ಗುರುರಾಜ ದೇಸಾಯಿ
ಕೇಂದ್ರ ಸರ್ಕಾರ ತಂದಿದ್ದ ಮೂರು ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಡೆಗೂ ರೈತರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ.
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು 2020ರ ಸಪ್ಟೆಂಬರ್ 17ರಂದು ಜಾರಿಗೊಳಿಸಲಾಯಿತು. ಈ ಕಾಯ್ದೆಗಳೇ ರೈತರ ವಿರೋಧಕ್ಕೆ ಮೂಲ ಕಾರಣವಾಗಿದ್ದವು.
ವರ್ಷದಿಂದ ದೇಶದಲ್ಲಿ ಮುಖ್ಯ ಚರ್ಚಾ ವಿಷಯವಾಗಿದ್ದ ಕೃಷಿ ಕಾನೂನುಗಳ ಜಾರಿ, ರೈತ ಹೋರಾಟ ಮತ್ತು ವಾಪಸ್ ಗಳ ಸಂಪೂರ್ಣ ವಿವರ ಇಲ್ಲಿದೆ.
ಈ ಕೃಷಿ ಕಾಯ್ದೆಗಳನ್ನು ಮಂಡಿಸಿದ (ಪರಿಚಯಿಸಿದ) ಕೂಡಲೇ, ರೈತ ಒಕ್ಕೂಟಗಳು ಸ್ಥಳೀಯವಾಗಿ ಪ್ರತಿಭಟನೆಗಳನ್ನು ನಡೆಸಲು ಪ್ರಾರಂಭಿಸಿದವು, ಅದು ಹೆಚ್ಚಾಗಿ ಪಂಜಾಬ್‌ನಲ್ಲಿ ನೆಡೆಯಿತು. ಎರಡು ತಿಂಗಳ ಪ್ರತಿಭಟನೆಯ ನಂತರ, ಮುಖ್ಯವಾಗಿ ರಾಜಸ್ಥಾನ ಮತ್ತು ಹರಿಯಾಣದಿಂದ ಬಂದ ರೈತರು ‘ದಿಲ್ಲಿ ಚಲೋ’ ಆಂದೋಲನವನ್ನು ಪ್ರಾರಂಭಿಸಿದರು, ಇದರಲ್ಲಿ ಸಾವಿರಾರು ರೈತರು ರಾಷ್ಟ್ರದ ರಾಜಧಾನಿಯತ್ತ ಸಾಗಿದರು.
ದೆಹಲಿ ರೈತ ಹೋರಾಟಕ್ಕೆ ಒಂದು ವರ್ಷ : ರೈತರ ಈ ದೊಡ್ಡ ಹೋರಾಟ ಆರಂಭವಾಗುವುದಕ್ಕೆ ದೊಡ್ಡ ಇತಿಹಾಸವಿದೆ, ಆಗಸ್ಟ್ 2020 ರಲ್ಲಿ ಕೃಷಿ ಮಸೂದೆಗಳನ್ನು ಕೇಂದ್ರ ಸರಕಾರ ಜಾರಿ ಮಾಡಿದಾಗ ಸಣ್ಣ ಪ್ರಮಾಣದ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಕಾಯಿದೆಗಳು ಅಂಗೀಕಾರವಾದ ನಂತರವೇ ಭಾರತದಾದ್ಯಂತ ಹೆಚ್ಚಿನ ರೈತರು ಮತ್ತು ರೈತ ಸಂಘಟನೆಗಳು ಪ್ರತಿಭಟನೆಯನ್ನು ತೀವೃಗೊಳಿಸಿದರು. ಸೆಪ್ಟೆಂಬರ್ 25, 2020 ರಂದು ಭಾರತದಾದ್ಯಂತದ ಈ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಮೊದಲ ಭಾರತ್ ಬಂದ್ ನ್ನು ಕರೆ ನೀಡಿದರು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ್, ಒಡಿಶಾ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ಪ್ರತಿಭಟನೆಗಳು ತೀವೃಗೊಂಡವು.
ಇಷ್ಟೆಲ್ಲ ಪ್ರತಿರೋಧ ಬಂದರೂ ಕೇಂದ್ರ ಸರಕಾರ ತನ್ನ ನಿರ್ಧಾರದಿಂದ ಹಿಂದೆಸರಿಯೋದಿಲ್ಲ, ಕೃಷಿಕಾಯ್ದೆಗಳನ್ನು ವಾಪಸ್ಸ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದಾಗ ಪ್ರತಿಭಟನೆಯ ಕಾವು ಜೋರಾಗಿ ಆರಂಭವಾಗುತ್ತದೆ. ಎರಡು ತಿಂಗಳ ಪ್ರತಿಭಟನೆಯ ನಂತರ, ಮುಖ್ಯವಾಗಿ ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣದಿಂದ ಬಂದ ರೈತರು ‘ದಿಲ್ಲಿ ಚಲೋ’ ಎಂಬ ಆಂದೋಲನವನ್ನು ಪ್ರಾರಂಭಿಸುತ್ತಾರೆ. ಲಕ್ಷಾಂತರ ರೈತರು ರಾಷ್ಟ್ರದ ರಾಜಧಾನಿಯತ್ತ ಸಾಗುತ್ತಾರೆ.
ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಜಲ ಫಿರಂಗಿಗಳನ್ನು ಮತ್ತು ಅಶ್ರುವಾಯು ಬಳಸುತ್ತಾರೆ. ರೈತರ ಮೇಲೆ ಕೇಂದ್ರ ಸರಕಾರ ನಡೆಸಿದ ದಾಳಿಯ ವಿರುದ್ಧ ದೇಶದ ತುಂಬೆಲ್ಲ ರೈತರು ಹೋರಾಟವನ್ನು ಆರಂಭಿಸುತ್ತಾರೆ. ರೈತರ ಹೋರಾಟವನ್ನು ಬೆಂಬಲಿಸಿ ದೇಶವ್ಯಾಪಿ ಲಕ್ಷಾಂತರ ಜನ ಪ್ರತಿಭಟನೆಯನ್ನು ನಡೆಸುತ್ತಾರೆ. 500 ಕ್ಕೂ ಹೆಚ್ಚು ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಎಂಬ ಹೆಸರಿನಲ್ಲಿ ಹೋರಾಟವನ್ನು ಆರಂಭಿಸುತ್ತವೆ.
ರೈತರು ದೆಹಲಿ ಪ್ರವೇಶ ಮಾಡದಂತೆ ಉದ್ದೇಶವನ್ನು ಇಟ್ಟುಕೊಂಡಿದ್ದ ಕೇಂದ್ರಸರಕಾರ ರೈತರನ್ನು ದೆಹಲಿಯತ್ತ ಬಿಡುವುದಿಲ್ಲ, ಆಗ ರೈತರು ದೆಹಲಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿಯೇ ಟೆಂಟ್ ಹಾಕಿ ಕೃಷಿಕಾಯ್ದೆಯ ವಿರುದ್ದ ಆಕ್ರೋಶವನ್ನು ಪ್ರಖರಗೊಳಿಸುತ್ತಾರೆ. ಇಂಡಿಯಾ ಟುಡೆ ವರದಿಯ ಪ್ರಕಾರ ನವೆಂಬರ್ 30 ರಂದು, ಅಂದಾಜು 20 ಮತ್ತು 30 ಲಕ್ಷ ರೈತರು ದೆಹಲಿಗೆ ಹೋಗುವ ದಾರಿಯಲ್ಲಿ ವಿವಿಧ ಗಡಿ ಬಿಂದುಗಳಲ್ಲಿ ಸೇರಿಕೊಳ್ಳುತ್ತಾರೆ, ಸಾವಿರಾರು ಟ್ರ್ಯಾಕ್ಟರ್ ಗಳು ಅಲ್ಲಿ ಜಮಾವಣೆಗೊಳ್ಳುತ್ತವೆ. ಮಹಿಳಾ ರೈತರು ಹೋರಾಟಕ್ಕೆ ಸಾಥ್ ನೀಡುತ್ತಾರೆ. ರೈತರ ಹೋರಾಟ ಬಲಗೊಳ್ಳುತ್ತಿದೆ.
ಕಳೆದ 2020ರ ನವೆಂಬರ್ 26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಡೆಸಿದ ನಿರಂತರ ಪ್ರತಿಭಟನೆ ಯಾವ ಯುದ್ಧಕ್ಕೂ ಕಡಿಮೆಯಿರಲಿಲ್ಲ. ಮಳೆ, ಚಳಿ ಮತ್ತು ಬಿಸಿಲಿಗೂ ಅಂಜದೆ ದಿಟ್ಟತನ ಪ್ರದರ್ಶಿಸಿದ ರೈತರ ಹೋರಾಟದ ಹಾದಿ ಮುಳ್ಳಿನ ಹಾಸಿಗೆ ಆಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯ ವೈಖರಿ ಹೇಗಿತ್ತು?, ಅನ್ನದಾತರು ಎದುರಿಸಿದ ಸವಾಲುಗಳು ಹೇಗಿದ್ದವು? ವಿವರಣಾತ್ಮಕ ವರದಿ ಇಲ್ಲಿದೆ
2020ರ ಜೂನ್: ಮೂರು ಕೃಷಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ :
ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೂ ಮಾರಾಟ ಮಾಡಲು ಅವಕಾಶ ನೀಡುವ, ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳ ಹೂಡಿಕೆಗೂ ಅವಕಾಶ ನೀಡುವ ನೂತನ ಕೃಷಿ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು 2020ರ ಜೂನ್‌ನಲ್ಲಿ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿತು.
2020ರ ಸೆಪ್ಟೆಂಬರ್: ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ
– ಸೆಪ್ಟೆಂಬರ್ 17: ಲೋಕಸಭೆಯಲ್ಲಿ ಅನುಮೋದನೆ
– ಸೆಪ್ಟೆಂಬರ್ 20: ಧ್ವನಿ ಮತದ ಮೂಲಕ ರಾಜ್ಯಸಭೆಯಲ್ಲಿ ಅನುಮೋದನೆ
– ಸೆಪ್ಟೆಂಬರ್ 24: ಪಂಜಾಬ್‌ನ ರೈತರಿಂದ ಮೂರು ದಿನಗಳ ರೈಲು ತಡೆ ಘೋಷಣೆ
– ಸೆಪ್ಟೆಂಬರ್ 24: ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಿಂದ ಪ್ರತಿಭಟನೆಗೆ ಕರೆ, ದೇಶದಾದ್ಯಂತ ರೈತರ ಪ್ರತಿಭಟನೆ
– ಸೆಪ್ಟೆಂಬರ್ 27ರಂದು ಕೃಷಿ ಕಾಯ್ದೆಗಳಿಗೆ ರಾಷ್ಟ್ರಪತಿಗಳ ಅಂಕಿತ
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆದು, ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯಲಾಯಿತು. ಈ ಕಾಯ್ದೆಗಳು ಕೃಷಿಗೆ, ರೈತರಿಗೆ ಮಾರಕ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಕೆಲವೇ ದಿನಗಳಲ್ಲಿ ರೈತ ಸಮುದಾಯವೇ ಈ ಕಾಯ್ದೆಗಳ ವಿರುದ್ಧ ಹೋರಾಟ ಆರಂಭಿಸಿತು.
2020ರ ನವೆಂಬರ್ 25: ಪಂಜಾಬ್, ಹರಿಯಾಣ ರೈತರಿಂದ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಆರಂಭ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಪದ್ಧತಿಗೆ ಸಂಬಂಧಿಸಿದಂತೆ ನೂತನ ಮೂರೂ ಕಾಯ್ದೆಗಳಲ್ಲಿ ಉಲ್ಲೇಖವಿಲ್ಲ. ಬೆಂಬಲ ಬೆಲೆ ಪದ್ಧತಿಯನ್ನು ಈ ಕಾಯ್ದೆಗಳು ರದ್ದುಪಡಿಸುತ್ತವೆ ಎಂಬುದು ರೈತರ ಆಕ್ಷೇಪವಾಗಿತ್ತು. ಆದರೆ ಬೆಂಬಲ ಬೆಲೆ ಪದ್ಧತಿ ತೆಗೆಯುವುದಿಲ್ಲ ಎಂಬುದು ಸರ್ಕಾರದ ಸಮರ್ಥನೆಯಾಗಿತ್ತು. ಬೆಂಬಲ ಬೆಲೆ ಪದ್ಧತಿ ರದ್ದುಪಡಿಸುವುದಿಲ್ಲ ಎಂಬುದು ಕೇವಲ ಮೌಖಿಕ ಭರವಸೆಯಾಗಿದ್ದ ಕಾರಣ, ರೈತರು ಈ ಕಾಯ್ದೆಗಳ ವಿರುದ್ಧ ಬೀದಿಗಿಳಿದರು. 2020ರ ನವೆಂಬರ್ 25ರಂದು ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.
ಈ ಮೆರವಣಿಗೆಯನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿತು. ಪಂಜಾಬ್‌ನ ರೈತರು ಬಿಜೆಪಿ ಆಡಳಿತವಿರುವ ಹರಿಯಾಣ ಪ್ರವೇಶಿಸದಂತೆ ತಡೆ ಒಡ್ಡಲಾಯಿತು. ಆದರೆ ಪೊಲೀಸರನ್ನು ಬದಿಗೊತ್ತಿ, ಅವರ ತಡೆಗೋಡೆಗಳನ್ನು ಮುರಿದು ರೈತರು ಮೆರವಣಿಗೆ ಮುಂದುವರಿಸಿದರು. ಕೊನೆಗೆ ರೈತರು ದೆಹಲಿ ಪ್ರವೇಶಿಸದಂತೆ ದೆಹಲಿ ಗಡಿಯನ್ನು, ಪೊಲೀಸರು ಬಂದ್ ಮಾಡಿದರು. ಹೆದ್ದಾರಿಗಳಿಗೆ ಅಡ್ಡಲಾಗಿ ಪೊಲೀಸರು ಕಂದಕ ತೋಡಿದರು, ಮುಳ್ಳುಬೇಲಿ ಹಾಕಿದರು, ಕಾಂಕ್ರೀಟ್ ಗೋಡೆ ನಿರ್ಮಿಸಿದರು, ಮೊಳೆಯ ಬೇಲಿ ನೆಟ್ಟರು. ಆದರೆ ದೆಹಲಿ ಗಡಿಯಲ್ಲಿ ಬೀಡುಬಿಟ್ಟ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ಹುರಿಗೊಳಿಸಿದರು. ಕಿಸಾನ್ ಸಂಯುಕ್ತ ಮೋರ್ಚಾ ಹೆಸರಿನಲ್ಲಿ ನಡೆದ ಈ ಹೋರಾಟದಲ್ಲಿ ಹಲವು ರೈತ ಸಂಘಟನೆಗಳು ಭಾಗಿಯಾದವು.
2020ರ ನವೆಂಬರ್ 28:ಮಾತುಕತೆಗೆ ಆಹ್ವಾನ
ಪ್ರತಿಭಟನೆ ನಿಲ್ಲಿಸಿ ರೈತರನ್ನು ಮಾತುಕತೆಗೆ ಕರೆದ ಗೃಹ ಸಚಿವ ಅಮಿತ್ ಶಾ. ಆಹ್ವಾನ ತಿರಸ್ಕರಿಸಿ, ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸಲು ಬೇಡಿಕೆ ಇಟ್ಟ ರೈತರು. ರೈತರ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರದಿಂದ ರೈತರು ತಂಡೋಪತಂಡವಾಗಿ ದೆಹಲಿ ಗಡಿಭಾಗದತ್ತ ಸಾಗಿಬರುತ್ತಾರೆ. ತಮ್ಮ ಜೊತೆ ಆಹಾರ ಧಾನ್ಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗ್ತಾರೆ, ಪಶ್ಚಿಮ ಬಂಗಾಲದಲ್ಲಿ 20ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಾಥಗಳು ನಡೆದಿವೆ, ಇದೇ ರೀತಿ ತ್ರಿಪುರ, ತಮಿಳುನಾಡು, ಬಿಹಾರ, ಆಂಧ್ರಪ್ರದೇಶ,ತೆಲಂಗಾಣ, ಉತ್ತರಾಖಂಡ, ಛತ್ತೀಸ್ಗಡ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಸಾವಿರಾರು ರೈತರು, ಕೃಷಿ ಕೂಲಿಕಾರರು, ಆದಿವಾಸಿಗಳು, ದಿಲ್ಲಿಯ ಪ್ರತಿಭಟನೆಗಳ ಭಾಗವಾಗುತ್ತಾರೆ.
* 2020ರ ಡಿಸೆಂಬರ್ 3: ರೈತ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರವು ಮೊದಲ ಸುತ್ತಿನ ಮಾತುಕತೆ ನಡೆಸಿತು. ಆದರೆ, ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಲಿಲ್ಲ.
* 2020ರ ಡಿಸೆಂಬರ್ 5: ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಎರಡನೇ ಸುತ್ತಿನ ಮಾತುಕತೆ.
* 2020ರ ಡಿಸೆಂಬರ್ 8: ಭಾರತ್ ಬಂದ್‌ಗೆ ಕರೆ ನೀಡಿದ ರೈತರು. ದೇಶದ ಹಲವು ರಾಜ್ಯಗಳ ರೈತರಿಂದಲೂ ಬಂದ್‌ಗೆ ಬೆಂಬಲ.
* 2020ರ ಡಿಸೆಂಬರ್ 9: ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಮುಖಂಡರು. ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಣೆ.
* 2020ರ ಡಿಸೆಂಬರ್ 11: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಭಾರತೀಯ ಕಿಸಾನ್ ಯೂನಿಯನ್.
* 2020ರ ಡಿಸೆಂಬರ್ 21: ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ ರೈತರು.
ಡಿಸೆಂಬರ್ 21 ರಂದು ಮಹಾರಾಷ್ಟ್ರದಿಂದ 3000 ಕ್ಕೂ ಹೆಚ್ಚು ರೈತರು ಆಲ್ ಇಂಡಿಯಾ ಕಿಸಾನ್ ಸಭಾ ನೇತೃತ್ವದಲ್ಲಿ ದೆಹಲಿಯವರೆಗೆ ಪಾದಯಾತ್ರೆಯನ್ನು ನಡೆಸುತ್ತಾರೆ. 1300 ಕಿ.ಮೆ ಗಳ ಈ ಜಾಥಾದ ನೇತೃತ್ವವನ್ನು ಎಐಕೆಎಸ್ ನ ರಾಷ್ಟ್ರಾಧ್ಯಕ್ಷರಾದ ಅಶೋಕ ಧಾವಳೆ ಸೇರಿದಂತೆ ಸಾವಿರಾರು ರೈತ ಮುಖಂಡರು ನೇತೃತ್ವವನ್ನು ವಹಿಸುತ್ತಾರೆ.
* 2021ರ ಜನವರಿ 4: ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಏಳನೇ ಸುತ್ತಿನ ಮಾತುಕತೆ.
* 2021ರ ಜನವರಿ 12: ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್, ನಾಲ್ವರು ಸದಸ್ಯರ ಸಮಿತಿ ರೂಪಿಸಿತು.
2021ರ ಜನವರಿ 26: ಗಣರಾಜ್ಯೋತ್ಸವ ದಿನದಂದು ದೆಹಲಿಗೆ ರೈತರ ಟ್ರ್ಯಾಕ್ಟರ್ ಮೆರವಣಿಗೆ
ರೈತರ ಜತೆ ಸರ್ಕಾರವು ಹಲವು ಸುತ್ತಿನ ಮಾತುಕತೆ ನಡೆಸಿದರೂ ಅವೆಲ್ಲವೂ ವಿಫಲವಾದವು. ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ತಮ್ಮ ಪಟ್ಟನ್ನು ರೈತರು ಸಡಿಲಗೊಳಿಸಲಿಲ್ಲ. ಸರ್ಕಾರವೂ ಕಾಯ್ದೆಗಳನ್ನು ರದ್ದುಪಡಿಸಲಿಲ್ಲ. ಗಣರಾಜ್ಯೋತ್ಸವದ ದಿನ ರೈತರು ದೆಹಲಿಗೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ಆ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಹಲವರಿಗೆ ಗಾಯಗಳಾದವು. ಒಬ್ಬ ಪ್ರತಿಭಟನಾಕಾರ ಸಾವಿಗೀಡಾದರು. .
ಲಕ್ಷಾಂತರ ರೈತರು ಈ ಪರೇಡ್ ನಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ಒಂದು ಗುಂಪು ಐತಿಹಾಸಿಕ ಕೆಂಪು ಕೋಟೆಯನ್ನು ಪ್ರವೇಶಿಸಿ ಸಿಖ್ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸುವ ಕ್ರಿಯೆ ನಡೆಯಿತು.ನಟ ದೀಪ್ ಸಿಧು ಆ ಧ್ವಜವನ್ನು ಹಾರಿಸಿದ್ದು ಎಂಬ ಆರೋಪ ಕೇಳಿ ಬರುತ್ತದೆ. ರೈತ ಮುಖಂಡರು ದೀಪ್ ಸಿಧುಗೂ ರೈತರ ಹೋರಾಟಕ್ಕೂ ಸಂಭಧವಿಲ್ಲ ಎಂದು ಸಪ್ಷ್ಪಡಿಸುತ್ತಾರೆ. ಆತ ಬಿಜೆಪಿಗೆ ಸೇರಿದ ವ್ಯಕ್ತಿ, ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಕೇಂದ್ರ ಸರಕಾರ ಈ ರೀತಿಯ ಪಿತೂರಿಯನ್ನು ಮಾಡಿದೆ ಎಂದು ರೈತರು ಆರೋಪಿಸುತ್ತಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್‌ಪುರದಿಂದ ಬಿಜೆಪಿ ಯಿಂದ ಸ್ಪರ್ಧಿಸಿದ್ದ ಸನ್ನಿ ಡಿಯೋಲ್ ಪರ ಪ್ರಚಾರವನ್ನು ನಡೆಸಿದ್ದು, ಮೋದಿ, ಅಮಿತ್ ಷಾ ರವರ ಜೊತೆಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.
* 2021ರ ಜನವರಿ 28: ಉತ್ತರ ಪ್ರದೇಶದ ಗಾಜಿಯಾಬಾದ್ ಆಡಳಿತವು ಪ್ರತಿಭಟನಾ ಸ್ಥಳವನ್ನು ರಾತ್ರಿಯೊಳಗೆ ತೆರವುಗೊಳಿಸುವಂತೆ ಆದೇಶಿಸಿತು. ಇದರಿಂದಾಗಿ ದೆಹಲಿಯ ಗಾಜಿಪುರ ಗಡಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪ್ರತಿಭಟನಾ ನಿರತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ‘ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂಬ ಸಂದೇಶ ತಲುಪಿಸಿದರು.
* 2021ರ ಫೆಬ್ರುವರಿ 5: ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡಿದ್ದ ರೈತರ ಹೋರಾಟದ ಕುರಿತ ‘ಟೂಲ್‌ಕಿಟ್’ ಅನ್ನು ರೂಪಿಸಿದವರ ಮೇಲೆ ದೆಹಲಿ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗವು ಎಫ್‌ಐಆರ್ ದಾಖಲಿಸಿತು. ರಾಷ್ಟ್ರವಿರೋಧಿ, ಅಪರಾಧ ಸಂಚು ಹಾಗೂ ದ್ವೇಷ ಭಾವನೆ ಹಂಚುತ್ತಿರುವ ಆರೋಪಗಳನ್ನು ದಾಖಲಿಸಲಾಯಿತು.
* 2021ರ ಫೆಬ್ರುವರಿ 6: ದೇಶದಾದ್ಯಂತ ಮಧ್ಯಾಹ್ನ 12ರಿಂದ 3ರವರೆಗೂ ರಸ್ತೆ ತಡೆ ಪ್ರತಿಭಟನೆ.
* 2021ರ ಫೆಬ್ರುವರಿ 9: ಗಣರಾಜ್ಯೋತ್ಸವ ದಿನದ ಹಿಂಸಾಚಾರದ ಆರೋಪದ ಮೇಲೆ ಪಂಜಾಬ್‌ನ ನಟ, ಹೋರಾಟಗಾರ ದೀಪ್ ಸಿಧು ಅವರನ್ನು ಬಂಧಿಸಿದ ದೆಹಲಿ ಪೊಲೀಸರು. 7 ದಿನಗಳು ಪೊಲೀಸ್ ವಶಕ್ಕೆ.
* 2021ರ ಫೆಬ್ರುವರಿ 14: ಟೂಲ್‌ಕಿಟ್ ತಿದ್ದಿರುವ ಸಂಬಂಧ ಹವಾಮಾನ ಬದಲಾವಣೆ ಜಾಗೃತಿ ಅಭಿಯಾನ ನಡೆಸುತ್ತಿದ್ದ ದಿಶಾ ರವಿ (21) ಅವರನ್ನು ಬಂಧಿಸಿದ ದೆಹಲಿ ಪೊಲೀಸರು. ಫೆಬ್ರುವರಿ 23ರಂದು ಅವರಿಗೆ ದೆಹಲಿಯ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತು.
* 2021ರ ಫೆಬ್ರುವರಿ 18: ದೇಶದಾದ್ಯಂತ ರೈಲು ತಡೆ ಪ್ರತಿಭಟನೆ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ.
* 2021ರ ಫೆಬ್ರುವರಿ 26: ದಲಿತ ಕಾರ್ಮಿಕರ ಹೋರಾಟಗಾರ್ತಿ ನವದೀಪ್ ಕೌರ್ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ಜಾಮೀನು, ಜೈಲಿನಿಂದ ಬಿಡುಗಡೆ.
* 2021ರ ಮಾರ್ಚ್ 05: ಯಾವುದೇ ಷರತ್ತುಗಳೂ ಇಲ್ಲದೆ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಿರ್ಣಯ ಕೈಗೊಂಡ ಪಂಜಾಬ್ ವಿಧಾನಸಭೆ.
* 2021ರ ಮಾರ್ಚ್ 6: ದೆಹಲಿ ಗಡಿಯಲ್ಲಿ 100 ದಿನಗಳನ್ನು ಪೂರೈಸಿದ ರೈತರ ಪ್ರತಿಭಟನೆ.
* 2021ರ ಮೇ 27: ಆರು ತಿಂಗಳು ಪೂರೈಸಿದ ರೈತರ ಪ್ರತಿಭಟನೆ; ಕರಾಳ ದಿನವನ್ನಾಗಿ ಆಚರಣೆ.
* 2021ರ ಜೂನ್ 5: ಕೃಷಿ ಕಾಯ್ದೆಗಳನ್ನು ಕೇಂದ್ರ ಜಾರಿಗೆ ತಂದು ಒಂದು ವರ್ಷ; ಸಂಪೂರ್ಣ ಕ್ರಾಂತಿಕಾರಿ ದಿವಸವಾಗಿ ಆಚರಿಸಿದ ರೈತ ಹೋರಾಟಗಾರರು.
* 2021ರ ಜೂನ್ 26: ರೈತರ ಪ್ರತಿಭಟನೆಗೆ 7 ತಿಂಗಳು; ದೆಹಲಿಯತ್ತ ಹೊರಟ ಪ್ರತಿಭಟನಾಕಾರರು.
* 2021ರ ಜುಲೈ: ದೆಹಲಿಯ ಸಂಸತ್ ಭವನದ ಸಮೀಪ ಕೃಷಿ ಕಾಯ್ದೆಗಳನ್ನು ವಿರೋಧಿಸಿದ ‘ಕಿಸಾನ್ ಸಂಸತ್’ ನಡೆಸಿದ ರೈತರು.
* 2021ರ ಆಗಸ್ಟ್ 7: ಹದಿನಾಲ್ಕು ವಿರೋಧ ಪಕ್ಷಗಳ ಮುಖಂಡರು ಜಂತರ್ ಮಂತರ್‌ನ ಕಿಸಾನ್ ಸಂಸತ್ತಿಗೆ ಭೇಟಿ ನೀಡಲು ನಿರ್ಧರಿಸಿದರು.
* 2021ರ ಆಗಸ್ಟ್ 28: ಹರಿಯಾಣದ ಕರ್ನಾಲ್‌ನಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ, ಲಾಠಿ ಚಾರ್ಜ್ ಮಾಡಿದ ಪೊಲೀಸರು. ರೈತರ ಬುರುಡೆ ಹೊಡೆಯುವಂತೆ ಸೂಚನೆ ನೀಡಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ. ಅಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.
ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಅಂಗೀಕರಿಸಿ ಸೆಪ್ಟೆಂಬರ್ 17ಕ್ಕೆ ಒಂದು ವರ್ಷ ತುಂಬಿತು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಲವು ಸಂಘಟನೆಗಳು ‘ಕರಾಳ ದಿನ’ವನ್ನಾಗಿ ಆಚರಿಸಿದವು.
* 2021ರ ಅಕ್ಟೋಬರ್: ರೈತರ ಪ್ರತಿಭಟನೆಯಿಂದ ಜನರ ಸಂಚಾರಕ್ಕೆ ಉಂಟಾಗಿರುವ ಅಡಚಣೆಯ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್. ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ತೆಗೆಯಲು ಮುಂದಾದ ದೆಹಲಿ ಪೊಲೀಸರು. ಪ್ರತಿಭಟನೆ ಮುಂದುವರಿಸಿದ ರೈತರು.
* 2021ರ ನವೆಂಬರ್ 19: ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ.
ಹೋರಾಟದ ಶಕ್ತಿಯಾದ ಸಂಘಟನೆಗಳು : ರೈತರು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಂತಹ ಸಂಸ್ಥೆಗಳ ಸಮನ್ವಯದಡಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು 500 ಕ್ಕೂ ಹೆಚ್ಚು ಸಂಘಟನೆಗಳು ರೈತ ಹೋರಾಟದ ಭಾಗವಾಗಿದ್ದವು. ಅವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಘಟನೆಗಳ ಮಾಹಿತಿ ಈ ಕೆಳಗಿನಂತಿದೆ.
|
|
ಹೋರಾಟದಲ್ಲಿ ಪ್ರಮುಖವಾಗಿ ಗಮನ ಸೆಳೆದದ್ದು, ಲಂಗರ್ ಅಂದರೆ ಊಟದ ಮನೆ, ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡುವ ಹಲವಾರು ಲಂಗರ್‌ಗಳು, ತಾತ್ಕಾಲಿಕ ಅಡಿಗೆಮನೆಗಳು, ವ್ಯವಸ್ಥೆಗೊಂಡಿವೆ. ದೆಹಲಿ ಪೊಲೀಸರು ರೈತರನ್ನು ರಾಜಧಾನಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದಾಗ ಈ ‘ಲಂಗರುಗಳು’ ಹುಟ್ಟಿಕೊಂಡವು. ಅವು ಜಾತಿ, ವರ್ಗ ಅಥವಾ ಧರ್ಮದ ಭೇದವಿಲ್ಲದೆ ಉಚಿತ ಆಹಾರವನ್ನು ಒದಗಿಸುವ ಕೆಲಸವನ್ನು ಮಾಡಿದವು.
ಇನ್ನೂ ಟ್ರ್ಯಾಕ್ಟರ್ ಗಳನ್ನು ಮನೆಗಳಾಗಿ ಪರಿವರ್ತಿಸಿಕೊಂಡರು, ದೊಡ್ಡದಾದ ಪ್ಲಾಸ್ಟಿಕ್ ಟಾರ್ಪಲ್ ಗಳಿಂದ ಮನೆಗಳನ್ನು ನಿರ್ಮಿಸಿಕೊಂಡರು, ಅಗತ್ಯವಾದ ವಿದ್ಯುತ್ ಸೌಲಭ್ಯವನ್ನು ಅವರು ಪಡೆದುಕೊಂಡರು. ಇಲ್ಲಿ ಅವರು ವಿದ್ಯತನ್ನು ಕಳ್ಳತನ ಮಾಡಲಿಲ್ಲ. ಬದಲಾಗಿ ವಿದ್ಯತ್ ಇಲಾಖೆಯ ಸಹಾಯವನ್ನು ಪಡೆದು ಮೀಟರ್ ಅಳವಡಿಸಿಕೊಂಡಿದ್ದಾರೆ, ಮೀಟರ್ ಗೆ ಬಂದ್ ಬಿಲ್ಲನ್ನು ಕಡ್ಡಾಯವಾಗಿ ಪಾವತಿ ಮಾಡತ್ತಿದ್ದಾರೆ.. ಆ ಮೂಲಕ ಸ್ವಾಭಿಮಾನದ ಹೋರಾಟವನ್ನು ನಡೆಸಲಾಯಿತು.
ವಿರೋಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದ ದಿಕ್ಕನ್ನು ತಪ್ಪಿಸಲು ಪ್ರಯತ್ನ ನಡೆಸಿದಾಗ ಸಿಂಗ್ ಗಡಿಯಲ್ಲಿ, ರೈತರು ಪ್ರತಿಭಟನಾ ಸ್ಥಳದಲ್ಲಿ ಕಣ್ಣಿಡಲು ಎಂಟು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಿದ್ದಾರೆ, ” ಈಗ ಸಾಕಷ್ಟು ಜನರು ಬರುತ್ತಿರುವುದರಿಂದ. ಹೊರಗಿನ ಉದ್ದೇಶಗಳನ್ನು ಹೊಂದಿರುವ ಜನರು ಕುತಂತ್ರ ರಚಿಸಲು ಪ್ರಯತ್ನಿಸುವ ಘಟನೆಗಳನ್ನು ತಿಳಿಯುವದಕ್ಕೆ ಇವು ಸಹಾಯ ಮಾಡುತ್ತಿವೆ. ಅಧ್ಯಯನಕ್ಕಾಗಿ ಪುಸ್ತಕಗಳನ್ನು ಇಡಲಾಗುತ್ತಿದೆ. ಮಾಧ್ಯಮಗಳು ಹೋರಾಟದ ಅಪಪ್ರಚಾರಕ್ಕೆ ಮುಂದಾದಾಗ ಸ್ವತ: ಫೇಸ್ಬುಕ್ ಹಾಗೂ ಯೂಟ್ಯೂಬ್ ಮೂಲಕ ಹೋರಾಟದ ಪ್ರಚಾರವನ್ನು ಆರಂಭಿಸುತ್ತಾರೆ. ಫೆಸ್ಬುಕ್ ತಾತ್ಕಾಲಿಕವಾಗಿ ಸ್ತಗಿತವಾದಾಗ ಫೆಸ್ಬುಕ್ ವಿರುದ್ಧ ಹೋರಾಟ ನಡೆಸಲಾಗುತ್ತದೆ. ಮತ್ತೆ ಪೇಸ್ಬುಕ್ ಪೇಜ್ ಕ್ರೀಯಾಶೀಲಗೊಳ್ಳುತ್ತದೆ.
ಕೃಷಿಕಾಯ್ದೆಯ ವಿರುದ್ಧ ಹೋರಾಟ ನಡೆಸಿದ ರೈತರಲ್ಲಿ ಇಲ್ಲಿಯವರೆಗೆ 700 ಕ್ಕೂ ಜನ ರೈತರು ಹುತಾತ್ಮರಾಗಿದ್ದಾರೆ. ರೈತರ ಹೋರಾಟಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಸಿಕ್ಕಿದೆ. ಬಾಲಿವುಡ್ ನಟರೂ, ಪಾಪ್ ಗಾಯಕರೂ ಹೋರಾಟವನ್ನು ಬೆಂಬಲಿಸಿ ಭಾರತ ಸರಕಾರದ ನಡೆಯನ್ನು ವಿರೋಧಿಸಿದ್ದರು. ವಿರೋಧಿಗಳು ಪ್ರತಿಭಟನೆಯ ಬಗ್ಗೆ ಅಪಪ್ರಚಾರಕ್ಕಾಗಿ ವಿವಿಧ ಬಣ್ಣಗಳನ್ನು ಬಳೆಯಲು ಪ್ರಯತ್ನವನ್ನು ನಡೆಸದರು. ಖಲಿಸ್ತಾನಿಗಳ ಹೋರಾಟ ಎಂದು ಅಪಪ್ರಚಾರ ಮಾಡಿದರು. ಈ ಎಲ್ಲಾ ಅಪಪ್ರಚಾರಗಳನ್ನು ಮೆಟ್ಟಿನಿಂತ ರೈತರು ಕೃಷಿ ಉಳಿವಿಗಾಗಿ ದೊಡ್ಡ ಚಳುವಳಿ ನಡೆಸಿದರು. ರೈತ ಹೋರಾಟದ ಶಕ್ತಿಯ ಮುಂದೆ ಮೋದಿ ಸರಕಾರ ಮಂಡಿಯೂರಬೇಕಾಯಿತು.
ಕಳೆದೊಂದು ವರ್ಷದಲ್ಲಿ ಪ್ರತಿಭಟನಾ ನಿರತರ ಮೇಲೆ ಭಯೋತ್ಪಾದಕರು, ಖಾಲಿಸ್ತಾನಿಗಳು, ಹುಸಿ ರೈತರು, ಪೇಯ್ಡ್ ರೈತರು ಎಂಬೆಲ್ಲಾ ಆರೋಪಗಳು ಬಂದಿದ್ದವು. ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲು ಇನ್ನಿಲ್ಲದ ತಂತ್ರ- ಕುತಂತ್ರ ಮಾಡಲಾಯಿತು. ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ಕಹಿ ಘಟನೆಯೂ ನಡೆಯಿತು ಇದ್ಯಾವುದಕ್ಕೂ ರೈತರು ತಲೆ ಕೆಡಿಸಿಕೊಳ್ಳಲಿಲ್ಲ. ರೈತರಲ್ಲೇ ಒಡಕು ಮೂಡಿಸುವ ಪ್ರಯತ್ನವೂ ಆಯಿತು. ಆಳುವವರು ರೈತರ ಒಗ್ಗಟ್ಟು ಒಡೆಯಲು ಯತ್ನಿದಷ್ಟೂ ರೈತರು ಇನ್ನಷ್ಟು ಗಟ್ಟಿಯಾಗತೊಡಗಿದರು. ಅಲ್ಲದೆ ದೆಹಲಿಯ ಕೊರೆಯುವ ಚಳಿ ಮತ್ತು ಉರಿಯುವ ಬಿಸಿಲಿಗೂ ಬಗ್ಗದೆ ಪ್ರತಿಭಟನೆ ನಡೆಸಿದರು. ಶಾಂತಯುತವಾಗಿ, ಕಾನೂನು ಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ಪ್ರತಿಭಟನೆ ನಡೆಸಿದರ ಪರಿಣಾಮ ಕೇಂದ್ರ ಸರ್ಕಾರ ಮಣಿಯಲೇಬೇಕಾಯಿತು. ದೇಶದ ಬೆನ್ನೆಲುಬಾಗಿರುವ ರೈತರ ಮುಂದೆ ಎಂಥದೇ ಧೈತ್ಯ ಬಲದ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಯಿತು.
(ಅಂಕಿ ಅಂಶ ಮಾಹಿತಿ ಕೃಪೆ : 2020-21ರ ಭಾರತೀಯ ರೈತರ ಪ್ರತಿಭಟನೆ – ವಿಕಿಪಿಡಿಯ)