ಎಸ್.ವೈ. ಗುರುಶಾಂತ್
`ಯುದ್ಧ ನಡೆಯುವುದು ರಣರಂಗದಲ್ಲಾದರೂ ಅದು ಆರಂಭಗೊಳ್ಳುವುದು ನಮ್ಮೊಳಗೆ’ ಎನ್ನುವ ಮಾತಿದೆ. ಚುನಾವಣೆ ಘೋಷಣೆ ಹತ್ತಿರವಾಗುತ್ತಿರುವಾಗ ಸ್ಪರ್ದೆಗೆ ಸಂಬಂಧಿಸಿ ಪ್ರತಿಯೊಂದು ರಾಜಕೀಯ ಪಕ್ಷವೂ ಅಭ್ಯರ್ಥಿಯ ಆಯ್ಕೆಯನ್ನೂ ಒಳಗೊಂಡು ʻಸರ್ವ’ ಸಿದ್ಧತೆಯ ತಾಲೀಮು ನಡೆಸುತ್ತಿವೆ. ಆಯಾ ಪಕ್ಷಗಳ ಒಳಗೂ ಅಂತರ್ ಯುದ್ಧ ನಡೆಯುತ್ತಿದೆ. ಎಂದಿನಂತೆ ಚುನಾವಣೆ ಹತ್ತಿರದ ಕೆಲವು ತಿಂಗಳ ಮೊದಲು ರಾಜಕೀಯ ಚಟುವಟಿಕೆಗಳಿಗೆ ಇಳಿಯುತ್ತಿದ್ದ ಬಹುತೇಕ ಪಕ್ಷಗಳು ಈ ಬಾರಿ ವರ್ಷಕ್ಕೂ ಮೊದಲೇ ಕಣ ಸಿದ್ಧತೆಗೆ ಧುಮುಕಿದ್ದವು. ಈಗಾಗಲೇ ಹಲವು ಸುತ್ತಿನ ರಾಜಕೀಯ ಪ್ರಚಾರ ಯಾತ್ರೆಗಳನ್ನು ರಾಜ್ಯದಾದ್ಯಂತ ಮುಗಿಸಿಯೂ ಆಗಿದೆ.
ಈಗ ಪ್ರತಿ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆಗೆ ಪಟ್ಟಿ ಸಿದ್ಧತೆ. ಹೀಗಾಗಿ ಎಲ್ಲೆಲ್ಲೂ ಬಿರುಸಿನ ಚಟುವಟಿಕೆ, ದೆಹಲಿಗೆ ನಾಯಕರ ಓಡಾಟ, ಅವರ ಹಿಂದೆ ಹಿಂಬಾಲಕರ ಪರದಾಟ.
* * *
ರಾಜ್ಯದ ಪ್ರಮುಖ ಪಕ್ಷಗಳು ವಿಶೇಷವಾಗಿ ಅಧಿಕಾರದ ಗದ್ದುಗೆ ಹಿಡಿಯುವ ʻಭರವಸೆʼ ಇಟ್ಟುಕೊಂಡಿರುವ, ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೇಟ್ ಆಕಾಂಕ್ಷಿಗಳ ವರಸೆ, ಈ ಪಕ್ಷಗಳತ್ತ ವಲಸೆ ಜೋರಾಗಿದೆ. ತಮ್ಮದೇನಿದ್ದರೂ ‘ಕಿಂಗ್ ಮೇಕರ್’ ಪಾತ್ರ, ತಮ್ಮನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎಂದು ಗಟ್ಟಿಯಾಗಿ ನಂಬಿರುವ ಜಾತ್ಯಾತೀತ ಜನತಾ ದಳವೂ ಈ ಟಿಕೇಟ್ ಬೇಡಿಕೆ, ಒತ್ತಡಗಳಿಂದ ಹೊರತಾಗಿಲ್ಲ. ಒಟ್ಟಾರೆ ಈ ಎಲ್ಲ ಪಕ್ಷಗಳ ಒಳಗೆ ಭಾರಿ ಭಿನ್ನಮತ, ಬಂಡಾಯದ ಸ್ಪೋಟಗಳು ನಡೆಯುತ್ತಲೇ ಇವೆ. ಒಂದು ಪಕ್ಷದಲ್ಲಿ ಟಿಕೇಟ್ ಸಿಗದಿದ್ದರೆ ಇನ್ನೊಂದು ಪಕ್ಷದತ್ತ ಮುಖ ಮಾಡುವವರಿಗೂ ಕಡಿಮೆ ಏನಿಲ್ಲ. ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ, ಕೆಲವರನ್ನು ಗುರಿಯಾಗಿಸಿ ಸೆಳೆಯುವ ಕಸರತ್ತು ಆಂತರಿಕವಾಗಿ, ಬಹಿರಂಗವಾಗಿಯೂ ನಡೆದಿವೆ. ಪಕ್ಷಗಳ ಒಳಗೇ ಪೈಪೋಟಿ, ಗುದ್ದಾಟಗಳೂ ನಡೆದಿವೆ. ಕಣಕ್ಕಿಳಿದಾಗ ನಡೆಯುವ ಹೋರಾಟಕ್ಕಿಂತಲೂ ಅದರ ಪೂರ್ವಭಾವಿಯಾಗಿ ನಡೆಯುತ್ತಿರುವ ಬಡಿದಾಟಗಳು ರೋಚಕವಾಗಿವೆ. ಇದು ಬಹುತೇಕ ಈ ಬಣ ಬಡಿದಾಟದ ರಾಜಕೀಯ ಯಾವ ಪಕ್ಷವನ್ನು ಬಿಟ್ಟಿಲ್ಲ. ಇವರ ಬಡಿದಾಟಗಳನ್ನು ನಿಯಂತ್ರಣಕ್ಕೆ ತರುವ, ಸರಿಪಡಿಸುವ ಕೆಲಸದಲ್ಲಿ ಆ ಪಕ್ಷಗಳ ಹೈಕಮಾಂಡ್ ಗಳು ಹೈರಾಣಾಗಿ ಹೋಗುತ್ತಿವೆ.
* * *
ʻಅಭ್ಯರ್ಥಿಗಳ ಆಯ್ಕೆಗೆ ಮಾನದಂಡಗಳೇನು?ʼ ಎಂಬ ಪ್ರಶ್ನೆಗೆ ʻಗೆಲ್ಲುವ ಸಾಮರ್ಥ್ಯʼ ಎನ್ನುತ್ತಾರೆ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್. ಗೆಲ್ಲುವ ಸಾಮರ್ಥ್ಯವನ್ನು ಅಳೆಯುವ ಮಾನದಂಡ ಏನು ಎಂಬುದಕ್ಕೆ ಬಹಿರಂಗವಾಗಿ ಅವರು ಉತ್ತರಿಸಿಲ್ಲ. ಆದರೆ ಟಿಕೇಟ್ ಗೆ ಅರ್ಜಿ ಹಾಕಿ ಇಂಟರ್ ವ್ಯೂ ಗೆ ಹಾಜರಾದ ಆಕಾಂಕ್ಷಿಯೊಬ್ಬರ ಹೇಳಿಕೆಯಂತೆ ʻನಿಮ್ ಹತ್ರ ಎಷ್ಟು ಕೋಟಿಗಳು ಇದೇರೀ? ಪಕ್ಷದ ಫಂಡ್ ಗೆ ಎಷ್ಟು ಕೊಡ್ತೀರಿ? ಎಲೆಕ್ಷನ್ ನಲ್ಲಿ ಎಷ್ಟು ಖರ್ಚು ಮಾಡ್ತೀರಿ?ʼ. ಇದು ಆಯ್ಕೆಗೆ ಒಂದು ಮುಖ್ಯ ಮಾನದಂಡ! ಸಾರ್ವಜನಿಕ ರಂಗದಲ್ಲಿ ಅವರ ಸೇವೆ ಅನುಭವ ಮತ್ತು ಆ ಪಕ್ಷಕ್ಕೆ, ಅದರ ತತ್ವಕ್ಕೆ ಇರುವ ನಿಷ್ಠೆಗೆ ಜಾಗ ಎಲ್ಲಿ? ರಾಜ್ಯದ ಕ್ಷೇತ್ರಗಳ ಸ್ಥಿತಿಗತಿ, ಅಭ್ಯರ್ಥಿಗಳ ಬಲಾಬಲಗಳ ಬಗ್ಗೆ ನಾಲ್ಕು ಸುತ್ತಿನ ಸರ್ವೇ ಮಾಡಿಸಿದ್ದಾರಂತೆ ಕೆ.ಪಿ.ಸಿ.ಸಿ. ಅಧ್ಯಕ್ಷರು. ನಿಜ ಇದೂ ಕೂಡ ಖರ್ಚಿನ ಬಾಬ್ತೇ! ಇದು ಕೇವಲ ಈ ಪಕ್ಷಕ್ಕೆ ಮಾತ್ರ ಸೀಮಿತವಲ್ಲ. ಬಹುತೇಕ ಪಕ್ಷಗಳು ಈ ಸರ್ವೇ ಏಜನ್ಸಿಗಳನ್ನೇ ನಂಬಿ ಸ್ಪರ್ದೆಗೆ ಇಳಿಯಲಿವೆ. ಹಿಂದೆ ನಾಯಕತ್ವ ನೆಲಮೂಲದ ಅನುಭವಗಳಿಂದ ನಿರ್ಧರಿಸುತ್ತಿತ್ತು. ಈಗ ಆಧುನಿಕ ಮಾಹಿತಿ ತಂತ್ರಜ್ಞಾನ, ಏಜನ್ಸಿಗಳ ಸಮೀಕ್ಷೆ. ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ, ಚುನಾವಣಾ ಪ್ರಚಾರದ ವಿಷಯಗಳನ್ನು ನಿರ್ಧರಿಸುವಲ್ಲಿ ಇದೇ ಏಜನ್ಸಿಗಳ ಸೂಚನೆಗಳೇ ನಿರ್ಧಾರಕ ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಅಭ್ಯರ್ಥಿಗಳು ಈಗ ಆಯ್ಕೆಯಾದರೂ ಕೊನೆ ಗಳಿಗೆಯಲ್ಲಿ ದಿಢೀರನೇ ಬದಲಾದರೂ ಆಶ್ಚರ್ಯವೇನಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನಂತಹವರೇ ಇನ್ನು ಸ್ಪರ್ದಿಸುವ ಕ್ಷೇತ್ರವೊಂದನ್ನು ಖಚಿತವಾಗಿ ಆಯ್ಕೆ ಮಾಡಲು ಆಗಿಲ್ಲ ಎನ್ನುವುದೇ ಸಂದರ್ಭದ ವ್ಯಂಗ್ಯ. ಕೋಲಾರ ಎಂದಿದ್ದ ಅವರು ಈಗ ಸರ್ವೆ, ರೀ ಸರ್ವೆ, ಹೊರಗಿನ ವಾತಾವರಣ, ಒಳ ಬಂಡಾಯಗಳ ಬೇಗುದಿಯನ್ನು ಎದುರಿಸುತ್ತಾ, ಹೊಸ ಕ್ಷೇತ್ರಗಳತ್ತ ನೋಡುತ್ತಾ ಬಿಜೆಪಿ ಪಕ್ಷದ ನಾಯಕರ ಲೇವಡಿಗಳಿಗೆ ಆಹಾರವಾಗಿದ್ದಾರೆ.
* * *
ಬಂಡಾಯ, ಬಾಣ ಬಿರುಸುಗಳಿಗೆ ಅತೀ ಹೆಚ್ಚು ಒಳಗಾಗುತ್ತಿರುವುದು ಬಿಜೆಪಿ ಅನಿಸುತ್ತಿದೆ.
ಇದನ್ನು ಓದಿ: ನಾನು ನಿಂತ ನೀರಲ್ಲ, ಹರಿಯೋ ನೀರು : ಬಿಜೆಪಿ ವಿರುದ್ದ ಅಸಮಾಧಾನ ಹೊರಹಾಕಿದ ಸಚಿವ ವಿ.ಸೋಮಣ್ಣ
ಆಶ್ಚರ್ಯ ಎನ್ನುವಂತೆ ಅನಾದಿ ಕಾಲದಿಂದಲೂ ತಾವು ಗುರು ಶಿಷ್ಯರು ಎನ್ನುತ್ತಿದ್ದ ಸಚಿವ ವಿ. ಸೋಮಣ್ಣ ಮತ್ತು ಬಿ.ಎಸ್.ಯಡಿಯೂರಪ್ಪ ನವರ ನಡುವೆ ನಡೆದಿರುವ ಬಿರುಸಿನ ವಾಗ್ವಾದಗಳು, ಇನ್ನೊಂದು ಮಗ್ಗುಲಲ್ಲಿ ಪರಸ್ಪರ ಕೊಡುತ್ತಿರುವ ಒಳ ಗುದ್ದುಗಳು. ಈ ಕದನದ ಮೂಲ ಕೇಂದ್ರ ವಸ್ತುಗಳು ಅವರ ಮಕ್ಕಳೇ! ಲಿಂಗಾಯತರ ಪ್ರಶ್ನಾತೀತ ನಾಯಕರಾಗಿ ಬಿ.ಎಸ್.ವೈ. ಮಾತ್ರವೇ ಇರಬೇಕೆಂದು, ಅವರ ನಂತರದಲ್ಲಿ ಆ ಸ್ಥಾನವನ್ನು ಅವರ ಮಗ ಬಿ ವೈ ವಿಜಯೇಂದ್ರನಿಗೆ ಸಿಕ್ಕಬೇಕೆಂದೂ ಬಯಸುತ್ತಿದ್ದಾರೆ ಅವರು. ʻಆ ಕಾರಣದಿಂದ ನನ್ನನ್ನು ನನ್ನ ಮಗನನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆʼ ಎನ್ನುವುದು ಸಚಿವ ಸೋಮಣ್ಣನವರ ಆರೋಪ. ತಮ್ಮ ಉಸ್ತುವಾರಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಎಲ್ಲ ವ್ಯವಹಾರಗಳಲ್ಲೂ ವಿಜಯೇಂದ್ರ ಮೂಗು ತೂರಿಸುತ್ತಿದ್ದಾನೆ ಮತ್ತು ಹನೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿಸಲು ತನ್ನ ಮಗ ಅರುಣನಿಗೆ ಅಡ್ಡಿಯಾಗುತ್ತಿದ್ದಾನೆ ಎನ್ನುವ ಆರೋಪ ಸೋಮಣ್ಣನವರದು. ಒಂದು ಹಂತದಲ್ಲಿ ʻಯಡಿಯೂರಪ್ಪನವರಿಗೆ ಯಡಿಯೂರಪ್ಪನವರೇ ಸಾಟಿ, ಸೋಮಣ್ಣನಿಗೆ ಈ ಸೋಮಣ್ಣನೇ ಸಾಟಿ. ನಾನು ಎಲೆಕ್ಷನ್ ಸ್ಟ್ರ್ಯಾಟಜಿಸ್ಟ್ ಗೊತ್ತಾʼ ಅಂತಾನೂ ಸೋಮಣ್ಣ ನವರು ಗುಟುರು ಹಾಕಿದ್ದಾರೆ. ಈ ಪ್ರಶ್ನೆ ಇತ್ಯರ್ಥವಾಗದಿದ್ದರೆ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ವಲಸೆ ಹೋಗಲೂ ಸಿದ್ಧವಾಗಿದ್ದಾರೆ. ಕಳೆದ ವರ್ಷದಿಂದಲೂ ಆ ಸಿದ್ಧತೆ ಮತ್ತು ಪ್ರಮುಖ ಕೈ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ವಿವಾದ ಅಂತಿಮವಾಗಿ ಕೇಂದ್ರದ ಅಮಿತ್ ಶಾ ಅವರಿಗೂ ತಲುಪಿದೆ. ದುಡುಕಿ ಯಾವುದೇ ತೀರ್ಮಾನ ಮಾಡದಂತೆ, ಚುನಾವಣೆ ಮುಗಿಯಲಿ ಎಂದು ಶಾ ಹೇಳಿದ್ದಾರೆ ಎನ್ನುವ ಸುದ್ದಿಯೂ ಇದೆ. ಬಿ.ಎಸ್.ವೈ. ಪ್ರಾಬಲ್ಯವನ್ನು ದುರ್ಬಲಗೊಳಿಸಲು ಬಿಜೆಪಿ ಹೈಕಮಾಂಡ್ ಸತತವಾಗಿ ಪ್ರಯತ್ನಿಸುತ್ತಿರುವುದು ಇದ್ದೇ ಇದೆ. ಆದರೆ ಬಿ.ಎಸ್.ವೈ. ಹೊರತುಪಡಿಸಿ ಬಿಜೆಪಿ ಗೆಲ್ಲುವುದು ಕೂಡ ಕಷ್ಟ ಸಾಧ್ಯ ಎನ್ನುವ ಲೆಕ್ಕಾಚಾರವು ಇದೆಯಲ್ಲ. ಹಾಗಾಗಿ ಬಿ.ಎಸ್.ವೈ. ಪ್ರಾಬಲ್ಯವನ್ನು ದುರ್ಬಲಗೊಳಿಸುತ್ತಲೇ, ವಿಜಯೇಂದ್ರ ತುಂಬಾ ಪ್ರಾಮುಖ್ಯತೆ ಪಡೆಯದಂತೆಯೂ ನೋಡಿಕೊಳ್ಳುವ ಪ್ರಯತ್ನ ಜೊತೆಯಲ್ಲೇ ನಡೆಯುತ್ತಿರುವುದು ಸುಳ್ಳೇನಲ್ಲ.
ಬಿ.ಎಸ್.ಯಡಿಯೂರಪ್ಪನವರ ಮೇಲೆ ಹರಿಹಾಯುವಂತೆ ಸಿ.ಟಿ.ರವಿ ಅವರನ್ನು ಬಿಟ್ಟಿರುವುದು ಅದೇ ಹೈಕಮಾಂಡ್ ಎನ್ನುವುದೂ ಗುಟ್ಟೇನಲ್ಲ. ಒಂದು ಪ್ರಸಂಗದಲ್ಲಿ ಸಿ.ಟಿ.ರವಿ ಆಡಿದ ಮಾತು ಆತ ಲಿಂಗಾಯತರ ವಿರೋಧಿ ಎನ್ನುವುದು ಬಿ.ಎಸ್.ವೈ. ಒಳಗೊಂಡು, ವೀರಶೈವ ಲಿಂಗಾಯತ ಸಂಘಟನೆಗಳ ಖಂಡನೆಗೆ ಒಳಗಾಗಿರುವುದನ್ನೂ ಕಾಣುತ್ತೇವೆ. ಆಸಕ್ತಿಕರ ವಿಷಯವೆಂದರೆ ಶಾಸಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಅನವರತ ಆತ್ಮೀಯನಾಗಿದ್ದ ಲಿಂಗಾಯತ ನಾಯಕ ತಮ್ಮಯ್ಯ ನವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವುದು! ಕ್ಷೇತ್ರದಲ್ಲಿ ರವಿಯವರ ವಿರುದ್ಧ ಅತೃಪ್ತಿ ಅಲೆ ಎದ್ದಿರುವುದು. ಲಿಂಗಾಯತರ ಬೆಂಬಲ ಕಳೆದುಕೊಳ್ಳುವ ಸ್ಪಷ್ಟ ಸೂಚನೆ ದೊರೆತಿರುವ ರವಿ ಕಂಗಾಲಾದಂತೆ ಕಾಣುತ್ತಿದ್ದಾರೆ. ಮಂಡ್ಯದಲ್ಲಿ ಬಿರುಗಾಳಿ ಬೀಸಲು ಬೀಸಣಿಕೆ ಹಿಡಿದು ಮೋದಿ, ಶಾ ಗಳು ಓಡಾಡುತ್ತಿರುವಾಗಲೇ ಕಾಂಗ್ರೆಸ್ ಜೆಡಿ(ಎಸ್) ಮೈತ್ರಿ ಸರಕಾರದ ಪತನದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಮದ್ದೂರು ಉದ್ಯಮಿ ಕದಲೂರು ಉದಯ್ ಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಗಳಿಸಲು ಬೇರೆ ಪಕ್ಷಗಳಿಗೆ ಆಪರೇಷನ್ ಕಮಲ ಮಾಡಬೇಕೆಂದಿರುವ ಬಿಜೆಪಿಯ ಮೇಲೆ ಆಪರೇಷನ್ ಕೈ ಮಾಡುವ ಸುದ್ದಿಗಳೂ ಬರುತ್ತಿವೆ! ಇದರ ವಿಶೇಷವೆಂದರೆ ಕಾಂಗ್ರೆಸ್ ತೊರೆದು ಹೋಗಿದ್ದ ಹಲವು ʻಬಾಂಬೆ ಬಾಯ್’ ಗಳನ್ನು ಮತ್ತೇ ಕಾಂಗ್ರೆಸ್ ಗೆ ವಾಪಾಸು ತರುವುದು!
ಇದನ್ನು ಓದಿ: ನಾನು ಬಿಜೆಪಿ ಶಾಸಕ, ನನಗೆ ಇತಿಮಿತಿ ಗೊತ್ತಿದೆ : ಸಚಿವ ವಿ.ಸೋಮಣ್ಣ
* * *
ಕಾಂಗ್ರೆಸ್ ನಾಯಕ ಎ.ಮಂಜು(ವಾಲೆ ಮಂಜು) ಕಾಂಗ್ರೆಸ್ ತೊರೆದು ಜೆ.ಡಿ(ಎಸ್) ಗೆ ಹೋದದ್ದು, ಜೆ.ಡಿ(ಎಸ್) ತೊರೆದು ಕಾಂಗ್ರೆಸ್ ಗೆ ಹೋಗಲು ಶಾಸಕ ಶಿವಲಿಂಗೇಗೌಡ ಹೆಜ್ಜೆ ಹಾಕುತ್ತಿರುವುದು, ಹಾಗೇ ಎಸ್.ಆರ್ ಶ್ರೀನಿವಾಸ(ವಾಸು), ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವುದು ರನ್ನಿಂಗ್ ನ್ಯೂಸ್ ಗಳು.
ಇದನ್ನು ಓದಿ: ದೇವೇಗೌಡ-ಕುಮಾರಸ್ವಾಮಿ ಹೆಸರು ಹೇಳಿದರೆ ಓಟ್ ಬರಲ್ಲ: ಶಾಸಕ ಶಿವಲಿಂಗೇಗೌಡ
ಅನೇಕ ಕ್ಷೇತ್ರಗಳಲ್ಲಿ ಟಿಕೇಟ್ ಆಕಾಂಕ್ಷಿಗಳು ಬಹಿರಂಗ ಬಡಿದಾಟಕ್ಕೆ ಇಳಿದಿರುವುದೂ ಕಡಿಮೆಯೇನಲ್ಲ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಟಿಕೇಟ್ ಕೈ ತಪ್ಪುವ ಭೀತಿಯಿಂದ ಬಹಿರಂಗ ಬಂಡಾಯ ಎದ್ದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ವನ್ಯಮೃಗಗಳ ಧಾಳಿ ನಡೆದ ಹಳ್ಳಿಗೆ ಹೋದಾಗ ಅವರ ಮೇಲೆ ನಡೆದ ಹಲ್ಲೆಯ ಹಿಂದೆ ತನ್ನ ಪಕ್ಷದವರೇ ಆದ ವಿರೋಧಿ ಬಣ ಇರುವುದನ್ನು ಶಂಕಿಸಿದ್ದಾರೆ. ಇನ್ನು ಕೊರಟಗೆರೆ ಕ್ಷೇತ್ರದ ಇಬ್ಬರು ಟಿಕೇಟ್ ಆಕಾಂಕ್ಷಿಗಳ ನಡುವೆ (ಬಿ.ಹೆಚ್.ಅನಿಲ್ ಕುಮಾರ್, ಡಾ.ಲಕ್ಷ್ಮಿಕಾಂತ್) ನಡು ದಾರಿಯಲ್ಲೇ ಬೆಂಬಲಿಗರೊಂದಿಗೆ ಧಿಕ್ಕಾರಗಳು ಮೊಳಗಿ, ಕೈ ಕೈ ಮಿಲಾಯಿಸಿ ಬಲ ಪ್ರದರ್ಶನ ನಡೆಸಿದ್ದಾರೆ. ಒಂದು ಕ್ಷೇತ್ರದಲ್ಲಂತೂ ಇಂತಹ ಪ್ರಸಂಗದಿಂದ ಬೇಸತ್ತ ಯಡಿಯೂರಪ್ಪನವರು ಸಂಕಲ್ಪ ಯಾತ್ರೆ ಬರ್ಖಾಸ್ತು ಮಾಡಿ ವಾಪಾಸ್ಸಾಗಿದ್ದಾರೆ. ಸಿ.ಟಿ. ರವಿ ಧಿಕ್ಕಾರದ ಘೋಷಣೆಗಳನ್ನು ಉಂಡಿದ್ದಾರೆ.
* * *
ಇನ್ನು ಅಪ್ಪ ಮಕ್ಕಳ ಪಕ್ಷ ಎಂದು ಕರೆಸಿಕೊಳ್ಳುತ್ತಿರುವ ಜೆ.ಡಿ(ಎಸ್) ಪಕ್ಷ ಪಂಚರತ್ನ ಯಾತ್ರೆಯ ಬಳಿಕ ತನ್ನ ಸ್ಥಿತಿಯನ್ನು ಸುಧಾರಿಸಿಕೊಂಡಿದೆ ಎನ್ನುವ ಸಿಹಿ ವಾರ್ತೆ ಬರುತ್ತಿರುವಾಗಲೇ ಸಂಸಾರದೊಳಗಿನ ಸಂಗತಿಯೊಂದು ದಳಪತಿಗಳಲ್ಲಿ ಕಸಿವಿಸಿ ಸೃಷ್ಟಿಸುತ್ತಿದೆ. ಜೆಡಿ(ಎಸ್) ಅಪ್ಪಮಕ್ಕಳ ಪಕ್ಷ ಎನ್ನುವ ಅದರ ಐಡೆಂಟಿಟಿ ಪುನಃ ಸೊಸೆಯವರೆಗೆ ವಿಸ್ತರಿಸ ಬಯಸಿರುವುದೇ ಹೊಸ ಸಂಘರ್ಷಕ್ಕೆ ಕಾರಣ. ಹಾಸನ ಕ್ಷೇತ್ರದ ಟಿಕೇಟ್ ಅನ್ನು ಕುಮಾರಸ್ವಾಮಿಯವರು ಸಾಮಾನ್ಯ ಕಾರ್ಯಕರ್ತನೊಬ್ಬರಿಗೆ ಕೊಡಬೇಕು ಎಂದಿದ್ದರಂತೆ. ಆದರೆ ಆ ಟಿಕೇಟ್ ತನಗೇ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ನವರ ಪತ್ನಿ ಭವಾನಿಯವರು ತನಗೇ ಸಿಗಬೇಕು ಎಂದು ಪಟ್ಟು ಹಿಡಿದಿರುವುದು ಸಂಸಾರದಲ್ಲಿ ಬಿಕ್ಕಟ್ಟು ಸೃಷ್ಟಿಸಿದೆ. ಈ ಕಿತ್ತಾಟ ಕಂಡ ಆಕಾಂಕ್ಷಿಯೊಬ್ಬ ಆ ಪಕ್ಷ ತೊರೆದು ಹೊರ ನಡೆವ ಸುದ್ದಿಯೂ ಇದೆ.
* * *
ಸಂಡೂರು ಕ್ಷೇತ್ರದಲ್ಲಿ ಸ್ಪರ್ದಿಸಲು ಸಿದ್ಧತೆ ಆರಂಭಿಸಿದ್ದ ಸಚಿವ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿಸಿಕೊಂಡ ಸರ್ವೇ!
ರಾಮುಲುಗೆ ಸಂಡೂರು ಸುಖದಾಯಕ ಅಲ್ಲ ಎಂದು ಹೇಳಿದೆಯಂತೆ!
* * *
ಹಾಗೇ ಮೂರನೆಯ ಬಾರಿ ಶಾಸಕರಾಗಿರುವ ಹೋಟೆಲ್ ಉದ್ಯಮಿ ಎಸ್.ಎನ್.ಸುಬ್ಬಾರೆಡ್ಡಿಯವರು ಮತ್ತೇ ಅಭ್ಯರ್ಥಿಯಾಗಲು ಸಿದ್ಧವಾಗುತ್ತಿರುವಾಗ ಮತ್ತೊಬ್ಬ ಟಿಕೇಟ್ ಆಕಾಂಕ್ಷಿ ಮಾಜಿ ಶಾಸಕ ಸಂಪಂಗಿಯವರು ಟಿಕೇಟ್ ಸಿಗದಿದ್ದರೆ ಸ್ವತಂತ್ರ ಬಂಡಾಯ ಅಭ್ಯರ್ಥಿಯಾಗುವುದು ಖಚಿತ ಎನ್ನಲಾಗುತ್ತಿದೆ. ಬಹುಶಃ ಬೇಡಿಕೆಗಳ ʻಮೌಲ್ಯಯುತ ಮಾತು ಕತೆಗಳ ಬಳಿಕ ಅದೆಲ್ಲಾ ಸರಿ ಹೋಗಬಹುದು ಎನ್ನಲಾಗುತ್ತಿದೆ. ಹೀಗೆ ಅನೇಕರಿಗೆ ಈ ಚುನಾವಣೆ ಮೌಲ್ಯವರ್ಧನೆ, ವರ್ಚಸ್ಸಿನ ಅಭಿವೃದ್ದಿ, ಸಮಾಜ ಸೇವೆಗೆ ಹಾದಿ ಮಾಡಿಕೊಡಬಹುದಾಗಿದೆ.
ಈ ಎಲ್ಲಾ ಸಂಗತಿಗಳು ಇಂದಿನ ರಾಜಕಾರಣ ಸಾಗುತ್ತಿರುವ ದಾರಿಯ ಸ್ಪಷ್ಟ ಸೂಚಕಗಳಾಗಿವೆ. ಇವುಗಳ ನಡುವೆ ಜನರ ವಿವೇಕ ಹೇಗಿರುತ್ತೇ? ಕೋಮುವಾದದಿಂದ ಮುಕ್ತವಾಗಬೇಕಾಗಿರುವ ಕರ್ನಾಟಕ ಭ್ರಷ್ಟಾಚಾರ, ಅನೈತಿಕ ರಾಜಕಾರಣ ಮತ್ತು ಸಂದರ್ಭ ಸಾಧಕತನದಿಂದಲೂ ಮುಕ್ತವಾಗಬೇಕಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ