–ಮೂಲ: ಸುಮಂತ್ ಕುಮಾರ್, ದ ಹಿಂದೂ
–ಕನ್ನಡಕ್ಕೆ: ನಾ ದಿವಾಕರ
ಉನ್ನತ ಶಿಕ್ಷಣ ದುಬಾರಿಯಾಗುತ್ತಿರುವುದು ದಲಿತ ವಿದ್ಯಾರ್ಥಿಗಳಿಗೆ ಮಾರಕವಾಗುತ್ತಿದೆ
ದಿನಗೂಲಿ ಕಾರ್ಮಿಕರ ಮಗ ಅತುಲ್ ಕುಮಾರ್ ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ಹುಡುಗ. ಐಐಟಿ ಧನಬಾದ್ನಲ್ಲಿ ಪ್ರವೇಶ ಪಡೆಯಲು ಪರೀಕ್ಷೆಯನ್ನು ಬರೆದು ಉತ್ತೀರ್ಣನಾಗಿದ್ದರೂ, ಈತನಿಗೆ ಅಲ್ಲಿ ಪ್ರವೇಶ ಗಳಿಸಲಾಗಲಿಲ್ಲ. ಕಾರಣ ಈ ಹುಡುಗನ ಬಳಿ 17,500 ರೂಗಳ ದುಬಾರಿ ಶುಲ್ಕ ಕಟ್ಟಲು ಹಣ ಇರಲಿಲ್ಲ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೊಳಗಾಯಿತು. ತದನಂತರ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿ, ತನ್ನ ವಿಶೇಷ ಅಧಿಕಾರವನ್ನು ಬಳಸಿ ಸಂವಿಧಾನ ಅನುಚ್ಛೇದ 142ರ ಅಡಿಯಲ್ಲಿ ಈತನಿಗೆ ಪ್ರವೇಶ ದೊರಕಿಸಿಕೊಟ್ಟಿತ್ತು. ಅತುಲ್ ಕುಮಾರ್ ನಂತಹ ಯುವಕ/ಯುವತಿಯರು ಹೇರಳ ಸಂಖ್ಯೆಯಲ್ಲಿದ್ದಾರೆ, ಆದರೆ ಎಲ್ಲ ಪ್ರಕರಣಗಳೂ ಮಾಧ್ಯಮಗಳ ಗಮನ ಸೆಳೆಯಲಿಲ್ಲ ಅಥವಾ ನ್ಯಾಯ ಗಳಿಸಲಾಗಲಿಲ್ಲ. ಹಾಗಾಗಿ ಅನೇಕ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳು ತಮ್ಮ ಹಣಕಾಸು ಬಿಕ್ಕಟ್ಟುಗಳು ಮತ್ತು ಅಸಮಾನತೆಯ ವ್ಯವಸ್ಥೆಯ ಕಾರಣದಿಂದ ಅವಕಾಶವಂಚಿತರಾಗಿದ್ದಾರೆ.
ದುಬಾರಿ ಶುಲ್ಕಗಳ ಹಾವಳಿ
ದಲಿತ ವಿದ್ಯಾರ್ಥಿಗಳು ಎದುರಿಸುವ ಈ ಸವಾಲುಗಳು, ಸ್ವಾತಂತ್ರ್ಯಪೂರ್ವದಲ್ಲಿದ್ದ ಪರಿಸ್ಥಿತಿಗಳನ್ನು ನೆನಪಿಸುತ್ತವೆ. ಆ ಕಾಲಘಟ್ಟದಲ್ಲಿ ದಲಿತ ವಿದ್ಯಾರ್ಥಿಗಳು ತಮ್ಮ ಜಾತಿಯ ಕಾರಣಕ್ಕಾಗಿಯೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲಾಗುತ್ತಿರಲಿಲ್ಲ. ಈ ಚಾರಿತ್ರಿಕ ನಿರ್ಬಂಧಗಳು ಮೇಲ್ನೋಟಕ್ಕೇ ಕಾಣುವಂತಿದ್ದವು, ವರ್ತಮಾನದಲ್ಲಿ ಪರಿಸ್ಥಿತಿಯು ಘಾತಕತನವಾಗಿ ಕಾಣುತ್ತದೆ. ತನ್ನ ʼಆತ್ಮನಿರ್ಭರ ಭಾರತ ಅಭಿಯಾನʼ ದ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣ ಸಂಸ್ಥೆಗಳ ಸ್ವಾವಲಂಬನೆಗಾಗಿ ಒತ್ತು ನೀಡುತ್ತಿದೆ. ತತ್ಪರಿಣಾಮವಾಗಿ ಅನೇಕ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಶುಲ್ಕವನ್ನು ಅತಿಯಾಗಿ ಹೆಚ್ಚಿಸಲಾಗುತ್ತಿದೆ.
ಇವುಗಳ ಪೈಕಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ), ಭಾರತೀಯ ಮೇನೇಜ್ಮೆಂಟ್ ಸಂಸ್ಥೆಗಳು (ಐಐಎಂ), ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವೂ (ಎನ್ಎಲ್ಯು) ಸೇರಿವೆ. ಉದಾಹರಣೆಗೆ 2016ರಲ್ಲಿ ಐಐಟಿ ಆಡಳಿತ ಮಂಡಲಿಯ ಸ್ಥಾಯಿ ಸಮಿತಿಯು ಪದವಿ ಪೂರ್ವ ಶಿಕ್ಷಣದ ಶುಲ್ಕಗಳನ್ನು ಶೇಕಡಾ 200ರಷ್ಟು ಹೆಚ್ಚಿಸಲು ನಿರ್ಧರಿಸಿತ್ತು. ಅಂದರೆ ಶುಲ್ಕದ ಮೊತ್ತ ತೊಂಬತ್ತು ಸಾವಿರ ರೂಗಳಿಂದ ಮೂರು ಲಕ್ಷಕ್ಕೆ ಏರಿಕೆಯಾಗಿತ್ತು.
ಶುಲ್ಕ ಹೆಚ್ಚಳದ ಬಗ್ಗೆ ಕೇಳಿಬಂದ ವ್ಯಾಪಕ ಟೀಕೆಗಳಿಗೆ ಪ್ರತಿಕ್ರಿಯಿಸಿ ಸರ್ಕಾರವು ನೇಮಿಸಿದ ಸಮಿತಿಯು, ಅಂಚಿನಲ್ಲಿರುವ ವಿದ್ಯಾರ್ಥಿಗಳಿಗೆ (Marginalised Students ) ಬಡ್ಡಿರಹಿತ-ಸ್ಕಾಲರ್ಷಿಪ್ ದೊರೆಯುವ ʼವಿದ್ಯಾಲಕ್ಷ್ಮಿʼ ಯೋಜನೆ ನೆರವಾಗುತ್ತದೆ ಎಂದು ಹೇಳಿತ್ತು. ಸರ್ಕಾರದ ಈ ಉಪಕ್ರಮವು ನೆರವು ನೀಡಲು ಉದ್ದೇಶಿಸುವುದಾದರೂ, ಶುಲ್ಕಗಳು ನಿರಂತರವಾಗಿ ಏರುತ್ತಲೇ ಇರುವುದರಿಂದ, ವಿದ್ಯಾರ್ಥಿಗಳು ಎದುರಿಸುವ ಹಣಕಾಸು ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಮರ್ಪಕವಾಗುತ್ತಿಲ್ಲ.
ಏಳು ಐಐಎಂಗಳಲ್ಲಿ ಟ್ಯೂಷನ್ ಶುಲ್ಕವನ್ನೂ ಒಳಗೊಂಡತೆ ಹೆಚ್ಚಿಸಲಾದ ಶುಲ್ಕದ ಪ್ರಮಾಣ ಇಂತಿದೆ. ಐಐಎಂ ಲಕ್ನೋ 30 % , ಐಐಎಂ ಅಹಮದಾಬಾದ್ ಮತ್ತು ಶಿಲ್ಲಾಂಗ್ 5 % ,ಐಐಎಂ ಕೊಲ್ಕತ್ತಾ 17.3 % , ಐಐಎಂ ಕೊಳಿಕೋಡ್ 23.1 % , ಐಐಎಂ ರಾಂಚಿ 19 % ಮತ್ತು ಐಐಎಂ ತಿರುಚಿರಾಪಲ್ಲಿ 20 % . ಐಐಟಿ ದೆಹಲಿ ಪೂರ್ಣಾವಧಿ ಎಂ.ಟೆಕ್ ವಿದ್ಯಾರ್ಥಿಗಳಿಗೆ 2022-23ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡಿತ್ತು. ಈಗ ಒಟ್ಟು ಶೈಕ್ಷಣಿಕ ಶುಲ್ಕ (Academic Fees) ಈಗ 53,100 ರೂಗಳಷ್ಟಿದೆ. ಇದರಲ್ಲಿ ಹಾಸ್ಟಲ್ ಶುಲ್ಕ ಒಳಗೊಂಡಿಲ್ಲ. ಅಂದರೆ ಕಳೆದ ವರ್ಷದ 26,450 ರೂಗಳಿಂದ ಶೇಕಡಾ ನೂರರಷ್ಟು ಹೆಚ್ಚಳ ಮಾಡಲಾಗಿದೆ.
ಪದೇ ಪದೇ ಶುಲ್ಕಗಳನ್ನು ಹೆಚ್ಚಿಸುತ್ತಿರುವುದರಿಂದ ಅಂಚಿನಲ್ಲಿರುವ ಸಮುದಾಯದ ವಿದ್ಯಾರ್ಥಿಗಳಿಗೆ, ಸಾಲ ಪಡೆದರೂ ಸಹ, ಉನ್ನತ ಶಿಕ್ಷಣ ಪಡೆಯುವುದೇ ದುಸ್ತರವಾಗಿದೆ. ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೆಚ್ಚ ದುಬಾರಿಯಾಗುತ್ತಿರುವುದರಿಂದ ಅಂಚಿನಲ್ಲಿರುವ ಸಮುದಾಯಗಳ ಶಿಕ್ಷಣಾರ್ಥಿಗಳು, ಉತ್ತಮ ಅಂಕಗಳನ್ನು ಗಳಿಸಿದ್ದರೂ ಸಹ, ಐಐಟಿ ಮತ್ತು ಐಐಎಂ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶಿಸುವ ಆಕಾಂಕ್ಷೆಯನ್ನೂ ಇಟ್ಟುಕೊಳ್ಳಲಾಗುತ್ತಿಲ್ಲ. ಕೆಲವು ಶಿಕ್ಷಣಾರ್ಥಿಗಳು ಹಣಕಾಸಿನ ಹೊರೆಯನ್ನು ನಿಭಾಯಿಸಲು ಶಕ್ಯರಾಗಿದ್ದರೂ ಇನ್ನೂ ಅನೇಕರು ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಅಸಮಾನತೆಗಳಿಂದ ಒತ್ತಡಕ್ಕೊಳಗಾಗಿ ಬಳಲುತ್ತಿದ್ದಾರೆ. ದುಬಾರಿ ಶೈಕ್ಷಣಿಕ ವೆಚ್ಚದಿಂದ ಈ ಒತ್ತಡಗಳು ಮತ್ತಷ್ಟು ಉಲ್ಬಣಿಸುವುದರಿಂದ ಇದರ ಮಾನವೀಯ ಆಯಾಮವನ್ನೂ ಗುರುತಿಸಬಹುದು. 2021ರ ಒಂದು ದತ್ತಾಂಶದ ಅನುಸಾರ ಹಿಂದಿನ ಏಳು ವರ್ಷಗಳಲ್ಲಿ ಐಐಟಿ ಮತ್ತು ಐಐಎಂ ಗೆ ಸೇರಿದ 122 ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದರು. ಇದಕ್ಕೆ ದುಬಾರಿ ಶುಲ್ಕಗಳಿಂದ ಉಂಟಾಗುವ ಹಣಕಾಸು ಬಿಕ್ಕಟ್ಟು ಒಂದು ಕಾರಣವಾದರೆ ಉದ್ಯೋಗ ಪಡೆಯುವ ಆತಂಕ ಮತ್ತೊಂದು ಕಾರಣ.
ಹೊರಬೀಳುವವರ ಸಮಸ್ಯೆ
ಮತ್ತೊಂದು ಕಟು ವಾಸ್ತವ ಸಂಗತಿ ಎಂದರೆ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅನೇಕ ಶಿಕ್ಷಣಾರ್ಥಿಗಳು , ಹೆಚ್ಚಿನ ಶುಲ್ಕಗಳನ್ನು ಭರಿಸಲಾಗದೆ ಮಧ್ಯದಲ್ಲೇ ವ್ಯಾಸಂಗ ತೊರೆಯುತ್ತಾರೆ. ಕೇಂದ್ರ ಮಾನವ ಅಭಿವೃದ್ಧಿ ವಿಭಾಗದ ಸಚಿವರು ಒದಗಿಸಿರುವ ವರದಿಯ ಅನುಸಾರ 2017 ಮತ್ತು 2018ರಲ್ಲಿ ಐಐಟಿಯಿಂದ 2,461 ವಿದ್ಯಾರ್ಥಿಗಳು ವ್ಯಾಸಂಗ ತೊರೆದಿದ್ದಾರೆ. ಕಳೆದ ವರ್ಷ ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಚರ್ಚೆಯಲ್ಲಿ ತಿಳಿದುಬಂದ ವಿಚಾರ ಎಂದರೆ, ಹಿಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದ ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿ ಮತ್ತು ಐಐಎಂ ಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ 13,500 ಶಿಕ್ಷಣಾರ್ಥಿಗಳು ನಡುವಿನಲ್ಲೇ ವ್ಯಾಸಂಗ ತೊರೆದಿದ್ದಾರೆ.
ಸರ್ಕಾರದ ದಾಖಲೆಗಳ ಪ್ರಕಾರ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಬಿಸಿ ಸಮುದಾಯದ 4,596, ಪರಿಶಿಷ್ಟ ಜಾತಿಯ 2,424 ಮತ್ತು ಪರಿಶಿಷ್ಟ ಪಂಗಡಗಳ 2,622 ವಿದ್ಯಾರ್ಥಿಗಳು ಈ ಅವಧಿಯಲ್ಲಿ ವ್ಯಾಸಂಗ ತೊರೆದಿದ್ದಾರೆ. ಐಐಟಿ ಗಳಲ್ಲಿ 2,066 ಒಬಿಸಿ, 1,068 ಪರಿಶಿಷ್ಟ ಜಾತಿ, 408 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹೊರಬಿದ್ದಿದ್ದಾರೆ. ಇದೇ ರೀತಿ ಐಐಎಂ ಗಳಲ್ಲಿ 163 ಒಬಿಸಿ, 188 ಪರಿಶಿಷ್ಟ ಜಾತಿ, 91 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹೊರಬಿದ್ದಿದ್ದಾರೆ. ಈ ಅಂಕಿಅಂಶಗಳು ಅಂಚಿನಲ್ಲಿರುವ ಸಮುದಾಯಗಳು, ಉನ್ನತ ಶಿಕ್ಷಣ ಪ್ರವೇಶ ಪಡೆಯಲು ಮತ್ತು ಮುಂದುವರೆಸಲು , ಎದುರಿಸುತ್ತಿರುವ ಬೃಹತ್ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: UGC ಕರಡು ನಿಯಮ ಪ್ರಕಟ ; ಕುಲಪತಿ ಹುದ್ದೆಗೆ ನೇರ ನೇಮಕ!
ದಲಿತ ಸಮುದಾಯಗಳ ದುರ್ಭರ ಆರ್ಥಿಕ ಸ್ಥಿತಿಗತಿಗಳಿಗೆ ಒಂದು ಪ್ರಮುಖ ಕಾರಣ ಎಂದರೆ, ಅವರ ಅಸ್ಮಿತೆಯನ್ನು ಭಾರತದಲ್ಲಿ ಇಂದಿಗೂ ಸಹ ಜಾತಿಯ ನೆಲೆಯಲ್ಲೇ ನಿರ್ವಚಿಸಲಾಗುತ್ತದೆ. ಸಮಾಜದಲ್ಲಿ ಇತರ ಜಾತಿಯವರೊಂದಿಗೆ ಸಮಾನವಾಗಿ ದುಡಿಯುವ ಅವಕಾಶವನ್ನು ದಲಿತರಿಗೆ ನಿರಾಕರಿಸಲಾಗುತ್ತಿದೆ. ಇದು ಈ ಸಮುದಾಯಗಳನ್ನು ಆರ್ಥಿಕವಾಗಿ ಅಂಚಿಗೆ ದೂಡಿರುವುದೇ ಅಲ್ಲದೆ ಸಾಮಾಜಿಕವಾಗಿಯೂ ದುರ್ಬಲಗೊಳಿಸಿದೆ. ಭಾರತದಲ್ಲಿ ದಲಿತರನ್ನು ದಮನಿತರು ಮತ್ತು ತಾರತಮ್ಯ ಎದುರಿಸುವವರು ಎಂದೇ ಗುರುತಿಸಲಾಗುತ್ತದೆ, ಹಲವು ಸಂದರ್ಭಗಳಲ್ಲಿ ಅಸ್ಪೃಶ್ಯರು ಎಂದು ಪರಿಗಣಿಸಲಾಗುತ್ತದೆ. ಚಾರಿತ್ರಿಕವಾಗಿ ನೋಡಿದಾಗ, ಈ ಕಳಂಕವೇ ದಲಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತದೆ. ಅಸ್ಪೃಶ್ಯರು ಎಂಬ ಪದ, ಸಮಾಜದಲ್ಲಿ ಅತ್ಯಂತ ಹೀನಮಟ್ಟದ ಮತ್ತು ಅನಪೇಕ್ಷಿತ ಕೆಲಸಗಳನ್ನು ಮಾಡುವವರಿಗೆ ಸಂಬೋಧಿಸಲಾಗುತ್ತದೆ.
ಇತ್ತೀಚೆಗೆ ನಡೆಸಲಾದ 29 ರಾಜ್ಯಗಳ ಸಮೀಕ್ಷೆಯೊಂದರಲ್ಲಿ ಒಳಚರಂಡಿ ಮತ್ತು ನಗರಗಳ ಮಲಗುಂಡಿಗಳನ್ನು ನಿರ್ವಹಿಸುವ ಕಾರ್ಮಿಕರ ಪೈಕಿ ಶೇಕಡಾ 92ರಷ್ಟು ಎಸ್ಸಿಎಸ್ಟಿ/ಒಬಿಸಿ ಸಮುದಾಯಗಳವರೇ ಇರುವುದನ್ನು ಗುರುತಿಸಲಾಗಿದೆ. 2019ರಲ್ಲಿ ಕೇಂದ್ರ ಸಚಿವ ರಮೇಶ್ ಪೊಕ್ರಿಯಾಲ್ ಮಂಡಿಸಿದ ವರದಿಯ ಅನುಸಾರ ಐಐಟಿ ಗಳಲ್ಲಿ ಬೋಧಕ ವೃತ್ತಿಯನ್ನು ನಿರ್ವಹಿಸುವವರ ಪೈಕಿ ಶೇಕಡಾ 95ರಷ್ಟು ಮೇಲ್ಜಾತಿಯವರೇ ಇದ್ದಾರೆ. ಉಳಿದ ಶೇಕಡಾ 5ರಷ್ಟನ್ನು, ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಗಳಿಗೆ ನೀಡಲಾಗಿದೆ. ಐಐಟಿ-ಮುಂಬೈ ವಿದ್ಯಾರ್ಥಿಗಳು ಸಲ್ಲಿಸಿದ್ದ ಆರ್ಟಿಐ ಅರ್ಜಿಯು ಈ ತಾರತಮ್ಯಗಳನ್ನು ಮತ್ತಷ್ಟು ಬಹಿರಂಗಪಡಿಸಿದೆ. ಇದರ ಅನುಸಾರ 24 ವಿಭಾಗಗಳಲ್ಲಿ ಎಸ್ಸಿ ಬೋಧಕರಿಲ್ಲ, 15 ವಿಭಾಗಗಳಲ್ಲಿ ಎಸ್ಟಿ ಬೋಧಕರಿಲ್ಲ 9 ವಿಭಾಗಗಳಲ್ಲಿ ಒಬಿಸಿಗಳಿಲ್ಲ. ಈ ಅಂಕಿಅಂಶಗಳು ಉದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಜಾತಿ ಆಧಾರಿತ ತಾರತಮ್ಯಗಳನ್ನು ಪ್ರತಿಬಿಂಬಿಸುತ್ತವೆ.
ಜೀವಂತ ಅಡ್ಡಗೋಡೆಗಳು
ಭಾರತದ ಸ್ವಾತಂತ್ರ್ಯಾ ನಂತರದಲ್ಲಿ ಸಂವಿಧಾನ ಮತ್ತು ಅದರಡಿಯಲ್ಲೆ ಜಾರಿಗೊಳಿಸಲಾದ ಜನಕಲ್ಯಾಣ ಯೋಜನೆಗಳ ಫಲವಾಗಿ ಕಾಲ ಕಳೆದಂತೆ ದಲಿತರ ಶಾಲಾ ಪ್ರವೇಶದ ಪ್ರಮಾಣ ಹೆಚ್ಚಾಗಿದೆ. ಆದರೆ, ಶಿಕ್ಷಣದಲ್ಲಿ ದಲಿತ ಶಿಕ್ಷಣಾರ್ಥಿಗಳು ಬಡತನ, ದಾರಿದ್ರ್ಯ , ಸಾಮಾಜಿಕ ತರತಮಗಳು, ಜಾತಿ ಅಧಾರಿತ ಪೂರ್ವಗ್ರಹಗಳಂತಹ ತಡೆಗೋಡೆಗಳನ್ನು ಎದುರಿಸಬೇಕಿದೆ. ಅನೇಕ ಸಂದರ್ಭಗಳಲ್ಲಿ ದಲಿತ ಶಿಕ್ಷಣಾರ್ಥಿಗಳನ್ನು ಅವರು ಧರಿಸುವ ಉಡುಪಿನಿಂದ, ಭಾಷೆಯಿಂದ, ಇತರ ಚಿಹ್ನೆಗಳಿಂದ ಗುರುತಿಸಲಾಗುತ್ತದೆ. ಹಾಗಾಗಿ ಅವರಿಗೆ ಮೇಲ್ಜಾತಿ ಸಹಪಾಠಿಗಳೊಡನೆ ಬೆರೆಯುವುದು ದುಸ್ತರವಾಗುತ್ತದೆ.
ಅನೇಕ ಪ್ರಸಂಗಗಳಲ್ಲಿ ಜಾತಿ ಆಧಾರಿತ ಟೀಕೆ/ಹೇಳಿಕೆಗಳು ಮತ್ತು ತಾರತಮ್ಯಗಳು ಈ ವಿದ್ಯಾರ್ಥಿಗಳನ್ನು ಘಾಸಿಗೊಳಿಸುತ್ತವೆ, ತತ್ಪರಿಣಾಮವಾಗಿ ಪ್ರತ್ಯೇಕತೆಗೊಳಪಡುತ್ತಾರೆ. ಕೆಲವು ವಿದ್ಯಾರ್ಥಿಗಳು ಈ ಪೂರ್ವಗ್ರಹಗಳ ಪ್ರಭಾವದಿಂದ ಭಾವನಾತ್ಮಕವಾಗಿ ಬಲಿಯಾಗುತ್ತಾರೆ. ಮಹಾರಾಷ್ಟ್ರದ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ, ಐಐಟಿ ಬಾಂಬೆ ಮತ್ತು ಐಐಟಿ ದೆಹಲಿಯ ಇಬ್ಬರು ವಿದ್ಯಾರ್ಥಿಗಳ ಕರಾಳ ಅನುಭವ ಇದರ ವಾಸ್ತವತೆಯನ್ನು ಬಿಂಬಿಸುತ್ತದೆ. ಅನೇಕ ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಆಕಾಂಕ್ಷೆಯ ಮೇಲೆ ಜಾತಿವಾದ ಮತ್ತು ತತ್ಸಂಬಂಧಿತ ಕಿರುಕುಳಗಳ ಕರಾಳ ಛಾಯೆ ಆವರಿಸಿರುವುದನ್ನು ಈ ಪ್ರಕರಣಗಳು ಸ್ಪಷ್ಟವಾಗಿ ಬಿಂಬಿಸುತ್ತವೆ. ಈ ಪ್ರಕ್ಷುಬ್ಧ ಸನ್ನಿವೇಶವು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ : ಈ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಹೇಗೆ ನಿಭಾಯಿಸುತ್ತವೆ, ತನ್ಮೂಲಕ ಎಲ್ಲ ಶಿಕ್ಷಣಾರ್ಥಿಗಳನ್ನೂ ಒಳಗೊಳ್ಳುವಂತಹ (Inclusive) ವಾತಾವರಣವನ್ನು ಸೃಷ್ಟಿಸಲು ಸಾಧ್ಯವೇ ?
ಶಿಕ್ಷಣಾರ್ಥಿಗಳ ಆತ್ಮಹತ್ಯೆಯಂತಹ ದುರದೃಷ್ಟಕರ ಘಟನೆಗಳು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಅವರು ಎದುರಿಸುತ್ತಿರುವ ಅತಿಯಾದ ಒತ್ತಡಗಳನ್ನು ಎತ್ತಿ ತೋರಿಸುತ್ತವೆ. ತಮ್ಮ ಮಕ್ಕಳು ಪದವಿ ವ್ಯಾಸಂಗ ಪಡೆದರೆ ಕುಟುಂಬದ ಬಡತನ ನೀಗುತ್ತದೆ ಎಂಬ ಪೋಷಕರ ಅಪೇಕ್ಷೆಗಳು ಮಕ್ಕಳ ಪಾಲಿಗೆ ಹೊರೆಯಾಗಿ ಪರಿಣಮಿಸುತ್ತದೆ. ಅದೇ ವೇಳೆ ಭಾರತದಲ್ಲಿ ನಿರುದ್ಯೋಗ ಪ್ರಮಾಣವೂ ಹೆಚ್ಚಾಗಿದೆ. ಐಐಟಿ ಮೂಲಕ ಪಡೆಯುವ ಹುದ್ದೆಗಳ ಬಗ್ಗೆ 2024ರಲ್ಲಿ ಸಲ್ಲಿಸಿದ ಆರ್ಟಿಐ ಅರ್ಜಿ ಬಿಂಬಿಸುವಂತೆ, ಈ ಸಾಲಿನಲ್ಲಿ 23 ಐಐಟಿ ಕ್ಯಾಂಪಸ್ಗಳಿಂದ ಸುಮಾರು 8,000 ಶಿಕ್ಷಣಾರ್ಥಿಗಳು (ಶೇ 38) ಯಾವುದೇ ನೌಕರಿ ಗಳಿಸಲಾಗಿಲ್ಲ. ಅಂಚಿನಲ್ಲಿರುವ ಸಮುದಾಯಗಳ ಶಿಕ್ಷಣಾರ್ಥಿಗಳಿಗೆ ಈ ಸಂಘರ್ಷವು ಇನ್ನೂ ತೀವ್ರವಾಗಿರುತ್ತದೆ. ಏಕೆಂದರೆ ಅವರ ಜಾತಿ ಅಸ್ಮಿತೆ ಉದ್ಯೋಗ ಪಡೆಯುವ ಸವಾಲನ್ನು ಇಮ್ಮಡಿಗೊಳಿಸುತ್ತದೆ. ಈ ಜಟಿಲ ಸಮಸ್ಯೆಗಳು ಶಿಕ್ಷಣ ಮತ್ತು ಉದ್ಯೋಗ ವಲಯದಲ್ಲಿ ವ್ಯವಸ್ಥಿತ ಸುಧಾರಣೆಗಳ ಅಗತ್ಯವಿರುವುದನ್ನು ಎತ್ತಿ ತೋರಿಸುತ್ತವೆ. ಹಾಗಾದಲ್ಲಿ ಮಾತ್ರ ಶಿಕ್ಷಣಾರ್ಥಿಗಳ ಮೇಲಿನ ಒತ್ತಡ ಮತ್ತು ಜಾತಿ ಆಧಾರಿತ ತಾರತಮ್ಯಗಳನ್ನು ಕೊನೆಗಾಣಿಸಬಹುದು.
(ಮೂಲ ಲೇಖಕರು : ಬೆಂಗಳೂರಿನ ಅಲಿಯನ್ಸ್ ವಿಶ್ವವಿದ್ಯಾಲಯದ ಅಲಿಯನ್ಸ್ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರು)
ಇದನ್ನೂ ನೋಡಿ: HMPV ಬಗ್ಗೆ ಭಯ ಬೇಡ – ಚೀನಾದಿಂದ ಮಾತನಾಡಿದ ಕನ್ನಡಿಗ Janashakthi Media