ಬೆಂಗಳೂರು: ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸಂಚರಿಸಿದ ಮಹಿಳೆಯರ ಟಿಕೆಟ್ ಮೌಲ್ಯ ₹1,000 ಕೋಟಿ ದಾಟಿದೆ. ನಿಗಮಗಳು ನಷ್ಟಕ್ಕೆ ಸಿಲುಕದಂತೆ ಮಾಡಲು ಪ್ರತಿ ತಿಂಗಳು ಮರು ಪಾವತಿಗೆ ಆರ್ಥಿಕ ಇಲಾಖೆ ಸಹಮತ ಸೂಚಿಸಿದೆ.
ಜೂನ್-11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಲ್ಲಿಂದ ಆ.20ರ ವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲೂಕೆಆರ್‌ಟಿಸಿ,ಕೆಕೆಆರ್‌ಟಿಸಿ ನಿಗಮಗಳ ಬಸ್‌ಗಳಲ್ಲಿ 78.21 ಕೋಟಿ ಜನರು ಪ್ರಯಾಣಿಸಿದ್ದು, ಅದರಲ್ಲಿ 43.03 ಕೋಟಿ ಮಹಿಳೆಯರು. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ₹1,000.37 ಕೋಟಿ ಆಗಿದೆ.
ಇದನ್ನೂ ಓದಿ:ಒಂದು ತಿಂಗಳು ಪೂರೈಸಿದ ಶಕ್ತಿ ಯೋಜನೆ : ನಾಲ್ಕು ನಿಗಮಗಳ ಸಾರಿಗೆಯಲ್ಲಿ ಪ್ರಯಾಣಿಸಿದವರೆಷ್ಟು?
ಶಕ್ತಿ ಯೋಜನೆ ಜಾರಿಯಾಗುವವರೆಗೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ನಿತ್ಯ 84.5 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಕ್ಕಿದ ಬಳಿಕ ನಿತ್ಯ ಪ್ರಯಾಣಿಸುವವರ ಸರಾಸರಿ ಪ್ರಮಾಣ 1.10 ಕೋಟಿಗೆ ಏರಿದೆ. ಅದರಲ್ಲಿ 60 ಲಕ್ಷದಷ್ಟು ಶೇ.55 ಮಹಿಳೆಯರು. ನಿತ್ಯ ಮಹಿಳೆಯರು ಓಡಾಡಿದ ಟಿಕೆಟ್‌ಗಳ ಮೈಲ್ಯ ₹14 ಕೋಟಿಯಾಗಿದೆ.
ಜೂನ್ ಕಂತು ಬಿಡುಗಡೆ:
ಶಕ್ತಿ ಯೋಜನೆ ಆರಂಭಗೊಂಡ ಜೂನ್ ತಿಂಗಳ 20 ದಿನಗಳಿಗೆ ಸಂಬಂಧಿಸಿದಂತೆ ಸರ್ಕಾರವು ₹125.47 ಕೋಟಿ ಬಿಡುಗಡೆ ಮಾಡಿದೆ. ಇದು ಆ ತಿಂಗಳಲ್ಲಿ ಈ ಯೋಜನೆಗೆ ಆದ ವೆಚ್ಚದ ಅರ್ಧದಷ್ಟು ಆಗಿದೆ. ಜುಲೈನಿಂದ ನವೆಂಬರ್‌ವರೆಗೆ ಪ್ರತಿ ತಿಂಗಳು ಆಡಳಿತ ಇಲಾಖೆಯಿಂದ ಸಾರಿಗೆ ಸಂಸ್ಥೆಗಳಿಗೆ ₹294.74 ಕೋಟಿಯನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸಮ್ಮತಿ ಸೂಚಿಸಿದೆ. ತಿಂಗಳಿಗೆ ಮಹಿಳೆಯರು ಓಡಾಡಿದ ಟಿಕೆಟ್ ಮೌಲ್ಯ ಅಂದಾಜು ₹450 ಕೋಟಿ ಟಿಕೆಟ್ ಆಗಲಿದ್ದು, ಮರುಪಾವತಿ ಸುಮಾರು ₹155 ಕೋಟಿ ಕಡಿಮೆಯಾಗಲಿದೆ.
ಶಕ್ತಿ ಯೋಜನೆ ಜಾರಿಗೆ ಬಂದಿದ್ದರಿಂದ ಮಹಿಳೆಯರಿಗೆ ಹಿಂಜರಿಕೆ ಇಲ್ಲದೇ ಹೋಗಬೇಕಾದಲ್ಲಿಗೆ ಹೋಗುವ ಶಕ್ತಿ ಬಂದಿದೆ. ಈ ಯೋಜನೆಯ ಬಗ್ಗೆ ಕೆಲವರು ಎಷ್ಟೇ ಅಪಪ್ರಚಾರ ಮಾಡಿದರೂ ಯಶಸ್ವಿಯಾಗಿ ನಡೆಯುತ್ತಿದೆ. ಉಚಿತ ಪ್ರಯಾಣದ ಮೊತ್ತವನ್ನು ಸರ್ಕಾರವು ಸಾರಿಗೆಯ ನಾಲ್ಕು ನಿಗಮಗಳಿಗೆ ಪಾವತಿ ಮಾಡಲಿದೆ. ಈಗಾಗಲೇ ಮೊದಲ ಕಂತು ಬಿಡುಗಡೆ ಮಾಡಲಾಗಿದೆ. ನವೆಂಬರ್‌ವರೆಗೆ ಪ್ರತಿ ತಿಂಗಳು ₹294.74 ಕೋಟಿ ಪಾವತಿಸಲು ಒಪ್ಪಿಗೆ ಸಿಕ್ಕಿದೆ. ಸಾಲದ ಸುಳಿಯಲ್ಲಿರುವ ನಿಗಮಗಳು ಮತ್ತೆ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.