– ಪರೀಕ್ಷೆ ಪೂರ್ವ ಉಪನ್ಯಾಸಕರ ಭೇಟಿ ಮಾಡಬೇಕಾದರೆ ಟಿಕೆಟ್ ಪಡೆದು ಪ್ರಯಾಣ
– ಪರೀಕ್ಷೆಗೆ ಮಾತ್ರ ಹಳೆ ಬಸ್ ಪಾಸ್ ಜೊತೆ ಪ್ರವೇಶಪತ್ರ ಇದ್ದರೆ ಉಚಿತ ಪ್ರಯಾಣ
ಬೆಂಗಳೂರು: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಪರೀಕ್ಷೆ ನಡೆಸಲು ನಿರ್ಧರಿಸಿರುವ ಸರಕಾರ, ಕಾಲೇಜಿಗೆ ಹೋಗಿ ಶಿಕ್ಷಕರಿಂದ ಸಲಹೆ ಪಡೆಯಲು ಸೂಚಿಸಿದೆ. ಇದರ ಜತೆ ಬಸ್ ಟಿಕೆಟ್ ಪಡೆದು ಪ್ರಯಾಣ ಮಾಡಲು ಸೂಚಿಸಿರುವುದು ವಿದ್ಯಾರ್ಥಿಗಳಿಗೆ ತಲೆನೋವು ತಂದಿದೆ.
ಕೊರೊನಾ ಲಾಕ್‌ಡೌನ್‌ನಿಂದ ಎದುರಾಗಿದ್ದ ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಿರುವ ಪೋಷಕರು, ಪ್ರತಿ ದಿನ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪಯಣ ಮಾಡಲು 50 ರಿಂದ 100, 120 ರೂ. ಬಸ್ ಟಿಕೆಟ್ ಹಣವನ್ನು ನೀಡಲು ಕಷ್ಟವಾಗುತ್ತಿದ್ದು, ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿಗಳಿಗೆ ಟಿಕೆಟ್ ದುಬಾರಿ:
ಪ್ರೌಢಶಾಲೆಗಳ ಬಾಲಕಿಯರಿಗೆ 500, ಬಾಲಕರಿಗೆ 700, ಪಿಯುಸಿ ವಿದ್ಯಾರ್ಥಿಗಳಿಗೆ 1,050 ಹಾಗೂ ಪದವಿ ವಿದ್ಯಾರ್ಥಿಗಳಿಗೆ 1,260 ರೂ.ಗಳಿಗೆ ಬಿಎಂಟಿಸಿ ಒಂದು ಶೈಕ್ಷಣಿಕ ವರ್ಷದ ಪೂರ್ಣ ಭಾಗಕ್ಕೆ ಪಾಸ್ ನೀಡಲಾಗುತ್ತಿತ್ತು.ಅದೇ ರೀತಿ ಕೆಎಸ್ಆರ್ಟಿಸಿ ಪಾಸ್‌ನ ದರ (10 ತಿಂಗಳಿಗೆ) ಪ್ರಾಥಮಿಕ ಶಾಲೆ 150 ರೂ., ಪ್ರೌಢಶಾಲೆ ಬಾಲಕರು 750 ರೂ., ಪ್ರೌಢಶಾಲೆ ಬಾಲಕಿಯರು 550 ರೂ., ಪಿಯುಸಿ/ ಪದವಿ/ ಡಿಪ್ಲೊಮಾ 1,050 ರೂ., ವೃತ್ತಿಪರ ಕೋರ್ಸ್‌ಗಳು 1,550 ರೂ., ಸಂಜೆ ಕಾಲೇಜು/ ಪಿಎಚ್‌ಡಿ 1,350 ರೂ., ಐಟಿಐ (12 ತಿಂಗಳಿಗೆ) 1,310 ರೂ.,. ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ 150 ರೂ. (ಐಟಿಐಗೆ 160 ರೂ.).ದರ ಇತ್ತು.
ಆದರೆ ಈಗ ವಿದ್ಯಾರ್ಥಿಗಳಿಗೆ ಪಾಸ್ ಅವಧಿ ಮುಗಿದ ಕಾರಣ ಕೇವಲ 20 ದಿನಗಳಿಗೆ 2000ಕ್ಕೂ ಹೆಚ್ಚು ಹಣವನ್ನು ನೀಡುವ ಅನಿವಾರ್ಯತೆ ಎದುರಾಗಿದ್ದು, ವಿದ್ಯಾರ್ಥಿಗಳಿಗೆ ಬಹಳಷ್ಟು ದುಬಾರಿಯಾಗಿದೆ.
ಆದೇಶವಿಲ್ಲ: ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಬಸ್ ಪಾಸ್ ಹಾಗೂ ಪರೀಕ್ಷೆಯ ಗುರುತಿನ ಚೀಟಿ ತಂದರೆ ಮಾತ್ರ ಉಚಿತ ಎಂದು ಆದೇಶವಿದೆ. ಪರೀಕ್ಷೆಯ ಮೊದಲು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಪಯಣಕ್ಕೆ ಯಾವುದೇ ಸೂಚನೆಗಳಿಲ್ಲ, ಆದೇಶವೂ ಇಲ್ಲ. ಆದ್ದರಿಂದ ಟಿಕೆಟ್ ಪಡೆದುಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ ಬಸ್ ಕಂಡಕ್ಟರ್‌ಗಳು.
ಹೊಸ ಪಾಸ್ ನೀಡಿ: ಟಿಕೆಟ್‌ಗೆ ಹೆಚ್ಚು ಹಣ ನೀಡಬೇಕಾಗಿರುವುದರಿಂದ ನಮಗೆ ಹೊಸ
ವಿದ್ಯಾರ್ಥಿ ಪಾಸ್ ನೀಡಿ, ಕೊರೊನಾ ಇಲ್ಲದಿದ್ದರೆ ಈ ಸಮಯಕ್ಕೆ ನಮಗೆ ಪರೀಕ್ಷೆ ಮುಗಿಯುತ್ತಿತ್ತು. ಮುಂದಿನ ಶೈಕ್ಷಣಿಕ ವರ್ಷದ ಹೊಸ ಪಾಸ್ ನೀಡಲಾಗುತ್ತಿತ್ತು. ಒಂದು ಕಡೆ ಪಾಸ್ ಇಲ್ಲ, ಉಚಿತ ಪ್ರಯಾಣವು ಇಲ್ಲ. ಮೊದಲೇ ಮನೆಯ ಕಡೆ ಸಮಸ್ಯೆಇದೆ. ಈ ಸಂದರ್ಭದಲ್ಲಿ ಟಿಕೆಟ್ ಹಣ ಪಾವತಿ ಮಾಡಿ ಪ್ರತಿ ದಿನ ಸಂಚರಿಸಲು ಬಹಳ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಪರೀಕ್ಷೆಗೆ ಹಳೇ ಪಾಸ್‌ನಲ್ಲೇ ಪ್ರಯಾಣಿಸಲು ಅನುಮತಿ
ಪದವಿ, ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಳೆಯ ಬಸ್ ಪಾಸ್, ಪರೀಕ್ಷಾ ಪ್ರವೇಶ ಪತ್ರ ತೋರಿಸಿಯೇ KSRTC, BMTC ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ವೃತ್ತಿಪರ ಇಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ಸೆಪ್ಟೆಂಬರ್‌ನಲ್ಲಿ ನಡೆಯಲಿವೆ. ಆದ್ದರಿಂದ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ಅಲ್ಲಿಂದ ಮನೆವರೆಗೆ ಉಚಿತವಾಗಿ ಈ ಬಸ್‌ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನಿಗಮಗಳು ತಿಳಿಸಿವೆ.