ಎನ್ ಚಿನ್ನಸ್ವಾಮಿ ಸೋಸಲೆ
ತೀರ್ಥ ಕುಡಿದು ಬಾಯಿ ಚಪ್ಪರಿಸು ಅವರಿಗೆ ಏನು ಗೊತ್ತು ಬೆವರಿನ ಮಹತ್ವ. ದೇವನೂರರ ಸಾಹಿತ್ಯ ಬೆವರಿನ ಸಾಹಿತ್ಯ. ಅದು ಮಾತನಾಡುತ್ತದೆ – ನಮ್ಮನ್ನು ಮಾತನಾಡಿಸುತ್ತದೆ. ಮಾತೆ ಗೊತ್ತಿಲ್ಲದವರಿಗೆ ಮಾತನಾಡಲು ಸಾಧ್ಯವೇ. ಹೀಗೆ ಮಾತೇ ಗೊತ್ತಿಲ್ಲದವರಿಂದ ನಾವು ಭಾರತ – ಭಾರತೀಯತೆ – ಧರ್ಮ-ಸಂಸ್ಕೃತಿ ಎಂಬ ತಳಬುಡ ಇಲ್ಲದ ಮಾತುಗಳನ್ನು ಕೇಳಬೇಕಾಗಿದೆ. ಇದಕ್ಕೆ ಕಾರಣ ಮಾತನಾಡಬೇಕಾದವರು ಮಾತನಾಡದೆ ಇರುವುದು – ಮಾತನಾಡ ಬಾರದವರು ಯಥೇಚ್ಛವಾಗಿ – ಅಗತ್ಯವು ಮೀರಿ ಮಾತನಾಡುತ್ತಿರುವುದು ಕಾರಣವಾಗಿದೆ.
ಈ ಅರ್ಥಕ್ಕಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೊದಲು ನಮಗೆ ಹೇಳಿದ್ದು ಶಿಕ್ಷಣ – ಶಿಕ್ಷಣ “ಶಿಕ್ಷಣವಂತರಾಗಿ” ಎಂಬ ಮೂಲ ಮಂತ್ರವನ್ನು. ಬಾಬಾಸಾಹೇಬರು “ಶಿಕ್ಷಣ” ಎಂಬ ಅಸ್ತ್ರವನ್ನು ಕೈಯಲ್ಲಿ ಪ್ರಬಲವಾಗಿ ಹಿಡಿದುಕೊಂಡ ಕಾರಣಕ್ಕಾಗಿಯೇ ಪ್ರಪಂಚದ ಮಹಾನ್ ಸಾಧಕರಲ್ಲಿ ಒಬ್ಬರಾದುದ್ದು. ಈ ಸಾಧನೆಗೆ ಬಹುಮುಖ್ಯವಾಗಿ ಅವರು ಕಂಡುಕೊಂಡಿದ್ದು ಕಾಯಕ ಎಂಬ “ಬೆವರನ್ನೇ” ಹೊರತು – ದುಡಿಸಿಕೊಂಡು ಉಂಡವರ ತೀರ್ಥದ ವಾಮಮಾರ್ಗವನ್ನಲ್ಲ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದ ಮೂಲನಿವಾಸಿಗಳ ಸಾಂಸ್ಕೃತಿಕ ಚರಿತ್ರೆ ಕುರಿತು ಹಾಕಿಕೊಟ್ಟ ಬೆವರಿನ ಚರಿತ್ರೆಯ ಮುಂದುವರಿದ ಭಾಗವೇ ದೇವನೂರು ಹಾಗೂ ಇನ್ನಿತರ ಎಲ್ಲಾ ಮೂಲನಿವಾಸಿಗಳ ಬರವಣಿಗೆಯ ಚರಿತ್ರೆಯ ಜೀವಾಳ.
ಕನ್ನಡನಾಡಿನಲ್ಲಿ ಪ್ರಾಚೀನ ಸಾಹಿತ್ಯ – ಮಧ್ಯಕಾಲೀನ ಸಾಹಿತ್ಯ – ಆಧುನಿಕ ಸಾಹಿತ್ಯ – ನವ್ಯ-ನವೋದಯ ಪ್ರಗತಿಪರ ಸಾಹಿತ್ಯ ಎಂಬ ಪ್ರಕಾರಗಳು ಕಾಲಕಾಲಕ್ಕೆ ಅನ್ವಯವಾಗುವಂತೆ ಪ್ರಕಟಗೊಂಡಿವೆ. ಇವು ಕರ್ನಾಟಕದ ಸಾಂಸ್ಕೃತಿಕ “ಒಪ್ಪಿತ” ಚರಿತ್ರೆಯನ್ನು ಶ್ರೀಮಂತಗೊಳಿಸಿವೆ, ನಿಜ. ಆದರೆ “ಬಂಡಾಯ” ಸಾಹಿತ್ಯ ಎಂಬ ಮೂರಕ್ಷರದ ಪದ ಇಡೀ ಕರ್ನಾಟಕದ ಎರಡು ಸಾವಿರ ವರ್ಷಗಳ ಸಾಂಸ್ಕೃತಿಕ ಸಾಹಿತ್ಯ ಚರಿತ್ರೆ ದಿಕ್ಕನ್ನೇ ಬದಲಾಯಿಸಿದ ದಾರಿ ಕರ್ನಾಟಕದ ಸಾಂಸ್ಕೃತಿಕ ದಿಕ್ಕನ್ನೇ ಬದಲಾಯಿಸಿದ ಸಂದರ್ಭ.
ಧಾರ್ಮಿಕ ಮತ್ತು ಪ್ರಭುತ್ವ ಕೇಂದ್ರಿತವಾಗಿ ಬರೆದ ಸಾಹಿತ್ಯದಲ್ಲಿ ರಾಜನೂ ಅವನ ಸಾಮ್ರಾಜ್ಯಗಳು ಆಳಿದವು,- ಅಳಿದವು ಹಾಗೂ ಪುರಾಣ ಮಿಶ್ರಿತವಾಗಿ ವೈಭವದಿಂದ ಸೃಷ್ಟಿಯಾದ ದೇವಾನುದೇವತೆಗಳು ಭಾರತವನ್ನೇ ಬಿರುಗಳಿಸುವಂತೆ ಕಂಗೊಳಿಸಿದವು. ಈ ಕಣ್ಣು ಕೊಡಿಸುವ ಕಂಗೊಳಿವಿಕಿ ಕಿಂಚಿತ್ತೂ ಮಾತನಾಡಲಿಲ್ಲ.
ಆದರೆ ದಲಿತ ಎಂಬ ಸಾಹಿತ್ಯದ ಹುಟ್ಟಿಗೆ ಕಾರಣವಾದ ಕನ್ನಡನಾಡಿನಲ್ಲಿ ಉದಯಿಸಿದ 12ನೇ ಶತಮಾನದ ಬಸವಣ್ಣ ಹಾಗೂ ಬಸವಾದಿ ಶರಣರ ನೆಲಮೂಲ ಸಂಸ್ಕೃತಿಯ ಒಡಲಾಳದ ಸಾಹಿತ್ಯ – ಕನಕನ ಬೆವರಿನ ಕೀರ್ತನೆ – ಇತ್ತೀಚಿನ ದೇವನೂರು ಮಹಾದೇವ- ಸಿದ್ಧಲಿಂಗಯ್ಯ – ಕೆಬಿ ಸಿದ್ದಯ್ಯ – ಗೋವಿಂದಯ್ಯ – ಬಿ ಕೃಷ್ಣಪ್ಪ- ಮುಳ್ಳೂರು ನಾಗರಾಜ – ಜಂಬಣ್ಣ ಅಮರಚಿಂತ – ಚನ್ನಣ್ಣ ವಾಲಿಕಾರ – ಬರಗೂರು ರಾಮಚಂದ್ರಪ್ಪ – ಅವರನ್ನೊಳಗೊಂಡ ಇಂದಿನ ನಮ್ಮ ನಡುವಿನ ಚಿಂತಕರು ಸಾಹಿತಿಗಳವರೆಗೂ ಈ ರಾಷ್ಟ್ರದಲ್ಲಿ ನಿರಂತರವಾಗಿ ಮಾತನಾಡುತ್ತಿರುವ ಸಾಮಾಜಿಕ ಸುಧಾರಕರಾದ ಬುದ್ಧ-ಬಸವ-ಕಬೀರ- ಪೆರಿಯರ್-ನಾರಾಯಣ ಗುರು-ಅಯೋತಿದಾಸ್-ಅಯ್ಯನ್ ಕಾಳಿ-ಪುಲೆ ದಂಪತಿಗಳು – ಶಾಹು ಮಹಾರಾಜ- ನಾಲ್ವಡಿ ಕೃಷ್ಣರಾಜ ಒಡೆಯರ್ – ಇವರೆಲ್ಲರ ಸಮ್ಮೇಳನದ ಏಕ ಮೂರ್ತಿಯಾಗಿ ಭಾರತ ಹಾಗೂ ಭಾರತೀಯರಿಗೆ ಉಜ್ವಲ ಜ್ಞಾನದ ಜ್ಯೋತಿಯನ್ನು ನೀಡಲು ಉದಯಿಸಿದ ಬಾಬಾಸಾಹೇಬ ಅಂಬೇಡ್ಕರ್ ಅವರು ನಿರ್ಮಿಸಿದ್ದ ಈ ಬೆವರಿನ ಚರಿತ್ರೆ ಹೊರತು ಮಾತನಾಡದ ತೀರ್ಥದ ಚರಿತ್ರೆ ಅಲ್ಲ.
ಈಗಿನ ಚರಿತ್ರೆಯಲ್ಲಿ ರಾಜ ರಾಣಿ ಅವನ ವೈಭವ ಸಾಮ್ರಾಜ್ಯಗಳ ವಿಸ್ತರಣೆ ಇದೆ. ಆದರೆ ಪ್ರಜೆಗಳೇ ಇಲ್ಲ. ದುರಂತವೆಂದರೆ 75 ವರ್ಷದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಚರಿತ್ರೆಯಲ್ಲಿಯೂ ಪ್ರಜೆಗಳೇ ಸಂಪೂರ್ಣವಾಗಿ ಗೌಣವಾಗಿರುವುದು ನಮ್ಮ ನಡುವಿನ ಬಹುದೊಡ್ಡ ದುರಂತ. ಪ್ರಜೆಗಳು ತಮ್ಮ ಚರಿತ್ರೆ ಕುರಿತು ವಸ್ತುನಿಷ್ಠವಾಗಿ ಮಾತನಾಡಲು ಆರಂಭಿಸಿದಾಗ – ಪ್ರಭುತ್ವ ಹಾಗೂ ಪ್ರಭುತ್ವವನ್ನು ನಿಯಂತ್ರಣದಲ್ಲಿಟ್ಟು ಕೊಂಡವರು ದಮನ ಮಾಡಲು ಮುಂದಾಗಿರುವುದಕ್ಕೆ – ಮುಂದಾಗುತ್ತಿರುವುದುಕ್ಕೆ ಅಂದಿನಿಂದ ಇಂದಿನವರೆಗೂ ಜ್ವಲಂತ ಸಾಕ್ಷಿಗಳಿವೆ.
ಈಗ ಆಗುತ್ತಿರುವುದು ಇದಕ್ಕೆ ಬಹುದೊಡ್ಡ ನಿದರ್ಶನ.