ದೆಹಾತ್ : ವಿವಾದವೊಂದಕ್ಕೆ ಸಂಬಂಧಿಸಿ ಪಟೇಲ್ ಸಮುದಾಯಕ್ಕೆ ಸೇರಿದ ಗುಂಪೊಂದು ದಲಿತ ದಂಪತಿ ಹಾಗೂ ಅವರ ಪುತ್ರನನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ದಾಮೋಹ್‌ನಲ್ಲಿ ಮಂಗಳವಾರ ನಡೆದಿದೆ.
ದೆಹಾತ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ರಾನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ನಿವಾಸಿಗಳಾಗಿರುವ ಆರೋಪಿಗಳು, 60 ವರ್ಷ ಪ್ರಾಯದ ದಲಿತ ವ್ಯಕ್ತಿ, 58 ವರ್ಷದ ಆತನ ಪತ್ನಿ ಹಾಗೂ 32 ವರ್ಷದ ಪುತ್ರನನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಗುಂಡಿನ ದಾಳಿಯಲ್ಲಿ ಅವರ 28 ಹಾಗೂ 30 ವರ್ಷದ ಇಬ್ಬರು ಪುತ್ರರಿಗೆ ಕೂಡ ಗಾಯಗಳಾಗಿವೆ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಡಿ.ಆರ್. ತೇನಿವಾರ್ ಅವರು ಹೇಳಿದ್ದಾರೆ.
”ಪಟೇಲ್ ಸಮುದಾಯಕ್ಕೆ ಸೇರಿದ ಸುಮಾರು 25 ಮಂದಿ ಬಲವಂತವಾಗಿ ನಮ್ಮ ಮನೆ ಪ್ರವೇಶಿಸಿ ಕುಟುಂಬದ ಮೇಲೆ ದಾಳಿ ನಡೆಸಿದ್ದಾರೆ. ಅವರು ಬಂದೂಕು ಹಾಗೂ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ನನ್ನ ತಂದೆ, ತಾಯಿ ಹಾಗೂ ಸಹೋದರನನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ” ಎಂದು ದಲಿತ ದಂಪತಿಯ ಕಿರಿಯ ಪುತ್ರ ಮಹೇಶ್ ಅಹಿರ್ವಾರ್ ಅವರು ತಿಳಿಸಿದ್ದಾರೆ.
ಹತ್ಯೆ ಆರೋಪಕ್ಕೆ ಸಂಬಂಧಿಸಿ 6 ಮಂದಿಯ ವಿರುದ್ಧ ಭಾರತೀಯ ದಂಡ ಸಹಿಂತೆಯ ವಿವಿಧ ಸೆಕ್ಷನ್‌ಗಳು, ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಲ್ಲಾ ಆರು ಮಂದಿ ಆರೋಪಿಗಳು ಕೂಡ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.