ರಾಯಚೂರು: ನಗರದ ಪಶ್ಚಿಮ ಠಾಣೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ನಗರ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಏಮ್ಸ್ ಹೋರಾಟಗಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವೀರನಗೌಡ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಏಮ್ಸ್ ಹೋರಾಟಗಾರರಾದ ಅಶೋಕ್ ಜೈನ್, ಬಸವರಾಜ್ ಕಳಸ , ಎಂಆರ್ ಬೇರಿ, ಎಸ್ ಮಾರೆಪ್ಪ ಸೇರಿ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಜೂನ್ 25 ಬುಧವಾರವಷ್ಟೇ ಏಮ್ಸ್ ಹೋರಾಟಗಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೂ ಬಿಜೆಪಿ ದೂರು ನೀಡಿತ್ತು.
ಇದನ್ನೂ ಓದಿ: “ನಿರಂಕುಶಾಧಿಕಾರಿಗಳಂತೆ ವರ್ತಿಸಿದ ಆಳರಸರಿಗೆ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳೋಣ” : ಪಿಣರಾಯಿ ವಿಜಯನ್
ಬಿಜೆಪಿ ನೀಡಿದ ದೂರಿನಲ್ಲೇನಿದೆ?
ಆರೋಪಿಗಳು ಜೂನ್ 24 ರಂದು ರಾಯಚೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅವರು ಎಲ್ಲೇ ಸಿಕ್ಕರೂ ಅವರಿಗೆ ಕಲ್ಲಿನಿಂದ, ಬಾರಿಗೆಯಿಂದ ಮತ್ತು ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಆರೋಪಿಗಳ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿಯುಂಟಾಗಿ ಸೌಹಾರ್ದತೆಗೆ ಧಕ್ಕೆಯುಂಟಾಗುತ್ತದೆ.
ಒಬ್ಬ ಗೌರವಾನ್ವಿತ ಕೇಂದ್ರ ಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವುದರಿಂದ ತಕ್ಷಣವೇ ಆರೋಪಿಗಳು ಮತ್ತು ಅವರ ಸಹಚರರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತಿದ್ದೇವೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವೀರನಗೌಡ ಉಲ್ಲೇಖಿಸಿದ್ದಾರೆ.
ಈ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯ್ದೆಯ ಕಲಂ 325, 351(2)(3), 190 ರ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ರಾಯಚೂರು ನಗರದ ಪಶ್ಚಿಮ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಭೂಸ್ವಾಧೀನ ವಿರೋಧಿಸಿ ‘ಸಂಯುಕ್ತ ಹೋರಾಟ’ದಿಂದ ‘ದೇವನಹಳ್ಳಿ ಚಲೋJanashakthi Media
