ಕಳೆದ ದಶಕದ ಆರ್ಥಿಕ ನೀತಿಗಳನ್ನೇ ಮುಂದುವರೆಸುವುದು ಜನಾದೇಶವನ್ನು ತಿರಸ್ಕರಿಸಿದಂತಾಗುತ್ತದೆ
–ಪುಲಾಪ್ರೆ ಬಾಲಕೃಷ್ಣನ್
-ಕನ್ನಡಕ್ಕೆ : ನಾ ದಿವಾಕರ
ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಭಾಗಶಃ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಜನರ ಅತೃಪ್ತಿಯನ್ನು ಸೂಚಿಸುತ್ತದೆ. ಭಾರತದ ಅತ್ಯಂತ ಬಡ ಮತ್ತು ಗ್ರಾಮೀಣ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆದ್ದ ಸ್ಥಾನಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವು ಈ ಅಭಿಪ್ರಾಯವನ್ನು ದೃಢೀಕರಿಸುತ್ತದೆ. ಹೊಸ
ನಿರುದ್ಯೋಗ ಮತ್ತು ನಿರಂತರ ಹಣದುಬ್ಬರ ಇರುವ ಸಮಯದಲ್ಲಿ ಆಡಳಿತದ ಬಗ್ಗೆ ಜನರಲ್ಲಿ ಅತೃಪ್ತಿ ಹೆಚ್ಚಾಗಿರುತ್ತದೆ. ಆಹಾರ-ಬೆಲೆ ಹಣದುಬ್ಬರ (Food-price inflation) ನಿರ್ದಿಷ್ಟವಾಗಿ, ಐದು ವರ್ಷಗಳಿಂದ ಏರುತ್ತಲೇ ಇದೆ. ಪ್ರಧಾನ ನಿತ್ಯಾಹಾರ ಧಾನ್ಯಗಳು ಮತ್ತು ಬೇಳೆಕಾಳುಗಳಲ್ಲಿ ಹಣದುಬ್ಬರ ಅತ್ಯಧಿಕವಾಗಿದೆ. ಆದಾಯ ವಿತರಣೆಯ ಕೆಳಭಾಗದಲ್ಲಿರುವ ಕುಟುಂಬಗಳಿಗೆ ಸಾಮಾನ್ಯವಾಗಿ ಆಹಾರವೇ ಮನೆಯ ಖರ್ಚಿನ ಅರ್ಧದಷ್ಟು ಇರುತ್ತದೆ. ಮತದಾರರು ಹೇಗೆ ಮತ ಚಲಾಯಿಸುತ್ತಾರೆ ಎಂಬುದನ್ನು ಆಹಾರದ ಬೆಲೆ ನಿರ್ಧರಿಸಬಹುದು ಎಂದು ಹಿಂದಿನ ಅನುಭವಗಳೂ ಸೂಚಿಸುತ್ತದೆ. ಹೊಸ
ಉದಾಹರಣೆಗೆ, 2014 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅಂತ್ಯಕ್ಕೆ ಮೂಲ ಕಾರಣ ಹತ್ತು ವರ್ಷಗಳ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಆಹಾರ ಬೆಲೆ ಹಣದುಬ್ಬರದ ಹೆಚ್ಚಳವೇ ಆಗಿತ್ತು. ಉದ್ಯೋಗಗಳ ವಿಚಾರದಲ್ಲಿ, ನಿರುದ್ಯೋಗ ದರವು 2014 ರಿಂದ ಹೆಚ್ಚಾಗಿದೆ. ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆಯು (Periodic Labor Force Survey) ನಿಯಮಿತ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳ ನೈಜ ಆದಾಯ ಗಳಿಕೆಯಲ್ಲಿ ಕುಸಿತವನ್ನು ತೋರಿಸುತ್ತದೆ. ಸ್ವಯಂ ಉದ್ಯೋಗಿಗಳಲ್ಲಿ ಇದು ಗಣನೀಯವಾಗಿ ಕಾಣಿಸುತ್ತದೆ. ಇವು ಆರ್ಥಿಕ ಅತೃಪ್ತಿಯ ಕೆಲವು ಮೂಲ ಕಾರಣಗಳಾಗಿದ್ದು ಜನರು ಬಿಜೆಪಿಯಿಂದ ದೂರ ಸರಿಯಲು ಕಾರಣವಾಗಿರಬಹುದು. ಹೊಸ
ಇದನ್ನೂ ಓದಿ: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಗಟ್ಟಿ – ಸಮಾನ ಮನಸ್ಕ ಸಂಘಟನೆಗಳ ಆಗ್ರಹ
ಅತೃಪ್ತಿಯ ಮೂಲ ಕಾರಣಗಳು
ಪ್ರಧಾನಿ ನರೇಂದ್ರ ಮೋದಿ ಸದಾ ಪ್ರತಿಪಾದಿಸುವ ಪ್ರಜಾಪ್ರಭುತ್ವದ ಹುರುಪಿನಲ್ಲೇ ಈಗ ಅವರು ಜನರು ನೀಡಿದ ಆದೇಶವನ್ನು ಗೌರವಿಸಬೇಕು. ಹೊಸ ಸರ್ಕಾರವು ಜನತೆಯ ಅಸಮಾಧಾನದ ಮೂಲಗಳನ್ನು ಪರಿಹರಿಸಬೇಕು. ಆದರೆ ಇದು ಸಾಧ್ಯವಾಗಬೇಕಾದರೆ ಕಳೆದ ದಶಕದಿಂದ ಅನುಸರಿಸುತ್ತಿರುವ ಆರ್ಥಿಕ ಮಾದರಿಯ ಬದಲಾವಣೆಯ ಅಗತ್ಯವಿದೆ. ಹೊಸ ಸರ್ಕಾರವು ಈ ನಿಟ್ಟಿನಲ್ಲಿ ಯಾವುದೇ ಆಲೋಚನೆಗಳು ಹೊಂದಿರುವ ಸೂಚನೆಗಳು ಈವರೆಗೂ ಲಭಿಸಿಲ್ಲ. ಹಣಕಾಸು ಸಚಿವರು ಸುಧಾರಣೆಗಳ ಭರವಸೆ ನೀಡಿದ್ದಾರೆ, ಮತ್ತು ಕೆಲವು ಸರ್ಕಾರದ ಪರ ವಹಿಸುವ ವ್ಯಾಖ್ಯಾನಕಾರರು ಬೆಳವಣಿಗೆಗೆ ಸುಧಾರಣೆಗಳು ಹೇಗೆ ಅವಶ್ಯಕ ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸುಧಾರಣೆಗಳನ್ನು ಮುನ್ನೆಲೆಗೆ ತರುತ್ತಿದ್ದಂತೆ ಎರಡು ಅಂಶಗಳು ನೆನಪಿಗೆ ಬರುತ್ತವೆ. ಹೊಸ
ಮೊದಲನೆಯದಾಗಿ, ಹೆಚ್ಚು ಪ್ರಶಂಸಿಸಲ್ಪಟ್ಟ ಮೋದಿಯವರ ಸುಧಾರಣೆಗಳ ಉತ್ಸಾಹ 2014 ರ ನಂತರ ಹೆಚ್ಚಿನ ಸರಾಸರಿ ಬೆಳವಣಿಗೆಯ ದರಕ್ಕೆ ಅನುವು ಮಾಡಿಕೊಟ್ಟಿಲ್ಲ. ನೀತಿ ನಿರೂಪಣೆಗಳಲ್ಲಿ ಮಾಡಲಾಗುವ ಬದಲಾವಣೆಗಳು ಸುಧಾರಣೆಗಳು ಎಂದೇ ವ್ಯಾಖ್ಯಾನಿಸಲಾಗುವುದಾದರೂ, ಇದು ಬೇಡಿಕೆ ಅಥವಾ ಪೂರೈಕೆಯ ಶಕ್ತಿಗಳ ಮೇಲೆ ಪರಿಣಾಮ ಬೀರುವ ಮಟ್ಟಿಗೆ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಪ್ರಸ್ತುತ ಆಡಳಿತವು ಇಲ್ಲಿಯವರೆಗೆ ಕೈಗೊಂಡ ಸುಧಾರಣೆಗಳು ಆರ್ಥಿಕತೆಯಲ್ಲಿ ದೃಢವಾಗಿ, ವ್ಯಾಪಕವಾಗಿ ಸಾಧ್ಯವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಎರಡನೆಯದಾಗಿ, 2014 ರಿಂದ ನಾವು ನೋಡಿದ ಬೆಳವಣಿಗೆಯು ಸಾಮಾನ್ಯ ಭಾರತೀಯ ಜನತೆ ಬಯಸುವ ಫಲಿತಾಂಶಗಳನ್ನು ನೀಡಿಲ್ಲ. ನಾನು ಈಗಾಗಲೇ ಹೆಚ್ಚಿನ ಆಹಾರ ಹಣದುಬ್ಬರವನ್ನು ಉಲ್ಲೇಖಿಸಿದ್ದೇನೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆಯ ಸುಮಾರು 75% ರಷ್ಟು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಆಹಾರ ಬೆಲೆಗಳ ಹೆಚ್ಚಳದ ವ್ಯಾಪ್ತಿ ಮತ್ತು ದೇಶದಲ್ಲಿ ಆದಾಯದ ಅತ್ಯಂತ ಅಸಮಾನ ವಿತರಣೆಯನ್ನು ಗಮನಿಸಿದರೆ ಇದು ಆಶ್ಚರ್ಯಕರವಾಗಿ ಕಾಣುವುದೂ ಇಲ್ಲ. ಕೈಗೆಟುಕುವ ಆಹಾರ ಪದಾರ್ಥಗಳಿಂದಾಚೆಗೂ ದೇಶದ ಜನರು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಬಯಸುತ್ತಾರೆ. ಸಾಮಾಜಿಕ ಮೂಲಸೌಕರ್ಯವು ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣದಿಂದ ರೂಪುಗೊಂಡಿರುತ್ತದೆ. ದೈನಂದಿನ ಜೀವನ-ಜೀವನೋಪಾಯ ಹಾಗೂ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಎಲ್ಲವನ್ನೂ ಭೌತಿಕ ಮೂಲಸೌಕರ್ಯಗಳು ರೂಪಿಸುತ್ತವೆ. ಇವೆರಡೂ ಜನತೆಯ ಜೀವನಕ್ಕೆ ನಿರ್ಣಾಯಕವಾಗಿರುತ್ತದೆ. ಹೊಸ
ಕಳೆದ ದಶಕದ ಆರ್ಥಿಕ ನೀತಿಯನ್ನು ಗಮನಿಸಿದಾಗ ಪ್ರಧಾನವಾಗಿ, ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದು, ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲ್ ಪಾವತಿಯತ್ತ ಸಾಗುವುದು, ಸಬ್ಸಿಡಿಯ ಮೂಲಕ ಉತ್ಪಾದನಾ ವಲಯವನ್ನು ನಿರ್ಮಿಸುವುದು ಮತ್ತು ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಹೆದ್ದಾರಿ ನಿರ್ಮಾಣದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ತೋರುವುದು ಕಂಡುಬರುತ್ತದೆ. ಇದರೊಟ್ಟಿಗೆ ಹಲವು ರೀತಿಯ ನೇರ ನಗದು ವರ್ಗಾವಣೆಗಳು, ರೈತರು ಮತ್ತು ಗೃಹಿಣಿಯರಿಗೆ ನಗದು ನೀಡುವ ಮತ್ತು ಬಡವರಿಗೆ ಉಚಿತ ಪಡಿತರ ನೀಡುವ ಯೋಜನೆಗಳಿವೆ. ಮೇಲ್ನೋಟಕ್ಕೆ ಇದು ಗೆಲುವಿನ ಸೂತ್ರವೆಂದು ತೋರಬಹುದು, ಆದರೆ ಬಿಜೆಪಿಗೆ ಬಹುಮತ ನೀಡಿ ಮರಳಿ ತರಲು ಇದು ಸಾಕಾಗಲಿಲ್ಲ. ಇದೇ ಸೂತ್ರವನ್ನು ಮುಂದುವರೆಸಬೇಕೆಂದರೆ ಜನರ ಅಭಿಪ್ರಾಯವನ್ನು ಕಡೆಗಣಿಸಿದಂತಾಗುತ್ತದೆ. ಇದನ್ನೇ ಮಾನ್ಯ ಮಾಡುವುದಾದರೆ ಈಗಾಗಲೇ ಘೋಷಿಸಿರುವ ಸುಧಾರಣೆ ಮತ್ತು ಜನಕಲ್ಯಾಣ ಕಾರ್ಯಕ್ರಮಗಳನ್ನು ಅರ್ಧಕ್ಕೆ ಇಳಿಸುವ ನೀತಿಯಿಂದಾಚೆಗೆ ಚಲಿಸುವುದು ಅನಿವಾರ್ಯ. ಆರ್ಥಿಕ ಹೊರೆಯನ್ನು ಸಹಿಸಿಕೊಳ್ಳುವಂತಿದ್ದರೂ ಸಹ ಇದು ಅನಿವಾರ್ಯ. ಮೇಲ್ಮಟ್ಟದ ಆರ್ಥಿಕ ಸ್ಥಿರತೆಯನ್ನು ಪ್ರದರ್ಶಿಸುವುದು ಸಹ ಫಲಪ್ರದವಾಗುವುದಿಲ್ಲ. ಹೊಸ
ಕೋವಿಡ್ -19 ಸಾಂಕ್ರಾಮಿಕಕ್ಕೂ ಮುನ್ನ ಕೇಂದ್ರ ಸರ್ಕಾರವು ಹಣಕಾಸಿನ ಕ್ರೋಢೀಕರಣದಲ್ಲಿ ಒಂದು ಹಂತದ ಯಶಸ್ಸನ್ನು ಕಂಡಿತ್ತಾದರೂ ಅದೇ ಪ್ರಮಾಣದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಹಣಕಾಸು ಕ್ರೋಢೀಕರಣದ ಹೊರತಾಗಿಯೂ ಕೋವಿಡ್ -19 ಅಪ್ಪಳಿಸುವ ಮುನ್ನ ಬೆಳವಣಿಗೆಯಲ್ಲಿ ಉಂಟಾದ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ. ಮೇಲ್ಪದರದ ಆರ್ಥಿಕ ಅಸ್ಥಿರತೆಯನ್ನು ಸರ್ಕಾರವು ಬಯಸುವುದಿಲ್ಲವಾದರೂ ಅದರಿಂದಲೇ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಅಥವಾ ನಾಗರಿಕರು ಅಪೇಕ್ಷಿಸುವ ಸರಕುಗಳನ್ನು ತಲುಪಿಸಲು ನೆರವಾಗುವುದಿಲ್ಲ ಎನ್ನುವುದು ಸ್ಪಷ್ಟ. ಭಾರತದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮುಂದುವರಿಸಲು ಹೂಡಿಕೆಯ ದರದಲ್ಲಿ ಹೆಚ್ಚಳದ ಅಗತ್ಯವಿರುತ್ತದೆ. ಖಾಸಗಿ ಹೂಡಿಕೆಯು ಸೂಕ್ತವಾದ ಬೇಡಿಕೆಯನ್ನು ನಿರೀಕ್ಷಿಸುತ್ತದೆ. ಭಾರತದಲ್ಲಿ ಖಾಸಗಿ ಹೂಡಿಕೆಯ ದರವು ಒಂದು ದಶಕದಿಂದ ಬದಲಾಗಿಲ್ಲ. ಅದರ ಪ್ರಮುಖ ಪ್ರತಿಪಾದಕರಾಗಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ತಮ್ಮ ಬಹುಮತವನ್ನು ಕಳೆದುಕೊಂಡಿರುವ ಸಮಯದಲ್ಲಿ ಅದು ಪುನರುಜ್ಜೀವನಗೊಳ್ಳುತ್ತದೆಯೇ ಎಂದು ನೋಡಬೇಕಾಗಿದೆ. ಹೊಸ
ಎದ್ದುಕಾಣುವ ಕೊರತೆಗಳು
ಆದ್ದರಿಂದ ದೇಶದ ಮತದಾರರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆರ್ಥಿಕ ನೀತಿಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರುವ ಮಾರ್ಗ ಸೂಕ್ತವಲ್ಲದಿದ್ದರೆ ಮತ್ತಾವ ದಾರಿ ಇದೆ? ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಣಬಹುದಾದ ಒತ್ತಡದ ವಲಯಗಳಲ್ಲಿ ಸರ್ಕಾರವು ನಿರ್ದಿಷ್ಟವಾಗಿ ಮಧ್ಯಸ್ತಿಕೆಯನ್ನು ವಹಿಸುಬೇಕಾಗುತ್ತದೆ. ಮೊದಲನೆಯದಾಗಿ, ಈಗಾಗಲೇ ಹೇಳಿದಂತೆ ಆಹಾರದ ಬೆಲೆ ಏರಿಕೆಯ ಬಗ್ಗೆ ಗಮನಹರಿಸಬೇಕಿದೆ. ಸಿರಿಧಾನ್ಯಗಳ ಉತ್ಪಾದನೆಗೆ ನೀಡಲಾಗಿರುವ ಉತ್ತೇಜನವನ್ನು ಹೊರತುಪಡಿಸಿದರೆ ಕಳೆದ ದಶಕದ ಆರ್ಥಿಕ ಯೋಜನೆಗಳಲ್ಲಿ ಕೃಷಿಯು ಬಹುಮಟ್ಟಿಗೆ ನಿರ್ಲಕ್ಷ್ಯಕ್ಕೊಳಗಾಗಿದೆ. ನಿತ್ಯ ಬಳಕೆಯ ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆಯು ಅಭಿವೃದ್ಧಿ ಸಾಧಿಸಲಾಗದ ಆರ್ಥಿಕತೆಯ ಸಂಕೇತವಾಗಿ ಕಾಣುತ್ತದೆ. ಹಾಗೂ ಸರ್ಕಾರದ ʼವಿಕಸಿತ ಭಾರತʼದ ಧ್ಯೇಯದೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಗೋಧಿ ಉತ್ಪಾದನೆಯಲ್ಲಿ ಕೆಲವು ವರ್ಷಗಳಲ್ಲಿ ಮಾತ್ರ ಕೊರತೆಯನ್ನು ಕಾಣಬಹುದಾದರೂ ಶ್ರಮಿಕ ವರ್ಗಗಳಿಗೆ ಪ್ರಧಾನವಾಗಿ ಪ್ರೋಟೀನ್ ಒದಗಿಸುವಂತಹ ಬೇಳೆಕಾಳುಗಳ ಉತ್ಪಾದನೆಯು ದಶಕಗಳಿಂದ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಬೇಳೆಕಾಳುಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಜೀವಸತ್ವಗಳು ಮತ್ತು ಖನಿಜಗಳ ಮೂಲಗಳಾದ ಹಣ್ಣುಗಳು ಮತ್ತು ತರಕಾರಿಗಳ ಪೂರೈಕೆಯು ಶೀತಲೀಕರಣ ಸೌಲಭ್ಯಗಳು ಇಲ್ಲದಿರುವುದರಿಂದ ಹಾಗೂ ಕಳಪೆ ಸಾರಿಗೆ ವ್ಯವಸ್ಥೆಯಿಂದ ಕುಂಠಿತಗೊಂಡಿದೆ. ಹೊಸ
ಎರಡನೆಯದಾಗಿ, ಒತ್ತಡದ ವಲಯವನ್ನು ಭಾರತೀಯ ರೈಲ್ವೆಯಲ್ಲಿ ಕಾಣಬಹುದು. ದುಡಿಮೆ-ಕೂಲಿಯನ್ನು ಅರಸಿ ದೂರದ ಊರುಗಳಿಗೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಅಪಾರ ಹೆಚ್ಚಳವಾಗಿರುವುದನ್ನು ಸಮರ್ಪಕವಾಗಿ ಸರಿದೂಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ವಿಫಲವಾಗಿದೆ. ದೂರದ ಊರುಗಳಿಗೆ ಸಾಗುವ ರೈಲುಗಳಲ್ಲಿ ಕಾಯ್ದಿರಿಸಿದ ಬೋಗಿಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರು ತುಂಬಿ ತುಳುಕುತ್ತಿರುವುದು ದೇಶಾದ್ಯಂತ ಕಂಡುಬರುತ್ತಿದ್ದು ಇದು ಆಘಾತಕಾರಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬುಲೆಟ್ ರೈಲುಗಳನ್ನು ಬದಿಗಿಟ್ಟರೂ, ಉನ್ನತ ಮಟ್ಟದ ವಂದೇ ಭಾರತ್ ರೈಲುಗಳನ್ನು ಆದ್ಯತೆಯಾಗಿ ಪರಿಗಣಿಸುವುದು, ಬೇಜವಾಬ್ದಾರಿ ನೀತಿ ಎನ್ನಲಾಗದಿದ್ದರೂ ಸೂಕ್ತ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಗಂಭೀರ ವೈಫಲ್ಯ ಎನ್ನಬಹುದು.
ಮೂರನೆಯ ಒತ್ತಡದ ವಲಯ ಎಂದರೆ ನಮ್ಮ ಬೃಹತ್ ನಗರಗಳಲ್ಲಿನ ನೀರು ಸರಬರಾಜು ಪರಿಸ್ಥಿತಿ. ಮೊದಲು ಬೆಂಗಳೂರು ಮತ್ತು ಈಗ ದೆಹಲಿ ಈ ಬೇಸಿಗೆಯಲ್ಲಿ ತೀವ್ರ ಕೊರತೆಗೆ ಸಾಕ್ಷಿಯಾಗಿವೆ. ಇವು ಭಾರತದ ಪ್ರಮುಖ ಜನಸಮೂಹಗಳ ಕೇಂದ್ರಗಳಾಗಿದ್ದು ನೀರಿನ ಕೊರತೆಯು ಸಾಮಾಜಿಕ ಸಾಮರಸ್ಯಕ್ಕೆ ಅಪಾಯವನ್ನುಂಟು ಮಾಡುವುದರ ಜೊತೆಗೆ ಅವರ ಆರ್ಥಿಕ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ʼ ನಲ್ ಸೆ ಜಲ್’, ನಲ್ಲಿಯಲ್ಲಿ ನೀರು ಯೋಜನೆ ಬಹುಶಃ ಅನೇಕರಿಗೆ ದೂರದ ಕನಸಾಗಿಯೇ ತೋರುತ್ತಿದೆ.
ಸಾರ್ವಜನಿಕ ವಲಯದ ನಿರ್ಣಾಯಕ ಪಾತ್ರ
ಇಂದು ಭಾರತದಲ್ಲಿ ಕೊರತೆಗಳು ಹೇರಳವಾಗಿವೆ. ಇವುಗಳ ಪೈಕಿ ನಾನು ಕೇವಲ ಒಂದು ಸಣ್ಣ ವಲಯವನ್ನು ಮಾತ್ರ ಆಯ್ಕೆ ಮಾಡಿದ್ದೇನೆ. ಒಟ್ಟಾರೆ ಕೊರತೆಯನ್ನು ಗ್ರಹಿಸಲು ಇದು ಸಾಕಾಗುತ್ತದೆ. ಬಿಜೆಪಿ ಪ್ರತಿಪಾದಿಸುತ್ತಿರುವ ಎಕ್ಸ್‌ಪ್ರೆಸ್-ವೇ ಹೆದ್ದಾರಿಗಳು ಮತ್ತು ಡಿಜಿಟಲ್ ಸೌಕರ್ಯಗಳಿಗೆ ಖಂಡಿತವಾಗಿಯೂ ಪ್ರಧಾನವಾಗಿರುತ್ತದೆ. ಆದರೆ ನಗರಗಳನ್ನು ಸಂಪರ್ಕಿಸುವುದು ಮತ್ತು ಭಾರತವನ್ನು ಡಿಜಿಟಲೀಕರಣಗೊಳಿಸುವುದು ವರ್ತಮಾನದ ಅಗತ್ಯಗಳಲ್ಲಿ ಅತ್ಯಂತ ಪ್ರಮುಖ ಒತ್ತಡವಲ್ಲ. ದೇಶಕ್ಕೆ ದೈನಂದಿನ ಜೀವನ ಮತ್ತು ಆರ್ಥಿಕ ಚಟುವಟಿಕೆ ಎರಡನ್ನೂ ಬೆಂಬಲಿಸುವ ಮೂಲಸೌಕರ್ಯದ ಅಗತ್ಯವಿದೆ. ಮೊದಲನೆಯದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಆದರೆ ಎರಡನೆಯದು ಅರ್ಥವಾಗುವುದು ಕಷ್ಟ. ಸ್ವಯಂ ಉದ್ಯೋಗಿಗಳನ್ನೂ ಒಳಗೊಂಡಂತೆ ಉತ್ಪಾದನಾ ಕೇಂದ್ರಗಳಿಗೆ ಸಮರ್ಪಕವಾದ ಸಾರಿಗೆ ಮತ್ತು ಸ್ಥಿರ ವಿದ್ಯುತ್ ಪೂರೈಕೆ ಖಚಿತಗೊಳಿಸುವುದರಿಂದ ಹಿಡಿದು ಒಳಚರಂಡಿ ಮತ್ತು ತ್ಯಾಜ್ಯ ವಿಲೇವಾರಿ ಸೌಲಭ್ಯಗಳವರೆಗೆ ಉತ್ಪಾದಕ ಸೇವೆಗಳು ಬೇಕಾಗುತ್ತವೆ. ಅಂತಹ ಸೇವೆಗಳು ಲಭ್ಯವಿಲ್ಲದಿದ್ದಾಗ ಉತ್ಪಾದನೆ ಸಾಧ್ಯವಾಗುವುದಿಲ್ಲ ಹಾಗಾಗಿ ಉದ್ಯೋಗವನ್ನು ವಿಸ್ತರಿಸಲೂ ಸಾಧ್ಯವಾಗುವುದಿಲ್ಲ.
ಕಳೆದ ಕಾಲು ಶತಮಾನದಲ್ಲಿ ಭಾರತದಲ್ಲಿ ಸಾಧಿಸಲಾಗಿರುವ ಆರ್ಥಿಕ ಅಭಿವೃದ್ಧಿಯು ಈ ಸೇವೆಗಳನ್ನು ಸಾಕಷ್ಟು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಿಲ್ಲ. ಹಾಗೆಯೇ ಎಷ್ಟೇ ಸಮಯಾವಕಾಶ ಒದಗಿಸಿದರೂ ಅವುಗಳನ್ನು ಖಾಸಗಿ ವಲಯವು ಪೂರೈಸುವ ಸಾಧ್ಯತೆಯಿಲ್ಲ. ಸಾರ್ವಜನಿಕ ವಲಯ ಮಾತ್ರ ಅವುಗಳನ್ನು ಸರಿ ಪ್ರಮಾಣದಲ್ಲಿ ಪೂರೈಸಬಹುದು. ಪ್ರಭಾವಶಾಲಿ ಸಾರ್ವಜನಿಕ ಮೂಲಸೌಕರ್ಯಗಳನ್ನು ಹೊಂದಿರುವ ಸ್ಥಳಗಳಲ್ಲಿ ನಡೆಯುವ ಶೃಂಗಸಭೆಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿರುವುದರಿಂದ ಇದು ಅವರಿಗೆ ಖಂಡಿತವಾಗಿಯೂ ಸ್ಪಷ್ಟವಾಗಿರಬೇಕು. ಅವರು ಅನುಸರಿಸುತ್ತಿರುವ ಆರ್ಥಿಕ ವಿಧಾನವು ದೇಶದ ಅಭಿವೃದ್ಧಿಯಲ್ಲಿ ಮುಂದಾಳತ್ವ ವಹಿಸಲು ಖಾಸಗಿ ವಲಯದ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಆದರೆ ಇದು ಕಳೆದ ಒಂದು ದಶಕದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಇದು ಬದಲಾಗುವ ಸಾಧ್ಯತೆಗಳೂ ಇಲ್ಲ. ಆದಾಗ್ಯೂ ಸರ್ಕಾರವು ಈಗ ಸರಿಯಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರಿಪಡಿಸಬಹುದು. ಉದಾರವಾದಿ ಸುಧಾರಣೆಗಳ ಭರವಸೆ ನೀಡುವುದರ ಬದಲು ಅಥವಾ ಕಾರ್ಯಗತಗೊಳಿಸುವ ಬದಲು ಸರ್ಕಾರದ ಆರ್ಥಿಕ ಮಾದರಿಯು ಸ್ಪಷ್ಟವಾಗಿ ಗೋಚರಿಸುವ ಒತ್ತಡದ ವಲಯಗಳನ್ನು ಪರಿಹರಿಸಲು ತ್ವರಿತವಾಗಿ ಮುನ್ನಡೆಯಬೇಕು. ದೇಶವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡಲು 2047ರ ಗುರಿಯನ್ನು ನಿಗದಿಪಡಿಸಲಾಗಿದೆ. ಆ ಹೊತ್ತಿಗೆ ಅದು ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಜನಜೀವನವನ್ನು ಪೋಷಿಸಬಲ್ಲ ಮೂಲಸೌಕರ್ಯಗಳಿಲ್ಲದೆ ಹೋದರೆ ಭಾರತವು ಅಭಿವೃದ್ಧಿ ಹೊಂದದೆಯೇ ಹಿಂದುಳಿದಿರುತ್ತದೆ.
ಇದನ್ನೂ ನೋಡಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣ ವಚನJanashakthi Media