ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಗೆಲುವು ಸಾಧಿಸಿದ್ದಕ್ಕೆ ಪ್ರತಿಯಾಗಿ ಭೂ ಸ್ವಾಧೀನ ಡಿನೋಟಿಪಿಕೇಷನ್ ಜೊತೆಯಲ್ಲೇ ಶಾಶ್ವತ ಕೃಷಿ ವಲಯದ ಘೋಷಣೆ ಮಾಡಿರುವುದು ಕಾರ್ಪೊರೇಟ್ ಪ್ರೇರಿತ ರಿಯಲ್ ಎಸ್ಟೇಟ್ ಆಕ್ರಮ ಕೂಟಕ್ಕೆ ಸಂಪೂರ್ಣ ನೆರವಾಗುವ ದುರುದ್ದೇಶದಿಂದ ಕೂಡಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ಕಟುವಾಗಿ ಟೀಕಿಸುತ್ತದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ ಹೇಳಿದ್ದಾರೆ.
ಈವರೆಗೆ ಶಾಶ್ವತ ಕೃಷಿ ವಲಯ ಎಂಬ ಯಾವುದೇ ನಗರಾಭಿವೃದ್ಧಿ ಕಾನೂನಿನಲ್ಲಿ ಅವಕಾಶ ಇಲ್ಲದ ಹಾಗೂ ಭೂಮಿ ಮಾರುವವರಿಗೆ ಮೂರು ತಿಂಗಳ ಕಾಲಾವಕಾಶ ಒದಗಿಸಿ ನಂತರ ಈ ಭೂಮಿಯನ್ನು ಶಾಶ್ವತ ಕೃಷಿ ವಲಯವನ್ನಾಗಿ ಘೋಷಿಸುವುದಾಗಿ KIADB ಮನವಿಯಂತೆ ತಿಳಿಸಿರುವ ರಾಜ್ಯ ಸರ್ಕಾರದ ಆದೇಶವು, ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನದ ವಿರುದ್ಧ ಸುಮಾರು ನಾಲ್ಕು ವರ್ಷಗಳಿಂದ ಸತತವಾಗಿ ಹೋರಾಡಿದ ಚನ್ನರಾಯಪಟ್ಟಣ ಹೋಬಳಿ ರೈತರ ಮೇಲೆ ಸೇಡು ತೀರಿಸಿಕೊಳ್ಳುವಂತಹದ್ದು ಮಾತ್ರವಲ್ಲ, ರಾಜ್ಯದಾದ್ಯಂತ ಬಿಡದಿ ಹೊಬಳಿ ಭೈರಮಂಗಲ-ಕಂಚುಗಾರನಹಳ್ಳಿ, ಆನೇಕಲ್ ತಾಲ್ಲೂಕು ಸರ್ಜಾಪುರ ಸೇರಿದಂತೆ ಇಂತಹದ್ದೇ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನದ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ದಮನಿಸುವ ದುರುದ್ದೇಶಕ್ಕಾಗಿ ಒಡೆದಾಳುವ ಕುತಂತ್ರವಾಗಿದೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ | ಪರ್ಯಾಯ ರಾಜಕಾರಣಕ್ಕಾಗಿ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ‘ಜನದನಿ ರ‍್ಯಾಲಿ’ ಆಯೋಜನೆ – ಕೆ. ಮಹಾಂತೇಶ
ರಿಯಲ್ ಎಸ್ಟೇಟ್ ದಲ್ಲಾಳಿಗಳು ದೇವನಹಳ್ಳಿ ರೈತರ ಹೋರಾಟ ದಮನಿಸಲು ಬಳಸುತ್ತಿದ್ದ ಕುತಂತ್ರವನ್ನೇ ಯಥಾವತ್ತಾಗಿ ಸರ್ಕಾರದ ಆದೇಶದ ರೂಪದಲ್ಲಿ ಪ್ರಕಟಿಸಿರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ರಿಯಲ್ ಎಸ್ಟೇಟ್ ಹಿಡಿತ ಎಷ್ಟೊಂದು ಬಲವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಹಾಗೂ ಕಾಂಗ್ರೆಸ್ ಸರ್ಕಾರವು ಕೂಡ ಬಿಜೆಪಿ ಸರ್ಕಾರದಂತೆ ಭೂ ಸಂಪತ್ತಿನ ಬಂಡವಾಳಿಗರ-ಕಾರ್ಪೊರೇಟ್ ಲೂಟಿಯ ಪರವಾಗಿರುವಂತಹದ್ದು ಎಂಬುದನ್ನು ಬಯಲುಗೊಳಿಸಿದೆ ಎಂದರು.
ಇಂತಹ ಒಡೆದಾಳುವ ಕುತಂತ್ರಗಳನ್ನು ಸೋಲಿಸಲು ರೈತರಿಗೆ ಎಲ್ಲಾ ರೀತಿಯ ಬೆಂಬಲವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ನೀಡಲಿದೆ ಎಂದು ಡಾ. ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು!! ರೀ ಓಪನ್ ಆಗುತ್ತಾ ಸೌಜನ್ಯ ಕೇಸ್ ?!!v Janashakthi Media
