ್ಲಿಯಲ್ಲಿ ನೀರು ಬರಬೇಕು ಎಂದರೆ, ದೂರದ ಕಾಡಿನಲ್ಲಿ ಹುಲಿ ಇರಬೇಕು. ಅಂದರೆ, ನಮ್ಮ ಅಳಿವು ಮತ್ತು ಉಳಿವು ಹುಲಿಯ ಅಸ್ತಿತ್ವದ ಜೊತೆಗೆ ನೇರ ಸಂಬಂಧ ಹೊಂದಿದೆ . ಹುಲಿ ತಾನು ವಾಸಿಸುವ ಕಾಡಿನ ಉಳಿದೆಲ್ಲ ಜೀವಿಗಳ ಸಂಖ್ಯೆಯನ್ನೂ ನಿಯಂತ್ರಿಸುತ್ತದೆ. ವಿಶೇಷವಾಗಿ ಜಿಂಕೆ, ಕಡವೆ ಮತ್ತು ಕಾಡೆಮ್ಮೆ, ಕೆಲವೊಮ್ಮೆ ಆನೆ ಮರಿಗಳನ್ನೂ ಬೇಟೆಯಾಡುವ ಮೂಲಕ ಅವುಗಳ ಸಂಖ್ಯೆ ಹೆಚ್ಚಾಗದಂತೆ, ಆ ಮೂಲಕ ಕಾಡಿನ ಸಸ್ಯ ಸಂಪತ್ತು ನಾಶವಾಗದಂತೆ ತಡೆಯುತ್ತದೆ.
ಒಂದೊಮ್ಮೆ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿಬಿಟ್ಟರೆ, ಹುಲ್ಲು ಮತ್ತು ಇತರೆ ಸಣ್ಣ ಪುಟ್ಟ ಗಿಡಗಳನ್ನು ಅವು ಸಿಕ್ಕಾಪಟ್ಟೆ ತಿಂದು ಹಾಕಿ, ಮಳೆ ಬಂದಾಗ ಮಣ್ಣಿನ ಸವಕಳಿ ಹೆಚ್ಚಾಗಿಬಿಡುತ್ತದೆ. ಕಾಡು ಕ್ರಮೇಣ ನಾಶವಾಗುತ್ತಾ, ಮಳೆಯನ್ನು ಹಿಡಿದಿಡುವ ಸಾಮರ್ಥ್ಯ ಕಳೆದುಕೊಂಡು ಬಿಡುತ್ತದೆ. ಆದ್ದರಿಂದ ಸಸ್ಯಹಾರಿ ಪ್ರಾಣಿಗಳನ್ನು ಮತ್ತು ಸಸ್ಯ ಸಂಕುಲವನ್ನು ಸಮತೋಲನದಲ್ಲಿ ಇಡಲು ಹುಲಿ ಪ್ರಮುಖ ಪಾತ್ರ ವಹಿಸುತ್ತದೆ” ಇದೆಲ್ಲಾ ಮೇಲ್ನೋಟಕ್ಕೆ ನಿಜ ಅನಿಸಿಬಿಡುತ್ತದೆ. ಆದರೆ ಈ ಕುರಿತು ಯಾರೂ ಸಹ ಯಾವ ಅಧ್ಯಯನವನ್ನೂ ಸಹ ಮಾಡಿಲ್ಲ. ಕೇವಲ ಊಹೆಯ ಭಾವನಾತ್ಮಕ ಕಥನ ಇದು.
ಅಲ್ಲಿರುವವರೇ ಮಾರಕವೇ?
ಕೆಲದಿನಗಳಿಂದ ಮಾಧ್ಯಮಗಳಲ್ಲಿ ಕೆಲವು ಪರಿಸರ ತಜ್ಞರು ನೀಡುವ ಅಪರೋಕ್ಷ ಅಭಿಪ್ರಾಯವನ್ನು ಗಮನಿಸಿದಾಗ ಇದಕ್ಕೆಲ್ಲಾ ಐಎಫ್ಎಸ್ ಅಧಿಕಾರಿಗಳೆಂಬ ಬಿಳಿಯಾನೆಗಳು ಕಾರಣವೇ ಎಂಬ ಸಂಶಯ ಮೂಡುತ್ತದೆ. ನಿಜವಾಗಿಯೂ ಸಹ ಅವರಿಗೆ ಅರಣ್ಯದ ಬಗೆಗೆ ಕಾಳಜಿ ಇದೆಯೇ? ಅವರ ತಂಗುದಾಣ ಮಾಡಿಕೊಳ್ಳಲು “ಹುಲಿ ಸಿಂಹ ರಕ್ಷಣೆ”ಯ ನೆಪದಲ್ಲಿ ಮಾಡಿದ ಹುನ್ನಾರವೇ? ಎಂಬೆಲ್ಲಾ ಅನುಮಾನ ಕಾಡುತ್ತಿದೆ. ರಾಜ್ಯದ ಬಹುತೇಕ ವನ್ಯಜೀವಿ ಧಾಮಗಳಲ್ಲಿ ಖಾಯಂ ಪಶುವೈದ್ಯರ ಹುದ್ದೆಗಳೇ ಇಲ್ಲ. ಆದರೆ ಒಂದೊಂದು ಮೃಗಾಲಯಕ್ಕೆ ಐಎಫ್ಎಸ್ ಅಧಿಕಾರಿಗಳು ಮುಖ್ಯಸ್ಥರಾಗಿರುವ ಅನೇಕ ಹುದ್ದೆಗಳು ಅವಶ್ಯವೋ ಇಲ್ಲವೋ ಇದ್ದೇ ಇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಹುಲಿ-ಸಿಂಹ ಧಾಮ, ಆನೆಧಾಮ, ಶರಾವತಿ ಅಭಯರಣ್ಯ ಹೀಗೆ ಎಲ್ಲೆಡೆ ಅನೇಕ ಅರಣ್ಯಾಧಿಕಾರಿಗಳ ಡಿ ಎಫ್ ಓ ಹುದ್ದೆ ಇವೆ.

ಎಲ್ಲದಕ್ಕೂ ಐ ಎಫ್ ಎಸ್ ಮಟ್ಟದ ಅಧಿಕಾರಿಗಳಿದ್ದಾರೆ. ಆದರೆ ವನ್ಯ ಜೀವಿಗಳ ಆಹಾರ ಪದ್ಧತಿ, ಆರೋಗ್ಯ ರಕ್ಷಣೆ, ಪ್ರಜನನ ಇತ್ಯಾದಿಗಳನ್ನು ತಿಳಿದಿರುವ ಜೀವನಾಡಿಯಾದ ಪಶುವೈದ್ಯರ ಹುದ್ದೆಯನ್ನೇ ನೇಮಕ ಮಾಡದೇ ಎರವಲು ಸೇವೆ ಅಥವಾ ಗುತ್ತಿಗೆಯ ಪಶುವೈದ್ಯರನ್ನು ನೇಮಿಸುತ್ತಾರೆ. ಪಶುವೈದ್ಯಾಧಿಕಾರಿಗಳು ಪತ್ರಾಂಕಿತ ಎ ದರ್ಜೆ ಅಧಿಕಾರಿಗಳಿಂದ ಇವರನ್ನು ಖಾಯಂ ಆಗಿ ನೇಮಿಸಿಕೊಂಡರೆ ಐಎಫ್ಎಸ್ ಅಧಿಕಾರಿಗಳ ಜನ್ಮಸಿದ್ಧ ಹಕ್ಕಾದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ಹಿರಿತನದ ಆಧಾರದ ಮೇಲೆ ಬಿಟ್ಟಕೊಡಬೇಕಾಗಬಹುದು ಎಂದು ಅಭದ್ರತೆ ಕಾಡುತ್ತಿರುವುದರಿಂದ ಖಾಯಂ ಆಗಿ ಪಶುವೈದ್ಯಾಧಿಕಾರಿಗಳನ್ನು ನೇಮಕ ಮಾಡಲು ಐಎಫ್ಎಸ್ ಅಧಿಕಾರಿಗಳು ಬಿಡುತ್ತಿಲ್ಲ ಎಂಬುದು ಹೆಸರು ಹೇಳಲಿಚ್ಚಿಸದ ಕೆಲವರ ಅಳಲು.
ಇದೆಷ್ಟರ ಮಟ್ಟಿಗೆ ಸತ್ಯವೋ ತಿಳಿದಿಲ್ಲ.ಬಹುತೇಕ ಮೃಗಾಲಯಗಳ ಪಶು ಆಸ್ಪತ್ರೆಗಳಿಗೆ ಶಸ್ತ್ರಚಿಕಿತ್ಸಾ ಉಪಕರಣಗಳು, ಡಾರ್ಟ್ ಗನ್, ರಕ್ಷಣಾ ವಾಹನ, ವನ್ಯ ಜೀವಿ ಚಿಕಿತ್ಸೆಗೆ ಅವಶ್ಯವಿರುವ ಸಹ ಸಿಬ್ಬಂದಿ ಇವು ಎಲ್ಲವೂ ಕೊರತೆ ಇರುತ್ತದೆ. ಮೂಲಭೂತ ಸೌಲಭ್ಯಗಳೇ ಇಲ್ಲ. ವನ್ಯ ಜೀವಿಗಳನ್ನು ಚಿಕಿತ್ಸೆ ಮಾಡಲು ವಿಶೇಷ ಔಷಧಿಗಳಿಗೆ ಹಣವಿಲ್ಲ. ದಿನವಿಡೀ ಕಾಡು ಸುತ್ತುವ ಮತ್ತು ವನ್ಯಜೀವಿಗಳು ನಾಡನ್ನು ಸೇರಿದಾಗ ಅವುಗಳನ್ನು ಚಿಕಿತ್ಸೆ ಮಾಡುವ ಪಶುವೈದ್ಯರ ಜೀವಕ್ಕೆ ರಕ್ಷಣೆಯೇ ಇಲ್ಲ. ಯಾವುದೇ ವಿಮೆ ಇರುವುದಿಲ್ಲ. ಅವರಿಗೆ ಅರಣ್ಯ ಇಲಾಖೆಯ ಅತ್ಯಂತ ಹಳೆಯ ಅಥವಾ ಕಳ್ಳ ಸಾಗಣೆದಾರರಿಂದ ಮುಟ್ಟುಗೋಲು ಹಾಕಿಕೊಂಡ ಡಕ್ಲಾಸ್ ಜೀಪ್ ಕೊಡುತ್ತಾರೆ.
ಐಎಫ್ಎಸ್ ಅಧಿಕಾರಿಗಳಿಗೆ ಐಷಾರಾಮಿ ವಾಹನ, ಬೇರೆ ಯಾರಿಗೂ ನೀಡದ ಸಾರ್ವಜನಿಕ ತೆರಿಗೆಯಿಂದ ಕಟ್ಟಿದ ಇಲಾಖೆಯ ಅತಿಥಿಗ್ರಹ, ಆತಿಥ್ಯಕ್ಕೆ ಸದಾ ಸಿದ್ದರಿರಲೇಬೇಕಾದ ಪಾಪದ ಫಾರೆಸ್ಟರುಗಳು ಮತ್ತು ಗಾರ್ಡುಗಳು, ಮಾಂಸ ಮದಿರಾ ಮಜ್ಜನ ಇತ್ಯಾದಿಗಳು ನಾವಿನ್ನೂ ಬ್ರಿಟೀಷ್ ಆಡಳಿತದಿಂದ ಮುಕ್ತರಾಗಿಲ್ಲ ಎಂಬುದನ್ನು ತಿಳಿಯಪಡಿಸುತ್ತದೆ ಅನ್ನುತ್ತಾರೆ ಇಲಾಖೆಯ ಸಮೀಪವರ್ತಿಗಳು. ಈ ಐಎಫ್ಎಸ್ ಅಧಿಕಾರಿಗಳು ಅರಣ್ಯಕ್ಕೆ ಸೀಮಿತರಾಗದೇ ಸಚಿವಾಲಯದ ಕಾರ್ಯದರ್ಶಿ, ಆಯುಕ್ತ ಮತ್ತಿತರ ಉನ್ನತ ಹುದ್ದೆಗಳಲ್ಲಿ, ವಿಶ್ವವಿದ್ಯಾಲಯಗಳ ಕುಲಸಚಿವರಾಗಿ ಸಹಾ ನಿರಂಕುಶವಾಗಿ ಆಡಳಿತ ನಡೆಸುತ್ತಾರೆ ಎನ್ನುತ್ತಾರೆ ಅಲ್ಲಿಯೇ ಕೆಲಸ ಮಾಡಿದ ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳು.ಈ ಆರೋಪಗಳು ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಸಂಬಂಧಿಸಿದವರೇ ಹೇಳಬೇಕು. ಸುಮ್ಮನೆ ಹಾಗೆಯೇ ನಂಬಲಾಗದು.
ಬೇರೆ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲವೇ?
ಹುಲಿಯೂ ಸೇರಿದಂತೆ ಯಾವ ಪ್ರಾಣಿಯದೂ ಸಾವಾಗಬಾರದು. ಐದು ಹುಲಿಗಳ ಅಕಾಲಿಕ ಸಾವು ಸಂಚಲನ ಸೃಷ್ಟಿಸಿದೆ. ಅದೇ ಜಾನುವಾರುಗಳು, ಎಮ್ಮೆಗಳು, ಕುರಿಗಳು, ಅಡುಗಳು ನೂರಾರು ಸಂಖ್ಯೆಯಲ್ಲಿ ಸತ್ತರೂ ಸಹ ಅದೊಂದು ಸುದ್ಧಿಯಾಗುವುದೇ ಇಲ್ಲ. ಇವುಗಳ ಮರಣೋತ್ತರ ಪರೀಕ್ಷೆಗೆ ರೋಗಶಾಸ್ತ್ರಜ್ಞರು ಅಷ್ಟೊಂದು ಉತ್ಸಾಹ ತೋರುವುದಿಲ್ಲ. ಹುಲಿಗಳು ವಿಐಪಿ ಪ್ರಾಣಿಗಳು. ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಅವುಗಳಿಗೆ ರಕ್ಷಣೆ ಇದೆ. ಇವುಗಳ ರಕ್ಷಣೆ ಅಥವಾ ಚಿಕಿತ್ಸೆ ಎರಡೂ ಸಹ ಮಾಧ್ಯಮದ ಗಮನ ಸೆಳೆಯುತ್ತವೆ. ಅರಣ್ಯ ಇಲಾಖೆಗೆ ಹುಲಿ ಸಿಂಹಗಳ ರಕ್ಷಣೆಗೆಂದೇ ತೆರಿಗೆದಾರರ ಹಣದಿಂದ ಸಾವಿರಾರು ಕೋಟಿ ನೀಡಲಾಗುತ್ತದೆ. ಜೀವ ವೈವಿದ್ಯ ಕಾಪಾಡಬೇಕು ಮತ್ತು ಮುಂದಿನ ಪೀಳಿಗೆ ಕೇವಲ ಫೋಟೋದಲ್ಲಿ ಇವುಗಳನ್ನು ನೋಡುವ ಹಾಗಾಗಬಾರದು ಎಂಬುದು ಹಿಂದಿನ ಆಶಯ.
ಅದೇ ಬಡವರ ಬದುಕಿನ ಜೀವನಾಡಿಯಾಗಿರುವ ಹಸು ಎಮ್ಮೆ, ಕುರಿ, ಆಡು, ಸಾಕುವ ಪಶುಪಾಲಕರ ಹಿತಕಾಯುವ ಮತ್ತು ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶುವೈದ್ಯಕೀಯ ವಿಶ್ವವಿದ್ಯಾಲಯ, ಕೆ ಎಂ ಎಫ್ ಸೇರಿದಂತೆ ಪಶುಸಂಗೋಪನಾ ಇಲಾಖೆಗೆ ಕೆಲವೇ ಸಾವಿರ ಕೋಟಿಗಳು. ನಾಯಿಯೂ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ಸಹ ಸಮನಾದ ಬದುಕುವ ಹಕ್ಕಿದೆ, ಅವುಗಳನ್ನು ಕರುಣೆಯಿಂದ ನೋಡಬೇಕು ಎನ್ನುತ್ತಾರೆ ಪ್ರಾಣಿಪ್ರಿಯ ಸಂಘಟನೆಗಳು. ಹಾಗಿದ್ದರೆ ಹುಲಿಗಳಿಗೇಕೆ ಸಾಮಾನ್ಯ ತೆರಿಗೆದಾರರ ಹಣದಲ್ಲಿ ರಾಜಾತಿತ್ಯ? ಅವುಗಳಿಂದ ಪರಿಸರಕ್ಕೆ ಆಗುವ ಅನುಕೂಲವೇನು? ರಾಜ್ಯದ ಬೊಕ್ಕಸಕ್ಕೆ ಅವುಗಳ ಕೊಡುಗೆ ಎಷ್ಟು? ಅವುಗಳ ನಿರ್ವಹಣೆಯನ್ನು ತೆರಿಗೆದಾರರ ಹಣದ ಬದಲಾಗಿ ಖಾಸಗಿಯವರಿಗೆ ವಹಿಸುವುದು ಮತ್ತು ಪ್ರವಾಸೋಧ್ಯಮದ ಮೂಲಕ ಮಾಡಲಾಗದೇ? ಪಶುಚಿಕಿತ್ಸೆಗೂ ಹುಲಿಗಳಷ್ಟೇ ಖರ್ಚು ಮಾಡುವುದು ಯಾವಾಗ ಎನ್ನುವ ಉತ್ತರವಿಲ್ಲದ ಪ್ರಶ್ನೆ ಏಳುತ್ತದೆ.
ಹುಲಿ ಸಂರಕ್ಷಣೆ ಮತ್ತು ತೆರಿಗೆದಾರರ ಹಣ
ಹುಲಿ ಸಂರಕ್ಷಣೆಗೆ ಕೇಂದ್ರ , ರಾಜ್ಯ , ಅನೇಕ ಪ್ರಾಧಿಕಾರಗಳು, ವಿದೇಶದಿಂದ ಹಣವನ್ನು ಪಡೆಯುವ ವಿವಿಧ ಸಂಘ ಸಂಸ್ಥೆಗಳು ಹೀಗೆ ಹಲವು ಹತ್ತು ಮೂಲಗಳಿಂದ ಹಣ ಸಂಗ್ರಹವಾಗುತ್ತದೆ. 2025–26ರ ಆಯವ್ಯಯದಲ್ಲಿ ಭಾರತ ಸರ್ಕಾರವು ₹290 ಕೋಟಿ ನಿರ್ದಿಷ್ಟವಾಗಿ ಹುಲಿ ಮತ್ತು ಆನೆ ಸಂರಕ್ಷಣೆ ಯೋಜನೆಗೆ ನಿಗದಿಪಡಿಸಿದೆ, ಇದು ಹಿಂದಿನ ವರ್ಷಕ್ಕಿಂತ 18% ಹೆಚ್ಚಾಗಿದೆ.ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ಸಹ ತನ್ನ ಅನುದಾನವನ್ನು 2023–24ರಲ್ಲಿ ₹15.8 ಕೋಟಿಯಿಂದ 2024–25ರಲ್ಲಿ ₹35 ಕೋಟಿಗೆ ದ್ವಿಗುಣಗೊಳಿಸಿದೆ. ಕಳೆದ ಬಂಗಾಳ ಹುಲಿ ಸಂರಕ್ಷಣೆಯಲ್ಲಿ ಸಂಚಿತ ಹೂಡಿಕೆ 2.1 ಬಿಲಿಯನ್ ಡಾಲರ್ ಅಥವಾ ರೂ: 200 ಕೋಟಿಗಳಿಗೂ ಮೀರಿದೆ.

ವಾರ್ಷಿಕವಾಗಿ ಎಲ್ಲವನ್ನು ಲೆಕ್ಕ ಹಾಕಿದರೆ ಒಟ್ಟು ರೂ 17,500ಕೋಟಿಯನ್ನು 2025-26ನೇ ಸಾಲಿಗೆ ಹುಲಿ ಸಂರಕ್ಷಣೆಗೆ ಮೀಸಲಿಡಲಾಗಿದೆ. ಇದರ ಪ್ರಕಾರ ವಾರ್ಷಿಕವಾಗಿ ಪ್ರತಿ ಹುಲಿಗೆ ಸರಾಸರಿ ರೂ: 70 ಕೋಟಿ ಖರ್ಚು ಮಾಡಲಾಗುತ್ತಿದೆ. ಭಾರತದಂತ ಅಭಿವೃದ್ಧಿಶೀಲ ದೇಶಕ್ಕೆ ಇದು ದೊಡ್ಡ ಮೊತ್ತ. ಇನ್ನು ಇದನ್ನು ಬೇರೆ ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತ ಹುಲಿಗಳ ರಕ್ಷಣೆಗೆ ಖರ್ಚು ಮಾಡುವ ವೆಚ್ಚ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು. ಇದು ತೆರಿಗೆದಾರರ ಹಣದಿಂದ ಎಂಬುದನ್ನು ಗಮನಿಸಬೇಕು. ಪ್ರಪಂಚದ ಇತರ ದೇಶಗಳಲ್ಲಿಯೂ ಸಹ ಹುಲಿಗಳು ಇವೆ. ಅವೂ ಸಹ ಹುಲಿ ರಕ್ಷಣೆಗೆ ಹಣ ತೊಡಗಿಸುತ್ತವೆ.
ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹುಲಿ ಸಂರಕ್ಷಣೆಗೆ ಪ್ರತಿ ವರ್ಷ ಖರ್ಚು ಮಾಡುವ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ 17,500 ಕೋಟಿಗಳು !. ನಮ್ಮಲ್ಲಿರುವ ಹುಲಿಗಳ ಸಂಖ್ಯೆ 3682 ಮಾತ್ರ. ಅಂದರೆ ಒಂದು ಹುಲಿಯ ರಕ್ಷಣೆಗೆ ಆಗುವ ವೆಚ್ಚ 2024-25 ನೇ ಸಾಲಿನ ಅಂಕಿ ಅಂಶದ ಪ್ರಕಾರ ರೂ: 70,62,428. ಇಲಾಖೆಯ ಆಡಳಿತ ವೆಚ್ಚ, ಅಧಿಕಾರಿಗಳ ವೇತನ, ಭತ್ತೆ, ವಾಹನ ಇಂಧನ ಇತ್ಯಾದಿ ಎಲ್ಲಾ ಸೇರಿದರೆ ಸರಾಸರಿ ಪ್ರತಿ ಹುಲಿಗೆ ಮಾಡುವ ಖರ್ಚು ರೂ: 4.75 ಕೋಟಿ !. ಇದು ಸಣ್ಣ ಮೊತ್ತವೇ? ಶೇ: 27.1ರಷ್ಟು ಬಡತನದ ರೇಖೆಗಿಂತ ಕೆಳಗಿರುವ ಜನರನ್ನು ಹೊಂದಿರುವ ಭಾರತದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯೇ ಎಲ್ಲೆಲ್ಲೂ ಎದ್ದು ಕಾಣುತ್ತಿರುವಾಗ ಹುಲಿ ಸಂರಕ್ಷಣೆಗೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವಷ್ಟು ನಾವು ಶ್ರೀಮಂತರಿದ್ದೇವೆಯೇ? ಅಥವಾ ಈ ಮೊತ್ತ ಸಂಬಂಧಿಸಿದವರಿಂದ ಅಪವ್ಯಯವಾಗುತ್ತಿದೆಯೇ? ಎಂಬೆಲ್ಲಾ ಸಂಶಯಗಳು ಸೂಕ್ಷ್ಮಗ್ರಾಹಿ ಜನರನ್ನು ಕಾಡುತ್ತಿವೆ. ಪರಿಸರ ಪ್ರಿಯರು ಸಮಸ್ಯೆಯ ಒಂದು ಮುಖವನ್ನು ಮಾತ್ರ ಎತ್ತಿ ತೋರಿಸುತ್ತಾರೆ. ಹುಲಿಗಳು
ದೇಶದ ಆರ್ಥಿಕತೆಗೆ ಆಕಳು ಮತ್ತು ಎಮ್ಮೆಗಳು ರೂ:12, 27, 766 ಕೋಟಿ ದುಡಿದು ಕೊಡುತ್ತವೆ. ದೇಶದ 2೦ ಮಿಲಿಯನ್ ಜನರಿಗೆ ಅದರಲ್ಲೂ ಮಹಿಳೆಯರಿಗೆ ಉದ್ಯೋಗವಾಗಿದೆ. ನಮ್ಮ ದೇಶದಲ್ಲಿರುವ ಪ್ರತಿ ಜಾನುವಾರುಗಳ ಮೇಲೆ ಎಲ್ಲಾ ಮೂಲದ ಖರ್ಚು ಎಷ್ಟು ಗೊತ್ತೇ ವಾರ್ಷಿಕ ರೂ:3,062 ಕೋಟಿ ಮಾತ್ರ. ಅಂದರೆ ತಲಾ ಹಸು/ಎಮ್ಮೆಗೆ ಖರ್ಚು ಮಾಡುವುದು ಕೇವಲ ರೂ:೬೩ ಮಾತ್ರ. ಹುಲಿಗಳ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೇ ಅದಕ್ಕೆ ಅಂಕಿ ಅಂಶ ಗಮನಿಸಿದರೆ ವಿಚಾರ ಬದಲಾಗಬಹುದು. ಆದರೆ ಬದಲಾಗುವುದು ಕಷ್ಟ ಸಾಧ್ಯ. ಏಕೆಂದರೆ ಬಾಲ್ಯದಿಂದಲೂ ನಮಗೆ ಹುಲಿ ರಾಷ್ಟ್ರೀಯ ಪ್ರಾಣಿ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯದ ಜೀವವೈವಿಧ್ಯ ಕಾಪಾಡಲು ಹುಲಿ ಬೇಕೇ ಬೇಕು. ಹುಲಿ ಇಲ್ಲದಿದ್ದರೆ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿ ಅವೆಲ್ಲಾ ಸಸ್ಯಗಳನ್ನೆಲ್ಲಾ ತಿಂದು ಹಾಕಿ ನಮಗೆ ಆಹಾರವೇ ದೊರಕಲಿಕ್ಕಿಲ್ಲ ಎಂಬ ವಿಷಯವನ್ನು ಒಂದನೇ ತರಗತಿಯಿಂದಲೇ ತುಂಬಿರುವುದರಿಂದ ಈ ಕುರಿತು ವಿಭಿನ್ನವಾಗಿ ಹೇಳಿದರೆ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹುಲಿಗಳು
ಹುಲಿಗಳು ಮತ್ತು ಜಿಂಕೆಗಳ ನಿಯಂತ್ರಣ
ಜಿಂಕೆಗಳ ಮತ್ತು ಇಂತಹದೇ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯನ್ನು ಹುಲಿಗಳು ಹತೋಟಿಯಲ್ಲಿಟ್ಟಿವೆ ಎಂದು ಅನೇಕರು ಹೇಳುತ್ತಾರೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಜಿಂಕೆಗಳ 9 ಪ್ರಮುಖ ಜಾತಿಗಳು (ಹುಲ್ಲೆ, ನೀಲಗಾಯ್ ಸೇರಿದಂತೆ) 12- 18 ಮಿಲಿಯನ್ ಜಿಂಕೆಗಳು (ಹೆಚ್ಚಿನವು ಚಿಟಲ್ ಮತ್ತು ಸಾಂಬಾರ್ ವರ್ಗದಿಂದ ಬಂದವು) ಇವೆ . ಸರಿ ಸುಮಾರು 5,000 ಜಿಂಕೆಗಳ ಜನಸಂಖ್ಯೆಯನ್ನು ನಿಯಂತ್ರಿಸಲು (30% ವಾರ್ಷಿಕ ಬೆಳವಣಿಗೆಯೊಂದಿಗೆ) ಸುಮಾರು 20–30 ವಯಸ್ಕ ಹುಲಿಗಳು ಬೇಕಾಗುತ್ತವೆ ಮತ್ತು ಇದಕ್ಕೆ ೯೫-೧೫೦ ಕೋಟಿ ವ್ಯಯವಾಗುತ್ತದೆ. ಇಷ್ಟೆಲ್ಲಾ ವೆಚ್ಚ ಭರಿಸಲು ಮಧ್ಯಮ ಉತ್ಪನ್ನ ಹೊಂದಿದ ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಇತರ ಆಧ್ಯತೆಗಳ ಜೊತೆ ಹೋಲಿಸಿದಾಗ ಹುಲಿ ಸಂರಕ್ಷಣೆಗೆ ಖರ್ಚು ಮಾಡುವುದು ಎಷ್ಟು ಸೂಕ್ತ ಎನ್ನುವುದು ಚರ್ಚೆಯ ವಿಷಯ. ಇವುಗಳ ಸಂಖ್ಯೆ ವೃದ್ಧಿಸುತ್ತಿರುವುದು ಶೇ ೮.೬೫ ರಷ್ಟು ಮಾತ್ರ. ಆಹಾರದ ಕೊರತೆಯಿಂದ ಇವುಗಳ ಸಂಖ್ಯೆ ತಾನಾಗಿಯೇ ಕಡಿಮೆಯಾಗುತ್ತಿದೆ. ಇವುಗಳ ಸಂಖ್ಯೆ ಕಡಿಮೆಯಾಗಲು ಹುಲಿಗಳೇ ಬೇಕೆಂದೇನೂ ಇಲ್ಲ. ಹುಲಿಗಳು
ಪರ್ಯಾಯ ಮಾರ್ಗಗಳಿಲ್ಲವೇ?
ಪ್ರತಿಯೊಂದಕ್ಕೂ ಪರ್ಯಾಯವಿದ್ದ ಹಾಗೆ ಇಲ್ಲೂ ಸಹ ಇವೆ. ಅವುಗಳೆಂದರೆ;
1. ಹುಲಿಯ ಸಂರಕ್ಷಣೆಗೆ ಅಪಾರ ಖರ್ಚು ಮಾಡುವ ಬದಲು ಅದನ್ನು ಅದರ ಪಾಲಿಗೆ ನೈಸರ್ಗಿಕವಾಗಿ ಬಿಟ್ಟು ಕಡಿಮೆ ವೆಚ್ಚದಲ್ಲಿ ಸಂವರ್ಧನೆಗೊಳ್ಳಬಲ್ಲ ತೋಳ, ಕಿರುಬ, ಜಿಂಕೆಯನ್ನು ಬೇಟೆಯಾಡಬಲ್ಲ ಕೆಲವು ಜಾತಿಯ ಕರಡಿ ಇತ್ಯಾದಿ ಪರ್ಯಾ ಪ್ರಾಣಿಗಳನ್ನು ವರ್ಧಿಸುವುದು.
2. ಜಿಂಕೆ ಅಥವಾ ಇತರ ಸಸ್ಯಾಹಾರಿ ಪ್ರಾಣಿಗಳಲ್ಲಿ ಸಂತಾನಾಭಿವೃದ್ಧಿ ಕಡಿಮೆಯಾಗಲು ಔಷಧಿ ಅಥವಾ ಲಸಿಕೆ ನೀಡುವುದು.
3. ಆಫ್ರಿಕಾದ ಕೆಲವು ದೇಶಗಳಂತೆ ಶರತ್ತಿನ ಮೇಲೆ ಇಂತಿಷ್ಟೆ ಜಿಂಕೆಗಳನ್ನು ಬೇಟೆಯಾಡಬೇಕು ಮತ್ತು ಹೆಚ್ಚಿನ ಶುಲ್ಕ ನಿಗದಿ ಪಡಿಸಿ ಬೇಟೆಯಾಡಲು ಅನುಮತಿ ನೀಡುವುದು. ಇದು ಅತ್ಯಂತ ಕಡಿಮೆ ವೆಚ್ಚದ್ದು ಮತ್ತು ಅತ್ಯಂತ ಪರಿಣಾಮಕಾರಿ ವಿಧಾನ. ಆದರೆ ಪ್ರಾಣಿ ಪ್ರಿಯರ ಕಣ್ಣು ಕೆಂಪಗಾಗಿಸುವುದು. ಅತ್ಯಂತ ಅವಶ್ಯಕವಾದರೆ ನೀತಿ ನಿಯಮಗಳನ್ನು ಬದಲಾಯಿಸಿಕೊಂಡಲ್ಲಿ ಸಾಧ್ಯವಿದೆ.
ನಮಿಬಿಯಾ, ದಕ್ಷಿಣ ಆಫ್ರಿಕಾ, ಟಾಂಜಾನಿಯಾ ,ಕೆನ್ಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಕಾಡು ಮೃಗಗಳ ಸಂಖ್ಯೆ ಜಾಸ್ತಿಯಾದಾಗ ಅಥವಾ ಮೋಜು ಮಸ್ತಿಗಾಗಿಯೂ ಸಹ 11,000-65,00,00 ರೂ ವರೆಗೂ ಶುಲ್ಕ ವಿಧಿಸಿ ಬೇಟೆಯಾಡುವುದಕ್ಕೆ ಅವಕಾಶವಿದೆ. ಹುಲಿಗಳು
ಇದೊಂದು ಕ್ರೂರ ವಿಧಾನವೆಂದು ಅನೇಕ ಪ್ರಾಣಿ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ. ಆದರೆ ಸಾಕುಪ್ರಾಣಿಗಳಾದ ದನ, ಎಮ್ಮೆ, ಆಕಳು, ಕುರಿ, ಹಂದಿ,ಕೋಳಿ ಇವುಗಳನ್ನು ಸಹ ಮನುಷ್ಯನ ಸ್ವಾರ್ಥಕ್ಕಾಗಿಯೇ ವಧಿಸುವಾಗ ಇಲ್ಲದ ಕರುಣೆ, ಪ್ರೀತಿ ಕಾಡು ಪ್ರಾಣಿಗಳನ್ನು ವಧಿಸಲು ಹೊರಟರೆ ಹೇಗೆ ಇದ್ದಕ್ಕಿದ್ದ ಹಾಗೆ ಉಕ್ಕಿ ಹರಿಯುತ್ತದೆ ಎಂದು ಅಲ್ಲಿನ ಸರ್ಕಾರಗಳು ಮಾಂಸಹಾರಿಗಳು ಪ್ರಾಣಿ ಪ್ರೇಮಿಗಳಾಗಿದ್ದರೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆಯಂತೆ. ಬಹುತೇಕ ಪ್ರಾಣಿ ಪ್ರಿಯ ಸಂಸ್ಥೆಗಳು ಸಂಪೂರ್ಣ ಸಸ್ಯಾಹಾರಿ ಸದಸ್ಯರನ್ನು ಹೊಂದಿದ್ದು ಅವರು ಮಾಂಸ, ಹಾಲು, ಮೊಟ್ಟೆ, ಜೇನುತುಪ್ಪ ಅಥವಾ ಪ್ರಾಣಿ ಮೂಲದ ವಸ್ತುಗಳನ್ನು ಸೇವಿಸುವುದಿಲ್ಲ ಮತ್ತು ಇವರನ್ನು ವೆಗಾನ್ ಎಂದು ಕರೆಸಿಕೊಳ್ಳುವುದರಿಂದ ಈ ಟೀಕೆಗೆ ಇವರು ಒಳಪಡುವುದಿಲ್ಲ . ಒಟ್ಟಿನಲ್ಲಿ ಇದೊಂದು ವಿವಾದಾತ್ಮಕ ವಿಷಯ. ಹುಲಿಗಳು
ಎಲ್ಲೆಲ್ಲಿ ಎಷ್ಟೆಷ್ಟು ಖರ್ಚು?
ಕರ್ನಾಟಕವೂ ಸೇರಿದಂತೆ ಹುಲಿಗಳಿರುವ ರಾಜ್ಯದ ಪ್ರತಿಯೊಂದು ರಾಜ್ಯ ಸರ್ಕಾರವೂ ಸಹ ಅದರ ಆಯವ್ಯಯದಲ್ಲಿ ಹುಲಿ ಸಂರಕ್ಷಣೆಗೆ ಅನುದಾನವನ್ನು ಕಾಯ್ದಿರಿಸುತ್ತದೆ. ಭಾರತ ಸರ್ಕಾರವೂ ಸಹ ಈ ಕುರಿತು ಅದರದೇ ಆದ ರೀತಿಯಲ್ಲಿ ಅನುದಾನ ನೀಡುತ್ತದೆ. ಹುಲಿಗಳನ್ನು ಹೊಂದಿದ ರಾಜ್ಯಗಳಾದ ಮಧ್ಯ ಪ್ರದೇಶ,ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಾಖಂಡ 2024-25 ನೇ ಸಾಲಿನ ಆಯವ್ಯಯದ ಪ್ರಕಾರ ಇವೆಲ್ಲಾ ಪ್ರತಿ ಹುಲಿಗೆ ವರ್ಷಕ್ಕೆ ಸರಾಸರಿ ೪೦.೩೬ ಲಕ್ಷಗಳನ್ನು ಖರ್ಚು ಮಾಡುತ್ತಿವೆ. ಹುಲಿಗಳು
ಹುಲಿ ಪರಿಸರ ಪ್ರವಾಸೋದ್ಯಮ: ನೇರ ಆರ್ಥಿಕ ಕೊಡುಗೆ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ನೇರ ಆರ್ಥಿಕ ಕೊಡುಗೆಯೂ ಸಹ ಇದೆ.
*ಹುಲಿ ಮೀಸಲು ಪ್ರದೇಶಗಳು ಪರಿಸರ ಪ್ರವಾಸೋದ್ಯಮದಿಂದ ದಿನಕ್ಕೆ ₹1.49 ಕೋಟಿ ಗಳಿಸುತ್ತವೆ,
*ಪ್ರಮುಖ 10 ಮೀಸಲು ಪ್ರದೇಶಗಳಿಂದ ವರ್ಷಕ್ಕೆ ₹545 ಕೋಟಿ ಆದಾಯವನ್ನು ನೀಡುತ್ತದೆ.
*ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳ ಮೂಲಕ ಕಾರ್ಬೆಟ್ ಟೈಗರ್ ರಿಸರ್ವ್, ಉತ್ತರಾಖಂಡ್ ಇದು ರಾಜ್ಯದ ಆರ್ಥಿಕತೆಗೆ ದಿನಕ್ಕೆ ₹1.5 ಲಕ್ಷಕ್ಕೂ ಹೆಚ್ಚು ಕೊಡುಗೆ ನೀಡುತ್ತದೆ.
*ಹುಲಿ ಕೇಂದ್ರಿತ ಪರಿಸರ ಪ್ರವಾಸೋದ್ಯಮವು ಅರಣ್ಯ ಮಾರ್ಗದರ್ಶಿಗಳು, ವಾಹನ ಚಾಲಕರು/ನಿರ್ವಾಹಕರು, ಅರಣ್ಯ ಕಾವಲುಗಾರರು, ಹೋಟೆಲ್ ಮಾಲೀಕರು, ಪ್ರವಾಸೋಧ್ಯಮ ಕಾರ್ಮಿಕರಂತ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವುದರ ಮೂಲಕ ಅಪರೋಕ್ಷವಾಗಿ ಆರ್ಥಿಕತೆಗೆ ದಾರಿಯಾಗುತ್ತದೆ.
ಕೊನೆಯ ಮಾತು
ಅರಣ್ಯದ ಜೀವವೈವಿಧ್ಯ ಕಾಪಾಡಲು ಹುಲಿ ಬೇಕೇ ಬೇಕು. ಇದರ ಜೊತೆ ಹುಲಿ ಆಧಾರಿತ ಧಾಮಗಳು, ಪ್ರಾವಾಸಿ ಕಾಟೇಜುಗಳು, ಸಫಾರಿಗಳು ಆರ್ಥಿಕತೆಗೆ ಒತ್ತು ನೀಡಿದಲ್ಲಿ ತೆರಿಗೆದಾರರು,ಪ್ರಾಣಿ ಪ್ರೇಮಿಗಳು ಮತ್ತು ಬಹುಮುಖ್ಯವಾಗಿ ಎಲ್ಲಾ ಪ್ರಾಣಿಗಳು ಕ್ಷೇಮದಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗುವ ದಿನ ಹತ್ತಿರ ಬರಬೇಕಿದೆ. ಹಿತಮಿತವಾಗಿ ಚರ್ಚಿಸಿ ಸಮಾಧಾನದಿಂದ ಸಾಕು ಪ್ರಾಣಿಗಳೂ ಸೇರಿದಂತೆ ಎಲ್ಲಾ ಜೀವಿಗಳೂ ಸಹ ಭೂಮಿಗೆ ಅಗತ್ಯ ಎನ್ನುವುದನ್ನು ಅರಿತುಕೊಂಡು ಇದಕ್ಕೆ ಒದಗಿಸುವ ಸಾರ್ವಜನಿಕರ ತೆರಿಗೆ ಹಣ ಸದ್ವಿನಿಯೋಗವಾಗುವುದನ್ನು ಖಚಿತಪಡಿಸಿಕೊಳ್ಳಬೇಕಿರುವುದು ಇಂದಿನ ಅಗತ್ಯ. ಕುರುಡಾಗಿ ಏನೋ ಒಂದನ್ನು ಹಠ ಹಿಡಿದು ಸಾಧಿಸದೇ ವೈಜ್ಞಾನಿಕ ತಳಹದಿ, ನಿಖರ ಅಂಕಿ ಅಂಶ, ಸಕಾರಣ ಮತ್ತು ಕಡಿಮೆ ಸಾರ್ವಜನಿಕ ಹಣದ ವ್ಯಯ ಇವೆಲ್ಲಾ ಗಮನಿಸಿಕೊಂಡು ವಾಸ್ತವತೆಯ ತಳಹದಿಯ ಮೇಲೆ ಮುಂದಕ್ಕೆ ಸಾಗಬೇಕಿದೆ. ಹುಲಿಗಳು
ಇದನ್ನೂ ನೋಡಿ: ಯುದ್ಧವೂ ಉದ್ಯಮವಾದಾಗ….! -ಡಾ.ಸಿದ್ದನಗೌಡ ಪಾಟೀಲ ವಿಶ್ಲೇಷಣೆಯಲ್ಲಿ Janashakthi Media
